ತೆರೆಯಿಂದ ತೆರೆಗೆ ಹಾರುವ ಮನ!

By Kannadaprabha NewsFirst Published Jul 5, 2021, 10:44 AM IST
Highlights

ಬಾಲ್ಯದಲ್ಲಿ ಸಿನಿಮಾ ಎಂದರೆ ಇಂದಿನ ಹಾಗೆ ಮಾಮೂಲಲ್ಲ. ಅದೊಂದು ದೊಡ್ಡ ಸಂಭ್ರಮ. ಒಂದು ಪಿಕ್‌ನಿಕ್ ಹೋದ ಹಾಗೆ. ವೈದ್ಯರಾಗಿದ್ದ ಅಪ್ಪ ಇದ್ದಕ್ಕಿದ್ದ ಹಾಗೆ ಕರ್ತವ್ಯದ ಕರೆ ಬಂದು ಹೋಗಬೇಕಾದಾಗ ಸಿನಿಮಾ ಪೊ್ರೀಗ್ರಾಂ ಕ್ಯಾನ್ಸಲ್. ಆಗ ನಮಗಾಗುತ್ತಿದ್ದ ನಿರಾಶೆಯನ್ನು ವರ್ಣಿಸುವುದು ಕಷ್ಟ.

- ಡಾ. ಕೆ.ಎಸ್. ಪವಿತ್ರಾ

ಸಿನಿಮಾ ಥಿಯೇಟರ್‌ನ ಕತ್ತಲು, ಅಲ್ಲಿ ನಾವು ಬಾಯಾಡಿಸುತ್ತಿದ್ದ ಚಿಕ್ಕ ಚಿಕ್ಕ ಪ್ಯಾಕೆಟ್‌ನ ಚಿಪ್‌ಸ್, ಪಾಪ್‌ಕಾರ್ನ್, ಮರುದಿನ ತಲೆನೋವು ಬಂದರೂ ಪರವಾಗಿಲ್ಲ ಎಂಬಂತೆ ನಾವು ನೋಡುತ್ತಿದ್ದ ಸಿನಿಮಾ ಇವೆಲ್ಲ ಬಾಲ್ಯದ ಸವಿನೆನಪುಗಳೇ.

ಅಲ್ಲಿಯವರೆಗೆ ನಾವು ನೋಡಿರದಿದ್ದ ಬ್ಲಾಕ್ ಅಂಡ್ ವೈಟ್ ಟಿ.ವಿ. ಹತ್ತಿರದ ಮನೆಯೊಂದರಲ್ಲಿತ್ತು. ಆ ಮನೆಯವರಿಗೆ ಏನನ್ನಿಸುತ್ತಿತ್ತೋ ಇಲ್ಲವೋ ನಾವ್ಯಾರೂ ಲೆಕ್ಕಿಸದೆ, ಮಕ್ಕಳೆಲ್ಲ ಸಾಯಂಕಾಲ ಅಲ್ಲಿ ಹೋಗಿ ಪ್ರತಿಷ್ಠಾಪನೆ. ಏಷಿಯನ್ ಗೇಮ್‌ಸ್ ನಡೆಯುತ್ತಿದ್ದ ಸಮಯ. ಚಿಕ್ಕ ತೆರೆಯ, ಕಪ್ಪು-ಬಿಳುಪು ಟಿ.ವಿ.ಯಲ್ಲಿ ನೋಡಿದ್ದೇ ನೋಡಿದ್ದು. ಸಾಲದೆಂಬಂತೆ ಒಂದು ಭಾನುವಾರ ಮಧ್ಯಾಹ್ನ ಕನ್ನಡದ ‘ಬ್ಯಾಂಕರ್ ಮಾರ್ಗಯ್ಯ’ ಎನ್ನುವ ಚಿತ್ರ ಬೇರೆ ಪ್ರಸಾರವಾಗಿತ್ತು. ಹೀಗೆ ಪಕ್ಕದ ಮನೆಯವರ ಟಿ.ವಿ.ಯನ್ನು ಅಪಾರ ಮೆಚ್ಚುಗೆ -ಒಂದಿಷ್ಟು ಅಸೂಯೆಯಿಂದ ನಾವು ಕಾಣುತ್ತಿರುವಾಗಲೇ ನಮ್ಮ ಮನೆಗೆ ಟಿ.ವಿ. ಬಂದದ್ದು. 1984ರಲ್ಲಿ ನಮ್ಮ ಮನೆಗೆ ಟಿ.ವಿ. ಬಂತು. ಅದೂ ಮೊದಲೇ ಬಂದ ಕಲರ್ ಟಿ.ವಿ. ‘1984’ ಎಂಬ ಅಷ್ಟು ಕರಾರುವಾಕ್ಕಾಗಿ ನೆನಪಿರುವುದು ಹೇಗೆ? ಅದು ಇಂದಿರಾ ಗಾಂಧಿ ಅವರು ಸತ್ತ ವರ್ಷ! ಟಿ.ವಿ.ಗೂ, ಇಂದಿರಾಗಾಂಧಿ ಸತ್ತದ್ದಕ್ಕೂ ಸಂಬಂಧ ಏನು? ಇಂದಿರಾ ಗಾಂಧಿಯವರ ಅಂತ್ಯಕ್ರಿಯೆಯ ನೇರ ಪ್ರಸಾರವನ್ನು ದೂರದರ್ಶನ ಮಾಡಿತ್ತಷ್ಟೆ. ನಮ್ಮ ಮನೆಗೆ ಆ ಅಂತ್ಯಕ್ರಿಯೆಯ ಪ್ರಸಾರ ನೋಡಲು (ನಿಜವಾಗಿ ಟಿ.ವಿ. ನೋಡಲು) ಒಂದು ಬಸ್ ತುಂಬ ಸಂಬಂಧಿಕರು ಸಾಗರದಿಂದ ಬಂದಿಳಿದಿದ್ದರು! ಅಂದಿನ ಸಂಭ್ರಮ ಮರೆಯಲು ಸಾಧ್ಯವೇ ಇಲ್ಲ.

ಸಂತೋಷದ ಹಾರ್ಮೋನ್ ಡೊಪಮೈನ್ ಹೆಚ್ಚಿಸಲು ಹಿಂಗ್ ಮಾಡಿ

ಅವರಿಗೆ ಊಟ-ತಿಂಡಿ-ಪಾನೀಯ ಸರಬರಾಜು, ಮಾತು, ಬೇರೆ ಬೇರೆ ಕೋನಗಳಿಂದ ಟಿ.ವಿ ನೋಡುವುದು, ಟಿ.ವಿ.ಯಲ್ಲಿ ಕಾಣುವ ಒಬ್ಬೊಬ್ಬರ ಬಗೆಗೂ ಚರ್ಚೆ. ಹೀಗೆ ನಮ್ಮ ಟಿ.ವಿ. ಪರ್ವದ ಆರಂಭ. ಹೊಸತರಲ್ಲಿ ನಮಗೆ ಟಿ.ವಿ. ನೋಡುವ ಚಟ ಎಷ್ಟಿತ್ತೆಂದರೆ ಟಿ.ವಿ. ಆರಂಭವಾಗುವ ಸಂಗೀತ, ಅದರ ಲೋಗೋ ತಿರುಗುತ್ತಾ ತೆರೆಯ ಮೇಲೆ ಬರುವುದು, ಕೃಷಿ ದರ್ಶನ ಯಾವುದನ್ನೂ ನಾವು ಬಿಡದೆ ನೋಡುತ್ತಿದ್ದೆವು.

ಇಂಗ್ಲಿಷ್ ಮತ್ತು ಹಿಂದಿಯ ಸುದ್ದಿ ಪ್ರಸಾರಗಳಲ್ಲಿ ಬರುತ್ತಿದ್ದ ಮೀನು, ಗೀತಾಂಜಲಿ ಅಯ್ಯರ್, ಸಲ್ಮಾಬಾನು ನಮಗೆ ಸಿನಿಮಾ ನಟಿಯರಿಗಿಂತ ಆಕರ್ಷಕ ಎನಿಸುತ್ತಿದ್ದರು. ಕ್ರಮೇಣ ಟಿ.ವಿ ಎಲ್ಲ ಕಡೆ ಹರಡತೊಡಗಿತು. ಟಿ.ವಿ.ಯ ಪರ -ವಿರೋಧದ ಚರ್ಚಾಸ್ಪರ್ಧೆ, ಪ್ರಬಂಧ, ಅದು ಹೇಗೆ ‘ಚಾಕುವಿನಂತೆ ಸೇಬು ಕತ್ತರಿಸಲೂ ಬಳಸಲ್ಪಡಬಹುದು, ಸಾಯಿಸಲು ಉಪಯೋಗವಾಗಬಹುದು’ ಎಂಬ ಎಲ್ಲರ ಫೇವರಿಟ್ ವಾಕ್ಯ. ಎಲ್ಲವೂ ಅಂದಿನ ಶಾಲಾ ಜೀವನದ ಪ್ರಮುಖ ಅಂಗವಾಗಿಬಿಟ್ಟಿತ್ತು. ಆಗ ಬರುತ್ತಿದ್ದ ‘ವನಿತಾ’ ಪತ್ರಿಕೆ ದೂರದರ್ಶನದ ಬಗ್ಗೆ ನಾನು ಬರೆದ ಪ್ರಬಂಧವೊಂದನ್ನು ಪ್ರಕಟಿಸಿದ್ದ ನೆನಪಿದೆ. ಓದುಗರ ಪ್ರತಿಕ್ರಿಯೆಯನ್ನೂ ‘ವನಿತಾ’ ಆಹ್ವಾನಿಸಿತ್ತು. ಟಿ.ವಿ. ಕುಟುಂಬದ ಸಮಯವಾಗಿ, ಜಗಳಗಳ ಮೂಲವಾಗಿ, ರಿಮೋಟ್ ಚಟದ ಕಾರಣವಾಗಿ ಬಹುಕಾಲ ಉಳಿಯಿತು ಎನ್ನುವುದು ವಿಶೇಷ. ಕಾಲಕ್ರಮದಲ್ಲಿ ಕನ್ನಡ ನಮ್ಮ ಟಿ.ವಿ.ಯಲ್ಲಿ ಬರಲಾರಂಭಿಸಿದ್ದು, ನಂತರ ವಿವಿಧ ಚಾನೆಲ್‌ಗಳು, ಟಿ.ವಿ. ಬರುವ 24*7 ಅವಧಿ ಇವೆಲ್ಲ ನನ್ನ ಮಟ್ಟಿಗೆ ಇತಿಹಾಸದ ಹಂತಗಳೇ.

ಈ ಪುಟ್ಟ ಪುಟ್ಟ ವಿಷ್ಯಗಳಿಗೆ ಖುಷಿಯಾಗಿ, ಪಾಸಿಟಿವ್ ವೈಬ್ಸ್ ನಿಮ್ಮೊಳಗೆ ಮೂಡುತ್ತೆ 

ಟಿ.ವಿ.ಯನ್ನು ಒಂದು ಮನರಂಜನೆಗಿಂತ ಭಿನ್ನ ಸಾಧನವಾಗಿ, ನನ್ನ ಸಾಧನೆಯ ಹಂತವಾಗಿ ಬದಲಾಗಿಸಿದ್ದು ನನ್ನ ನೃತ್ಯ -ಭಾಷಣಗಳ ಅಭ್ಯಾಸ. ದೂರದರ್ಶನದಲ್ಲಿ ನೃತ್ಯ ಕಾರ್ಯಕ್ರಮ ನೀಡಬೇಕೆಂದರೆ ಆಡಿಷನ್ ಆಗಿರಬೇಕು ಎಂಬ ವಿಷಯ ಅನೇಕರಿಗೆ ಗೊತ್ತಿಲ್ಲ. ಆಡಿಷನ್‌ನಲ್ಲಿ ಪಾಸಾದ ಮೇಲೆ ಕಾರ್ಯಕ್ರಮ ಸಿಕ್ಕರೆ, ಅರ್ಧಗಂಟೆಯ ಕಾರ್ಯಕ್ರಮ ಚಿತ್ರೀಕರಿಸಲು ಸುಮಾರು ಇಡೀ ದಿನ ಅದಕ್ಕಾಗಿ ವ್ಯಯಿಸಬೇಕು. ಕರಾರುವಾಕ್ಕಾಗಿ 22 ನಿಮಿಷಗಳ ಕಾಲ ಮಾಡಬೇಕು. ಅದೂ ನರ್ತಿಸುವಾಗ ನೀವು ಕ್ಯಾಮೆರಾಮನ್ ಸೂಚಿಸಿರುವ ಒಂದು ನಿರ್ದಿಷ್ಟ ಚಿಕ್ಕ ಪರಿಧಿಯಲ್ಲೇ ನರ್ತಿಸಬೇಕು. ಎದುರುಗಡೆ ಪ್ರೇಕ್ಷಕರು ಯಾರೂ ಇಲ್ಲದೆ ನರ್ತಿಸಬೇಕು. ನೀವು ಮಾಡುವ ಚಿಕ್ಕ ಹಾವಭಾವವೂ ಕ್ಯಾಮೆರಾದಲ್ಲಿ ಸೆರೆಯಾಗುತ್ತದೆ. ಸಾವಿರಾರು ಜನರಿಗೆ ತಲುಪುತ್ತದೆ ಎಂಬ ಅರಿವಿನೊಂದಿಗೆ ನರ್ತಿಸಬೇಕು. ಕ್ಯಾಮೆರಾ ನಿಮ್ಮ ಕಾಲು, ಕೈ-ಮುಖ ಯಾವ ಭಾಗವನ್ನೂ ಜೂಮ್ ಮಾಡಿ ಕೇಂದ್ರೀಕರಿಸಬಹುದು ಎಂಬ ಎಚ್ಚರವಿರಬೇಕು. ಇವೆಲ್ಲ ದೂರದರ್ಶನದಲ್ಲಿ ನೃತ್ಯ ಮಾಡುವಾಗ ನನಗೆ ಸಿಕ್ಕ, ಅಪರೂಪದ ಜ್ಞಾನ.

ಅಷ್ಟಾಗಿಯೂ ಮುದ್ರಿತವಾದ ಕಾರ್ಯಕ್ರಮ ನಿರ್ದಿಷ್ಟ ವೇಳಾಪಟ್ಟಿಯಂತೆಯೇ ಪ್ರಸಾರವಾಗಬೇಕೆಂದೇನೂ ಇಲ್ಲ. ನನ್ನ ಮೊದಲ ಟಿ.ವಿ. ನೃತ್ಯ ಕಾರ್ಯಕ್ರಮ ಬಂದಾಗ ನನಗೆ 18ರ ಹರೆಯ. ಹೆಮ್ಮೆಯಿಂದ ಎಲ್ಲರಿಗೆ ಹೇಳಿಬಿಟ್ಟಿದ್ದೆ. ತೆರೆಯ ಮುಂದೆ ಕುಳಿತು ಕಾಯುತ್ತಿರುವಾಗ ನೇರ ಪ್ರಸಾರವಾಗುತ್ತಿದ್ದ ಫುಟ್‌ಬಾಲ್ ಮ್ಯಾಚ್ ಮುಗಿಯದೇ, ನನ್ನ ಕಾರ್ಯಕ್ರಮ ಬಂದಿರಲೇ ಇಲ್ಲ. ಆಗ ನಾನು ಚಿಕ್ಕ ಹುಡುಗಿಯಂತೆ, ಅಪಮಾನದಿಂದ ಬಿಕ್ಕಿ ಬಿಕ್ಕಿ ಅತ್ತಿದ್ದು ಇನ್ನೂ ನೆನಪಿದೆ. ಮರುಪ್ರಸಾರ ಅದರ ಮುಂದಿನ ವಾರ ಎಂದು ದೂರದರ್ಶನ ಪತ್ರ ಕಳಿಸಿದ್ದರೂ, ‘ಮತ್ತೆ ಹಾಗಾದರೆ’ ಎಂಬ ಹೆದರಿಕೆಯಿಂದ ಅದನ್ನು ಯಾರಿಗೂ ನಾನು ಹೇಳಿರಲೇ ಇಲ್ಲ! ಆದರೂ ಟಿ.ವಿ. ಎಂಬ ಪ್ರಭಾವಶಾಲಿ ಮಾಧ್ಯಮದಲ್ಲಿ ಭಾಗವಹಿಸುವುದರ ಶ್ರಮ, ಅದರಿಂದ ಬರುವ ಮನ್ನಣೆ ನನಗೆ ಇದೇ ಸಮಯದಲ್ಲಿ ಅರಿವಾಯಿತು ಕೂಡ. ಹಾಗಾಗಿಯೇ ನನ್ನ ವಿದ್ಯಾರ್ಥಿಗಳಿಗೆ ನಾನು ಹೇಳುತ್ತಿದ್ದ ಕಿವಿಮಾತು ‘ನೀವು ಟಿ.ವಿ.ಯಲ್ಲಿ ಬರಬೇಕೆಂದರೆ, ನೀವು ಟಿ.ವಿ. ನೋಡುವುದನ್ನು ಕಡಿಮೆ ಮಾಡಿ!’

ದುಃಖಿಯಾಗಿಯೇ ಇರುತ್ತೇನೆಂದು ಹಠವೇಕೆ? ಸದಾ ಸುಖಿಯಾಗಿರೋದು ನಮ್ಮ ಕೈಯಲ್ಲೇ ಇದೆ! 

ನಿಮ್ಹಾನ್‌ಸ್ಗೆ ಸ್ನಾತಕೋತ್ತರ ವೈದ್ಯಕೀಯ ತರಬೇತಿಗೆ ಸೇರಿದ್ದ ಮೊದಲ ವರ್ಷ. ಟಿ.ವಿ.ಯಲ್ಲಿ ಕೆಳಗೆ ಬರುವ ಬರೆಹಗಳಲ್ಲಿ ನ್ಯೂಸ್ ರೀಡರ್ ಅರ್ಜಿ ಕರೆದಿದ್ದರು. ಕುತೂಹಲಕ್ಕೆಂದು ಹಾಕಿದ್ದೆ. ಸಂದರ್ಶನಕ್ಕೂ ಹೋದೆ. ಆಯ್ಕೆಯಾದೆ. ನಂತರ ಸುಮಾರು ಐದು ವರ್ಷಗಳ ಕಾಲ ವಾರ್ತಾವಾಚಕಿಯಾಗಿ, ನಿರೂಪಕಿಯಾಗಿ ಕೆಲಸ ಮಾಡಿದೆ. ಆಗಲೇ ನನಗೆ ಟೆಲಿಪ್ರಾಂಪ್ಟರ್‌ಗಳ ಬಗೆಗೆ, ಇಯರ್‌ಫೋನ್‌ಗಳ ಕುರಿತು, ಯಾವಾಗ ಸೆಂಟರ್ ಕ್ಯಾಮೆರಾ ನೋಡಬೇಕು, ಯಾವಾಗ ನನ್ನ ಸೈಡ್ ಕ್ಯಾಮೆರಾ ನೋಡಬೇಕು ಇವುಗಳ ಬಗೆಗೆ ಅರ್ಥವಾದದ್ದು. ಅಲ್ಲಿಯವರೆಗೆ ವಾರ್ತೆಯನ್ನು ಓದದೆ, ಹೇಗೆ ಇವರು ಬಾಯಿಪಾಠ ಮಾಡಿ ಹೇಳುತ್ತಾರೆ ಎಂಬುದು ಅರ್ಥವೇ ಆಗುತ್ತಿರಲಿಲ್ಲ! ಹೊಸ ಹೊಸ ಸೀರೆಯುಡುವ, ಮ್ಯಾಚಿಂಗ್ ಆಭರಣ ಧರಿಸುವ, ತಪ್ಪಿದರೆ ಬೈಸಿಕೊಳ್ಳುವ, ಅಕಸ್ಮಾತ್ ಟೈಪಿಂಗ್ ಮಸುಕಾಗಿದ್ದರೆ ಸರಿಯಾಗಿ ಓದಲು ಕಷ್ಟಪಡುವ, ಹಠಾತ್ತಾಗಿ ಕೆಮ್ಮು ಬರುವ, ಇಯರ್ ಫೋನ್ ಬಿದ್ದು ಹೋಗಿ ಮೇಲಿನಿಂದ ನಿರ್ದೇಶನಗಳೇ ಕೇಳದಿರುವ ಫಜೀತಿ-ಸಂತಸದ ಅನುಭವಗಳು ಈ ಐದು ವರ್ಷಗಳಲ್ಲಿ ನನಗೆ ದೊರೆತವು. ಈಗಲೂ ಸಂಪನ್ಮೂಲ ವ್ಯಕ್ತಿಯಾಗಿ, ಟಿ.ವಿ.ಯಲ್ಲಿ, ಕಂಪ್ಯೂಟರ್ ವೆಬ್ ಕ್ಯಾಮ್ ಮುಂದೆ ಭಾಗವಹಿಸುವಾಗ ಈ ಪಾಠಗಳನ್ನು ನಾನು ನೆನಪಿಸಿಕೊಳ್ಳುತ್ತೇನೆ.

ಈಗ ಚಿಕ್ಕ ತೆರೆಗಳ ಕಾಲ. ಅದರ ಅರಿವಿರದೆ ಮಕ್ಕಳನ್ನು ಅಪ್ಪ ಅಮ್ಮ ಸಮಸ್ಯೆಗಳಿಂದ ಕರೆತಂದಾಗ ‘ಎಷ್ಟು ಗಂಟೆ ಟಿ.ವಿ. ನೋಡುತ್ತಾರೆ?’ ಎಂದು ಪ್ರಶ್ನಿಸುವ ಅಭ್ಯಾಸ. ಆಗ ನನ್ನ ನಿರೀಕ್ಷೆಗೆ ವಿರುದ್ಧವಾಗಿ ಎದುರಾಗುವ ಉತ್ತರ ‘ಟಿ.ವಿ. ಏನೂ ನೋಡೋದಿಲ್ಲ ಡಾಕ್ಟ್ರೇ’. ಅಚ್ಚರಿಯಿಂದ ಕಣ್ಣು ಕಣ್ಣು ಬಿಡುತ್ತಿದ್ದೆ. ನಂತರ ಅರಿವಾಯಿತು, ‘ಈಗಿನ ಮಕ್ಕಳು ಟಿ.ವಿ. ನೋಡುವುದೇ ಇಲ್ಲ, ಏಕೆಂದರೆ ಅವರಿಗೆ ಅಂಗೈಯಲ್ಲೇ ಟಿ.ವಿ ಬಂದಿದೆ!’. ಆಗ ಕೇಳುವ ಪ್ರಶ್ನೆ ಬದಲಾಯಿತು - ‘ಮೊಬೈಲ್ ಎಷ್ಟು ಉಪಯೋಗಿಸ್ತಾರೆ?’ ಈಗ ನನ್ನ ನಿರೀಕ್ಷೆಯಂತೆ ಉತ್ತರಗಳು ಬರಲಾರಂಭಿಸಿದವು!

ರಾಸಾಯನಿಕ ಕ್ರಿಯೆಗಳಲ್ಲಿ ‘ಕೆಟಲಿಸ್‌ಟ್’ ಎಂಬ ವಸ್ತುವೊಂದು ಇರುತ್ತದೆಯಷ್ಟೆ. ಇದರ ಕೆಲಸ ಹೇಗಿದ್ದರೂ ನಡೆಯುವ ಕ್ರಿಯೆಯನ್ನು ಚುರುಕುಗೊಳಿಸುವುದು, ತಾನು ತಟಸ್ಥವಾಗಿರುವುದು. ಕೋವಿಡ್ ಸಂದರ್ಭದ ‘ಲಾಕ್‌ಡೌನ್’ ಮಾಡಿದ ಕೆಲಸ ‘ತೆರೆ’ಗಳ ಮಟ್ಟಿಗೆ ಇದೇ! ಅಲ್ಲಿಯವರೆಗೆ ಮೊಬೈಲ್, ಕಂಪ್ಯೂಟರ್, ಸ್ಮಾರ್ಟ್ ಟಿ.ವಿ.ಗಳ ಉಪಯೋಗವಿರಲಿಲ್ಲವೆಂದಲ್ಲ. ಆದರೆ ಇವೆಲ್ಲವನ್ನು ರೂಢಿಸಿಕೊಳ್ಳಲು ನಮಗೆ ತಗುಲಿದ್ದ ಸಮಯ ವರ್ಷಗಳಾಗುತ್ತಿದ್ದದ್ದು. ಕೆಲವೇ ದಿನಗಳಲ್ಲಿ ನಾವೆಲ್ಲ ಕಪಾಟಿನಲ್ಲಿ ಪುಸ್ತಕಗಳನ್ನು ತುಂಬಿಸಿದ ಹಾಗೆ ಕೈತುಂಬಾ ‘ತೆರೆ’ಗಳನ್ನು ಹಿಡಿದು, ಬೆರಳುಗಳಿಂದ ಎಳೆಯಲಾರಂಭಿಸಿದವು! ಕೇಬಲ್ ಬಿಟ್ಟು, ಅಮೆಜಾನ್, ನೆಟ್ ಫ್ಲಿಕ್‌ಸ್, ಡಿಸ್ನಿ ಸ್ಟಾರ್‌ಗಳಿಗೆ ತಗುಲಿಕೊಂಡೆವು. ಆಡಿಷನ್ ಹಾಕಿ, ಆಯ್ಕೆಯಾಗಿ, ಆಮೇಲೆ ಕಷ್ಟ ಪಟ್ಟು ಸ್ಟುಡಿಯೋದಲ್ಲಿ ಕಾರ್ಯಕ್ರಮ ಮಾಡುವ ಬದಲು, ನಮ್ಮ ನಮ್ಮದೇ ಸ್ಟುಡಿಯೋ, ನಮ್ಮದೇ ಫೇಸ್‌ಬುಕ್-ಯೂಟ್ಯೂಬ್ ಛಾನೆಲ್, ಯಾರು ನೋಡುತ್ತಾರೋ -ಬಿಡುತ್ತಾರೋ, ಒಂದಿಷ್ಟು ಮಂದಿಯಂತೂ ಕೆಲವು ನಿಮಿಷ ನೋಡಿದರೂ ‘ವ್ಯೂ’ಸ್ ಅಂತೂ ಗ್ಯಾರಂಟಿ!

ಅಷ್ಟೇ ಅಲ್ಲ ಮನರಂಜನೆಗೀಗ ಕಾಲದೇಶಗಳ ಮಿತಿಯಿಲ್ಲ! ದೊಡ್ಡವರು-ಚಿಕ್ಕವರು, ‘ಎ-ಯು’ ಸರ್ಟಿಫಿಕೇಟ್‌ಗಳ ಗೊಂದಲವಿಲ್ಲ! ಈಗ ಯಾರೂ, ಯಾವ ಭಾಷೆಯ ಸಿನಿಮಾ ನೋಡಬಹುದು. ಮಲಯಾಳಂ-ಕೊರಿಯಾ-ಜರ್ಮನ್ ಯಾವ ಸಿನಿಮಾವನ್ನೂ ಸಬ್‌ಟೈಟಲ್ ಆಯ್ಕೆಯೊಂದಿಗೆ ನೋಡಬಹುದು. ಸಿನಿಮಾ ಥಿಯೇಟರ್‌ನ ದೊಡ್ಡ ತೆರೆ ಸದ್ಯಕ್ಕಂತೂ ಮಾಯವೇ ಆಗಿರುವ ಪರಿಸ್ಥಿತಿ. ಅದು ಒಡೆದು ಟಿ.ವಿ.ಯಾಗಿ, ಈಗ ಇನ್ನೂ ಚಿಕ್ಕ ಚೂರಾಗಿ ಅಂಗೈನಲ್ಲಿ ಕುಳಿತಿದೆ! ಇನ್ನು ನಮ್ಮ ಕಣ್ಣೊಳಕ್ಕೇ ಇಳಿದು ಕನ್ನಡಕದ / ಲೆನ್‌ಸ್ನ ತೆರೆಯಾಗುವುದೊಂದು ಬಾಕಿ!

ಮುಂದಾಗಬಹುದಾದ ತೆರೆಯ ಕ್ರಾಂತಿ ಮನಸ್ಸಿನಲ್ಲಿ ವಿಷಾದ-ಬೆರಗುಗಳೆರಡನ್ನೂ ಮೂಡಿಸುತ್ತದೆ. ನನ್ನ ಅಪ್ಪ ಹೇಳುವಂತೆ ಅವರ ಕಾಲದಲ್ಲಿ ‘ರೇಡಿಯೋ’ ನೋಡಲೆಂದೇ ದೂರದ ಹಳ್ಳಿಗೆ ನಡೆದು ಹೋಗುತ್ತಿದ್ದರಂತೆ! ತಲೆಮಾರಿನಿಂದ ತಲೆಮಾರಿಗೆ ಬದಲಾವಣೆಗಳನ್ನು ಸ್ವೀಕರಿಸದಿರುವುದು, ಹಿಂದಿನ ಕಾಲವೇ ಒಳ್ಳೆಯದಿತ್ತು ಎನ್ನುವುದು ಸಾಮಾನ್ಯ. ಆದರೆ ಹಿಂದು-ಮುಂದಿನಲ್ಲಿ ಬದುಕದೆ, ಇಂದಿನಲ್ಲಿ ಬಾಳುವ ಜೀವನ ಶ್ರದ್ಧೆ ಜೀವನದ ಆನಂದಕ್ಕಾಗಿ ಬೇಕೇ ಬೇಕು. ಈಗಲೂ ಕಾಲ ಬದಲಾಗಿರಬಹುದು, ಆದರೆ ಪ್ರತಿ ತಲೆಮಾರಿನ ಮಕ್ಕಳಲ್ಲಿರುವ ಕಾತರ, ಉದ್ವೇಗ, ಸಂತಸಗಳು ಸಾರ್ವಕಾಲಿಕ ಅಲ್ಲವೆ? ಹೇಗಿದ್ದರೂ ಮನಸ್ಸಿಗೆ ತೆರೆಯಿಂದ ತೆರೆಗೆ, ಹಿಂದೆ ಮುಂದೆ ಚಲಿಸುವ ಶಕ್ತಿಯಂತೂ ಇದೆಯಲ್ಲ!
 

click me!