ಹಾಸನ ಜಿಲ್ಲೆಯ ದಡದಹಳ್ಳಿ ಗ್ರಾಮದಲ್ಲಿ 13 ವರ್ಷಗಳ ಹಿಂದೆ ನಡೆದ ಕೊಲೆ ಪ್ರಕರಣವೊಂದರಲ್ಲಿ ತಂದೆಯನ್ನು ಕೊಲೆ ಮಾಡಿದ್ದ ಆರೋಪಿಯನ್ನು ಮಗ ಕೊಲೆ ಮಾಡುವ ಮೂಲಕ ಸೇಡು ತೀರಿಸಿಕೊಂಡಿದ್ದಾನೆ. ಒಡಹುಟ್ಟಿದವರ ಜಗಳದಲ್ಲಿ ಬಡಪಾಯಿ ವ್ಯಕ್ತಿಯನ್ನು ಕೊಲೆ ಮಾಡಿದ್ದ ಆರೋಪಿ, ಜೀವ ಭಯದಿಂದ ಬೇರೆ ಊರಿನಲ್ಲಿ ನೆಲೆಸಿದ್ದರೂ ಅಂತಿಮವಾಗಿ ಕೊಲೆಯಾಗಿದ್ದಾನೆ.
ಹಾಸನ (ನ.27): ಮಲೆನಾಡಿದ ಅಂಚಿನಲ್ಲಿರುವ ಚಿಕ್ಕ ಗ್ರಾಮದಲ್ಲಿ ವಾಸವಾಗಿದ್ದ ಶ್ರೀಮಂತರ ಕುಟುಂಬದ ಅಣ್ಣ ತಮ್ಮಂದಿರ ಜಿದ್ದಿಗೆ ಬಡಪಾಯಿ ವ್ಯಕ್ತಿಯನ್ನು ಕೊಲೆ ಮಾಡಲಾಗಿತ್ತು. ಅಂದರೆ, ಇಲ್ಲಿ ಅಣ್ಣ ಬಡಪಾಯಿ ವ್ಯಕ್ತಿಯನ್ನು ಕೊಲೆ ಮಾಡಿ, ಮೃತದೇಹವನ್ನು ತಮ್ಮನ ಮನೆಯ ಕಾಂಪೌಂಡ್‌ನಲ್ಲಿ ಬೀಸಾಡಿ ಜೈಲಿಗೆ ಕಳಿಸುವ ಹುನ್ನಾರ ಮಾಡಿದ್ದನು. ಆದರೆ, ಪೊಲೀಸರ ತನಿಖೆಯಲ್ಲಿ ಕೊಲೆ ಮಾಡಿದ ಆರೋಪಿ ಯಾರೆಂಬುದು ಪತ್ತೆಯಾಗಿತ್ತು. ಅಂದಿನಿಂದ ಕೈಗೆ ಸಿಗದೇ ಬೇರೆ ಊರಿನಲ್ಲಿ ನೆಲೆಯೂರಿದ್ದ ಆರೋಪಿ ನಿನ್ನೆ ಸ್ವಗ್ರಾಮಕ್ಕೆ ಬಂದಾಗ ಆತನನ್ನು ಕೊಲೆಯಾಗಿದ್ದ ವ್ಯಕ್ತಿಯ ಪುತ್ರ ಮಚ್ಚಿನಿಂದ ನಡು ರಸ್ತೆಯಲ್ಲಿಯೇ ಕೊಚ್ಚಿ ಕೊಲೆ ಮಾಡಿದ್ದಾನೆ.
ಹೌದು, ಇದೇನಿದು ಎಲ್ಲೋ ಸಿನಿಮಾ ನೋಡಿದ ಸಿನಿಮಾ ಕಥೆಯೊಂದನ್ನು ಹೇಳುತ್ತಿದ್ದಾರೆ ಎಂದೆನಿಸುವುದು ಸಹಜ. ಕಾರಣ ಇಲ್ಲಿ ಸಿನಿಮಾ ಕಥೆಯಂತೆಯೇ ತಮ್ಮ ತಂದೆಯನ್ನು ಕೊಲೆ ಮಾಡಿದ ಆರೋಪಿಯನ್ನು 13 ವರ್ಷಗಳ ಬಳಿಕ ಅವರ ಮಗ ಕೊಲೆ ಮಾಡಿ ಸೇಡು ತೀರಿಸಿಕೊಂಡಿದ್ದಾರೆ. ಈ ಘಟನೆ ನಡೆದಿರುವುದು ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕಿನ ದಡದಹಳ್ಳಿ ಗ್ರಾಮದಲ್ಲಿ. ನಿನ್ನೆ ಮಧ್ಯಾಹ್ನದ ವೇಳೆ ಘಟನೆ ನಡೆದಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. ಸಹೋದರರ ಜಗಳದಲ್ಲಿ ಅಮಾಯಕ ಬಡಪಾಯಿ ವ್ಯಕ್ತಿಯನ್ನು ಕೊಲೆ ಮಾಡಿದ್ದ ಆರೋಪಿ, ತನ್ನನ್ನೂ ಕೊಲೆ ಮಾಡುತ್ತಾರೆಂಬ ಜೀವ ಭಯದಿಂದಲೇ ಬೇರೆ ಊರಿನಲ್ಲಿ ನೆಲೆಸಿದ್ದರೂ, ಇದೀಗ ತಾನೂ ಕೊಲೆಯಾಗಿ ಹೋಗಿದ್ದಾರೆ.
ಕೊಲೆಯಾದ ವ್ಯಕ್ತಿ ದಡದಹಳ್ಳಿ ಗ್ರಾಮದ ನಿರ್ವಾಣಪ್ಪ (75). ದಡದಹಳ್ಳಿ ಗ್ರಾಮದಲ್ಲಿ ವಾಸವಾಗಿದ್ದ ನಿರ್ವಾಣಪ್ಪ ಸಣ್ಣಪುಟ್ಟ ಕಾರಣಕ್ಕೆ ಒಡಹುಟ್ಟಿದವರ ವಿರುದ್ಧವೇ ಹಗೆ ಸಾಧಿಸುತ್ತಿದ್ದನು. ಹೇಗಾದರೂ ಮಾಡಿ ತನ್ನ ತಮ್ಮನ ಮೇಲೆ ಏನಾದರೂ ಆರೋಪ ಹೊರಿಸಿ ಅವರ ಜೀವನ ಹಾಳುಮಾಡಬೇಕು ಎಂದು ಹೊಂಚು ಹಾಕುತ್ತಿದ್ದನು. ಆಗ, 2011ರಲ್ಲಿ ತನ್ನ ಸಹೋದರನನ್ನು ಜೈಲಿಗೆ ಕಳಿಸಲು ಒಂದು ಕೊಲೆ ಕೇಸನ್ನು ಆತನ ಮೇಲೆ ಹೊರಿಸಬೇಕೆಂದು ಅವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಅದೇ ಗ್ರಾಮದ ಲಕ್ಕಪ್ಪ ಎಂಬಾತನನ್ನು ಕೊಲೆ ಮಾಡಿ ತಮ್ಮನ ಮನೆಯ ಕಾಂಪೌಂಡ್‌ನಲ್ಲಿ ಬೀಸಾಡುತ್ತಾನೆ. ಪೊಲೀಸರ ತನಿಖೆಯಲ್ಲಿ ನಿರ್ವಾಣಪ್ಪನ ನಾಟಕ ಬಯಲಾಗಿ ಲಕ್ಕಪ್ಪನ್ನು ಸುಖಾಸುಮ್ಮನೆ ಕೊಲೆ ಮಾಡಿದ್ದ ವಿಚಾರ ಬಯಲಿಗೆ ಬಂದಿತ್ತು. ಇನ್ನು ಕೊಲೆ ಕೇಸಿನಲ್ಲಿ 7 ವರ್ಷ ಜೈಲು ಶಿಕ್ಷೆಯನ್ನು ಅನುಭವಿಸಿದ್ದನು.
ಇದನ್ನೂ ಓದಿ: ಕೇರಳ ಹುಡುಗ, ಅಸ್ಸಾಂ ಹುಡುಗಿ ಪ್ರೇಮಕಥೆ ಬೆಂಗಳೂರಿನಲ್ಲಿ ದುರಂತ ಅಂತ್ಯ: ಪ್ರೇಯಸಿ ಕೊಂದು ಪ್ರೇಮಿ ಪರಾರಿ
ತಮ್ಮ ಅಣ್ಣ, ತಮ್ಮಂದಿರ ಜಿದ್ದಿಗಾಗಿ ಬಡಪಾಯಿ ಲಕ್ಕಪ್ಪನನ್ನು ಕೊಲೆ ಮಾಡಿದ್ದರಿಂದ ಆತನ ಮಕ್ಕಳು ಹಗೆ ಸಾಧಿಸುತ್ತಿದ್ದರು. ಹೀಗಾಗಿ, ಜೈಲು ಶಿಕ್ಷೆ ಅನುಭವಿಸಿ ಬಂದ ನಿರ್ವಾಣಪ್ಪ ಮಲ್ಲಿಪಟ್ಟಣ ಎಂಬ ಊರಿನಲ್ಲಿ ಹೋಗಿ ಕುಟುಂಬ ಸಮೇತವಾಗಿ ವಾಸ ಮಾಡಿಕೊಂಡಿದ್ದನು. ಆದರೆ, ಇತ್ತ ಲಕ್ಕಪ್ಪನ ಮಕ್ಕಳು ನಮ್ಮ ತಂದೆಯನ್ನು ಕೊಲೆ ಮಾಡಿ ಕೇವಲ 7 ವರ್ಷ ಜೈಲು ಶಿಕ್ಷೆ ಅನುಭವಿಸಿ ಹೊರಬಂದು ಅರಾಮವಾಗಿ ಕುಟುಂಬದ ಜೊತೆಗೆ ನೆಮ್ಮದಿಯಿಂದ ಇದ್ದಾನೆ. ಈತನನ್ನು ಸುಮ್ಮನೆ ಬಿಡಬಾರದು ಎಂದು ಸಮಯಕ್ಕಾಗಿ ಕಾಯುತ್ತಿದ್ದರು.
ಆದರೆ, ನಿನ್ನೆ ನಿರ್ವಾಣಪ್ಪ ಆಸ್ತಿ ವಿಚಾರಕ್ಕಾಗಿ ಹಾಗೂ ತಮ್ಮ ಕುಟುಂಬದ ದಾಖಲೆಯೊಂದನ್ನು ತೆಗೆದುಕೊಂಡು ಹೋಗಲು ದಡದಹಳ್ಳಿ ಗ್ರಾಮಕ್ಕೆ ಬಂದಿದ್ದನು. ಇದೇ ಗ್ರಾಮದಲ್ಲಿದ್ದ ಮೃತ ಲಕ್ಕಪ್ಪನ ಮಕ್ಕಳ ಪೈಕಿ ಮೂರ್ತಿ ಅಲಿಯಾಸ್ ಗುಂಡ ಎನ್ನುವವರು ನಿರ್ವಾಣಪ್ಪ ಗ್ರಾಮದಲ್ಲಿ ನಡೆದುಕೊಂಡು ಹೋಗುವಾಗ ಮಚ್ಚು ಹಿಡಿದುಕೊಂಡು ಬಂದು ಹಾಡ ಹಗಲೇ ಕೊಚ್ಚಿ ಹಾಕಿ ಕೊಲೆ ಮಾಡಿದ್ದಾನೆ. ಈ ಮೂಲಕ ಕಳೆದ 13 ವರ್ಷಗಳ ಹಿಂದೆ ತನ್ನ ತಂದೆ ಲಕ್ಕಪ್ಪನನ್ನು ಸುಖಾಸುಮ್ಮನೆ ಕೊಲೆ ಮಾಡಿ ಒಂದು ಕುಟುಂಬದ ಆಸರೆಯನ್ನೇ ಕಿತ್ತುಕೊಂಡಿದ್ದ ನಿರ್ವಾಣಪ್ಪನ ವಿರುದ್ಧ ಸೇಡು ತೀರಿಸಿಕೊಂಡಿದ್ದಾನೆ. ಇದನ್ನು ನೋಡಿದ ಗ್ರಾಮಸ್ಥರು ಭಯಭೀತರಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಜೆಡಿಎಸ್ ಕಾರ್ಯಕರ್ತರಿಗೆ ನಿಖಿಲ್ ಕುಮಾರಸ್ವಾಮಿ ಪತ್ರ; ಸೋತರೂ ಸುಮ್ಮನೆ ಕೂರಲ್ಲವೆಂದು ಸಂದೇಶ!
ದಡದಹಳ್ಳಿ ಗ್ರಾಮದಲ್ಲಿ ಕೊಲೆ ಮಾಡಿದ ಸುದ್ದಿ ತಿಳಿದ ಕೂಡಲೇ ಗ್ರಾಮಕ್ಕೆ ಭೇಟಿ ನೀಡಿದ್ದ ಹಾಸನ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮೊಹಮದ್ ಸುಜೀತಾ, ಎಎಸ್‌ಪಿ ಶಾಲೂ, ಅರಕಲಗೂಡು ಸಿಪಿಐ ಕೆ.ಎಂ.ವಸಂತ್ ಸೇರಿದಂತೆ ವಿವಿಧ ಅಧಿಕಾರಿಗಳು ಪರಿಶೀಲನೆ ಮಾಡಿದ್ದಾರೆ. ಗ್ರಾಮದಲ್ಲಿ ಕುಟುಂಬ ವೈಷಮ್ಯಕ್ಕೆ ಕಾರಣವಾಗಿ ಮುಂದೆಯೂ ದ್ವೇಷ ಬೆಳೆದು ಕೊಲೆಗಳು ಆಗದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದಾರೆ. ಇನ್ನು ಸಿಪಿಐ ವಸಂತ್ ನೇತೃತ್ವದ ತಂಡ ಕೊಲೆ ಆರೋಪಿ ಮೂರ್ತಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂಬಂಧ ಅರಕಲಗೂಡು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದೆ.