ಚಿಕ್ಕಮಗಳೂರಿನಲ್ಲಿ ರತ್ನಾಕರ್ ಎಂಬಾತ ತನ್ನ ಅತ್ತೆ, ಮಗಳು ಮತ್ತು ನಾದಿನಿಯನ್ನು ಗುಂಡಿಕ್ಕಿ ಕೊಂದಿದ್ದಾನೆ. ಹೆಂಡತಿ ಬಿಟ್ಟು ಹೋದ ನೋವಿನಿಂದ ಈ ಕೃತ್ಯ ಎಸಗಿದ್ದಾನೆ ಎಂದು ಹೇಳಲಾಗಿದ್ದು, ಬಳಿಕ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್
ಚಿಕ್ಕಮಗಳೂರು (ಏ.02): ಕಾಫಿನಾಡು ಚಿಕ್ಕಮಗಳೂರಿನಲ್ಲಿ ತ್ರಿಬಲ್ ಮರ್ಡರ್ ನಡೆದಿದ್ದು ಮಲೆನಾಡು ಅಕ್ಷರಶಃ ಕಂಗಾಲಾಗಿದೆ. ಸಾಕಿ ಬೆಳಸಬೇಕಿದ್ದ ಅಪ್ಪನೇ ಮಗಳ ಜೊತೆ ಅತ್ತೆ-ನಾದಿನಿಗೆ ಗುಂಡಿಗೆಗೆ ಗುಂಡಿಟ್ಟಿದ್ದಾನೆ. ಬಿಡಿಸಲು ಬಂದ ನಾದಿನಿ ಗಂಡನ ಕಾಲು ಸೀಳಿದ್ದಾನೆ. ಮೂವರನ್ನ ಕೊಲೆಗೈದ ಬಳಿಕ ಕೊಲೆಗೆ ಕಾರಣ ಹೇಳಿ ಸೆಲ್ಫಿ ವಿಡಿಯೋ ಮಾಡಿದ ಕೊಲೆಗಾರ ತಾನೂ ಕೂಡ ಬಂದೂಕಿನ ನಳಿಕೆಗೆ ಕೊರಳನ್ನಿಟ್ಟಿದ್ದಾನೆ.
ಹಸಿರ ಕಾನನದಲ್ಲಿ ಚೆಲ್ಲಿದ ರಕ್ತ : ಕಾಫಿನಾಡ ತ್ರಿಪಲ್ ಮರ್ಡರ್ ಗೆ ಮಲೆನಾಡು ಅಕ್ಷರಶಃ ಬೆಚ್ಚಿ ಬಿದ್ದಿದೆ. ಚಿಕ್ಕಮಗಳೂರು ತಾಲೂಕಿನ ಕಡಬಗೆರೆ ಸಮೀಪದ ಮಾಗಲು ಗ್ರಾಮದಲ್ಲಿ ನಾಡ ಬಂದೂಕಿನಿಂದ ಮೂವರ ಭೀಕರ ಹತ್ಯೆ ನಡೆದಿದೆ. ಯುಗಾದಿ ಹಬ್ಬವನ್ನು ಸಂಭ್ರಮದಿಂದ ಮಾಡಿ, ಹಬ್ಬದ ಮರುದಿನ ಮಲೆನಾಡಿನಲ್ಲಿ ಆಚರಿಸುವ ವರ್ಷದೊಡಕಿನ ಬಾಡೂಟವನ್ನು ಸವಿದು ಮಲಗಲು ಇನ್ನೇನು ಹಾಸಿಗೆ ಹೋಗಿ ಮಲಗುವ ಹೊತ್ತಿನಲ್ಲಿ ಭೀಕರ ಅನಾಹುತ ನಡೆದೇ ಹೋಯಿತು.ರತ್ನಾಕರ್ ಎಂಬಾತನ ಹೆಂಡತಿ ಬಿಟ್ಟು ಹೋಗಿದ್ದರಿಂದ ಮಗಳ ಸಹಪಾಠಿಗಳು ಶಾಲೆಯಲ್ಲಿ ನಿಮ್ಮ ಅಮ್ಮ ಎಲ್ಲಿ ಎಂದು ಕೇಳುತ್ತಾರೆ ಅಂತಾ ತಂದೆ ರತ್ನಾಕರ್ ಬಳಿ ಅಳಲು ತೋಡಿ ಕೊಂಡಿದ್ದಳು.
ಇದರಿಂದ ಮನನೊಂದಿದ್ದ ರತ್ನಾಕರ್ ನಿನ್ನೆ ರಾತ್ರಿ 10 ಗಂಟೆ ವೇಳೆಗೆ ಚಿಕ್ಕಮಗಳೂರು ತಾಲೂಕಿನ ಮಾಗಲು ಗ್ರಾಮಕ್ಕೆ ತೆರಳಿ ರತ್ನಾಕರ್ ಅತ್ತೆ ಜ್ಯೋತಿ, ನಾದಿನಿ ಸಿಂಧು ಹಾಗೂ ತನ್ನ 7 ವರ್ಷದ ಮಗುವನ್ನು ನಾಡ ಬಂದೂಕಿನಿಂದ ಗುಂಡು ಹಾರಿಸಿ ಹತ್ಯೆಗೈದಿದ್ದಾನೆ. ಹತ್ಯೆಯ ಬಳಿಕ ತಾನೂ ಸೆಲ್ಫಿ ವಿಡಿಯೋ ಮಾಡಿ ಸಂಸಾರದ ನೋವನ್ನು ತೋಡಿಕೊಂಡಿದ್ದಾನೆ. ನನ್ನ ಹೆಂಡತಿ ಮೋಸ ಮಾಡಿ ಹೋಗಿ ಎರಡು ವರ್ಷ ಆಯ್ತು, ಆಮೇಲೆ ಮಗಳನ್ನು ಬೇಡ ಅಂತಾ ಬಿಟ್ಟಳು. ಈಗ ಶಾಲೆಯಲ್ಲಿ ನನ್ನ ಮಗಳಿಗೆ ಆಕೆಯ ಫ್ರೆಂಡ್ಸ್ ನಿನ್ನ ಅಮ್ಮ ಎಲ್ಲಿ ಅಂತ ಕೇಳ್ತಾರೆ ಮಗಳು ಅಮ್ಮನ ಫೋಟೋ ತಕೊಂಡು ಹೋಗಿ ಇಕೆ ನನ್ನ ಅಮ್ಮ ಅಂತ ತೋರಿಸಿದ್ದಾಳೆ ಎಂದು ವಿಡಿಯೋದಲ್ಲಿ ರತ್ನಾಕರ್ ನೋವನ್ನು ವ್ಯಕ್ತಪಡಿಸಿದ್ದಾನೆ.
ಇದನ್ನೂ ಓದಿ: 110 ಗ್ರಾಂ ಚಿನ್ನದ ಜೊತೆಗೆ ಚಿನ್ನದಂಥ ಹೆಣ್ಣು ಕೊಟ್ಟರೂ ತೀರಲಿಲ್ಲ ವರದಕ್ಷಿಣೆ ದಾಹ! ಮಲೆನಾಡ ಮಹಿಳೆ ಸಾವು!
ಯಾರಿವನು ರತ್ನಾಕರ ಗೌಡ?
ರತ್ನಾಕರ ಗೌಡ ಮೂಲತಃ ಕಳಸ ತಾಲ್ಲೂಕಿನ ಹಿರೇಬೈಲ್ ಸಮೀಪದ ಕೋಟೆಮಕ್ಕಿ ಗ್ರಾಮದವನು. ಇವನು ಗ್ರಾಮವನ್ನು ತೊರೆದು ಸುಮಾರು 15 ವರ್ಷಗಳಾಗಿದ್ದು, ಆತನ ಅಪ್ಪ ಅಮ್ಮ ತೀರಿಕೊಂಡಿದ್ದು, ಓರ್ವ ಸಹೋದರಿಯನ್ನು ವಿವಾಹ ಮಾಡಿಕೊಟ್ಟಿದ್ದಾರೆ.ರತ್ನಾಕರ ಗೌಡ ಊರು ತೊರೆದು ಬಾಳೆಹೊನ್ನೂರಿನಲ್ಲಿ ಕೆಲ ಸಮಯ ಕೆಕೆಬಿ ಬಸ್ ಡ್ರೈವರ್ ಆಗಿದ್ದ, ಚಿಕ್ಕಮಗಳೂರು ಬಿಜಿಎಸ್ ಕಾಲೇಜು ಬಸ್ ನಲ್ಲಿ ಡ್ರೈವರ್ ಆಗಿದ್ದ ಎನ್ನಲಾಗಿದೆ. ಮೂರು ವರ್ಷಗಳಿಂದ ಸಂಗಮೇಶ್ವರಪೇಟೆ ಪೂರ್ಣಪ್ರಜ್ಞ ಶಾಲೆಯ ಬಸ್ ಡ್ರೈವರ್ ಆಗಿದ್ದ.ಸಮೀಪದ ಮಾಗಲು ಗ್ರಾಮದ ಸ್ವಾತಿ ಎಂಬುವವರನ್ನು ವಿವಾಹವಾಗಿದ್ದ. ಪತಿ ಪತ್ನಿ ನಡುವೆ ವೈಮನಸ್ಸು ಬಂದು ಹೆಂಡತಿ ಸ್ವಾತಿ ಗಂಡನನ್ನು ತೊರೆದು ಎರಡು ವರ್ಷಗಳಿಂದ ಉಡುಪಿಯಲ್ಲಿ ಕೆಲಸ ಮಾಡಿಕೊಂಡು ನೆಲೆಸಿದ್ದರು ಎನ್ನಲಾಗಿದೆ.
ಕಾಫಿ ತೋಟದಲ್ಲಿ ಗುಂಡಿನ ಶಬ್ದ: ಮೂವರನ್ನು ಹತ್ಯೆ ಮಾಡಿದ ಬಳಿಕ ರತ್ನಾಕರ್ ತಾನು ಅದೇ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಬಾಳೆಹೊನ್ನೂರು ಪೊಲೀಸರು ಸ್ಥಳ ಮಹಜರ್ ಮಾಡುವಾಗಲೇ ಕಾಫಿ ತೋಟದಲ್ಲಿ ಮತ್ತೊಮ್ಮೆ ತುಪಾಕಿ ಶಬ್ಧ ಕೇಳಿ ಬಂದಿತ್ತು. ಸ್ಥಳಕ್ಕೆ ಹೋಗಿ ನೋಡುವಷ್ಟರಲ್ಲಿ ಮೂವರ ಹತ್ಯೆಗೈದಿದ್ದ ರತ್ನಾಕರ್ ಕೂಡ ಆತ್ಮಹತ್ಯೆಗೆ ಶರಣಾಗಿದ್ದ. ಘಟನೆಯಲ್ಲಿ ಮೃತ ಸಿಂಧು ಗಂಡ ಅವಿನಾಶ್ ಕಾಲಿಗೂ ಗುಂಡೇಟು ತಗುಲಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಚಿಕ್ಕಮಗಳೂರು ಎಸ್ಪಿ ವಿಕ್ರಮ್ ಅಮಟೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.ಒಟ್ಟಾರೆ, ಹೆಂಡತಿ ಬಿಟ್ಟ ನೋವಿಗೋ... ಮಗಳ ನೋವಿನ ತೊದಲು ನುಡಿಗೋ ಗೊತ್ತಿಲ್ಲ.
ಇದನ್ನೂ ಓದಿ: ಭದ್ರಾ ನದಿಯಲ್ಲಿ ಸಾಲು ಸಾಲು ಅನಾಹುತ: ನದಿಗೆ ಹಾರಿ ಯುವಕ ಸಾವಿಗೆ ಶರಣು!