ಜಿಲ್ಲೆಯ ರೈತರಿಗೆ ಕಳೆದ ಒಂದು ದಶಕದಿಂದ ಜಿಂಕೆಗಳ ಹಾವಳಿ ಎನ್ನುವುದು ನುಂಗಲಾರದ ತುತ್ತು. ಬಿತ್ತನೆಯಾಗಿರುವ ಬೆಳೆಗಳನ್ನು ಉಳಿಸಿಕೊಳ್ಳುವುದು ಕಷ್ಟ. ಜಿಂಕೆಗಳು ವನ್ಯ ಜೀವಿಗಳಾಗಿರುವ ಹಿನ್ನೆಲೆಯಲ್ಲಿ ಅವುಗಳಿಗೆ ಏನೂ ಮಾಡುವಂತಿಲ್ಲ, ಅರಣ್ಯ ಇಲಾಖೆಗೆ ಹಲವಾರು ಬಾರಿ ಮನವಿ ಕೊಟ್ಟರೂ ಅಲ್ಲಿಂದ ಸೂಕ್ತ ಸ್ಪಂದನೆ, ಜಿಂಕೆಗಳ ಹಾವಳಿಯಿಂದಾದ ಬೆಳೆಹಾನಿಗೆ ಪರಿಹಾರ ಸಿಗದೇ ರೈತರು ಕಂಗಾಲಾಗಿ ಹೋಗಿದ್ದಾರೆ.
undefined
ಪ್ರತಿ ವರ್ಷದ ಎಲ್ಲ ಬೆಳೆಗಳು ಜಿಂಕೆಗಳ ಹಿಂಡುಗಳ ಹಾವಳಿಯಿಂದ ಹಾನಿಯಾಗುತ್ತಿದ್ದರೂ ಅಸಹಾಕರಾಗಿ ಕುಳಿತಿದ್ದ ರೈತರಿಗೆ ಜಿಲ್ಲೆಯ ರೋಣ ತಾಲೂಕಿನ ಅಬ್ಬಿಗೇರಿ ಗ್ರಾಮದ ಯುವ ರೈತ ಸೋಮು ಶಿರೋಳ ಮಾದರಿಯಾಗಿದ್ದು, ತಮ್ಮ ಜಾಣ್ಮೆ ಉಪಯೋಗಿಸಿ ಅತ್ಯಂತ ಕಡಿಮೆ ಖರ್ಚಿನಲ್ಲಿ ಹೊಲಕ್ಕೆ ಜಿಂಕೆಗಳು ಬರದಂತಹ ಸರಳ ಯಂತ್ರ ಸಿದ್ಧಪಡಿಸಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳಿಂದಲೂ ಸಾಧ್ಯವಾಗದಂತಹ ಕೆಲಸವನ್ನು ಯುವ ರೈತ ಮಾಡಿ ಯಶಸ್ವಿಯಾಗಿದ್ದು, ಸದ್ಯ ಜಿಂಕೆಗಳು ರೈತನ ಹೊಲದತ್ತ ಸುಳಿಯುತ್ತಲೇ ಇಲ್ಲ.
undefined
ಮನೆಯಲ್ಲಿ ಕೆಟ್ಟು ನಿಂತ ಟೇಬಲ್ ಫ್ಯಾನ್‌ನ ರೆಕ್ಕೆಗಳು, ಸೈಕಲ್‌ನ ಮುಂದಿನ ಗಾಲಿಗೆ ಅಳವಡಿಸುವ ಎಕ್ಸೆಲ್ ಅದಕ್ಕೆ ಹಿಂದೆ ಅಡ್ಡವಾಗಿ ಒಂದು ಪೈಪ್, ಅದಕ್ಕೆ ಎರಡು ಸಣ್ಣ ಚೈನ್‌ಗಳನ್ನು ಅಳವಡಿಸಿದ್ದು, ಅದರ ಕೆಳಗೆ ಸ್ವಲ್ಪ ಅಂತರದಲ್ಲಿಯೇ ಒಂದು ಸ್ಟೀಲ್‌ನ ತಾಟನ್ನು ಕಟ್ಟಿ, ಕೇವಲ 300 ಖರ್ಚಿನಲ್ಲಿ ಯಂತ್ರ ಸಿದ್ಧ ಮಾಡಿದ್ದಾರೆ.
undefined
ಹೀಗೆ ಸಿದ್ಧವಾಗಿರುವ ಯಂತ್ರಗಳನ್ನು ಹೊಲದ ಅಲ್ಲಲ್ಲಿ ಬೆಳೆಗಳ ಮಧ್ಯೆ, ಗಾಳಿಗೆ ಎದುರಾಗಿ ನಿಲ್ಲಿಸಿದರೆ ಸಾಕು, ಗಾಳಿ ಬೀಸುತ್ತಿದ್ದಂತೆ ಫ್ಯಾನ್ ರೆಕ್ಕೆಗಳು ತಿರುಗಿದಂತೆ ಹಿಂದುಗಡೆ ಇರುವ ಚೈನ್ ಕೆಳಗಡೆ ಕಟ್ಟಿರುವ ಸ್ಟೀಲ್ ತಾಟಿಗೆ ಜೋರಾಗಿ ತಾಕುತ್ತಿದ್ದಂತೆ ಸತತವಾಗಿ ಗಂಟೆ ಬಾರಿಸಿದ ಶಬ್ಧ ಬರಲು ಪ್ರಾರಂಭವಾಗುತ್ತದೆ. ಎಷ್ಟು ಜೋರಾಗಿ ಗಾಳಿ ಬೀಸುತ್ತದೆಯೋ ಅಷ್ಟು ಜೋರಾಗಿ ಗಂಟೆ ಶಬ್ಧ ನಿರಂತರವಾಗಿ ಹೊರಹೊಮ್ಮತ್ತದೆ. ಜಿಂಕೆಗಳು ಶಬ್ಧಕ್ಕೆ ಹೆದರಿ ಹೊಲಕ್ಕೆ ಬರುತ್ತಿಲ್ಲ.
undefined
ಈ ಯಂತ್ರಕ್ಕೆ ಯಾಕಿಷ್ಟು ಮಹತ್ವ ಎಂದರೆ ಇದರಿಂದ ಜಿಂಕೆಗಳಿಗಾಗಲಿ, ರೈತರಿಗಾಗಲಿ ಯಾವುದೇ ಹಾನಿ ಇಲ್ಲ, ಇದು ಯಾವುದೇ ವಿಷ ವಸ್ತುವಲ್ಲ, ಹೆಚ್ಚಿನ ಖರ್ಚಿಲ್ಲದೇ, ವನ್ಯಜೀವಿಗಳ ಜೀವನಕ್ಕೂ ತೊಂದರೆಯಾಗದಂತೆ ಬೆಳೆಗಳನ್ನು ಉಳಿಸಿಕೊಳ್ಳುವಲ್ಲಿ ಇದು ಅತ್ಯಂತ ಪರಿಣಾಮಕಾರಿಯಾದ ಆವಿಷ್ಕಾರ ಎಂದರೆ ತಪ್ಪಾಗಲಾರದು. ಅರಣ್ಯ ಇಲಾಖೆ ಅಧಿಕಾರಿಗಳು ರೈತನ ಜಮೀನಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಇದನ್ನು ಜಿಂಕೆ ಹಾವಳಿಯಿಂದ ತೊಂದರೆ ಅನುಭವಿಸುತ್ತಿರುವ ಇತರ ರೈತರಿಗೂ ತಿಳಿಸಬೇಕಿದೆ, ಅಗತ್ಯಬಿದ್ದಲ್ಲಿ ಅರಣ್ಯ ಇಲಾಖೆಯಿಂದಲೇ ಇದೇ ಮಾದರಿಯ ಯಂತ್ರಗಳನ್ನು ನೀಡಿದರೂ ಅನುಕೂಲವಾಗುತ್ತದೆ.
undefined
ನಾವು ಪ್ರತಿ ವರ್ಷ ಮುಂಗಾರಿ, ಹಿಂಗಾರಿ ಎರಡೂ ಕಡೆಗಳಲ್ಲಿ ಬಿತ್ತನೆ ಮಾಡಿದ ಬೆಳೆಯಲ್ಲಿ ಶೇ. 50ರಷ್ಟುಜಿಂಕೆಗಳ ಹಾವಳಿಯಿಂದಲೇ ನಾಶವಾಗುತ್ತಿದ್ದು, ಈ ಬಗ್ಗೆ ಸರ್ಕಾರಕ್ಕೆ, ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರೂ ಏನೂ ಪರಿಹಾರ ಸಿಗಲಿಲ್ಲ, ಅದಕ್ಕಾಗಿ ಸ್ಥಳೀಯ ಕೆಲ ಯುವಕರು, ಯು ಟ್ಯೂಬ್ ಸಹಾಯದಿಂದ ಈ ಯಂತ್ರವನ್ನು ನಾನೇ ಸಿದ್ಧ ಮಾಡಿ, ಹೊಲದಲ್ಲಿ ಹಾಕಿದ್ದೇನೆ, ಈಗ ಜಿಂಕೆಗಳ ಹಾವಳಿ ಕಂಡು ಬರುತ್ತಿಲ್ಲ, ಹೆಚ್ಚು ಹೊಲ ಇರುವವರು ಹೆಚ್ಚಿನ ಯಂತ್ರಗಳನ್ನು ಅಳವಡಿಸಿಕೊಂಡರೆ ಅನುಕೂಲವಾಗುತ್ತದೆ ಎಂದು ಯಂತ್ರ ಆವಿಷ್ಕಾರ ಮಾಡಿದ ಯುವ ಅಬ್ಬಿಗೇರಿಯ ರೈತ ಸೋಮು ಶಿರೋಳ ಅವರು ಹೇಳಿದ್ದಾರೆ.
undefined
ಇದು ಉತ್ತಮ ಮಾದರಿಯಾಗಿದೆ. ಗಾಳಿ ಹೆಚ್ಚಾಗಿದ್ದಾಗ ಮಾತ್ರ ಇದು ಕಾರ್ಯ ನಿರ್ವಹಿಸುತ್ತದೆ, ಗಾಳಿ ಕಡಿಮೆಯಾದರೆ ಸ್ವಲ್ಪ ಸಮಸ್ಯೆಯಾಗುತ್ತದೆ. ಪ್ರಾಣಿಗಳ ಮನೋಸ್ಥಿತಿ ಕೂಡಾ ಬಹಳ ಸೂಕ್ಷ್ಮವಾಗಿರುತ್ತದೆ. ಒಂದೊಮ್ಮೆ ಅವರು ಶಬ್ದಕ್ಕೆ ಹೊಂದಿಕೊಂಡಲ್ಲಿ ಮತ್ತೆ ಸಮಸ್ಯೆಯಾಗುವ ಸಾಧ್ಯತೆ ಇರುತ್ತದೆ. ಪ್ರಾರಂಭದಲ್ಲಿ ಜಿಂಕೆಗಳು ಬರದಂತೆ ತಡೆಯಲು ಇದು ಅನುಕೂಲಕಾರಿಯಾಗಿದೆ ಎಂದು ಗದಗ ಡಿಎಫ್‌ಒ ಸೂರ್ಯಸೇನ್ ಅವರು ತಿಳಿಸಿದ್ದಾರೆ.
undefined