ಗಟ್ಟಿಮೇಳ ಸೇರಿದಂತೆ ಹಲವು ಸೀರಿಯಲ್ಗಳಲ್ಲಿ ನಟಿಸಿರುವ ನಟಿ ಕಮಲಶ್ರೀ ಅವರು ಬ್ರೆಸ್ಟ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ನೋವಿನ ಕಥೆ ತೆರೆದಿಟ್ಟಿದ್ದಾರೆ.
ಬಣ್ಣದ ಲೋಕ ಎಂದಾಕ್ಷಣ ಅಲ್ಲಿ ಎಲ್ಲವೂ ಚೆನ್ನಾಗಿರುತ್ತೆ, ನಟ-ನಟಿಯರಿಗೇನು? ಕೈಗೊಬ್ಬ-ಕಾಲಿಗೊಬ್ಬ ಆಳು, ಹಣದ ಸುರಿಮಳೆ... ಹೀಗೆ ಏನೇನೋ ಕಲ್ಪನೆಗಳು ಜನಸಾಮಾನ್ಯರಲ್ಲಿ ಇರುವುದು ಸಹಜ. ಕೆಲವು ನಟ-ನಟಿಯರ ವಿಷಯಕ್ಕೆ ಬಂದರೆ ಅವರದ್ದು ಐಷಾರಾಮಿ ಜೀವನ ಎನ್ನುವುದೂ ಸುಳ್ಳಲ್ಲ. ಆದರೆ ಎಲ್ಲಾ ಚಿತ್ರತಾರೆಯರ ಬದುಕೂ ಹೀಗೆಯೇ ಇರುವುದಿಲ್ಲ. ಒಂದು ಕಾಲದಲ್ಲಿ ಮಿಂಚಿದ ತಾರೆಯರು ಬೀದಿ ಹೆಣಗಳಾಗಿರುವ ಉದಾಹರಣೆಗಳೂ ನಮ್ಮ ಮುಂದಿದೆ. ಕೊನೆಯ ಕಾಲದಲ್ಲಿ ಮನೆಯಲ್ಲಿಯೇ ಸತ್ತರೂ, ಯಾರ ಗಮನಕ್ಕೂ ಬಾರದೇ ಶವ ಕೊಳೆತು ಹೋಗಿರುವ ಘಟನೆಗಳೂ ನಡೆದಿವೆ. ಇದು ಸಿನಿಮಾ ತಾರೆಯರ ಬದುಕು ಮಾತ್ರವಲ್ಲ, ಜನಸಾಮಾನ್ಯರ ಜೀವನದಲ್ಲಿಯೂ ಹೀಗೆಯೇ ಆಗುವುದು ಉಂಟು. ಅದೇ ಇನ್ನೊಂದೆಡೆ, ಎಷ್ಟೋ ಚಿತ್ರತಾರೆಯರು ಆರ್ಥಿಕ ಮುಗ್ಗಟ್ಟಿನಿಂದ ಬಳಲುವುದೂ ಇದೆ.
ಇದೀಗ, ಗಟ್ಟಿಮೇಳದಲ್ಲಿ ಅಜ್ಜಿಯ ಪಾತ್ರವನ್ನು ಮನೋಜ್ಞವಾಗಿ ನಟಿಸಿರುವ ನಟಿ ಕಮಲಶ್ರೀ ಅವರು ತಮ್ಮ ನೋವಿನ ಜೀವನವನ್ನು ತೆರೆದಿಟ್ಟಿದ್ದಾರೆ. ಪತ್ತೆಧಾರಿ ಪ್ರತಿಭಾ, ಬದುಕು, ಕನಕ ಸುಮಾರ್, ಲಕ್ಷ್ಮೀ ಬಾರಮ್ಮಾ ಸೇರಿದಂತೆ ಹತ್ತು ಹಲವು ಹಿಟ್ ಸೀರಿಯಲ್ಗಳನ್ನು ಕೊಟ್ಟಿರುವ ನಟಿಗೆ ಈಗ ಬ್ರೆಸ್ಟ್ ಕ್ಯಾನ್ಸರ್ ಎನ್ನುವ ಮಹಾಮಾರಿ ಒಕ್ಕರಿಸಿದೆ. ದುಬಾರಿ ಚಿಕಿತ್ಸೆಗೆ ನಟಿಯ ಬಳಿ ಹಣವಿಲ್ಲ. ಉಮಾಶ್ರೀ, ಗಿರಿಜಾ ಲೋಕೇಶ್ ಸೇರಿದಂತೆ ಕೆಲವು ನಟಿಯರು ಕಮಲಶ್ರೀ ಅವರಿಗೆ ಧನ ಸಹಾಯ ಮಾಡುತ್ತಿದ್ದಾರೆ. ಕೆಲವರು ಅಕ್ಕಿ, ಬೇಳೆಯನ್ನು ತಂದುಕೊಡುತ್ತಿದ್ದಾರೆ. ಯಾರಿಗೂ ಭಾರವಾಗಿ ಬದುಕಬಾರದು ಎನ್ನುವ ಕಾರಣದಿಂದ ಅಕ್ಕನ ಮಗಳ ಮನೆಯಿಂದ ಬಂದು ಒಂಟಿಯಾಗಿ ಜೀವನ ನಡೆಸುತ್ತಿದ್ದಾರೆ ಕಮಲಶ್ರೀ. ಅವರೀಗ ಪಂಚಮಿ ಟಾಕ್ಸ್ ಯೂಟ್ಯೂಬ್ ಚಾನೆಲ್ಗೆ ಸಂದರ್ಶನ ನೀಡಿದ್ದು, ಅಲ್ಲಿ ತಮ್ಮ ನೋವಿನ ಕಥೆಯನ್ನು ಬಿಚ್ಚಿಟ್ಟಿದ್ದಾರೆ.
ಶ್ರೀರಸ್ತು ಶುಭಮಸ್ತು ಸಂಧ್ಯಾ ಜೊತೆ ನಿಜಕ್ಕೂ ವಿಲನ್ ಶಾರ್ವರಿನಾ? ಪ್ರೀತಿಯೇ ನನ್ನುಸಿರು ಹಾಡಿಗೆ ಭರ್ಜರಿ ರೀಲ್ಸ್
'ನನಗೆ ಬ್ರೆಸ್ಟ್ ಕ್ಯಾನ್ಸರ್ ಆಗಿದೆ. ಸದ್ಯ ಯಾವುದೇ ಸೀರಿಯಲ್ ಒಪ್ಪಿಕೊಳ್ಳುತ್ತಿಲ್ಲ. ಮಾಡಲು ಶಕ್ತಿಯಿಲ್ಲ. ಹಿಂದೆ ಕೆಲವು ಸೀರಿಯಲ್ಗಳು ಹಿಟ್ ಆದಾಗಲೂ ಏನಾದರೊಂದು ಆರೋಗ್ಯ ಸಮಸ್ಯೆ ಕಾಡಿದ್ದು ಇದೆ. ಒಮ್ಮೆ ತಲೆಯಲ್ಲಿ ಗಡ್ಡೆಯಾಗಿ, ಮತ್ತೊಮ್ಮೆ ಟಿಬಿಯಾಗಿ, ಹೀಗೆ ಏನಾದರೂ ಸಮಸ್ಯೆಗಳು ಬಾಧಿಸುತ್ತಲೇ ಬಂದಿವೆ. ಈಗ ಗಟ್ಟಿಮೇಳ ಸೀರಿಯಲ್ ನನಗೆ ತುಂಬಾ ಹೆಸರು ತಂದುಕೊಟ್ಟಿತು. ಆ ಸೀರಿಯಲ್ ಮುಗಿಯುತ್ತಿದ್ದಂತೆಯೇ ಬ್ರೆಸ್ಟ್ ಕ್ಯಾನ್ಸರ್ ಇರುವುದು ತಿಳಿಯಿತು. ದುಬಾರಿ ಹಣ ಕೊಟ್ಟು ಚಿಕಿತ್ಸೆ ಪಡೆದುಕೊಳ್ಳಲು ದುಡ್ಡು ಇಲ್ಲ. ಗಿರಿಜಾ ಲೋಕೇಶ್, ಉಮಾಶ್ರಿಯವರೆಲ್ಲಾ ಹಣದ ಸಹಾಯ ಮಾಡಿದ್ದಾರೆ. ಇನ್ನೂ ಕೆಲವು ನಟ-ನಟಿಯರು ನೆರವು ನೀಡುತ್ತಿದ್ದಾರೆ. ಸದ್ಯ ಚಿಕಿತ್ಸೆ ಪಡೆಯುತ್ತಿದ್ದೇನೆ' ಎಂದಿದ್ದಾರೆ ನಟಿ. 'ಕಿಮೋ ಥೆರಪಿ ಮಾಡಲು ನನ್ನ ವಯಸ್ಸು ಬಿಡುತ್ತಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಸರ್ಜರಿ ಮಾಡಲೂಆಗುತ್ತಿಲ್ಲ. ಆದ್ದರಿಂದ ದುಬಾರಿ ಮಾತ್ರೆಗಳನ್ನು ಬರೆದುಕೊಟ್ಟಿದ್ದಾರೆ. ಶೇಕಡಾ 60ರಷ್ಟು ಹುಷಾರು ಆಗಿದ್ದೇನೆ. ಯಾವ ಕೆಲಸ ಮಾಡಬೇಡಿ, ರೆಸ್ಟ್ ತೆಗೆದುಕೊಳ್ಳಿ, ಭಾರ ಎತ್ತಬೇಡಿ ಎಂದೆಲ್ಲಾ ವೈದ್ಯರು ಎಚ್ಚರಿಕೆ ಕೊಟ್ಟಿದ್ದಾರೆ. ಆದ್ದರಿಂದ ಸದ್ಯ ಯಾವುದೇ ಸೀರಿಯಲ್ ಒಪ್ಪಿಕೊಳ್ಳುತ್ತಿಲ್ಲ' ಎಂದಿದ್ದಾರೆ ಕಮಲಶ್ರೀ.
ಉಮಾಶ್ರೀಯರು ನನ್ನ ಚಿಕಿತ್ಸೆಗೆ ದುಡ್ಡು ಕೊಡುತ್ತಿದ್ದಾರೆ. ಕೆಲವು ಕಲಾವಿದರು ಆರ್ಥಿಕ ಸಹಾಯ ಮಾಡುತ್ತಿದ್ದಾರೆ. ಮತ್ತೊಬ್ಬರು 25 ಕೆ.ಜಿ ಅಕ್ಕಿ ತಂದುಕೊಟ್ಟಿದ್ದಾರೆ. ಅಕ್ಕನ ಮಗಳು ಅಡುಗೆ ಸಾಮಗ್ರಿಗಳನ್ನು ಕೊಟ್ಟಿದ್ದಾಳೆ. ಹಾಗೂ ಹೀಗೂ ಜೀವನ ಸಾಗಿಸುತ್ತಿದ್ದೇನೆ ಎಂದಿರುವ ನಟಿ, ಅದ್ಯಾಕೋ ಗೊತ್ತಿಲ್ಲ, ದೇವರು ನನಗೆ ಹೆಸರು ತಂದು ಕೊಟ್ಟಾಗಲೆಲ್ಲಾ ಹೀಗೆ ಜೊತೆಗೆ ಕಾಯಿಲೆನೂ ಕೊಟ್ಟು ಕುಳ್ಳರಿಸುತ್ತಾನೆ ಎಂದು ಹಿಂದೆ ನಡೆದ ಘಟನೆಗಳನ್ನೆಲ್ಲಾ ಹೇಳಿದ್ದಾರೆ. ಇದೇ ವೇಳೆ ಇವರಿಗೆ ಆರ್ಥಿಕ ನೆರವು ನೀಡಲು ಬಯಸುವವರಿಗೆ ಇವರ ಬ್ಯಾಂಕ್ ಅಕೌಂಟ್ ನಂಬರ್ ಕೂಡ ಯೂಟ್ಯೂಬ್ನಲ್ಲಿ ಹಾಕಲಾಗಿದೆ. (Kamalashree, Canara Bank Account Number - 0411101052386. IFSC Code- CNRB0000411)