
ವಿಜಯಪುರ (ಏ.02): ಎಲ್ಲರೂ ಸೇರಿ ಪ್ರಯತ್ನ ಮಾಡಿ ನನ್ನನ್ನು ಗೆಲ್ಲಿಸಿದ್ದಾರೆ. ನನ್ನ ಗೆಲುವಿಗೆ ಎಲ್ಲ ಕಾರ್ಯಕರ್ತರು, ವರಿಷ್ಠರು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಹೇಳಿದರು. ಚಿತ್ರದುರ್ಗದಲ್ಲಿ ಯಡಿಯೂರಪ್ಪರಿಂದ ಗೋವಿಂದ ಕಾರಜೋಳರನ್ನು ಸೋಲಿಸುವ ಯತ್ನ ನಡೆದಿತ್ತು ಎಂದು ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಆರೋಪದ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪನವರು ಮೂರು ಬಾರಿ ಚುನಾವಣಾ ಪ್ರಚಾರಕ್ಕೆ ಬಂದಿದ್ದರು.
ನನ್ನ ಗೆಲುವಿಗೆ ಯಡಿಯೂರಪ್ಪ ಅವರ ಪ್ರಯತ್ನ ಬಹಳ ಇದೆ ಎನ್ನುವ ಮೂಲಕ ಟಾಂಗ್ ಕೊಟ್ಟರು. ಅಲ್ಲಿ ಯಾರನ್ನೂ ಅಧ್ಯಕ್ಷರನ್ನು ಮಾಡಿಲ್ಲ, ಹಿಂದಿನ ಅಧ್ಯಕ್ಷರು ಮುರುಳಿಯವರೇ ಈಗಲೂ ಅಧ್ಯಕ್ಷರು. ಜಿಲ್ಲಾಧ್ಯಕ್ಷ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ, ಆತ ಒಳ್ಳೆಯ ಮನುಷ್ಯ ಎಂದು ಗೋವಿಂದ ಕಾರಜೋಳ ಸ್ಪಷ್ಟಪಡಿಸಿದರು. ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಉಚ್ಚಾಟನೆ ಬಗ್ಗೆ ಪ್ರತಿಕ್ರಿಯೆ ನೀಡದ ಗೋವಿಂದ ಕಾರಜೋಳ, ಇಂದು ಯುಗಾದಿ ಮಾಡೋಣ, ಎಲ್ಲರಿಗೂ ಒಳ್ಳೆಯದಾಗಲಿ ಎಂದಷ್ಟೇ ಹೇಳಿದರು.
ಕಾಂಗ್ರೆಸ್ ಸರ್ಕಾರದಲ್ಲಿ ಬೆಡ್ ರೂಮೇ ಟ್ಯಾಪ್ ಆಗ್ತಿದೆ: ಕಾಂಗ್ರೆಸ್ ಸರ್ಕಾರದಲ್ಲಿ ಬೆಡ್ ರೂಮೇ ಟ್ಯಾಪ್ ಆಗುತ್ತಿದೆ. ಫೋನ್ ಟ್ಯಾಪಿಂಗ್ ಯಾವ ದೊಡ್ಡ ಕೆಲಸ ಎಂದು ಸಂಸದ ಗೋವಿಂದ ಕಾರಜೋಳ ವ್ಯಂಗ್ಯವಾಡಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು ದುರಾಡಳಿತ ಮುಂದುವರಿದಿದೆ. ಅನೈತಿಕ ಚಟುವಟಿಕೆ, ಬ್ಲಾಕ್ ಮೇಲ್ ಮಾಡುವವರು ಶಕ್ತಿ ಸೌಧದಲ್ಲಿ ಕುಳಿತು ಆಡಳಿತ ಮಾಡಿದರೆ ರಾಜ್ಯದ ಪರಿಸ್ಥಿತಿ ಏನಾಗಬಹುದೆಂದು ಜನರಿಗೆ ಅರ್ಥ ಆಗಿದೆ. ಸಿಎಂ ಸಿದ್ದರಾಮಯ್ಯ ಗೌರವದಿಂದ ರಾಜೀನಾಮೆ ಕೊಟ್ಟು ಹೋಗುವುದು ಸೂಕ್ತವೆಂದು ಸಲಹೆ ಮಾಡಿದರು. ಕಾಂಗ್ರೆಸ್ ನಾಯಕರ ಪರಿಸ್ಥಿತಿ ಹೇಗಾದರೂ ಆಗಲಿ, ಆದರೆ ಹೆಣ್ಣು ಮಕ್ಕಳ ಮಾರ್ಯಾದೆ ತೆಗೆಯುತ್ತಿದ್ದೀರಿ. 75ವರ್ಷದಲ್ಲಿ ಇಂಥ ಕೆಟ್ಟ ಸರ್ಕಾರ ನಾವು ನೋಡಿಲ್ಲ.
ಸಿಎಂ ಆಗಲು 2 ವರ್ಷದಿಂದ ಡಿಕೆಶಿ ಕಾಯ್ತಿದ್ದಾರೆ: ಸಂಸದ ಗೋವಿಂದ ಕಾರಜೋಳ
ರಾಜ್ಯದ ಜನರ ಕ್ಷಮೆ ಕೇಳಿ ಅಧಿಕಾರ ಬಿಟ್ಟು ಹೋಗುವುದು ಒಳಿತೆ. ಹನಿಟ್ರ್ಯಾಪ್ ಬಗ್ಗೆ ಸದನದಲ್ಲಿ ಪ್ರಸ್ತಾಪದ ಬಳಿಕ ದೂರು ಆಗಬೇಕಿಲ್ಲ. ಸುಮೊಟೊ ಕೇಸ್ ದಾಖಲಿಸಿ ಸರ್ಕಾರ ತನಿಖೆ ಕೈಗೊಳ್ಳಬೇಕು. ಇಡೀ ಪ್ರಕರಣವ ಸಿಬಿಐ ತನಿಖೆಗೆ ವಹಿಸಬೇಕೆಂದು ಕಾರಜೋಳ ಆಗ್ರಹಿಸಿದರು. ಬಿಜೆಪಿಯ 18 ಶಾಸಕರನ್ನು ಸದನದಿಂದ ಅಮಾನತ್ತು ಮಾಡಲಾಗಿದ್ದು, ಸದನದಲ್ಲಿ ಈ ರೀತಿಯ ಘಟನೆ ಇದೇ ಮೊದಲೇನಲ್ಲ. ಸಿದ್ದರಾಮಯ್ಯ ಸದನದ ಬಾಗಿಲು ಒದ್ದು, ಮುರಿದು ಪ್ರವೇಶಿಸಿದ್ದರು. ಟೇಬಲ್ ಮೇಲೇರಿ ಕುಣಿದಾಡಿ ತೊಡೆ ತಟ್ಟಿ ಸೆಡ್ಡು ಹೊಡೆದಿದ್ದರು. ನಮ್ಮ ಬಿಜೆಪಿ ಶಾಸಕರು ಆರೀತಿಯಂತೂ ಮಾಡಿಲ್ಲ. ಪರಿಷತ್ ಸಭಾಪತಿ ಖುರ್ಚಿಯಿಂದ ಎಳೆದು ಕೆಳಗೆ ತಂದಿದ್ದರು. ನಮ್ಮ ಬಿಜೆಪಿ ಸರ್ಕಾರ ಅಂದು ಅವರನ್ನೆಲ್ಲ ಕ್ಷಮಿಸಿತ್ತು. ಸದನದಿಂದ ಶಾಸಕರನ್ನು 6 ತಿಂಗಳು ಅಮಾನತ್ತು ಮಾಡಿದ್ದು ಸರಿಯಲ್ಲವೆಂದು ಪ್ರಶ್ನೆಯೊಂದಕ್ಕೆ ಕಾರಜೋಳ ಉತ್ತರಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.