ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರೇ ಬೆದರಿಕೆ ಪತ್ರ ಸೃಷ್ಟಿಸಿ, ಕಥೆ ಕಟ್ಟುತ್ತಿದ್ದಾರೆ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಆರೋಪಿಸಿದರು.
ಬೆಳಗಾವಿ (ಜ.13): ಬಿಜೆಪಿ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರೇ ಬೆದರಿಕೆ ಪತ್ರ ಸೃಷ್ಟಿಸಿ, ಕಥೆ ಕಟ್ಟುತ್ತಿದ್ದಾರೆ ಎಂದು ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಆರೋಪಿಸಿದರು. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರವಿ ಅವರಿಗೆ ಲಕ್ಷ್ಮೀ ಹೆಬ್ಬಾಳಕರ ಅವರು ಬೆದರಿಕೆ ಪತ್ರ ಬರೆದಿದ್ದಾರಂತೆಯೇ? ಡ್ರಾಮಾ ಮಾಸ್ಟರ್ ರವಿ ಅವರೇ ಬೆದರಿಕೆ ಪತ್ರ ಸೃಷ್ಟಿಸಿ, ಕಥೆ ಹೇಳುತ್ತಿದ್ದಾರೆ. ಅದನ್ನು ಕಾಂಗ್ರೆಸ್ ಮೇಲೆ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದರು.
ಸಚಿವರು ತಮ್ಮ ಮನೆಗಳಲ್ಲಿ ಔತನಕೂಟ ಆಯೋಜಿಸಿರುವುದಕ್ಕೆ ಮಹತ್ವ ಕೊಡಬೇಕಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವ ಸತೀಶ ಜಾರಕಿಹೊಳಿ ಅವರ ಮನೆಗೆ ಊಟಕ್ಕೆ ಹೋಗಿದ್ದಾರೆ. ನನ್ನ ಮನೆಗೂ ಮುಖ್ಯಮಂತ್ರಿಗಳು ಊಟಕ್ಕೆ ಬಂದಿದ್ದಾರೆ. ವಿರೋಧ ಪಕ್ಷದವರು ಊಟಕ್ಕೆ ಬರುತ್ತಾರೆ. ನಾವೂ ಹೋಗುತ್ತೇವೆ. ಅದರಲ್ಲೇನು ತಪ್ಪು, ಅದಕ್ಕೆ ಅಷ್ಟೊಂದು ಮಹತ್ವ ಕೊಡುವ ಅಗತ್ಯವಿಲ್ಲ ಎಂದು ಹೇಳಿದರು.
ಹೈಕಮಾಂಡ್‌ನಿಂದ್ಲೇ ತೀರ್ಮಾನ: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿದ್ದು, ಈ ಕುರಿತು ಹೈಕಮಾಂಡ್ ತೀರ್ಮಾನ ಮಾಡಲಿದೆ ಎಂದು ಹಿರಿಯ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ. ಸುದ್ದಿಗಾರರ ಜೊತೆ ಮಾತನಾಡಿ, ಹಾಲಿ ಅಧ್ಯಕ್ಷರಾಗಿರುವ ಡಿ.ಕೆ. ಶಿವಕುಮಾರ್ ಅವರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಪಕ್ಷದ ಸಂಘಟನೆ, ವಿವಿಧ ಕಾರ್ಯಕ್ರಮಗಳ ಆಯೋಜನೆಗಳ ಜತೆಗೆ ಚುನಾವಣೆಯನ್ನೂ ಎದುರಿಸಿದ್ದಾರೆ. ಕಾಂಗ್ರೆಸ್ ಪಕ್ಷಕ್ಕೆ ಅವರ ಕೊಡುಗೆ ದೊಡ್ಡದಿದೆ. ಶಿವಕುಮಾರ್ ಕೂಡ ಈಗಾಗಲೇ ತಾವು ಎರಡು ಜವಾಬ್ದಾರಿ ಹೊಂದಿರುವುದರಿಂದ ಹೊಸ ಅಧ್ಯಕ್ಷರ ನೇಮಕವಾಗಬೇಕೆಂದು ಹೇಳಿದ್ದಾರೆ ಎಂದರು. ಕೆಪಿಸಿಸಿ ಅಧ್ಯಕ್ಷ ಹುದ್ದೆ ನೀಡುವಂತೆ ತಾವೇನೂ ಕೇಳುವುದಿಲ್ಲ. ಈ ಬಗ್ಗೆ ಹೈಕಮಾಂಡ್ ಕೇಳಿದರೆ ಅಭಿಪ್ರಾಯ ಹೇಳುತ್ತೇನೆ. ಬಹಿರಂಗವಾಗಿ ಹೇಳುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವಿಜಯಪುರದಲ್ಲಿ ಶೀಘ್ರ ಮೈಸೂರು ಸೋಪ್ ಫ್ಯಾಕ್ಟರಿ: ಸಚಿವ ಎಂ.ಬಿ.ಪಾಟೀಲ
ಸಂಪುಟ ಪುನಾರಚನೆ ಸಿಎಂಗೆ ಬಿಟ್ಟಿದ್ದು: ಸಚಿವ ಸಂಪುಟ ಪುನರಾಚನೆ, ಖಾತೆಗಳ ಬದಲಾವಣೆ ನಿರ್ಧಾರಗಳು ಮುಖ್ಯಮಂತ್ರಿಗಳು ಹಾಗೂ ಹೈಕಮಾಂಡ್‌ಗೆ ಬಿಟ್ಟಿದ್ದು, ಈ ಬಗ್ಗೆ ನಾನು ಏನೂ ಹೇಳಲು ಆಗಲ್ಲ. ಬೃಹತ್ ನೀರಾವರಿ ಖಾತೆಯನ್ನು ಉತ್ತರ ಕರ್ನಾಟಕ ದವರಿಗೆ ನೀಡಬೇಕು ಎಂದು ಕೆಲವರು ಕೇಳಿರಬಹುದು. ಆ ಭಾಗದಲ್ಲಿ ಕೃಷ್ಣಾ ಮೇಲ್ದಂಡೆ ಯೋಜನೆ ಕೆಲಸ ಬಹಳ ಇದೆ, ಹಾಗಾಗಿ ಕೇಳಿರಬಹುದು, ಅದರಲ್ಲಿ ತಪ್ಪಿಲ್ಲ. ಈ ಹಿಂದೆ ಬಸವರಾಜ ಬೊಮ್ಮಾಯಿ, ಎಚ್.ಕೆ. ಪಾಟೀಲ್ ನಂತರ ನಾನು ಬೃಹತ್ ನೀರಾವರಿ ಖಾತೆ ಹೊಂದಿದ್ದೆ. ಆದರೆ ಯಾವ ಸಚಿವರಿಗೆ ಯಾವ ಖಾತೆ ಕೊಡಬೇಕು, ಯಾರನ್ನು ಬದಲಾವಣೆ ಮಾಡಬೇಕು ಎಂಬುದು ಅಂತಿಮವಾಗಿ ಮುಖ್ಯಮಂತ್ರಿಗಳಿಗೆ ಬಿಟ್ಟ ವಿಷಯ. ಯಾರೇ ಆಗಲಿ ತಮಗೆ ಸಿಕ್ಕ ಖಾತೆಯನ್ನು ಉತ್ತಮವಾಗಿ ಮಾಡಬೇಕು ಅಷ್ಟೇ ಎಂದು ಎಂ.ಬಿ.ಪಾಟೀಲ್ ಹೇಳಿದರು.