ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರಿಗೆ ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ ಹಂಚಿಕೆ ಮಾಡಿದ್ದ 14 ನಿವೇಶನಗಳ ಹಗರಣಕ್ಕೆ ಸಂಬಂಧಿಸಿದಂತೆ ಮೂಲ ಜಮೀನಿನ ಮಾಲೀಕರು ಕೋರ್ಟ್ ಮೆಟ್ಟಿಲೇರಿದ್ದಾರೆ. ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಸೇರಿದಂತೆ 12 ಜನರ ವಿರುದ್ಧ ಕೇಸ್ ದಾಖಲಾಗಿದೆ.
ಮೈಸೂರು (ನ.27): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರಿಗೆ ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ (MUDA) 14 ನಿವೇಶನಗಳನ್ನು ಹಂಚಿಕೆ ಮಾಡಿದ ಹಗರಣಕ್ಕೆ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲಿಯೇ ಸಿದ್ದರಾಂಯ್ಯ ಅವರ ಪತ್ನಿಗೆ ನೀಡಲಾಗಿದ್ದ ಮೂಲ ಜಮೀನಿನ ವಿಚಾರವಾಗಿ ಮಾಲೀಕರು ಇದೀಗ ಕೋರ್ಟ್ ಮೆಟ್ಟಿಲೇರಿದ್ದು, ಸಿಎಂ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ, ಭಾಮೈದ ಮಲ್ಲಿಕಾರ್ಜುನ ಸ್ವಾಮಿ, ಜಮೀನು ಮಾರಿದ ಮಾಲೀಕ ದೇವರಾಜು ಸೇರಿ 12 ಜನರ ವಿರುದ್ಧ ಕೇಸ್ ದಾಖಲು ಮಾಡಲಾಗಿದೆ.
ಮುಡಾ 50-50 ಹಗರಣದಲ್ಲಿ ಮುಡಾದಿಂದ ಪರಿಹಾರವಾಗಿ ನೀಡಲಾಗಿದ್ದ 14 ಸೈಟ್‌ಗಳನ್ನು ವಾಪಸ್ ಪ್ರಾಧಿಕಾರಕ್ಕೆ ಕೊಟ್ಟರೂ ಸಿಎಂ ಸಿದ್ದರಾಮಯ್ಯ ಕುಟುಂಬಕ್ಕೆ ತೊಂದರೆ ತಪ್ಪುತ್ತಿಲ್ಲ. ಇದೀಗ ಪ್ರಕರಣಕ್ಕೆ ಸ್ಪೋಟಕ ತಿರುವು ಸಿಗುತ್ತಿದೆ. ಸಿಎಂ ಪತ್ನಿ ಪಾರ್ವತಿ ದಾನ ಪಡೆದ ಭೂಮಿ ಸಂಬಂಧ ಕೋರ್ಟ್‌ನಲ್ಲಿ ಕೇಸ್ ದಾಖಲು ಆಗಿದೆ. ದೇವರಾಜು ಅಣ್ಣ ಮೈಲಾರಯ್ಯನ ಮಗಳು ಜಮುನಾ ಅವರು ಜಮೀನಿಗೆ ಸಂಬಂಧಿಸಿದಂತೆ ದಾವೆ ಹೂಡಿದ್ದಾರೆ. ಮೈಸೂರಿನ 7ನೇ ಜೆ.ಎಂ.ಎಫ್.ಸಿ ಕೋರ್ಟ್‌ನಲ್ಲಿ ಕೇಸ್ ದಾಖಲಿಸಿದ್ದಾರೆ.
ಇದನ್ನೂ ಓದಿ: Breaking: ಮುಡಾ ಕೇಸ್ ಸಿಬಿಐ ತನಿಖೆ ಆಗುತ್ತಾ? ಡಿಸೆಂಬರ್ 10ಕ್ಕೆ ನಿರ್ಧಾರ
ಈ ಕೇಸಿನಲ್ಲಿ ಸಿಎಂ ಸಿದ್ದರಾಮಯ್ಯ, ಅವರ ಪತ್ನಿ ಪಾರ್ವತಿ, ಬಾಮೈದ ಮಲ್ಲಿಕಾರ್ಜುನ ಸ್ವಾಮಿ, ಭೂಮಿ ಮಾರಾಟ ಮಾಡಿದ ದೇವರಾಜು ಸೇರಿ 12 ಜನ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಕೆಸರೆ ಗ್ರಾಮದ ಸರ್ವೆ ನಂಬರ್ 464ರ 3.16 ಎಕರೆ ಭೂಮಿ ಸಂಬಂಧ ಕೇಸ್ ಹಾಕಲಾಗಿದೆ. ಈ ಜಮೀನು ಮಾರಾಟ ಮಾಡುವಾಗ ನನ್ನ ಗಮನಕ್ಕೆ ತರದೆ ಮಾರಾಟ ಮಾಡಲಾಗುದೆ ಎಂದು ಜಮುನಾ ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ.
ಇನ್ನು ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಸೇರಿ 12 ಜನರ ಮೇಲೆ ಸಿವಿಲ್ ಕೇಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ದೂರುದಾರ ಮಹಿಳೆ ಜಮುನಾ ಸಹೋದರ ಮಂಜುನಾಥ ಸ್ವಾಮಿ ಮಾತನಾಡಿ, ನಮ್ಮ ಚಿಕ್ಕಪ್ಪ ದೇವರಾಜು ಮೋಸದಿಂದ ಭೂಮಿ ಮಾರಾಟ ಮಾಡಿದ್ದಾರೆ. ನಿಮ್ಮ ಹೆಸರಿನಲ್ಲಿ ಖಾತೆ ಮಾಡಿಸುತ್ತೇನೆ ಎಂದು ಹೇಳಿ ನನ್ನ ಹಾಗೂ ತಾಯಿ ಬಳಿ ಸಹಿ ಪಡೆದುಕೊಂಡರು. ಆದರೆ, ನಮಗೆ ಭೂಮಿ ಸಿಗದಂತೆ ಮಾರಾಟ ಮಾಡಿದ್ದಾರೆ. ನಂತರ ಭೂಮಿ ಮಾರಾಟ ಮಾಡಲಾಗಿದೆ ಎಂದು ನಮ್ಮ ಗ್ರಾಮದ ಪ್ರಮುಖರು ನಮಗೆ ಹೇಳಿದ ನಂತರ ಚಿಕ್ಕಪ್ಪನನ್ನು ಹೋಗಿ ಪ್ರಶ್ನೆ ಮಾಡಿದೆವು. ಆಗ, ನಿಮಗೆ ಪರಿಹಾರ ಕೊಡಿಸುತ್ತೇನೆ ಸುಮ್ಮನಿರಿ ಎಂದು ನಮ್ಮ ಬಾಯಿ ಮುಚ್ಚಿಸಿದರು.
ಇದನ್ನೂ ಓದಿ: ಸಿದ್ದರಾಮಯ್ಯ ಕೊಟ್ಟ ಮಾತಿನಂತೆ, ಅಜೀಮ್ ಪೀರ್ ಖಾದ್ರಿಗೆ ಹೆಸ್ಕಾಂ ಅಧ್ಯಕ್ಷ ಸ್ಥಾನ
ಆದರೆ ಈವರೆಗೆ ನಮಗೆ ಒಂದು ರೂ. ಪರಿಹಾರ ಕೊಟ್ಟಿಲ್ಲ. ನಮ್ಮ ತಾತ ನಿಂಗ @ ಜವರ ಅವರಿಗೆ ಮಲ್ಲಯ್ಯ, ಮೈಲಾರಯ್ಯ ಹಾಗೂ ದೇವರಾಜು ಮೂವರು ಗಂಡು ಮಕ್ಕಳು ಇದ್ದರು. ನಮ್ಮ ತಾತನಿಂದ ನಮ್ಮ ತಂದೆ ಮೈಲಾರಯ್ಯಗೆ 3.16 ಎಕರೆ ಭೂಮಿ ಬಂದಿತ್ತು. ಆದರೆ, ನಮ್ಮ ಚಿಕ್ಕಪ್ಪ ದೇವರಾಜು ತನ್ನದಲ್ಲದ ಭೂಮಿಯನ್ನು ನಮ್ಮಿಂದ ಸಹಿ ಮಾಡಿಸಿಕೊಂಡು ಮೋಸದಿಂದ ಮಾರಾಟ ಮಾಡಿದ್ದಾರೆ. ಅದಕ್ಕಾಗಿ ಈಗ ನಮ್ಮ ಸಹೋದರಿ ಜಮುನಾ ಹೆಸರಿನಲ್ಲಿ ದಾವೆ ಹಾಕಿಸಿದ್ದೇವೆ. ನಮಗೆ ಸಿದ್ದರಾಮಯ್ಯ ಸಂಬಂಧಿಸಿಲ್ಲ. ಅವರನ್ನ ಕೇಳಿದರೆ ನೀವು ಯಾರು ಎಂದು ಕೇಳಬಹುದು. ಅದಕ್ಕಾಗಿ ದೇವರಾಜು ಕೇಳಿದ್ದೇವೆ. ಪರಿಹಾರ ಕೊಡದ ಹಿನ್ನೆಲೆಯಲ್ಲಿ ಭೂಮಿ ಮಾರಾಟ ಮಾಡಿದವರು, ಕೊಂಡವರು ಎಲ್ಲರನ್ನೂ ಸೇರಿಸಿ ದಾವೆ ಹಾಕಿದ್ದೇವೆ ಎಂದು ಮಂಜುನಾಥಸ್ವಾಮಿ ತಿಳಿಸಿದರು.