ಕೊರೋನಾ ವೈರಸ್ ಯಾವ ರೂಪದಲ್ಲಿ ಬೇಕಾದರೂ ಒಕ್ಕರಿಸಿಕೊಳ್ಳಬಹುದು. ಹೀಗಾಗಿ ನಾವು ಬಳಸುವ ಪ್ರತಿ ವಸ್ತುವನ್ನೂ ಸ್ವಚ್ಛವಾಗಿಟ್ಟುಕೊಳ್ಳೋದು ಅಗತ್ಯ. ಅದ್ರಲ್ಲೂ ನಾವು ಧರಿಸುವ ಬಟ್ಟೆಯನ್ನು ಬರೀ ತೊಳೆದ್ರಷ್ಟೆ ಸಾಲದು, ರೋಗಾಣುಮುಕ್ತಗೊಳಿಸೋದು ಅತ್ಯಗತ್ಯ.
ಕೊರೋನಾ ವೈರಸ್ ಎಲ್ಲರ ನಿದ್ದೆಗೆಡಿಸಿದೆ. ಪ್ರತಿ ವಸ್ತುವನ್ನು ಮುಟ್ಟಿದ ಬಳಿಕ ಕಾಲುಗಳು ನಮಗೆ ಅರಿವಿಲ್ಲದಂತೆ ಸಿಂಕ್ ಬಳಿ ತೆರಳುತ್ತವೆ. ಹ್ಯಾಂಡ್ ವಾಷ್ ಮಾಡೋದೇ ಕೆಲಸವಾಗಿದೆ. ಇನ್ನು ಹೊರಗಡೆಯಿಂದ ಯಾವುದೇ ವಸ್ತು ತಂದರೂ ಅದನ್ನು ತೊಳೆಯೋದು ಇಲ್ಲವೆ ಒಂದಿನವಿಡೀ ಮುಟ್ಟದಿರುವ ಉಪಾಯಕ್ಕೆ ಎಲ್ಲರೂ ಮೊರೆ ಹೋಗಿದ್ದಾರೆ. ಈ ನಡುವೆ ನಾವು ತೊಟ್ಟಿರುವ ಬಟ್ಟೆ ಮೇಲೂ ಕೊರೋನಾ ವೈರಸ್ ನಿರ್ದಿಷ್ಟ ಅವಧಿ ತನಕ ಜೀವಿಸಬಲ್ಲದು ಎಂಬ ಸತ್ಯ ಇನ್ನಷ್ಟು ಶಾಕ್ ನೀಡುತ್ತೆ. ಕೊರೋನಾ ಮಾತ್ರವಲ್ಲ, ಅನೇಕ ರೋಗಾಣುಗಳನ್ನು ನಾವು ತೊಡುವ ಬಟ್ಟೆಗಳು ಒಂದೆಡೆಯಿಂದ ಇನ್ನೊಂದೆಡೆಗೆ ಸಾಗಿಸಬಲ್ಲವು. ಹೀಗಾಗಿ ಬಟ್ಟೆಗಳನ್ನು ಸುಮ್ಮನೆ ನೀರಿನಲ್ಲಿ ಅದ್ದಿ ತೆಗೆದರೆ ಸಾಲದು, ಅದರಲ್ಲಿರುವ ರೋಗಾಣುಗಳನ್ನು ನಾಶಪಡಿಸಬೇಕು. ಅದು ಹೇಗೆ ಅಂತೀರಾ?
ಹೇಗಿದ್ದೀರಿ? ರಾತ್ರಿ ನಿದ್ದೆ ಚೆನ್ನಾಗಿ ಆಯ್ತೇ! ಇಲ್ಲವಾದರೆ ನಿದ್ದೆಗೇನು ಮಾಡಬೇಕು?
ಬಿಸಿ ನೀರು ಬಳಸಿ
ಬಟ್ಟೆಗಳನ್ನು ಬಿಸಿ ನೀರಿನಲ್ಲಿ ತೊಳೆಯೋದ್ರಿಂದ ರೋಗಾಣುಗಳು ನಾಶವಾಗುತ್ತವೆ. 55-60 ಡಿಗ್ರಿ ಸೆಲ್ಸಿಯಸ್ ಬಿಸಿ ನೀರಿನಲ್ಲಿ ಮನೆಯಿಂದ ಹೊರಗೆ ಹೋಗುವಾಗ ಧರಿಸಿದ್ದ ಬಟ್ಟೆಗಳನ್ನು ತೊಳೆಯಿರಿ. ಈಗಂತೂ ವಾಷಿಂಗ್ ಮಷಿನ್‍ನಲ್ಲಿ ಕೂಡ ಹೀಟರ್ ಇದೆ, ಇದು ಬಟ್ಟೆಗಳಲ್ಲಿರುವ ಬ್ಯಾಕ್ಟೀರಿಯಾ, ಕೀಟಾಣುಗಳನ್ನು ನಾಶಗೊಳಿಸುತ್ತವೆ. ವಾರ್ಮ್, ಹಾಟ್, ಅಲರ್ಜಿ ಫ್ರಿ ಮುಂತಾದ ಆಯ್ಕೆಗಳು ಕೂಡ ಅತ್ಯಾಧುನಿಕ ವಾಷಿಂಗ್ ಮಷಿನ್‍ಗಳಲ್ಲಿವೆ. ಇವು ರೋಗಾಣುಗಳನ್ನು ತೊಲಗಿಸುವ ಜೊತೆಗೆ ಬಟ್ಟೆಗಳಿಗೆ ಹಾನಿ ಮಾಡೋದಿಲ್ಲ ಕೂಡ.
ಕೆಮಿಕಲ್ ಬಳಸಿ ಕೀಟಾಣುಗಳನ್ನು ತೊಲಗಿಸಿ
ಅಧಿಕ ತಾಪಮಾನಕ್ಕೆ ಕೆಲವು ಬಟ್ಟೆ ಹಾಳಾಗುವ ಸಾಧ್ಯತೆಯಿರುತ್ತೆ. ಇಂಥ ಬಟ್ಟೆಗಳನ್ನು ಕೆಮಿಕಲ್ ಬಳಸಿ ಸೋಂಕುಮುಕ್ತಗೊಳಿಸಬಹುದು. ಕ್ಲೋರಿನ್‍ಯುಕ್ತ ಬ್ಲೀಚ್‍ನಲ್ಲಿ ಬಟ್ಟೆಗಳನ್ನು ನೆನೆಹಾಕಿ ಸ್ವಚ್ಛಗೊಳಿಸಿ. ಬಟ್ಟೆಯ ಒಳ ಹಾಗೂ ಹೊರಬದಿಗಳಿಗೆ ಲಾಂಡ್ರಿ ಡಿಟರ್ಜೆಂಟ್ ಹಾಗೂ ಬ್ಲೀಚ್ ಬಳಸಿ. ಕ್ಲೋರಿನ್ ಬ್ಲೀಚ್ ಅನ್ನು ನೇರವಾಗಿ ಬಟ್ಟೆಗಳ ಮೇಲೆ ಬಳಸಬಾರದು.ಇವು ಬಟ್ಟೆಯ ಬಣ್ಣವನ್ನು ತೆಗೆಯುವ ಜೊತೆಗೆ ಫೈಬರ್‍ಗಳನ್ನು ಕೂಡ ಕರಗಿಸುತ್ತೆ. ಬಕೆಟ್‍ನಲ್ಲಿರುವ ನೀರಿಗೆ ಅಥವಾ ವಾಷಿಂಗ್ ಮಷಿನ್‍ನಲ್ಲಿರುವ ಅಟೋಮ್ಯಾಟಿಕ್ ಡಿಸ್ಪೆನ್ಸರ್‍ಗೆ ಬ್ಲೀಚ್ ಹಾಕಿ ಆ ಬಳಿಕ ಅದಕ್ಕೆ ಬಟ್ಟೆಗಳನ್ನು ಹಾಕಿ.
ಕಿಚನ್ ಎಂಬ ಮೆಡಿಕಲ್‌ನಲ್ಲಿ ಸಿಗುತ್ತೆ ಪೇಯಿನ್ ಕಿಲ್ಲರ್
ವಾಷಿಂಗ್ ಮಷಿನ್ ಸ್ವಚ್ಛವಾಗಿಡಿ
ಆಗಾಗ ವಾಷಿಂಗ್ ಮಷಿನ್ ಕ್ಲೀನ್ ಮಾಡಲು ಮರೆಯಬೇಡಿ. ಕೀಟಾಣು, ಬ್ಯಾಕ್ಟೀರಿಯಾ ಹಾಗೂ ಕೊಳೆ ವಾಷಿಂಗ್ ಮಷಿನ್ ಅಡಿಭಾಗದಲ್ಲಿ ಅಥವಾ ರಿಮ್ ಸುತ್ತಲೂ ಸಂಗ್ರಹವಾಗುವ ಜೊತೆಗೆ ಕೆಟ್ಟ ವಾಸನೆ ಬೀರುತ್ತವೆ. ಅತ್ಯಾಧುನಿಕ ವಾಷಿಂಗ್ ಮಷಿನ್ ಮಾಡೆಲ್‍ಗಳಲ್ಲಿ ಪ್ರತಿ ಬಾರಿ ವಾಷ್ ಮಾಡೋವಾಗ ಸ್ಪೀನ್ ಆಗುವ ಸಮಯದಲ್ಲಿ ಟಬ್ ಗೋಡೆಗೆ ಅಂಟಿಕೊಂಡಿರುವ ಕಶ್ಮಲಗಳನ್ನು ಅಟೋಮ್ಯಾಟಿಕ್ ಆಗಿ ಸ್ವಚ್ಛಗೊಳಿಸುವ ವ್ಯವಸ್ಥೆ ಇರುತ್ತದೆ. ಒಂದು ವೇಳೆ ನಿಮ್ಮ ವಾಷಿಂಗ್ ಮಷಿನ್‍ನಲ್ಲಿ ಈ ವ್ಯವಸ್ಥೆಯಿಲ್ಲವೆಂದ್ರೆ 15 ದಿನಕ್ಕೊಮ್ಮೆ ಇಲ್ಲವೆ ತಿಂಗಳಿಗೊಮ್ಮೆ ಕ್ಲೀನರ್ ಹಾಕಿ ವಾಷಿಂಗ್ ಮಷಿನ್ ಅನ್ನು ಸ್ವಚ್ಛಗೊಳಿಸಿ. ಕ್ಲೀನರ್ ಹಾಕಿ ವಾಷಿಂಗ್ ಮಷಿನ್ ಆನ್ ಮಾಡಿದ್ರೆ ಅದು ಕೊಳೆಯನ್ನೆಲ್ಲ ತೆಗೆಯುತ್ತೆ.
ಬಿಸಿಲಿನಲ್ಲಿ ಒಣಗಿಸಿ
ವಾಷಿಂಗ್ ಮಷಿನ್‍ನಲ್ಲಿ ಡ್ರೈಯರ್ ಇದ್ರೆ ಅದರಲ್ಲೇ ಬಟ್ಟೆಗಳನ್ನು ಒಣಗಿಸಬಹುದು. ಒಂದು ವೇಳೆ ಡ್ರೈಯರ್ ಇಲ್ಲವೆಂದ್ರೆ ಬಿಸಿಲಿನಲ್ಲಿ ಬಟ್ಟೆಗಳನ್ನು ಒಣಹಾಕಿ. ಕೆಲವು ತಜ್ಞರ ಪ್ರಕಾರ ಡ್ರೈಯರ್‍ಗಿಂತಲೂ ಬಟ್ಟೆಗಳನ್ನು ಬಿಸಿಲಿನಲ್ಲಿ ಒಣಗಿಸೋದು ಉತ್ತಮ. ಇದರಿಂದ ಅದರಲ್ಲಿರುವ ಕೀಟಾಣುಗಳು, ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ. ಕೆಲವರು ಬಟ್ಟೆಗಳನ್ನು ಮನೆಯೊಳಗೇ ಒಣಹಾಕುತ್ತಾರೆ. ಇದರಿಂದ ನೀರಿನಾಂಶ ಸರಿಯಾಗಿ ಒಣಗದೆ ಬಟ್ಟೆಯಲ್ಲಿ ಹಾಗೆಯೇ ಉಳಿಯಬಹುದು. ಅಷ್ಟೇ ಅಲ್ಲ, ವಾಸನೆ ಜೊತೆಗೆ ಬ್ಯಾಕ್ಟೀರಿಯಾಗಳು ಕೂಡ ಅಭಿವೃದ್ಧಿ ಹೊಂದುವ ಸಾಧ್ಯತೆಯಿದೆ.
ಸ್ಟೀಮ್ ಕ್ಲೀನ್
ಸ್ಟೀಮ್ ಕ್ಲೀನಿಂಗ್ ಬಟ್ಟೆಯಲ್ಲಿರುವ ಬ್ಯಾಕ್ಟೀರಿಯಾಗಳನ್ನು ನಾಶಪಡಿಸಲು ನೆರವು ನೀಡುತ್ತದೆ. ಇದು ಸ್ಯಾನಿಟೈಸರ್ ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದೇ ಕಾರಣಕ್ಕೆ ಇತ್ತೀಚಿನ ದಿನಗಳಲ್ಲಿ ವಾಷಿಂಗ್ ಮಷಿನ್‍ಗಳಲ್ಲಿ ಸ್ಟೀಮ್‍ಕೇರ್ ಟೆಕ್ನಾಲಜಿ ಅಳವಡಿಸಲಾಗಿದ್ದು, ಶೇ.99ರಷ್ಟು ಬ್ಯಾಕ್ಟೀರಿಯಾ ಹಾಗೂ ಅಲರ್ಜಿಕಾರಕಗಳನ್ನು ನಾಶಪಡಿಸಲು ನೆರವು ನೀಡುತ್ತದೆ.