40000 ಕೋಟಿ ಆಸ್ತಿ ತೊರೆದು ಸನ್ಯಾಸಿಯಾದ ಏರ್‌ಸೆಲ್‌ ಸಂಸ್ಥಾಪಕನ ಏಕೈಕ ಪುತ್ರ

By Anusha Kb  |  First Published Nov 27, 2024, 3:41 PM IST

ಮಲೇಷ್ಯಾದ ಕೋಟ್ಯಾಧಿಪತಿ ಉದ್ಯಮಿ ಆನಂದ್ ಕೃಷ್ಣನ್ ಅವರ ಪುತ್ರ ವೆನ್ ಅಜಾನ್ ಸಿರಿಪಾನ್ಯೋ ಐಷಾರಾಮಿ ಜೀವನವನ್ನು ತ್ಯಜಿಸಿ ಸನ್ಯಾಸತ್ವ ಸ್ವೀಕರಿಸಿದ್ದಾರೆ.



ಹಣ, ಆಸ್ತಿ, ಅಂತಸ್ತು (ಹೆಣ್ಣು ಹೊನ್ನು ಮಣ್ಣು) ಯಾವುದೇ ಇರಬಹುದು ಒಮ್ಮೆ ನಮಗೆ ಸಿಕ್ಕ ಮೇಲೆ ಅದರ ಮೇಲಿನ ಆಸೆ ಆಸಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ. ಸಿಗುವ ಮೊದಲು ಅದರ ಮೇಲಿರುವ ತುಡಿತ ಸಿಕ್ಕ ನಂತರ ಇರುವುದೇ ಇಲ್ಲ. ದುಡ್ಡಿಲ್ಲದ ಬಡವನಿಗೆ ಹಣ ಮಾಡಬೇಕು ತನ್ನ ಹಾಗೂ ತನ್ನವರ ಹೊಟ್ಟೆ ತುಂಬಿಸಿಕೊಳ್ಳಬೇಕು ಎಂಬ ಆಸೆಯಾದರೆ ಎಲ್ಲಾ ಐಷಾರಾಮ ಸುಖ ಸಂಪತ್ತು ಗಳಿಸಿದವನಿಗೆ ಅವುಗಳೆಲ್ಲದರಿಂದ ದೂರಾಗಿ ಬೈರಾಗಿಯಾಗಿ ಬದುಕಬೇಕೆಂಬ ಆಸೆ. ಅದೇ ರೀತಿ ಇಲ್ಲೊಂದು ಕಡೆ ಶ್ರೀಮಂತ ಉದ್ಯಮಿಯೊಬ್ಬರ ಏಕೈಕ ಪುತ್ರನೋರ್ವ ಐಷಾರಾಮಿ ಜೀವನದ ಹಂಗು ತೊರೆದು ಸನ್ಯಾಸದತ್ತ ಮುಖ ಮಾಡಿದ್ದಾರೆ. ಈ ಘಟನೆ ಹೊಸದೇನಲ್ಲ, ಈ ಹಿಂದೆಯೂ ಅನೇಕ ಅತೀ ಶ್ರೀಮಂತ ಕುಟುಂಬದ ಹೆಣ್ಣು ಮಕ್ಕಳು ಐಷಾರಾಮಿ ಬದುಕು ತೊರೆದು ಆಧ್ಯಾತ್ಮದ ಹಾದಿ ಹಿಡಿದು ಕಾಣದನ್ನು ಹುಡುಕುತ್ತಾ ಹೊರಟಿದ್ದಾರೆ.

ಅದೇ ರೀತಿ ಇಲ್ಲಿ ಮಲೇಷ್ಯಾದ ಕೋಟ್ಯಾಧಿಪತಿ ಉದ್ಯಮಿ ಆನಂದ್ ಕೃಷ್ಣನ್ ಎಂಬುವವರ ಪುತ್ರನಾಗಿರುವ ವೆನ್ ಅಜಾನ್ ಸಿರಿಪಾನ್ಯೋ ಅವರು ಈ ಐಷಾರಾಮಿ ಜೀವನದ ಆಸೆ ತೊರೆದು ಸನ್ಯಾಸದತ್ತ ಮುಖ ಮಾಡಿದ್ದಾರೆ.  ಆದರೆ ಸನ್ಯಾಸದತ್ತ ಒಲವು ತೋರಿರುವ ವೆನ್ ಅಜಾನ್ ಸಿರಿಪಾನ್ಯೋ ಅವರ ತಂದೆ ಮಲೇಷ್ಯಾದ ಮೂರನೇ ಅತೀ ಶ್ರೀಮಂತ ವ್ಯಕ್ತಿಯಾಗಿದ್ದಾರೆ.  ಟೆಲಿಕಾಂ, ಮೀಡಿಯಾ, ಇಂಧನ, ತೈಲ, ರಿಯಲ್ ಎಸ್ಟೇಟ್ ಹಾಗೂ ವಾಯುಯಾನ ಸೇರಿದಂತೆ ಹಲವು ಪ್ರಮುಖ ಕ್ಷೇತ್ರಗಳಲ್ಲಿ ಅವರು ಸಾಮ್ರಾಜ್ಯ ಸ್ಥಾಪಿಸಿದ್ದಾರೆ. ಆದರೆ ಪುತ್ರ ಇವೆಲ್ಲವನ್ನು ತೊರೆದು ಸನ್ಯಾಸಿ ಜೀವನದತ್ತ ಮುಖ ಮಾಡಿದ್ದಾರೆ.

Tap to resize

Latest Videos

ತಮ್ಮ ಪುತ್ರನನ್ನು ತಮ್ಮ ಆಸ್ತಿಯ ವಾರಸುದಾರ ಎಂದೇ ಬೆಳೆಸುತ್ತಾ ಬಂದಿದ್ದ ಉದ್ಯಮಿ ಆನಂದ್ ಕೃಷ್ಣನ್ ಅವರಿಗೆ ಇದು ಆರಂಭದಲ್ಲಿ ಆಘಾತಕಾರಿ ಎನಿಸಿದರೂ, ಮಗನ ಇಚ್ಛೆಯಂತೆ ಅವರು ಆತನ ಆಧ್ಮಾತ್ಮದ ಪ್ರಯಾಣಕ್ಕೆ ಬೆಂಬಲ ಸೂಚಿಸಿದ್ದಾರೆ. ಆನಂದ್ ಕೃಷ್ಣನ್ ಅವರು ಕೂಡ ಸ್ವತಃ ಬೌದ್ದ ಧರ್ಮದ ಪ್ರತಿಪಾದಕರಾಗಿದ್ದು, ತಮ್ಮ ದಾನದ ಕಾರ್ಯಗಳಿಂದ ಅವರು ಹೆಸರುವಾಸಿಯಾಗಿದ್ದಾರೆ.

ಇತ್ತ ಕೃಷ್ಣನ್ ಅವರ ಪತ್ನಿ ಹಾಗೂ  ವೆನ್ ಅಜಾನ್ ಸಿರಿಪಾನ್ಯೋ ಅವರ ತಾಯಿಯೂ ಆಗಿರುವ  ಮೋಮ್ವಜಾರೋಂಗ್ಸೆ ಸುಪೃಂದಾ ಚಕ್ರಬನ್(Momwajarongse Suprinda Chakraban) ಅವರು ಥೈಲ್ಯಾಂಡ್‌ನ ರಾಜವಂಶಸ್ಥರಾಗಿದ್ದಾರೆ. ಈಗ ಸನ್ಯಾಸತ್ವ ಸ್ವೀಕರಿಸಲು ಸಿದ್ಧವಾಗಿರುವ ವೆನ್ ಅಜಾನ್ ಸಿರಿಪಾನ್ಯೋ ಅವರು ತಮ್ಮ ಇತರ ಸೋದರಿಯರಂತೆ ಲಂಡನ್‌ನಲ್ಲಿಯೇ ಹುಟ್ಟಿ ಬೆಳೆದಿದ್ದಾರೆ.  ಜೊತೆಗೆ 8 ಭಾಷೆಗಳನ್ನು ಚೆನ್ನಾಗಿ ಅರಿತಿರುವ ಅವರು 8 ಭಾಷೆಗಳಲ್ಲಿ ಸ್ಪಷ್ಟವಾಗಿ ಮಾತನಾಡುತ್ತಾರೆ. 

18ರ ಹರೆಯಕ್ಕೆ ಥೈಲ್ಯಾಂಡ್‌ಗೆ ಮರಳಿದ ವೆನ್ ಅಜಾನ್ ಸಿರಿಪಾನ್ಯೋಗೆ ತಾಯಿಯ ಕುಟುಂಬ ಪರಂಪರೆಯೊಂದಿಗೆ ಗಾಢವಾದ ಸಂಪರ್ಕ ಬೆಳೆದಿದ್ದು, ಇದಾದ ನಂತರದ ದಿನಗಳಲ್ಲಿ ತಾತ್ಕಾಲಿಕ ಅನುಭವಕ್ಕಾಗಿ ಸನ್ಯಾಸತ್ವ ದೀಕ್ಷೆ ಪಡೆದಿದ್ದರು. ಆದರೆ ಅಲ್ಪಾವಧಿಯ ಈ ಅನುಭವ ಆಧ್ಯಾತ್ಮದತ್ತ ಅವರನ್ನು ಮತ್ತಷ್ಟು ಸೆಳೆದಿದ್ದು, ಜೀವಮಾನವಿಡೀ ಸನ್ಯಾಸಿಯಾಗಿರಲು ಬದ್ಧರಾಗಿದೆ. 

ಈಗ ಸುಮಾರು ಎರಡು ದಶಕಗಳಿಂದ ಅರಣ್ಯ ಸನ್ಯಾಸಿಯಾಗಿರುವ, ಸಿರಿಪಾನ್ಯೊ ಥೈಲ್ಯಾಂಡ್-ಮ್ಯಾನ್ಮಾರ್ ಗಡಿಯಲ್ಲಿರುವ ಡಿಟಾವೊ ದಮ್ ಮಠದ ಮಠಾಧೀಶರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಇತರರು ನೀಡುವ ದಾನದಿಂದ ಜೀವನ ನಡೆಸುತ್ತಿದ್ದಾರೆ. ಸರಳತೆ ಮತ್ತು ನಿರ್ಲಿಪ್ತತೆಯ ಬೌದ್ಧಧರ್ಮದ ತತ್ವಗಳಿಗೆ ಬದ್ಧರಾಗಿದ್ದಾರೆ. ಅದರು ಎಲ್ಲವೂ ಇದ್ದ ಸುಂದರವಾದ ಕುಟುಂಬದಿಂದ ಆಧ್ಯಾತ್ಮದತ್ತ ವಾಲಿದ ಅವರ ಈ ನಿರ್ಧಾರ ನಿಜಕ್ಕೂ ಅನೇಕರಿಗೆ ಅಚ್ಚರಿ ಮೂಡಿಸಿದೆ. ಅಲ್ಲದೇ ಎಲ್ಲವೂ ಇದ್ದಾಗಲೇ ಎಲ್ಲವನ್ನು ತೊರೆದು ಸನ್ಯಾಸಿಯಾದ ಸಿದ್ಧಾರ್ಥನ ಕತೆಯನ್ನು ನೆನಪು ಮಾಡುತ್ತದೆ. ಅಲ್ಲದೇ ರಾಬಿನ್ ಶರ್ಮಾ ಅವರ ಕಾದಂಬರಿ 'ದಿ ಮಂಕ್ ಸೋಲ್ಡ ಹಿಸ್ ಪೆರಾರಿ' ಕಾದಂಬರಿಯನ್ನು ನೆನಪು ಮಾಡುತ್ತಿದೆ. 

ಸಿರಿಪಾನ್ಯೊ ಅವರ ತಂದೆ ಆನಂದ್ ಕೃಷ್ಣ ಅವರು ಎಕೆ ಎಂದೇ ಖ್ಯಾತಿ ಗಳಿಸಿದ್ದು, ಟೆಲಿಕಾಂ ಲೋಕದಲ್ಲಿ ಬಹಳ ಜನಪ್ರಿಯ ಹೆಸರಾಗಿದೆ. ಇವರ ಏರ್‌ಸೆಲ್‌ ಟೆಲಿಕಮ್ಯುನಿಕೇಷನ್ ಸಂಸ್ಥೆಯೂ ಹಿಂದೊಮ್ಮೆ ಹಿಂದೊಮ್ಮೆ ಭಾರತದ ಐಪಿಎಲ್ ಪಂದ್ಯಾವಳಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ಗೆ ಪ್ರಾಯೋಜಕತ್ವ ವಹಿಸಿತ್ತು. 

ಇದನ್ನೂ ಓದಿ: ಆಡೋ ವಯಸ್ಸಿಗೆ ಅಧ್ಯಾತ್ಮದತ್ತ ಒಲವು: ಪೋಷಕರೊಂದಿಗೆ ಸನ್ಯಾಸತ್ವ ಸ್ವೀಕರಿಸಲಿರುವ 9 ವರ್ಷದ ಪೋರ

ಇದನ್ನೂ ಓದಿ: ಜೈನ ಸನ್ಯಾಸ ದೀಕ್ಷೆ ಪಡೆದ ಯುವತಿ: ಇಪ್ಪತ್ತರ ಹರೆಯದಲ್ಲೇ ಆಧ್ಯಾತ್ಮದತ್ತ ಒಲವು

click me!