ಮಗುವಿನ ಜೊತೆ ಇಂಗ್ಲಿಷ್‌ನಲ್ಲೇ ಹೆಚ್ಚು ಮಾತಾಡ್ತೀರಾ? ಹಾಗಾದ್ರೆ ಇದನ್ನು ಓದಿ!

By Suvarna NewsFirst Published Dec 22, 2019, 1:29 PM IST
Highlights

ಒಂದೇ ಬಾರಿಗೆ ಮಕ್ಕಳಿಗೆ ಎರಡೆರಡು ಭಾಷೆ ಕಲಿಸಿದರೆ ಗೊಂದಲವುಂಟಾಗುತ್ತದೆ ಎಂಬ ಕಾರಣಕ್ಕೆ ನಿಮ್ಮ ಮಗುವಿನೊಂದಿಗೆ ಮಾತೃಭಾಷೆ ಕನ್ನಡ ಬಿಟ್ಟು ಇಂಗ್ಲಿಷ್‍ನಲ್ಲೇ ಮಾತನಾಡುತ್ತಿದ್ದೀರಾ? ಹಾಗಾದ್ರೆ ಕೆನಡಾದ ವಿಶ್ವವಿದ್ಯಾಲಯವೊಂದರ ಪ್ರಾಧ್ಯಾಪಕರ ತಂಡ ನಡೆಸಿರುವ ಈ ಅಧ್ಯಯನದ ಬಗ್ಗೆ ನೀವು ತಿಳಿದುಕೊಳ್ಳಲೇಬೇಕು. 
 

ಸಂಬಂಧಿಕರ ಮನೆಗೆ ಎರಡು ವರ್ಷದ ಮಗಳೊಂದಿಗೆ ಹೋಗಿದ್ದೆ. ಅವರ ಮನೆಯ ನಾಯಿಯನ್ನು ನೋಡಿದ ತಕ್ಷಣ ನನ್ನ ಮಗಳು ಅದರತ್ತ ಬೆಟ್ಟು ಮಾಡಿ ತೊದಲು ನುಡಿಯಲ್ಲಿ ‘ನಾಯಿ’ ಎಂದು ಹೇಳಿದಳು. ಇದನ್ನು ಕೇಳಿ ಅವರ ಮನೆಯಲ್ಲಿದ್ದವರಿಗೆಲ್ಲ ಅಚ್ಚರಿ. ನನ್ನತ್ತ ತಿರುಗಿ ‘ನೀನು ಮಗುವಿಗೆ ಕನ್ನಡದಲ್ಲೇ ಮಾತನಾಡಿಸುತ್ತೀಯಾ? ಇಂಗ್ಲಿಷ್ ಪದಗಳನೇಕೆ ಪರಿಚಯಿಸಿಲ್ಲ.

ಸ್ಕೂಲಿಗೆ ಹೋದ ಮೇಲೆ ಅವಳಿಗೆ ತೊಂದರೆಯಾಗುತ್ತದೆ’ ಎಂದೆಲ್ಲ ಹೇಳಲಾರಂಭಿಸಿದರು. ನನ್ನ ಪಕ್ಕದಲ್ಲೇ ಕುಳಿತಿದ್ದ ಮಗುವಿಗೆ ನಮ್ಮ ಸಂಭಾಷಣೆ ಎಷ್ಟರ ಮಟ್ಟಿಗೆ ಅರ್ಥವಾಯಿತೋ ಇಲ್ಲವೋ ಗೊತ್ತಿಲ್ಲ ಅವಳು ತಕ್ಷಣ ‘ಡಾಗ್ ಬಾ’ ಎಂದು ಕರೆಯಲು ಪ್ರಾರಂಭಿಸಿದಳು. ಇಷ್ಟೊತ್ತು ಮಾತನಾಡುತ್ತಿದ್ದ ನನ್ನ ಸಂಬಂಧಿ ಮುಂದೆ ಒಂದೂ ಮಾತನಾಡದೆ ಆ ವಿಷಯವನ್ನು ಅಲ್ಲಿಗೇ ಬಿಟ್ಟರು.

ಮಕ್ಕಳ ಮಿದುಳು ವಿಷಯಗಳನ್ನು ಬಹುಬೇಗ ಗ್ರಹಿಸುತ್ತದೆ ಮತ್ತು ನೆನಪಿನಲ್ಲಿಟ್ಟುಕೊಳ್ಳುತ್ತದೆ ಎಂಬುದು ನಮ್ಮೆಲ್ಲರಿಗೂ ತಿಳಿದಿದ್ದರೂ ಮಾತು ಕಲಿಸುವ ಸಂದರ್ಭದಲ್ಲಿ ಮಾತ್ರ ಬಹುತೇಕ ಪೋಷಕರು ಯಾವುದಾದರೂ ಒಂದು ಭಾಷೆಯಲ್ಲಷ್ಟೇ ಅವರೊಂದಿಗೆ ಸಂವಹನ ನಡೆಸುತ್ತಾರೆ. ಇದಕ್ಕೆ ಕಾರಣ ಎರಡೆರಡು ಭಾಷೆಗಳ ಬಳಕೆಯಿಂದ ಮಕ್ಕಳಿಗೆ ಗೊಂದಲ ಉಂಟಾಗಬಹುದು ಎಂಬ ಭಯ. ಎಷ್ಟೋ ಪಾಲಕರು ಮಕ್ಕಳು ಸ್ಕೂಲ್‍ಗೆ ಹೋಗಲು ಪ್ರಾರಂಭಿಸಿದ ಮೇಲೆ ತೊಂದರೆಯಾಗಬಾರದು ಎಂಬ ಕಾರಣಕ್ಕೆ ಮಾತೃಭಾಷೆಯಾದ ಕನ್ನಡವನ್ನು ಕಲಿಸದೆ ಇಂಗ್ಲಿಷ್‍ನಲ್ಲೇ ಸಂಭಾಷಣೆ ನಡೆಸುತ್ತಾರೆ.

ನೀವು ಕೂಡ ಇಂಥದ್ದೇ ಚಿಂತನೆ ಹೊಂದಿದ್ದರೆ ಅದನ್ನು ಬದಲಾಯಿಸಿಕೊಳ್ಳಬೇಕಾದ ಅಗತ್ಯವಿದೆ ಎಂದಿದೆ ಕೆನಡಾದ ಅಲ್ಬೆರ್ಟ  ವಿಶ್ವವಿದ್ಯಾಲಯದ ಸಂಶೋಧಕರ ತಂಡ ನಡೆಸಿದ ಅಧ್ಯಯನ. ಇದರ ಪ್ರಕಾರ ಹುಟ್ಟಿನಿಂದ ಎರಡು ಭಾಷೆಗಳನ್ನು ಕಲಿತ ಮಗು ಏಕಭಾಷೆಯನ್ನು ಕಲಿತಿರುವ ಮಗುವಿನಷ್ಟೇ ಚೆನ್ನಾಗಿ ಕಥೆಗಳನ್ನು ಹೇಳಬಲ್ಲದು. ಅಷ್ಟೇ ಅಲ್ಲ, ಇಂಥ ಮಕ್ಕಳು ಹೆಚ್ಚು ಸೃಜನಾತ್ಮಕವಾಗಿ ವಿವರಿಸುವ ಸಾಮಥ್ರ್ಯ ಹೊಂದಿದ್ದಾರೆ. ದ್ವಿಭಾಷೆ ಕಲಿತಿರುವ ಮಕ್ಕಳ ಪದ ಭಂಡಾರ ಏಕ ಭಾಷೆ ಕಲಿತ ಮಕ್ಕಳಷ್ಟೇ ಚೆನ್ನಾಗಿರುತ್ತದೆ. ಜೊತೆಗೆ ಇವರು ಗೊಂದಲಕ್ಕೆ ಒಳಗಾಗದೆ ಒಂದಕ್ಕಿಂತ ಹೆಚ್ಚು ವಿಷಯಗಳ ಬಗ್ಗೆ ಯೋಚಿಸಬಲ್ಲರು, ಮಾತನಾಡಬಲ್ಲರು.  

ಶೇರೆಂಟಿಂಗ್: ಮಕ್ಕಳ ವಿಷಯದಲ್ಲಿ ಈ ತಪ್ಪು ಮಾಡಲೇಬೇಡಿ!

ಅಧ್ಯಯನದಲ್ಲಿ ಏನಿದೆ?: 

ದ್ವಿಭಾಷೆ ಬಳಸುವ ಮಕ್ಕಳ ಶಬ್ದ ಭಂಡಾರ ಏಕಭಾಷೆ ಕಲಿತಿರುವ ಮಕ್ಕಳಿಗಿಂತ ಕಡಿಮೆ ಇರುವುದಾಗಿ ಈ ಹಿಂದೆ ನಡೆದಿರುವ ಅಧ್ಯಯನಗಳು ತಿಳಸಿವೆ. ಅಲ್ಲದೆ, ಹುಟ್ಟಿನಿಂದ ಎರಡು ಭಾಷೆಗಳನ್ನು ಒಟ್ಟೊಟ್ಟಿಗೆ ಕಲಿಯುವ ಮಕ್ಕಳು ಮುಂದೆ ಶೈಕ್ಷಣಿಕವಾಗಿ ಹಿಂದುಳಿಯುವ ಸಾಧ್ಯತೆಯಿದೆ ಎಂದು ಕೂಡ ಹೇಳಿವೆ. ಇದರ ಸತ್ಯಾಸತ್ಯತೆಗಳನ್ನು ಮತ್ತೊಮ್ಮೆ ಪರಿಶೀಲಿಸಲು ಕೆನಡಾದ ಅಲ್ಬೆರ್ಟ ವಿಶ್ವವಿದ್ಯಾಲಯದ ಸಂಶೋಧಕರು ಮುಂದಾಗಿದ್ದಾರೆ. ಈ ಅಧ್ಯಯನಕ್ಕೆ ಅವರು ಫ್ರೆಂಚ್ ಹಾಗೂ ಇಂಗ್ಲಿಷ್ ಎರಡೂ ಭಾಷೆಯನ್ನು ಹುಟ್ಟಿನಿಂದ ಕಲಿಯುತ್ತ ಬಂದಿರುವ ಮಕ್ಕಳನ್ನು ಆಯ್ಕೆ ಮಾಡಿದ್ದಾರೆ.

ಈ ಮಕ್ಕಳು ಇಂಗ್ಲಿಷ್‍ನಲ್ಲಿ ಕಥೆಗಳನ್ನು ಹೇಳುವಾಗ ಇಂಗ್ಲಿಷ್ ಮಾತ್ರ ಬಲ್ಲ ಮಕ್ಕಳು ಬಳಸಿದಷ್ಟೇ ಪದಗಳನ್ನು ಉಪಯೋಗಿಸಿದ್ದಾರೆ. ಫ್ರೆಂಚ್‍ನಲ್ಲಿ ಕಥೆ ಹೇಳುವಾಗ ಕೂಡ ಫ್ರೆಂಚ್ ಮಾತ್ರ ಬಲ್ಲ ಮಕ್ಕಳು ಬಳಸಿದಷ್ಟೇ ಪದಗಳನ್ನು ಬಳಸಿದ್ದಾರೆ. ಅಷ್ಟೇ ಅಲ್ಲ, ದ್ವಿಭಾಷೆ ಕಲಿತಿರುವ ಮಕ್ಕಳು ಒಂದು ವಿಷಯದಿಂದ ಮತ್ತೊಂದು ವಿಷಯಕ್ಕೆ ಪ್ರವೇಶಿಸುವಾಗ ಗೊಂದಲಕ್ಕೆ ಒಳಗಾಗುವುದಿಲ್ಲ ಎಂಬುದನ್ನು ಅಧ್ಯಯನ ಸ್ಪಷ್ಟಪಡಿಸಿದೆ. ಇಂಥ ಮಕ್ಕಳು ಒಮ್ಮೆಗೆ ಅನೇಕ ವಿಷಯಗಳ ಬಗ್ಗೆ ಯೋಚಿಸುವ ಸಾಮಥ್ರ್ಯವನ್ನು ಕೂಡ ಹೊಂದಿರುತ್ತಾರೆ ಎಂದು ಅಧ್ಯಯನ ನೇತೃತ್ವ ವಹಿಸಿದ್ದ ನಿಕೊಲ್ಡಿಸ್ ತಿಳಿಸಿದ್ದಾರೆ.

ಮೊಮ್ಮಕ್ಕಳನ್ನು ನೋಡಿಕೊಳ್ಳೋ ಅಜ್ಜ- ಅಜ್ಜಿಯರ ಆಯಸ್ಸು ಹೆಚ್ಚಾಗುತ್ತದೆ!

ಮಕ್ಕಳಲ್ಲಿ ಭಾಷಾ ಜ್ಞಾನ ಹೆಚ್ಚಿಸುವುದೇಗೆ?:  ಮಕ್ಕಳಲ್ಲಿ ಭಾಷಾ ಕೌಶಲ್ಯ ಬೆಳೆಸುವಲ್ಲಿ ಪೋಷಕರ ಪಾತ್ರ ನಿರ್ಣಾಯಕವಾದದ್ದು. ನೀವು ಗಮನಿಸಿ ನೋಡಿ, ಅಜ್ಜಿ-ಅಜ್ಜ ಸೇರಿದಂತೆ ಕೂಡು ಕುಟುಂಬದಲ್ಲಿ ಬೆಳೆಯುವ ಮಕ್ಕಳು ಬಹುಬೇಗ ಮಾತನಾಡಲು ಕಲಿಯುತ್ತಾರೆ. ಇದಕ್ಕೆ ಕಾರಣ ಮಗುವಿನೊಂದಿಗೆ ಮನೆಯ ಸದಸ್ಯರು ಒಬ್ಬರ ನಂತರ ಮತ್ತೊಬ್ಬರಂತೆ ನಿರಂತರವಾಗಿ ಮಾತನಾಡುವುದು. ಅದೇ ವಿಭಕ್ತ ಕುಟುಂಬದಲ್ಲಿ ಬೆಳೆದ ಮಗುವಿನಲ್ಲಿ ಭಾಷಾ ಬೆಳವಣಿಗೆ ಅಷ್ಟೊಂದು ಗಮನಾರ್ಹ ಪ್ರಮಾಣದಲ್ಲಿ ಆಗಿರುವುದಿಲ್ಲ. ಅಧ್ಯಯನಗಳ ಪ್ರಕಾರ ಹುಟ್ಟಿದ ತಕ್ಷಣದಿಂದ ಮಗುವಿನೊಂದಿಗೆ ನಿರಂತರವಾಗಿ ಮಾತನಾಡುವುದು, ಕಥೆಗಳನ್ನು ಹೇಳುವುದರಿಂದ ಆ ಮಗು ಭಾಷೆಯ ಮೇಲೆ ಉತ್ತಮ ಹಿಡಿತ ಸಾಧಿಸುತ್ತವೆ. 

* ಎಷ್ಟು ಸಾಧ್ಯವೋ ಅಷ್ಟು ಮಾತನಾಡಿ: ಮಗುವಿಗೆ ಅರ್ಥವಾಗುತ್ತದೋ ಇಲ್ಲವೋ ಎಂಬ ಯೋಚನೆ ಬಿಟ್ಟು ಸಮಯ ಸಿಕ್ಕಾಗಲೆಲ್ಲ ಅದರೊಂದಿಗೆ ಮಾತನಾಡಿ. ಮಗುವಿಗೆ ಸ್ನಾನ ಮಾಡಿಸುವಾಗ, ನಿದ್ರೆ ಮಾಡಿಸುವಾಗ ನೀವೇನು ಮಾಡುತ್ತಿದ್ದೀರಿ ಎಂಬುದನ್ನು ವಿವರಿಸಿ. ಹೀಗೆ ನಿರಂತರವಾಗಿ ಮಗುವಿನೊಂದಿಗೆ ಸಂಭಾಷಣೆ ನಡೆಸುವುದರಿಂದ ಅದಕ್ಕೆ  ಒಂದೊಂದೇ ಪದಗಳು ಪರಿಚಯವಾಗುತ್ತ ಸಾಗುತ್ತವೆ. 

* ಕಥೆ ಹೇಳಿ: ಮಗುವನ್ನು ಮಲಗಿಸುವಾಗ ಕಥೆ ಹೇಳುವುದರಿಂದ ಮಕ್ಕಳಲ್ಲಿ ಭಾಷಾ ಜ್ಞಾನ ಬೆಳೆಯುತ್ತದೆ. ಹೊಸ ಹೊಸ ಪದಗಳನ್ನು ಅವರು ಕಲಿಯುತ್ತಾರೆ. ಆ ಪದಗಳನ್ನು ಎಲ್ಲಿ ಬಳಸಬೇಕು ಎಂಬುದು ಕೂಡ ಅವರಿಗೆ ತಿಳಿಯುತ್ತದೆ.

ಪಾಕೆಟ್ ಮನಿಯೇ ಮಕ್ಕಳ ಮನಿ ಮ್ಯಾನೇಜ್ಮೆಂಟ್ ಗುರು!

* ಪುಸ್ತಕ ಓದಿ: ಮಕ್ಕಳ ಮುಂದೆ ಕಥೆ ಪುಸ್ತಕ ಅಥವಾ ರೈಮ್ಸ್‍ಗಳನ್ನು ಓದಿ ಹೇಳಿ. ಇದು ಕೂಡ ಅವರಲ್ಲಿ ಭಾಷಾ ಬೆಳವಣಿಗೆಗೆ ನೆರವು ನೀಡುತ್ತದೆ.

* ಮಕ್ಕಳ ಮಾತಿಗೆ ಕಿವಿಯಾಗಿ: ಮಗು ನಿಮ್ಮ ಬಳಿ ಮಾತನಾಡುವಾಗ ತಾಳ್ಮೆಯಿಂದ ಕೇಳಿಸಿಕೊಳ್ಳಿ. ಅವನು ಅಥವಾ ಅವಳು ವಾಕ್ಯ ಪೂರ್ಣಗೊಳಿಸುವ ತನಕ ತಾಳ್ಮೆಯಿಂದಿರಿ. ಪದಗಳನ್ನು ತಪ್ಪಾಗಿ ಉಚ್ಛರಿಸಿದರೆ ಬೈಯಬೇಡಿ ಬದಲಿಗೆ ಅದನ್ನು ಸರಿಪಡಿಸಿ. ಇದರಿಂದ ಅವರು ಪದಗಳನ್ನು ಸರಿಯಾಗಿ ಉಚ್ಛರಿಸಲು ಸಾಧ್ಯವಾಗುತ್ತದೆ. 

click me!