2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ವಿಜಯ ಸಾಧಿಸಿ, ರಾಜ್ಯದಲ್ಲಿ ಅಧಿಕಾರ ಹಿಡಿಯಲು ಗ್ಯಾರಂಟಿಯೇ ಕಾರಣ, ಬೇರೆನೂ ಅಲ್ಲ ಎಂಬುದು ಪ್ರತಿಪಕಗಳ ವಾದ. ಗ್ಯಾರಂಟಿಗಳ ಜೊತೆಗೆ ಬೇರೆ ಅಂಶಗಳು ಪ್ರಭಾವ ಬೀರಿದೆಯಾದರೂ ಗ್ಯಾರಂಟಿಗಳು ಪ್ರಮುಖ ಪಾತ್ರ ವಹಿಸಿವೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ: ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್
ಬೆಂಗಳೂರು(ನ.27): ದೇಶದ ರಾಜಕೀಯ ಇತಿಹಾಸದಲ್ಲಿ ಗ್ಯಾರಂಟಿಗಳಿಗೆ ಸಿಕ್ಕಷ್ಟು - ಮನ್ನಣೆ, ಜನಪ್ರಿಯತೆ ಹಾಗೂ ಟೀಕೆಗಳು ಯಾವುದೇ ಯೋಜನೆಗಳಿಗೆ ದೊರೆತಿಲ್ಲ. ಗ್ಯಾರಂಟಿಗಳು ಜನರ ಜೀವನ ಬದಲಿಸಿವೆ. ರಾಜಕೀಯದ ಚಿತ್ರಣವನ್ನು ಪಲ್ಲಟ ಮಾಡಿವೆ. ಹಾಗೆಯೇ ಜನರು ಒಂದು ಸರ್ಕಾರದಿಂದ ನಿಜಕ್ಕೂ ಬಯಸುವುದೇನು ಎಂಬ ಸ್ಪಷ್ಟ ಚಿತ್ರಣವನ್ನು ನೀಡಿದೆ.
2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭೂತಪೂರ್ವ ವಿಜಯ ಸಾಧಿಸಿ, ರಾಜ್ಯದಲ್ಲಿ ಅಧಿಕಾರ ಹಿಡಿಯಲು ಗ್ಯಾರಂಟಿಯೇ ಕಾರಣ, ಬೇರೆನೂ ಅಲ್ಲ ಎಂಬುದು ಪ್ರತಿಪಕಗಳ ವಾದ. ಗ್ಯಾರಂಟಿಗಳ ಜೊತೆಗೆ ಬೇರೆ ಅಂಶಗಳು ಪ್ರಭಾವ ಬೀರಿದೆಯಾದರೂ ಗ್ಯಾರಂಟಿಗಳು ಪ್ರಮುಖ ಪಾತ್ರ ವಹಿಸಿವೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ, ಇದು ಈ ಉಪಚುನಾವಣೆ ಹಾಗೂ ಎರಡು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲೂ ಮತ್ತೊಮ್ಮೆ ಸಾಬೀತಾಗಿದೆ.
ಸಚಿವ ಸ್ಥಾನ ಬಿಡುವಂತೆ ಕೆಲವರಿಗೆ ಹೇಳಿದ್ದೆವು: ಡಿ.ಕೆ.ಶಿವಕುಮಾರ್
ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದ ನಮ್ಮ ಕಾಂಗ್ರೆಸ್ ಸರ್ಕಾರ, ಐದು ಗ್ಯಾರಂಟಿಗಳ ಮೂಲಕ ಬರೋಬ್ಬರಿ 52,000 ಕೋಟಿ ರುಪಾಯಿಯನ್ನು ಜನರಿಗೆ ನೀಡುತ್ತಿರುವುದು ಸಾಮಾನ್ಯ ಮಾತಲ್ಲ, ಇದರಿಂದ ಆರ್ಥಿಕ ಸವಾಲುಗಳು ಎದುರಾಗುತ್ತವೆ ಎಂಬ ಅರಿವಿದ್ದರೂ, ಆ ಸವಾಲನ್ನು ಮೈ ಮೇಲೆ ಎಳೆದುಕೊಂಡು ನಾವು ಆರಂಭದಿಂದಲೂ ಕೆಲಸ ಮಾಡುತ್ತಿದ್ದೇವೆ. ಅದರಲ್ಲಿ ಯಶಸ್ಸು ಕೂಡ ಸಿಕ್ಕಿದೆ. ಇದರಲ್ಲಿ ಆರ್ಥಿಕ ಸವಾಲು ಇದೆ ಎಂದಾಕ್ಷಣ 'ಖಜಾನೆ ಖಾಲಿ', 'ಪಾಪರ್‌ಸರ್ಕಾರ' ಎಂಬ ಕೆಟ್ಟ ಟೀಕೆಗಳು ಪ್ರತಿಪಕ್ಷಗಳ ನಾಯಕರ ಬಾಯಿಂದ ಬಂದಿದ್ದವು. ಆದರೆ ಗ್ಯಾರಂಟಿಗಳ ಜೊತೆಗೆ ಅಭಿವೃದ್ಧಿ ಯೋಜನೆಗಳನ್ನು ಕೂಡ ಜಾರಿ ಮಾಡಿ ಪ್ರಗತಿಯ ಶರವೇಗದಲ್ಲಿ ಸರ್ಕಾರಮುನ್ನಡೆದಿದೆ. ಅದೇಈ ಉಪಚುನಾವಣೆಯ ಫಲಿತಾಂಶದಲ್ಲಿ ಪ್ರತಿಬಿಂಬವಾಗಿ ಮೂಡಿದೆ.
2023ರಲ್ಲಿ ವಿಧಾನಸಭಾ ಚುನಾವಣೆ ಎದುರಿಸುವ ಸಮಯದಲ್ಲಿ ಎನ್‌ಡಿಎ ಸರ್ಕಾರದ ಅನಾಹುತಕಾರಿ ಆರ್ಥಿಕ ನೀತಿಗಳು ಬಡಜನರ ಬದುಕಿನ ಮೇಲೆ ದೊಡ್ಡ ಹೊರೆ ತಂದು ಹಾಕಿತ್ತು. ಬೆಲೆ ಏರಿಕೆಗೆ ವಿರುದ್ಧವಾಗಿ ಜನರಿಗೆ ಆರ್ಥಿಕ ಶಕ್ತಿ ನೀಡುವ ಯೋಜನೆಯನ್ನು ತರಬೇಕೆಂಬ ಸಂಕಲ್ಪವನ್ನು ಕಾಂಗ್ರೆಸ್ ಮಾಡಿತ್ತು. ನಮ್ಮ ನಾಯಕಿ ಸೋನಿಯಾ ಗಾಂಧಿ, ನಾಯಕರಾದ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆಯವರ ಬೆಂಬಲದಿಂದಾಗಿ ಗ್ಯಾರಂಟಿಗಳನ್ನು ಜಾರಿ ಮಾಡಿಯೇ ಸಿದ್ದ ಎಂಬ ಶಪಥ ಕೈಗೊಂಡಿದ್ದೆವು. ಅದನ್ನು ಯಶಸ್ವಿಯಾಗಿ ಜಾರಿ ಮಾಡಿಯೂ ಆಗಿದೆ. ಅದು ಇಡೀ ದೇಶಕ್ಕೆ ಮಾದರಿಯೂ ಆಗಿ ಬೆಳೆದಿದೆ.
ಉಪ ಚುನಾವಣೆಯಲ್ಲಿ ವರದಾನ
ಚನ್ನಪಟ್ಟಣ ಹಾಗೂ ಶಿಗ್ಗಾಂವಿ ವಿಧಾನಸಭಾಕ್ಷೇತ್ರಗಳಉಪಚುನಾವಣೆ ಎಂದರೆ ಜಿದ್ದಾಜಿದ್ದಿನ ಹೋರಾಟ, ಇಲ್ಲಿ ಬಿಜೆಪಿಯಿಂದ ಪ್ರಬಲ ಅಭ್ಯರ್ಥಿಗಳನ್ನು ನಿಲ್ಲಿಸಲಾಗಿದೆ ಎಂಬ ಅಭಿಪ್ರಾಯ ಬಂದರೂ ಕೊನೆಗೆ ಜನರು ಆಶೀರ್ವಾದ ಮಾಡಿದ್ದು ಗ್ಯಾರಂಟಿಗಳನ್ನು ನೀಡಿದ ನಮ್ಮ ಸರ್ಕಾರಕ್ಕೆ, ಗ್ಯಾರಂಟಿಗಳನ್ನು ಹೀನಾಯವಾಗಿ ಟೀಕಿಸಿದ. ನಿಂದಿಸಿದ. ಸ್ವಾರ್ಥ ರಾಜಕಾರಣ ಮಾಡಿದ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ. ಈ ಮೂಲಕ ಜನರು ಗ್ಯಾರಂಟಿಗೆ ಮನ್ನಣೆ ನೀಡಿದ್ದಾರೆ.
ಮೈತ್ರಿ ಎಂಬ ಅಪವಿತ್ರ ಸಂಬಂಧಕ್ಕೆ ಹಿನ್ನಡೆಯಾಗಿದೆ. ಇದೇ ರೀತಿ ಸಂಡೂರು ಕ್ಷೇತ್ರದಲ್ಲಿ ಕೂಡ ಮತದಾರರು ಕಾಂಗ್ರೆಸ್‌ನಕೈ ಯನ್ನು ಹಿಡಿದು ಅನುಗ್ರಹಮಾಡಿದ್ದಾರೆ. ಇಲ್ಲೂ ಮೈತ್ರಿ ಎಂಬ ಒಗ್ಗಟ್ಟನ್ನು ಜನತೆ ಒಡೆದುಹಾಕಿದ್ದಾರೆ. ಇಷ್ಟೇ ಅಲ್ಲದೆ, ಮೈತ್ರಿ ಪಕ್ಷಗಳ ನಾಯಕರು ಸರ್ಕಾರದ ವಿರುದ್ಧ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಬಹುದೊಡ್ಡ ಅಪಪ್ರಚಾರ ಮಾಡಿದ್ದರು. ಕೇಂದ್ರದ ಎನ್‌ಡಿಎ ಸರ್ಕಾರದಿಂದಾಗುತ್ತಿರುವ ತೆರಿಗೆ ವಂಚನೆ ಬಗ್ಗೆ ಹೇಳಿದ್ದರೂ, ಅದನ್ನು ಸಮರ್ಥಿಸಿಕೊಳ್ಳುವ ಕೆಲಸ ಮಾಡಿದ್ದರು. ಇವೆಲ್ಲಕ್ಕೂ ಜನರು ಉಪಚುನಾವಣೆಯಲ್ಲಿ ಉತ್ತರ ಕೊಟ್ಟಿದ್ದಾರೆ.
ಗ್ಯಾರಂಟಿಯನ್ನೇ ನೆಚ್ಚಿಕೊಂಡ ಪ್ರತಿಪಕ್ಷ
ಕರ್ನಾಟಕದಲ್ಲಿ ಗ್ಯಾರಂಟಿಯನ್ನು ಟೀಕಿಸುತ್ತಲೇ ಬಿಜೆಪಿ ಗ್ಯಾರಂಟಿಯ ಜಪ ಆರಂಭಿಸಿತ್ತು, ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಗ್ಯಾರಂಟಿ ಹೆಸರಿನ ಯೋಜನೆಗಳನ್ನೇ ಘೋಷಿಸಿದರು. ಇದೇ ಮಾದರಿಯನ್ನು ಜಾರ್ಖಂಡ್ ಹಾಗೂ ಮಹಾರಾಷ್ಟ್ರ ಚುನಾವಣೆಯಲ್ಲಿ ಅನುಸರಿಸಲಾಗಿದೆ.
ಮಹಾರಾಷ್ಟ್ರ ಚುನಾವಣೆಯಲ್ಲಿ ಗ್ಯಾರಂಟಿಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಜನರಮನಸ್ಸು ಗೆದ್ದಿದೆಯೇ ಹೊರತು, ಬೇರೆಯಾವುದೇಚುನಾವಣಾ ತಂತ್ರಗಳು ಕೆಲಸ ಮಾಡಿಲ್ಲ. ಅಧಿಕಾರ ಪಡೆದ ನಂತರ ಮಹಾರಾಷ್ಟ್ರ ಸರ್ಕಾರ, ಕಾಂಗ್ರೆಸ್‌ನಂತೆಯೇ ಕೊಟ್ಟ ಮಾತನ್ನು ಸಂಪೂರ್ಣ ಉಳಿಸಿಕೊಳ್ಳಲಿದೆಯೇ ಎಂಬುದು ಅನುಮಾನ.ಆದರೆ ಜಾರ್ಖಂಡ್ ಜನರು ಬಿಜೆಪಿಯ ತಂತ್ರದ ನೈಜತೆಯನ್ನು ಅರಿತುಕೊಂಡಿದ್ದರು. ಗ್ಯಾರಂಟಿಯನ್ನು ಟೀಕಿಸುತ್ತಾ ಅದನ್ನೇ ಚುನಾವಣೆಗೆ ಬಳಸಿಕೊಳ್ಳುವ ಬಿಜೆಪಿಯ ಮೋಸದ ಬುದ್ದಿಗೆ ಅಲ್ಲಿನ ಜನರು ಮಣೆ ಹಾಕಿಲ್ಲ.
ಗ್ಯಾರಂಟಿಗಳ ಗೆಲುವು!
ಈ ಚುನಾವಣಾ ಫಲಿತಾಂಶದ ಬಗ್ಗೆ ಏನು ಹೇಳುತ್ತೀರಿ ಎಂದು ನನ್ನನ್ನು ಯಾರಾದರೂ ಕೇಳಿದರೆ, ಇದು ಗ್ಯಾರಂಟಿಗಳ ಗೆಲುವು ಎಂದು ನಿಸಂಶಯವಾಗಿ ಹೇಳುತ್ತೇನೆ. ಈ ಚುನಾವಣೆಗಳ ಒಟ್ಟು ಫಲಿತಾಂಶ ಗ್ಯಾರಂಟಿಗಳ ಮಹತ್ವವನ್ನು ಎತ್ತಿ ಹಿಡಿದಿದೆ. ರಾಜ್ಯದಲ್ಲಿ ಒಂದೂವರೆ ವರ್ಷದಲ್ಲಿ ಗ್ರಾರಂಟಿ ಯೋಜನೆಗಳು, ಕುಟುಂಬಗಳ ಆರ್ಥಿಕ ಸ್ಥಿತಿಗತಿ ಬದಲಿಸುವಲ್ಲಿ ಮಹತ್ತರ ಪರಿಣಾಮ ಬೀರಿದೆ. ಶಕ್ತಿ-ಉಚಿತ ಬಸ್ ಯೋಜನೆಯನ್ನು ಮಹಿಳೆಯರು ಅತ್ಯಧಿಕ ಸಂಖ್ಯೆಯಲ್ಲಿ ಬಳಸಿಕೊಳ್ಳುತ್ತಿದ್ದಾರೆ. ಗೃಹಲಕ್ಷ್ಮಿಗೆ ನೀಡಿದ ಹಣದಲ್ಲಿ ಅನೇಕ ಮಹಿಳೆಯರು ತಮಗಿಷ್ಟ ಬಂದ ಗೃಹೋಪಯೋಗಿ ವಸ್ತುಗಳನ್ನು ಖರೀದಿಸುತ್ತಾ ಸಂಭ್ರಮಿಸುತ್ತಿದ್ದಾರೆ.
200 ಯುನಿಟ್ ಉಚಿತ ವಿದ್ಯುತ್ ಇನ್ನಷ್ಟು ಖ್ಯಾತಿ ಪಡೆದಿದ್ದು, ಅನೇಕರಿಗೆ ತಿಂಗಳ ವೆಚ್ಚ ಕಡಿಮೆಯಾಗಿ ಅಪಾರ ಹಣ ಉಳಿತಾಯವಾಗಿದೆ. ನಿರುದ್ಯೋಗಿಗಳ ಬದುಕಿಗೆ ಯುವನಿಧಿ ನೆರವಾಗಿದೆ. ಅನ್ನಭಾಗ್ಯದ ಹಣ ಬಡವರ ಹಸಿವು ನೀಗಿಸುವ ಕೆಲಸ ಮಾಡಿದೆ.
ನಾನು ಒಕ್ಕಲಿಗ ನಾಯಕ ಎಂದು ಎಲ್ಲೂ ಹೇಳಿಲ್ಲ: ಡಿ.ಕೆ. ಶಿವಕುಮಾರ್
ಗ್ಯಾರಂಟಿ ಯೋಜನೆಗಳು ಸ್ಥಗಿತಗೊಳ್ಳಲಿವೆ ಊಹಾಪೋಹವನ್ನು ಇತ್ತೀಚೆಗೆ ಪ್ರತಿಪಕ್ಷಗಳು ಸೃಷ್ಟಿಸಲು ಆರಂಭಿಸಿದವು. ದಿವಾಳಿಯಾಗಿರುವುದರಿಂದ ಯೋಜನೆಗಳನ್ನು ಮುಂದುವರಿಸುವುದಿಲ್ಲ ಎಂಬ ಅಪಪ್ರಚಾರ ಮಾಡಲಾಗಿತ್ತು. ಅದು ಈ ಉಪಚುನಾವಣೆಯಲ್ಲಿ ಲಾಭ ತಂದುಕೊಡಬಹುದು ಎಂಬ ಲೆಕ್ಕಾಚಾರ ಪ್ರತಿಪಕ್ಷಗಳಿಗಿತ್ತು. ಅದು ಸಂಪೂರ್ಣ ಸುಳ್ಳಾಗಿದೆ. ಇಂತಹ ಅಪಪ್ರಚಾರಕ್ಕೆ ಜನರು ಕಿವಿಗೊಟ್ಟಿಲ್ಲ ಎಂಬುದಕ್ಕೆ ಈ ಫಲಿತಾಂಶಕ್ಕಿಂತ ದೊಡ್ಡ ಉದಾಹರಣೆ ಬೇಡ. ಉಪಚುನಾವಣೆಯಲ್ಲಿ ಅಧಿಕಾರ ಹಿಡಿದ ಪಕ್ಷಕ್ಕೆ ಯಶಸ್ಸು ದೊರೆಯುವುದು ಸಹಜ ಎಂಬ ವಿಶ್ಲೇಷಣೆ ನಡೆದಿದೆ. ಆದರೆ ಕಳೆದ ಒಂದೂವರೆ ವರ್ಷದಲ್ಲಿ ನಮ್ಮ ಸರ್ಕಾರ ಗ್ಯಾರಂಟಿಗಳನ್ನು ಯಥಾವತ್ತಾಗಿ ಅನುಷ್ಠಾನ ಮಾಡಿದಕ್ಕೆ ಜನರು ಹೀಗೆ ಆಶೀರ್ವಾದ ಮಾಡಿದ್ದಾರೆ ಎಂಬುದನ್ನು ಪ್ರತಿಪಕ್ಷಗಳಿಗೆ ಅರಗಿಸಿಕೊಳ್ಳಲು ಸರ್ಕಾರ ಸಾಧ್ಯವಾಗುತ್ತಿಲ್ಲ. ಈ ಚುನಾವಣಾ ಫಲಿತಾಂಶ ಮುಂದಿನ ವಿಧಾನಸಭಾ ಚುನಾವಣೆಗೆ ದಿಕ್ಕೂಚಿ ಎಂಬುದರಲ್ಲಿ ಅನುಮಾನವೇ ಬೇಡ. 2018ರಲ್ಲೂ ಜನರು ಕಾಂಗ್ರೆಸ್‌ಗೆ ಮರಳಿ ಆಶೀರ್ವದಿಸಲಿದ್ದಾರೆ. ಆಗ ಇಂತಹ ಇನ್ನಷ್ಟು ಯೋಜನೆಗಳನ್ನು ನೀಡಿ, ಜನರಬದುಕನ್ನು ಮತ್ತಷ್ಟು ಸಬಲೀಕರಣದತ್ತ ಕೊಂಡೊಯ್ಯಲಿದ್ದೇವೆ.
ಚನ್ನಪಟ್ಟಣ ಹಾಗೂ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಎಂದರೆ ಜಿದ್ದಾಜಿದ್ದಿನ ಹೋರಾಟ. ಗ್ಯಾರಂಟಿಗಳನ್ನು ಹೀನಾಯವಾಗಿ ಟೀಕಿಸಿದ, ನಿಂದಿಸಿದ, ಸ್ವಾರ್ಥ ರಾಜಕಾರಣ ಮಾಡಿದ ಬಿಜೆಪಿ-ಜೆಡಿಎಸ್ ಮೈತ್ರಿಗೆ ಜನರು ತಕ್ಕ ಪಾಠ ಕಲಿಸಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.