ತಪ್ಪು ಮಾಡಿದ ನಟನನ್ನು ಕೊರಿಯಾ ಜನತೆ ಯಾವ ಮಟ್ಟಕ್ಕೆ ತಂದು ಕೂರಿಸಿದೆ ಎನ್ನೋದಕ್ಕೆ ಕಿಮ್ ಉದಾಹರಣೆ.
ಕಿಮ್ ಸೂ-ಹ್ಯುನ್ ದಕ್ಷಿಣ ಕೊರಿಯಾದ ಖ್ಯಾತ ನಟ. ಕೊರಿಯನ್ ಸೀರಿಸ್ ನೋಡುವವರಿಗೆ ಕಿಮ್ ಸೂ ಚಿರಪರಿಚಿತ. ಅತಿಹೆಚ್ಚು ಸಂಭಾವನೆ ಪಡೆಯುವ ನಟ. ಕಿಮ್ ಸೀರಿಸ್ ಖರೀದಿಸಲು ನೆಟ್‌ಫ್ಲಿಕ್ಸ್, ಡಿಸ್ನಿ ತುದಿಗಾಲಲ್ಲಿ ನಿಂತಿರುತ್ತವೆ. ಪ್ರತಿ ಎಪಿಸೋಡ್‌ಗೆ ಆತ ಪಡೆಯುವ ಸಂಭಾವನೆ 3.4 ಮಿಲಿಯನ್ ಅಮೆರಿಕನ್ ಡಾಲರ್ ಅಂದ್ರೆ ಬರೋಬ್ಬರಿ 29 ಕೋಟಿ. ಇಡೀ ಸೀರಿಸ್ ಬಜೆಟ್‌ನಲ್ಲಿ ಈತನ ಸಂಭಾವನೆಯದ್ದೇ ಅತಿದೊಡ್ಡ ಮೊತ್ತ.
ಆತನ ಒಟ್ಟು ಆಸ್ತಿ ಮೊತ್ತ 1 ಸಾವಿರಕ್ಕೂ ಅಧಿಕ ಕೋಟಿ ರೂ. ಇಂತಿಪ್ಪ ಕಿಮ್ ಸೂ ಜನಪ್ರಿಯತೆ ಧರೆಗಿಳಿದಿದೆ. ಇಡೀ ದಕ್ಷಿಣ ಕೊರಿಯಾ ಜನರು ಆತನಿಗೆ ಉಗಿದು ಉಪ್ಪಿನಕಾಯಿ ಹಾಕ್ತಿದ್ದಾರೆ. ಆತನ ಖ್ಯಾತಿ, ಐಷಾರಾಮಿ ಬದುಕು ಬೀದಿಗೆ ಬಿದ್ದಿದೆ. ಆತನನ್ನು ನೆಟ್‌ಫ್ಲಿಕ್ಸ್ ಸೀರಿಸ್‌ನಿಂದ ಹೊರದಬ್ಬಿದೆ. ಹಲವು ಚಿತ್ರಗಳು ಅರ್ಧಕ್ಕೆ ನಿಂತಿವೆ. ತಮ್ಮ ಪ್ರಾಡಕ್ಟ್ ಪ್ರಚಾರದ ರಾಯಭಾರಿಯಾಗಿ ಮಾಡಿಕೊಳ್ಳಲು ಮುಗಿಬಿದ್ದಿದ್ದ ಕಂಪನಿಗಳೇ ಇಂದು ಅವನನ್ನು ಹೊರಗಟ್ಟಿವೆ. ಜಾಹಿರಾತು ಕಂಪನಿಗಳು ಕಿಮ್ ಜತೆಗಿನ ಒಪ್ಪಂದ ರದ್ದು ಮಾಡಿವೆ. ಅಕ್ಷರಶಃ ಕಿಮ್ ದೇಶದ ಜನರು ಎದುರು ಕಿಮ್ ತಲೆತಗ್ಗಿಸಿ ನಿಂತಿದ್ದಾನೆ. ಅದಕ್ಕೆ ಕಾರಣ, ಆತನ ಪ್ರೇಮ ಪ್ರಕರಣ. ಯಾವುದೇ ಸ್ಟಾರ್ ನಟನಿಗೆ ಲವ್, ಬ್ರೇಕಪ್ ಸಹಜ. ಅಭಿಮಾನಿಗಳೂ ಅದನ್ನು ಏನೀಗ ಅನ್ನುವಂತೆ ಸ್ವೀಕರಿಸುತ್ತಾರೆ. ಆದ್ರೆ, ದಕ್ಷಿಣ ಕೊರಿಯಾ ಜನರಿಗೆ ನಟನೊಬ್ಬನ ಖಾಸಗಿ ಬದುಕು ತುಂಬಾ ಗೌರವಯುತವಾಗಿರಬೇಕು. ಮಾದರಿಯಾಗಿರಬೇಕು. ಆತನ ಪ್ರತಿ ಹೆಜ್ಜೆಯನ್ನೂ ಹಿಂಬಾಲಿಸುವ ಅಭಿಮಾನಿಗಳು, ತಪ್ಪು ಮಾಡಿದಾಗ ಮುಖ ಮೂತಿ ನೋಡದೇ ಆತನ ಜನ್ಮ ಜಾಲಾಡಿಸಿ, ಚಿತ್ರಲೋಕದಿಂದ ಹೊರದಬ್ಬಿ ಬಿಡುತ್ತಾರೆ. ಅಂಥ ಪರಿಸ್ಥಿತಿ ಎದುರಿಸುತ್ತಿದ್ದಾನೆ ಕಿಮ್. ಅಷ್ಟಕ್ಕೂ ಆಗಿದ್ದಿಷ್ಟು, ನಟ ಕಿಮ್ 27 ವರ್ಷದವನಾಗಿದ್ದಾಗ, ಇನ್ನೂ ಚಿತ್ರರಂಗದಲ್ಲಿ ಹೆಸರು ಮಾಡದೇ ಇದ್ದ ದಿನಗಳಲ್ಲಿ 15 ವರ್ಷದ ಕಿಮ್ ಸೇ-ರಾನ್ ಎಂಬ ನಟಿ ಜತೆ ಅಫೇರ್ ಹೊಂದಿದ್ದ. ಆರು ವರ್ಷ ಪ್ರೇಮದಲ್ಲಿದ್ದರು. ಬಾಲನಟಿಯಾಗಿ, ನಟಿಯಾಗಿ ಹೆಸರು ಗಳಿಸಿದ್ದ ಕಿಮ್ ಸೇ-ರಾನ್ ಮತ್ತು ಕಿಮ್ ಜೋಡಿಯಾಗಿ ನಟಿಸಿದ Queens of tears ಸಿಕ್ಕಾಪಟ್ಟೆ ಹಿಟ್ ಆಗಿತ್ತು.
ಬ್ಯಾಟ್‌ಮ್ಯಾನ್ ಖ್ಯಾತಿಯ ನಟ ವಾಲ್ ಕಿಲ್ಮರ್ ಇನ್ನಿಲ್ಲ
ಆದ್ರೆ, ಯಾವಾಗ ಕಿಮ್ ಖ್ಯಾತಿಯ ಉತ್ತುಂಗಕ್ಕೇರಿದನೋ ಕಿಮ್ ಸೇ-ರಾನ್ ನಿಂದ ದೂರವಾಗಿದ್ದ. ಇಬ್ಬರೂ ಒಂದೇ ಪ್ರೊಡಕ್ಷನ್ ಕಂಪನಿಯ ಸೀರಿಸ್‌ನಲ್ಲಿ ನಟಿಸುವುದು ಮುಂದುವರಿಸಿದ್ದರು. ಈಗ್ಗೆ ಕೆಲ ವರ್ಷಗಳ ಹಿಂದೆ, ಕಿಮ್ ಸೇ-ರಾನ್ ಕುಡಿದು ಗಾಡಿ ಓಡಿಸಿ ಅಪಘಾತ ಮಾಡಿಕೊಂಡಳು. ಇದು ಭಾರೀ ಸುದ್ದಿಯಾಗಿ, ಪೊಲೀಸ್ ಕೇಸ್ ಆಗಿ ದೊಡ್ಡ ಮೊತ್ತದ ದಂಡ ಪಾವತಿಸಬೇಕಾಯ್ತು. ಅಷ್ಟೇ ಅಲ್ಲ, ಕೊರಿಯನ್ ಚಿತ್ರೋದ್ಯಮ ಕಿಮ್ ಸೇ-ರಾನ್‌ಳನ್ನು ಸೀರಿಸ್‌ಗಳಿಂದ ಕಿತ್ತೊಗೆಯಿತು. ಕೆಲಸವಿಲ್ಲದೇ ಕುಳಿತಿದ್ದ ಕಿಮ್ ಸೇ ರಾನ್‌ಗೆ ಕಿಮ್ ಪ್ರೊಡಕ್ಷನ್ ಕಂಪನಿ ಶಾಕ್ ಕೊಟ್ಟಿತ್ತು. ಆಕ್ಸಿಡೆಂಟ್ ದಂಡದ ಮೊತ್ತ ಪಾವತಿಸಲು ನೆರವಾಗಿದ್ದು ಕಿಮ್. ಈ ಹಣವನ್ನು ಹಿಂದಿರುಗಿಸುವಂತೆ ಪ್ರೊಡಕ್ಷನ್ ಕಂಪನಿ ಮೂಲಕ ಕಿಮ್ ಸೇ-ರಾನ್‌ಗೆ ನೋಟಿಸ್ ನೀಡಲಾಯ್ತು. ಚಿತ್ರಗಳೂ ಇಲ್ಲದೇ, ಹಣವೂ ಇಲ್ಲದೇ ಖಿನ್ನತೆಗೊಳಗಾಗಿದ್ದ ಕಿಮ್ ಸೇ-ರಾನ್, ತನಗೆ ಸಹಾಯ ಮಾಡುವಂತೆ ಕಿಮ್ ಗೆ ಪರಿಪರಿಯಾಗಿ ಬೇಡಿಕೊಂಡರೂ ಆತನ ಮನಸ್ಸು ಕರಗಲಿಲ್ಲ. ಇದರಿಂದ ಸಿಟ್ಟಿಗೆದ್ದ ಕಿಮ್ ಸೇ-ರಾನ್, ಕಿಮ್ ಜತೆಗಿದ್ದ ಖಾಸಗಿ ಫೋಟೋಗಳನ್ನು ಲೀಕ್ ಮಾಡಿಬಿಟ್ಟಳು. ಇದರಿಂದ ರೊಚ್ಚಿಗೆದ್ದ ಕಿಮ್ ಅಭಿಮಾನಿಗಳು, ಆಕೆಯನ್ನೇ ಟಾರ್ಗೆಟ್ ಮಾಡಿ ಟ್ರೋಲ್ ಮಾಡತೊಡಗಿದರು. ಇದರಿಂದ ತೀವ್ರವಾಗಿ ನೊಂದ 24 ವರ್ಷದ ಕಿಮ್ ಸೇ-ರಾನ್, ಇದೇ ಫೆಬ್ರವರಿ 16ರಂದು ಆತ್ಮಹತ್ಯೆಗೆ ಶರಣಾದಳು. ಅವತ್ತು ಕಿಮ್ 37ನೇ ಹುಟ್ಟುಹಬ್ಬವಿತ್ತು.
ತನ್ನ ಪ್ರೇಯಸಿ ಸಾವಿನ ಸುದ್ದಿ ತಿಳಿದರೂ ಕಿಮ್ ಕಂಬನಿ ಮಿಡಿಯಲಿಲ್ಲ, ಆಕೆಗೆ ಅಂತಿಮ ನಮನ ಸಲ್ಲಿಸಲಿಲ್ಲ. ಬದಲಾಗಿ, ಹುಟ್ಟುಹಬ್ಬದ ಸಂಭ್ರಮದಲ್ಲಿ ಮುಳುಗಿದ್ದ. ಇದು, ಆಕೆಯ ಕುಟುಂಬಸ್ಥರನ್ನು, ಅಭಿಮಾನಿಗಳನ್ನು ಕೆರಳಿಸಿತು. 15 ವರ್ಷದ ಅಪ್ರಾಪ್ತೆ ಕಿಮ್ ಸೇ-ರಾನ್ ಗೆ ಪ್ರೇಮ ಹೆಸರಿನಲ್ಲಿ ಕಿಮ್ ಲೈಂಗಿಕ ದೌರ್ಜನ್ಯ ಎಸಗಿದ್ದ ಎಂದು ಆರೋಪಿಸಿ, ಅವರಿಬ್ಬರ ಖಾಸಗಿ ವಿಡಿಯೋ ಫೋಟೋಗಳನ್ನು ಬಿಡುಗಡೆ ಮಾಡಿದರು. ಇದು ನಟ ಕಿಮ್‌ನನ್ನು ಭಾರೀ ಮುಜುಗರಕ್ಕೀಡು ಮಾಡಿತು. ಕಿಮ್ ಸೇ-ರಾನ್ ಕುಟುಂಬದ ವಿರುದ್ಧ ಕಾನೂನು ಹೋರಾಟದ ಎಚ್ಚರಿಕೆ ನೀಡಿದರೂ ಪ್ರಯೋಜನವಾಗಲಿಲ್ಲ. ಅಷ್ಟರಲ್ಲಾಗಲೇ ಸೋಷಿಯಲ್ ಮೀಡಿಯಾದಲ್ಲಿ ಕಿಮ್ ವಿರುದ್ಧ ಆಕ್ರೋಶದ ಅಲೆ ಎದ್ದುಬಿಟ್ಟಿತು. ಖ್ಯಾತಿಯ ಅಮಲಿನಲ್ಲಿ ತೇಲುತ್ತಾ, ನೆರವಿಗಾಗಿ ಅಂಗಲಾಚಿದ ಗೆಳತಿಯನ್ನು ನಿಕೃಷ್ಟವಾಗಿ ನಡೆಸಿಕೊಂಡ ಕಿಮ್, ಅದಕ್ಕಾಗಿ ಭಾರೀ ಬೆಲೆಯನ್ನೇ ತೆರಬೇಕಾಯ್ತು. ಕೊರಿಯಾ ಚಿತ್ರರಂಗ ಆತನನ್ನು ವಿಲನ್ ರೀತಿ ಕಾಣತೊಡಗಿತು. ರಾತ್ರಿ ಬೆಳಗಾಗುವಷ್ಟರಲ್ಲಿ ಕಿಮ್ ಜನಪ್ರಿಯತೆ ಕಸದ ಬುಟ್ಟಿಗೆ ಸೇರಿತ್ತು. ಕಿಮ್ ಸೇ-ರಾನ್ ಸಾವಿನ ಬಗ್ಗೆ ಸ್ಪಷ್ಟನೆ ನೀಡಬೇಕೆಂಬ ಒತ್ತಡ ಹೆಚ್ಚ ತೊಡಗಿತ್ತು. ಕೊನೆಗೂ ಜನರ ಆಕ್ರೋಶಕ್ಕೆ ಮಣಿದ ಕಿಮ್, ಇಂದು ಪತ್ರಕರ್ತರ ಎದುರು ತಲೆತಗ್ಗಿಸಿ ನಿಂತಿದ್ದ. ತಾನೂ, ಕಿಮ್ ಸೇ-ರಾನ್ ಡೇಟಿಂಗ್ ಮಾಡಿದ್ದು ನಿಜ. ಆದ್ರೆ, ಆಕೆ ಅಪ್ರಾಪ್ತೆಯಾಗಿರಲಿಲ್ಲ. ನನ್ನಿಂದಾಗಿ ಆಕೆ ಸಾಯಲಿಲ್ಲ. ನಾನು ಮಾಡದ ತಪ್ಪನ್ನು ನಾನು ಒಪ್ಪಿಕೊಳ್ಳಲು ಸಿದ್ಧನಿಲ್ಲ ಎನ್ನುತ್ತಾ ಕಿಮ್ ಕಣ್ಣೀರಾದ. ಕ್ಯಾಮರಾಗಳ ಎದುರು ಬಿಕ್ಕಿಬಿಕ್ಕಿ ಅತ್ತ. ಆದ್ರೆ, ಪತ್ರಕರ್ತರ ಯಾವ ಪ್ರಶ್ನೆಗಳಿಗೂ ಉತ್ತರಿಸದೇ ಕಾಲ್ತಿತ್ತ.
ಆಶ್ರಮದಲ್ಲಿರೋ ನಟ ಸುದರ್ಶನ್ ಪತ್ನಿ ಶೈಲಶ್ರೀ ಖರ್ಚು ನೋಡಿಕೊಳ್ತಿರುವ ದರ್ಶನ್- ಗಣೇಶ್ ಕಾಸರಗೋಡು ಪೋಸ್ಟ್!
ಇಷ್ಟಾದರೂ ಅಭಿಮಾನಿಗಳು ಕಿಮ್‌ನನ್ನು ನಂಬಲು ಸಿದ್ಧರಿಲ್ಲ. ಆತನ ಕಣ್ಣೀರಿನ ಮಾತನ್ನು ಆಕ್ಟಿಂಗ್ ಎಂದೇ ಲೇವಡಿ ಮಾಡುತ್ತಿವೆ. ಕಿಮ್ ಸೇ-ರಾನ್‌ಗೆ ನ್ಯಾಯ ಸಿಗಲೇ ಬೇಕೆಂಬ ಪೋಸ್ಟ್‌ಗಳು ಸೋಷಿಯಲ್ ಮೀಡಿಯಾದಲ್ಲಿ ರಾರಾಜಿಸುತ್ತಿವೆ. ದಕ್ಷಿಣಾ ಕೊರಿಯಾ ತುಂಬಾ ಕಿಮ್ ಡೇಟಿಂಗ್ ಹಗರಣದ್ದೇ ಸದ್ದು. ಕಿಮ್ ಎಷ್ಟೇ ಸ್ಪಷ್ಟನೆ ನೀಡಿದರೂ ಫ್ಯಾನ್ಸ್ ನಂಬುತ್ತಿಲ್ಲ. ಅಭಿಮಾನಿಗಳ ನಂಬಿಕೆ ಕಳೆದುಕೊಂಡ ಕಿಮ್, ಜನಪ್ರಿಯತೆ, ಹಣ, ಹೆಸರು ಎಲ್ಲ ಕಳೆದುಕೊಂಡು ಏಕಾಂಗಿಯಾಗಿ ನಿಂತಿದ್ದಾನೆ. ಏನೇ ಹೇಳಿ, ನವಿರಾದ ಪ್ರೇಮಕಥೆ ಮೂಲಕ, ಜಗತ್ತಿನಾದ್ಯಂತ ಮನೆಮಾತಾಗಿರುವ ಕೊರಿಯನ್ ಡ್ರಾಮಗಳು, ಸೀರಿಸ್‌ಗಳಷ್ಟೇ, ಅಲ್ಲಿನ ಜನರೂ ಅಭಿಮಾನಿಗಳು, ವಾಸ್ತವದಲ್ಲೂ ಸೀರಿಯಸ್ ಆಗಿ ನಡೆದುಕೊಳ್ತಾರೆ ಅನ್ನೋದಕ್ಕೆ ಕಿಮ್ ಘಟನೆ ಸಾಕ್ಷಿ. ತಮ್ಮ ಆರಾಧ್ಯ ನಟನೊಬ್ಬನ ತಪ್ಪನ್ನು ಖಂಡತುಂಡವಾಗಿ ಖಂಡಿಸುತ್ತಾ, ಶಿಕ್ಷೆಗೆ ಪಟ್ಟುಹಿಡಿದಿದ್ದಾರೆ.
ಕೊಲೆ ಮಾಡಿದ್ದನ್ನೇ ಸಮರ್ಥಿಸಿಕೊಳ್ಳುತ್ತಾ, ಕೊಲೆಯನ್ನೇ ಚಾಲೆಂಜ್ ಮಾಡುತ್ತಾ, ಆತನನ್ನು ತಲೆಮೇಲೆ ಹೊತ್ತು ಮೆರೆಯುತ್ತಾ, ಜೈಲು ಸೇರಿದರೂ, ಅದನ್ನು ಮಹಾನ್ ಸಾಧನೆ ಎಂಬಂತೆ ಬಿಂಬಿಸುತ್ತಾ, ಪ್ರಶ್ನಿಸಿದವರನ್ನು ಬೆದರಿಸುವ ಫ್ಯಾನ್ಸ್‌ಗಳು ನಮ್ಮಲ್ಲಿ, ಕಿಮ್‌ನಂಥ ನಟನನ್ನು ನೀನು ಮೋಸ ಮಾಡಿದೆ, ಹೆಣ್ಣಿನ ಬದುಕು ನಾಶ ಮಾಡಿದೆ ಎನ್ನುತ್ತಾ, ಛೀ ಥೂ ಎಂದು ಉಗಿದು ನಡುರಸ್ತೆಯಲ್ಲಿ ನಿಲ್ಲಿಸಿದ ಫ್ಯಾನ್ಸ್‌ಗಳು ಅಲ್ಲಿ.
ತೆರೆ ಮೇಲೆ ಉದ್ದುದ್ದ ಡೈಲಾಗ್ ಗೆ ಶಿಳ್ಳೆ ಚಪ್ಪಾಳೆ ಹೊಡೆಯೋದಷ್ಟೇ ಅಲ್ಲ, ತಪ್ಪು ಮಾಡಿದಾಗ ಕೆರದಲ್ಲಿ ಹೊಡೆಯ ಬೇಕೆಂಬುದನ್ನು ಕೊರಿಯನ್ಸ್ ತೋರಿಸಿಕೊಟ್ಟಿದ್ದಾರೆ.