ಬರಿಗೈಯಲ್ಲಿ ಬೆಂಗಳೂರಿಗೆ ಬಂದು ಗೆದ್ದು ಬೀಗಿದ ಛಲಗಾತಿ ಶ್ರುತಿ ನಾಯ್ಡು!
ಮೈಸೂರಿನಲ್ಲಿ ಇಂಜಿನಿಯರಿಂಗ್ ಮೂರನೇ ವರ್ಷದಲ್ಲಿ ಓದುತ್ತಿದ್ದ ಹುಡುಗಿಗೆ ತನಗೆ ಒಂಭತ್ತರಿಂದ ಐದು ಗಂಟೆವರೆಗೆ ಆಫೀಸಿನಲ್ಲಿ ಇರುವ ಕೆಲಸ ಮಾಡುವುದು ಸಾಧ್ಯವೇ ಇಲ್ಲ ಅನ್ನಿಸತೊಡಗಿತು. ತಾನು ಬೇರೇನಾದರೂ ಮಾಡಬೇಕು ಎಂದುಕೊಂಡು ಒನ್ ಫೈನ್ ಡೇ ಕಾಲೇಜು ತೊರೆದರು. ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವ ಕನಸ ಹೊತ್ತರು. ಮನೆಯಿಂದ ದುಡ್ಡನ್ನು ತೆಗೆದುಕೊಳ್ಳದೆ ಬೆಂಗಳೂರಿಗೆ ಬಂದ ಹುಡುಗಿ ಒಂದು ಹೊತ್ತಿನ ಊಟಕ್ಕೂ ಕಷ್ಟಪಡಬೇಕಾಗಿ ಬಂತು. ಹಾಗಿದ್ದ ಹುಡುಗಿ ಇವತ್ತು ಒಬ್ಬ ಶ್ರೇಷ್ಠ ಬಿಸಿನೆಸ್ ವುಮನ್. ನೂರಾರು ಮಂದಿಗೆ ಉದ್ಯೋಗ ನೀಡಿದ ಯಶಸ್ವೀ ಮಹಿಳೆ. ಯುವಜನತೆಗೆ ಸ್ಫೂರ್ತಿಯಾಗಬಹುದಾದ ಈ ಸಾಧಕಿಯ ಹೆಸರು ಶ್ರುತಿ ನಾಯ್ಡು.
ಹುಟ್ಟಿದ್ದು ಬೆಳೆದಿದ್ದು ಮೈಸೂರಲ್ಲಿ. ತಂದೆ ಜನಾರ್ದನ ನಾಯ್ಡು, ತಾಯಿ ಸುಶೀಲ ಇಬ್ಬರೂ ಬ್ಯಾಂಕ್ ಉದ್ಯೋಗಿಗಳು. ಶ್ರುತಿಯವರು ಇಂಜಿನಿಯರಿಂಗ್ ಕಲಿಯುತ್ತಿದ್ದರು. ಮೂರನೇ ವರ್ಷದಲ್ಲಿ ಅದೇನನ್ನಿಸಿತೋ ತನಗೆ ಇಂಜಿನಿಯರಿಂಗ್ ಬೇಡ ಎಂದರು. ಅಪ್ಪ ಸ್ವಲ್ಪ ಮಗಳ ಪರ. ಆದರೆ ಅಮ್ಮ ಮಾತ್ರ ಆತಂಕಕ್ಕೆ ಬಿದ್ದರು. ಸರಿಯಿಲ್ಲ ಈ ನಿರ್ಧಾರ ಎಂದರು. ಆದರೆ ಶ್ರುತಿ ನಿರ್ಧಾರ ಗಟ್ಟಿಯಾಗಿತ್ತು.
ಅಪ್ಪನಿಗೆ ಸ್ವಲ್ಪ ಸಿನಿಮಾ ರಂಗ ಗೊತ್ತಿತ್ತು. ಸಿನಿಮಾ ವಿತರಣೆ ಮಾಡುತ್ತಿದ್ದರು. ಹಾಗಾಗಿ ಶ್ರುತಿ ಅವರ ಬಳಿ ಹೋಗಿ, ನಾನು ನಟಿಯಾಗುತ್ತೇನೆ ಎಂದರು. ತಂದೆ ಪರಿಚಯ ಇರುವ ನಿರ್ಮಾಪಕರಿಗೆ ಹೇಳುತ್ತೇನೆ ಎಂದಿದ್ದೇ ತಡ ಶ್ರುತಿ ಬರಿಗೈಯಲ್ಲೇ ಬೆಂಗಳೂರಿಗೆ ಬಂದರು. ಅಲ್ಲಿಗೆ ಬದುಕು ಒಂದು ತಿರುವು ಪಡೆಯಿತು.
ಬರಿಗೈಯಲ್ಲಿ ಬೆಂಗಳೂರಿಗೆ
ಇಂಜಿನಿಯರಿಂಗ್‌ಗೆ ಅಪ್ಪ, ಅಮ್ಮನ ದುಡ್ಡು ವ್ಯರ್ಥ ಮಾಡಿದೆ ಅನ್ನುವುದು ತಲೆಯಲ್ಲಿತ್ತು. ಹಾಗಾಗಿ ಮನೆಯಿಂದ ಒಂದು ಪೈಸೆ ಕೂಡ ತೆಗೆದುಕೊಳ್ಳಬಾರದು ಎಂದುಕೊಂಡಿದ್ದರು ಶ್ರುತಿ. ಇಂಥಾ ಹೊತ್ತಲ್ಲೇ ಫೋಟೋಶೂಟ್ ಮಾಡುವ ಮನಸ್ಸು ಮಾಡಿದರು. ಆದರೆ ಮನೆಯಲ್ಲಿ ಹಣ ಕೇಳುವುದು ಸರಿ ಅನ್ನಿಸಲಿಲ್ಲ. ಆಗ ನೆನಪಾಗಿದ್ದು ಅಜ್ಜಿ ಸರೋಜಮ್ಮ. ಅಜ್ಜಿ ಬಳಿ ಒಂದು ಹತ್ತು ಸಾವಿರ ಕೊಡು, ನಾನು ಅದರಿಂದ ಜಾಸ್ತಿ ಸಂಪಾದನೆ ಮಾಡಿ ವಾಪಸ್ ಕೊಡುತ್ತೇನೆ ಎಂದರು. ಮೊಮ್ಮಗಳು ಅಂದ್ರೆ ಅಜ್ಜಿಗೆ ಪ್ರೀತಿ. ತಾನು ಕೂಡಿಟ್ಟಿದ್ದ ದುಡ್ಡು ಕೊಟ್ಟರು. ಆ ಋುಣ ಇವತ್ತಿಗೂ ನೆನಪಿದೆ ಶ್ರುತಿಯವರಿಗೆ. ಇವತ್ತು ಏನೇ ಮಾಡಿದರೂ ಅದನ್ನು ಸರೋಜ ವೆಂಚರ್ಸ್ ಎಂಬ ಹೆಸರಲ್ಲೇ ಮಾಡುತ್ತಾರೆ.
ಜನರಿಗೆ ನೆರವಾಗುವುದೇ ನನಗೆ ಖುಷಿ: ಶ್ರುತಿ ನಾಯ್ಡು
ಹಸಿವು ಅರ್ಥವಾದ ಕ್ಷಣಗಳು
ಅಜ್ಜಿ ಕೊಟ್ಟದುಡ್ಡಿನಿಂದ ಫೋಟೋಶೂಟ್ ಮಾಡಿದರು. ಕೆಲವು ನಿರ್ಮಾಪಕರಿಗೆ ಹೋಗಿ ಕೊಟ್ಟರು. ಆಗ ಸಪೂರ ಇದ್ದೆ, ಹೀರೋಯಿನ್ ಆಗುವಂತಹ ಲಕ್ಷಣಗಳು ಇರಲಿಲ್ಲ ಎನ್ನುತ್ತಾರೆ ಶ್ರುತಿ. ಹಾಗಾಗಿ ನಿರ್ಮಾಪಕರು ನೋಡೋಣ, ನೋಡೋಣ ಎನ್ನುತ್ತಿದ್ದರೇ ವಿನಾ ಅವಕಾಶ ಕೊಡುತ್ತಿರಲಿಲ್ಲ. ಆದರೆ ಹೊಟ್ಟೆಪಾಡಿಗೆ ಏನಾದರೂ ಮಾಡಲೇಬೇಕಿತ್ತಲ್ಲ. ಒಮ್ಮೊಮ್ಮೆ ಒಂದು ಹೊತ್ತಿನ ಊಟಕ್ಕೂ ಕಷ್ಟಪಡಬೇಕಾಗುತ್ತಿತ್ತು. ಯಾರಾದರೂ ಮನೆಗೆ ಮಧ್ಯಾಹ್ನ ಹೋದರೆ ಅಲ್ಲಿ ಊಟ ಹಾಕಬಹುದಲ್ಲ ಎಂದು ಯೋಚಿಸುವಂತಹ ಪರಿಸ್ಥಿತಿ ಇತ್ತು.
ಆಗ ಪ್ರಕಾಶ್ ಬೆಳವಾಡಿ ಮತ್ತು ಸತ್ಯ ಅವರ ಸಂಸ್ಥೆಯಲ್ಲಿ ಕೆಲಸ ಮಾಡಿ ಪಾಕೆಟ್ ಮನಿ ಸಂಪಾದಿಸುತ್ತಿದ್ದರು. ಅದರ ಜತೆಗೆ ಆ್ಯಂಕರಿಂಗ್ ಕೆಲಸ ಪಡೆಯುವ ಪ್ರಯತ್ನ ನಡೆಯುತ್ತಿತ್ತು. ಇಂಥಾ ಹೊತ್ತಲ್ಲಿ ಈಟಿವಿ ವಾಹಿನಿಯಲ್ಲಿ ‘ಸವಿರುಚಿ’ ಎಂಬ ಅಡುಗೆ ಕಾರ್ಯಕ್ರದ ಆ್ಯಂಕರಿಂಗ್ ಮಾಡುವ ಅವಕಾಶ ಸಿಕ್ಕಿತು. ಶ್ರುತಿಯವರ ವ್ಯಕ್ತಿತ್ವ ಹೇಗೆ ಎಂದರೆ ಕೈತುಂಬಾ ಕೆಲಸ ಮಾಡಬೇಕು. ಕೆಲಸ ಕಡಿಮೆ ಇದ್ದರೆ ರೆಸ್ಟ್‌ಲೆಸ್ ಆಗುತ್ತಿದ್ದರು. ಬರೀ ಆ್ಯಂಕರಿಂಗ್ ಮಾಡುವುದು ಸ್ವಲ್ಪ ಬೋರ್ ಅನ್ನಿಸಿದಾಗ ವಾಹಿನಿಯ ಹಿರಿಯರ ಬಳಿ ಹೋಗಿ ಇದರ ಕ್ರಿಯೇಟಿವ್ ಕೆಲಸ ಕೂಡ ನಾನೇ ಮಾಡಬಹುದಾ ಎಂದು ಕೇಳಿಕೊಂಡರು. ಹುಡುಗಿಯ ಆಸಕ್ತಿ, ಆತ್ಮವಿಶ್ವಾಸ ನೋಡಿ ಅವರು ಕೂಡ ಪ್ರೋತ್ಸಾಹ ನೀಡಿ, ಹಾಗಾದರೆ ನೀವು ಲೈನ್ ಪ್ರೊಡ್ಯೂಸರ್ ಆಗಿ ಎಂದರು. ಅದು ಶ್ರುತಿ ಬದುಕಿನ ಮತ್ತೊಂದು ಗೆಲುವಿನ ತಿರುವು.
ಹೊಸ ಕೆಲಸ ಹೊಸ ಸಾಹಸ
ಸವಿರುಚಿ ಕಾರ್ಯಕ್ರಮಕ್ಕೆ ಹೊಸ ಗೆಸ್ಟ್ ಕರೆಯುವುದು, ಮೆನು ರೆಡಿ ಮಾಡುವುದು ಎಲ್ಲವನ್ನೂ ಉತ್ಸಾಹದಿಂದ ಪ್ರೀತಿಯಿಂದ ಮಾಡಿದರು. ಶ್ರುತಿಯವರು ಸ್ವಲ್ಪ ದುಡ್ಡು ನೋಡಿದ್ದು ಆವಾಗಲೇ. ಆಗಲೇ ತಾನು ದೊಡ್ಡ ಬಿಸಿನೆಸ್ ವುಮನ್ ಆಗಬೇಕು ಅಂತ ಆಸೆ ಹುಟ್ಟಿದ್ದು. ತಾನು ತುಂಬಾ ಜನಕ್ಕೆ ಕೆಲಸ ಕೊಡುವಂತೆ ಬೆಳೆಯಬೇಕು ಎಂದು ಆಸೆಪಟ್ಟರು. ಅದಕ್ಕೆ ತಕ್ಕಂತೆ ಕೆಲಸ ಮಾಡುತ್ತಾ ಹೋದರು. ಯಾವುದಾದರೂ ಧಾರಾವಾಹಿಯಲ್ಲಿ ನಟನೆ ಅವಕಾಶ ಸಿಗತ್ತಾ ಎಂದು ಕಾದರು. ಟಿಎನ್ ಸೀತಾರಾಮ್ ಅವರ ಮುಕ್ತಾ ಧಾರಾವಾಹಿಯಲ್ಲಿ ಒಂದು ದಿನದ ನಟನೆ ಅವಕಾಶ ಸಿಕ್ಕಿತು. ಅದರ ನಂತರ ಸಿಕ್ಕಿದ್ದೇ ದೊಡ್ಡ ಅವಕಾಶ.
ವಿನು ಬಳಂಜ ನಿರ್ದೇಶನದ ‘ಪ್ರೀತಿ ಇಲ್ಲದ ಮೇಲೆ’ ಧಾರಾವಾಹಿಗೆ ಕರೆ ಬಂತು. ಅನಂತ್‌ನಾಗ್ ನಟಿಸುತ್ತಿದ್ದ ಧಾರಾವಾಹಿ ಅದು. ಅವರ ಮಕ್ಕಳ ಪಾತ್ರ ಯಾವುದಾದರೂ ಕೊಡಬಹುದು ಎಂದುಕೊಂಡರೆ ಅನಂತ್‌ನಾಗ್ ಪತ್ನಿಯಾಗಿ ನಟಿಸುವ ಅವಕಾಶವೇ ಸಿಕ್ಕಿತು. ಅಲ್ಲಿ ಎಂತೆಂಥಾ ದೊಡ್ಡ ಕಲಾವಿದರು ಇದ್ದರು ಎಂದರೆ ಅದು ನನಗೆ ನಟನೆ, ನಿರ್ದೇಶನ ಕ್ಷೇತ್ರದ ಯೂನಿವರ್ಸಿಟಿ ಇದ್ದಂತೆ ಇತ್ತು ಎನ್ನುತ್ತಾರೆ ಶ್ರುತಿ ನಾಯ್ಡು.
ಆ ಪ್ರಯತ್ನ ದೊಡ್ಡ ಹೆಸರು ಕೊಟ್ಟಿತು. ಅಲ್ಲಿಂದ ಶ್ರುತಿಯವರ ಮನಸ್ಸು ನಿರ್ದೇಶನದ ಕಡೆಗೆ ಸೆಳೆಯಿತು. ಚೈತನ್ಯ ಅವರ ಜತೆ ಒಂದು ಧಾರಾವಾಹಿಗೆ ಕೆಲಸ ಮಾಡಿದರು. ಅಲ್ಲಿಂದ ರಮೇಶ್ ಇಂದಿರಾ ನಿರ್ದೇಶನದ ‘ನಮ್ಮಮ್ಮ ಶಾರದೆ’ ಧಾರಾವಾಹಿ ತಂಡಕ್ಕೆ ಸೇರಿದರು. ಆ ಧಾರಾವಾಹಿ ಶ್ರುತಿಯವರ ಬದುಕು ಬದಲಿಸಿತು. ನಿರ್ದೇಶಕಿ, ನಿರ್ಮಾಪಕಿ ಶ್ರುತಿ ನಾಯ್ಡು
ಹೋಟೆಲ್ ಉದ್ಯಮಕ್ಕೆ ಕಾಲಿಟ್ಟ ನಟಿ-ನಿರ್ಮಾಪಕಿ; ಮೈಸೂರಿನಲ್ಲಿ 'ಮಿರ್ಚಿ'!
‘ನಮ್ಮಮ್ಮ ಶಾರದೆ’ ಧಾರಾವಾಹಿ ಸೆಟ್‌ನಲ್ಲಿ ಒಂದು ಸೀನ್ ಓದಿದ ಶ್ರುತಿ ಈ ಸೀನನ್ನು ನಾನು ನಿರ್ದೇಶನ ಮಾಡಬಹುದಾ ಎಂದು ರಮೇಶ್ ಇಂದಿರಾರನ್ನು ಕೇಳಿದರು. ರಮೇಶ್ ಏನನ್ನಿಸಿತೋ ಓಕೆ ಅಂದುಬಿಟ್ಟರು. ಆ ಸೀನ್ ಬರೆದಿದ್ದು ವಾಹಿನಿ ಮುಖ್ಯಸ್ಥರಾಗಿದ್ದ ಪರಮೇಶ್ ಗುಂಡ್ಕಲ್. ಅವರಿಗೆ ಈ ಸೀನ್ ಇಷ್ಟವಾಗಿ ರಮೇಶ್‌ಗೆ ಫೋನ್ ಮಾಡಿ ಬಹಳ ಚೆನ್ನಾಗಿ ತೆಗೆದಿದ್ದೀರಿ ಎಂದರು. ರಮೇಶ್ ತಕ್ಷಣ ಅದು ನಾನಲ್ಲ, ಶ್ರುತಿ ನಿರ್ದೇಶನ ಮಾಡಿದ್ದು ಎಂದಾಗ ಅಚ್ಚರಿಗೊಂಡ ಪರಮೇಶ್ ಮರುದಿನವೇ ಶ್ರುತಿ ಅವರನ್ನು ಕರೆದು ನೀವೇ ನಿರ್ದೇಶನ ಮಾಡಬಹುದಲ್ಲ ಎಂದು ದೊಡ್ಡ ಅವಕಾಶ ಕೊಟ್ಟರು. ಆಗ ಶುರುವಾಗಿದ್ದೇ ‘ಚಿ.ಸೌ. ಸಾವಿತ್ರಿ’ ಧಾರಾವಾಹಿ.
ಆ ಧಾರಾವಾಹಿ ನಿರ್ದೇಶಕರಾಗಿದ್ದಷ್ಟೇ ಅಲ್ಲ, ನಿರ್ಮಾಪಕಿಯೂ ಆದರು. ‘ಸವಿರುಚಿ’ ಲೈನ್ ಪ್ರೊಡ್ಯೂಸರ್ ಆಗಿದ್ದ ಅನುಭವದಲ್ಲಿ ಮತ್ತು ಸೇತೂರಾಮ್, ರಮೇಶ್ ಇಂದಿರಾ ನೆರವಿನೊಂದಿಗೆ ಯಶಸ್ವಿಯಾಗಿ ಆ ಧಾರಾವಾಹಿಯನ್ನು ಮುನ್ನಡೆಸಿದರು. ಧಾರಾವಾಹಿ ಗೆದ್ದಿತು. ಜತೆಗೆ ಶ್ರುತಿ ನಾಯ್ಡು ಕೂಡ ಗೆದ್ದರು. ಅದೇ ಉತ್ಸಾಹದಲ್ಲಿ ಮತ್ತೊಂದು ಧಾರಾವಾಹಿ ಆರಂಭಿಸಲು ಹೊರಟಾಗ ಏನೋ ದೊಡ್ಡ ಮಟ್ಟದಲ್ಲಿ ಆರಂಭಿಸಬೇಕು ಎಂದು ದರ್ಶನ್ ಕೈಯಿಂದ ಧಾರಾವಾಹಿ ಬಿಡುಗಡೆ ಮಾಡಿಸಿದ ಛಲಗಾತಿ ಶ್ರುತಿ ನಾಯ್ಡು. ಅಲ್ಲಿಂದ ಅವರು ಹಿಂದೆ ತಿರುಗಿ ನೋಡಲಿಲ್ಲ.
ಗೆಲುವು ಅಂದ್ರೆ ಇದು
ಬೆಂಗಳೂರಿನಲ್ಲಿ ಕೈಯಲ್ಲಿ ದುಡ್ಡಿಲ್ಲದೇ ಇದ್ದಾಗ ಸಿಗುತ್ತಿದ್ದ ಸ್ನೇಹಿತೆಯರು ಕೆಲವರು, ನಾವು ಆರಾಮಾಗಿ ಕೆಲಸಕ್ಕೆ ಹೋಗಿ ಸೆಟಲ್ ಆಗಿದ್ದೇವೆ, ನೀನು ಏನು ಮಾಡ್ತಿ ಎಂದು ಹಂಗಿಸುತ್ತಿದ್ದರು. ಕೈಯಲ್ಲಿ ಕೆಲಸವಿಲ್ಲ, ಕಾಸಿಲ್ಲ. ಅಂಥಾ ಪರಿಸ್ಥಿತಿಯಲ್ಲಿ ಜೀವನವೇ ಭಾರ ಅನ್ನಿಸುವಂತಹ ಮನಸ್ಥಿತಿ. ಒಂದ್ಸಲ ಭಯಪಟ್ಟರೂ ಆಮೇಲೆ ತಿರುಗಿ ಒಂದಲ್ಲ ಒಂದು ದಿನ ಅವರೆಲ್ಲಾ ನನ್ನ ಹತ್ತಿರಕ್ಕೂ ಬರದಷ್ಟುಎತ್ತರಕ್ಕೆ ಹೋಗಬೇಕು ಎಂದುಕೊಂಡರು. ‘ಅದೇ ಕಾರಣದಿಂದ ನಾನು ಬಿಎಂಡಬ್ಲ್ಯೂ’ ಕಾರು ತೆಗೆದುಕೊಂಡೆ ಎನ್ನುತ್ತಾರೆ ಶ್ರುತಿ ನಾಯ್ಡು.
ಇಪ್ಪತ್ತು ವರ್ಷದ ಹಿಂದೆ ಬರಿಗೈಯಲ್ಲಿ ಬೆಂಗಳೂರಿಗೆ ಬಂದಿದ್ದ ಅವರು ಇವತ್ತು ದೊಡ್ಡ ನಿರ್ಮಾಣ ಸಂಸ್ಥೆಯ ಮುಖ್ಯಸ್ಥೆ. ಸಿನಿಮಾ ಮಾಡಿ ಗೆದ್ದಿದ್ದಾರೆ. ಧಾರಾವಾಹಿ ಪ್ರಪಂಚದಲ್ಲಿ ದೊಡ್ಡ ಹೆಸರು ಮಾಡಿದ್ದಾರೆ. ಕೈನೆಟಿಕ್ ಹೋಂಡಾದಿಂದ ಬಿಎಂಡಬ್ಲ್ಯೂ ಕಾರಿನವರೆಗೆ ಬೆಳೆದಿದ್ದಾರೆ. ಒಂದು ಮಧ್ಯಮ ವರ್ಗದ ಹುಡುಗಿ ಛಲ, ಧೈರ್ಯ, ಜಾಣತನ ಇದ್ದರೆ ಎಷ್ಟುದೊಡ್ಡ ಎತ್ತರಕ್ಕೆ ಬೇಕಾದರೂ ಹೋಗಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಯುವಜನತೆಗೆ ಸ್ಫೂರ್ತಿಯಾಗುವಂತೆ ಬದುಕುತ್ತಿದ್ದಾರೆ. ಈ ಶತಮಾನದ ಮಾದರಿ ಹೆಣ್ಣಿಗೆ ನಮಸ್ಕಾರ.
ಮೈಸೂರಿನಲ್ಲಿ ಮೈಸೂರು ಮಿರ್ಚಿ
ಶ್ರುತಿ ನಾಯ್ಡು ಅವರಿಗೆ ತಮ್ಮ ಆರಂಭದ ಬೆಂಗಳೂರಿನ ದಿನಗಳು ಇನ್ನೂ ನೆನಪಿದೆ. ಅದರಿಂದಲೇ ಅವರು ಮೈಸೂರಿನಲ್ಲಿ ಮೈಸೂರು ಮಿರ್ಚಿ ಎಂಬ ಹೋಟೆಲ್ ಆರಂಭಿಸಿದ್ದಾರೆ. ಜನ ಅದರ ರುಚಿಗೆ ಮಾರುಹೋಗಿದ್ದಾರೆ.
‘ಮನೆಯಲ್ಲಿದ್ದಾಗ ಊಟ ಚೆಲ್ಲುತ್ತಿದ್ದ ನನಗೆ ಬೆಂಗಳೂರಿಗೆ ಹೋದ ಮೇಲೆ ಊಟ ಸಿಗುವುದೇ ಕಷ್ಟವಾಗತೊಡಗಿತು. ಅನ್ನದ ಬೆಲೆ ಅರ್ಥವಾಗಿದ್ದೇ ಆಗ. ಹಸಿವಿನಿಂದ ಇರುವವನಿಗೆ ಎಷ್ಟುದುಡ್ಡು ಕೊಟ್ಟರೂ ಬೇಕಾಗಿಲ್ಲ. ಒಂದೊಳ್ಳೆ ಊಟ ಹಾಕಿದರೆ ಸಾಕು. ಆ ಕಾರಣದಿಂದ ಒಂದು ಕಡಿಮೆ ಬೆಲೆಗೆ ಆಹಾರ ಸಿಗುವ ಹೋಟೆಲ್ ಆರಂಭಿಸಬೇಕು ಎನ್ನುವ ಕನಸು ಕಟ್ಟಿಕೊಂಡಿದ್ದೇ. ಅದರ ಫಲವಾಗಿಯೇ ಈ ಮೈಸೂರು ಮಿರ್ಚಿ’ ಎನ್ನುತ್ತಾರೆ ಶ್ರುತಿ.
ಜನರಿಂದ ಪಡೆದ ಪ್ರೀತಿ ಜನರಿಗೆ ಕೊಟ್ಟಶ್ರುತಿ
ಶ್ರುತಿ ನಾಯ್ಡು ತಮಗೆ ಜನ ತೋರಿಸಿದ ಪ್ರೀತಿಯನ್ನು ಹೃದಯದಲ್ಲಿ ಇಟ್ಟುಕೊಂಡಿದ್ದಾರೆ. ಜನ ನಮ್ಮ ಜತೆಗೆ ನಿಂತರೆ ಮಾತ್ರ ನಾವು ಗೆಲ್ಲಲು ಸಾಧ್ಯ ಎನ್ನುವ ಅವರು ಜನರಿಂದ ಗಳಿಸಿದ ಪ್ರೀತಿಯನ್ನು ಮರಳಿ ಸಮಾಜಕ್ಕೆ ನೀಡುವ ಪ್ರಯತ್ನ ಮಾಡುತ್ತಿದ್ದಾರೆ. ಪ್ಲಾಸ್ಟಿಕ್ ವಿರೋಧಿ ಅಭಿಯಾನ, ಪುಸ್ತಕ ವಿತರಣೆ ಮುಂತಾದ ಕೆಲಸಗಳಿಂದ ಜನರ ಮನಸ್ಸು ಗೆದ್ದ ಅವರು ಇತ್ತೀಚೆಗೆ ಎರಡು ಮಹತ್ವದ ಕೆಲಸ ಮಾಡಿದ್ದಾರೆ.
1. ಅರಣ್ಯ ಸಿಬ್ಬಂದಿಗಳಿಗೆ ಮೆಡಿಕಲ್ ಕಿಟ್
ಸುವರ್ಣ ನ್ಯೂಸ್-ಕನ್ನಡಪ್ರಭ ಆಯೋಜಿಸಿದ ‘ವನ್ಯಜೀವಿ ಸಂರಕ್ಷಣಾ ಅಭಿಯಾನ’ದ ಭಾಗವಾಗಿ ಕಾಡಿಗೆ ತೆರಳಿದ್ದ ಅವರು ಬಂಡೀಪುರದಲ್ಲಿನ ಅರಣ್ಯ ಸಿಬ್ಬಂದಿಗಳಿಗೆ ಮೆಡಿಕಲ್ ಕಿಟ್ ವಿತರಿಸಿ ಅವರ ಬದುಕನ್ನು ಆರೋಗ್ಯವಾಗಿಡಲು ಸಹಕರಿಸಿದ್ದಾರೆ.
2. ಶಾಲೆಗೆ ಮರುಜೀವ
ಎಚ್‌ಡಿ ಕೋಟೆಯ ಬಳ್ಳೇಹಾಡು ಗ್ರಾಮಕ್ಕೆ ತೆರಳಿದ್ದ ವೇಳೆ ಅಲ್ಲಿನ ಸರ್ಕಾರಿ ಶಾಲೆಯ ಸ್ಥಿತಿ ನೋಡಿ ಮರುಗಿದ ಶ್ರುತಿ ಆ ಶಾಲೆಯನ್ನು ರಿಪೇರಿಗೊಳಿಸಿ, ಅಲ್ಲಿಗೆ ಒಬ್ಬರು ಶಿಕ್ಷಕರು ಬರುವಂತೆ ಮಾಡಿದ್ದಾರೆ. ಆ ಮೂಲಕ ಆ ಊರಿನ ಮಕ್ಕಳು ಖುಷಿಯಿಂದ ವಿದ್ಯಾಭ್ಯಾಸ ಪಡೆಯುವಂತೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ನೋವಲ್ಲಿರುವವರಿಗೆ ಶ್ರುತಿ ನಾಯ್ಡು ಕಿವಿಮಾತು
ನಾನು ಇತ್ತೀಚೆಗೆ ಸಣ್ಣ ಯುವತಿಯರು ಆತ್ಮಹತ್ಯೆ ಮಾಡಿಕೊಳ್ಳುವ ಕತೆಯನ್ನು ತುಂಬಾ ಕೇಳುತ್ತಿದ್ದಾನೆ. ಕರಿಯರ್ ಸಮಸ್ಯೆಗೆ, ಲವ್ ಬ್ರೇಕಪ್‌ಗೆ ಯುವತಿಯರು ನೊಂದು ಜೀವ ಕಳೆದುಕೊಳ್ಳುವುದು ನೋಡಿದಾಗ ಬೇಸರವಾಗುತ್ತದೆ. ಒಂದು ಹಂತದಲ್ಲಿ ಎಲ್ಲರಿಗೂ ಸೋಲು ಎದುರಾಗುತ್ತದೆ. ನನಗೂ ಇನ್ನೂ ಬದುಕೇ ಬೇಡಪ್ಪಾ ಅನ್ನಿಸುವಂತಹ ಪರಿಸ್ಥಿತಿ ಬಂದಿತ್ತು. ಆದರೆ ಅದು ಕ್ಷಣಿಕ. ಆ ಹಂತವನ್ನು ದಾಟಿ ಮುಂದೆ ಬರಬೇಕು. ಒಂದು ಚೌಕಟ್ಟಿನಲ್ಲಿ ಇದ್ದಾಗ ಎಲ್ಲವೂ ಮಿತಿ ಅನ್ನಿಸುತ್ತದೆ. ಆ ಚೌಕಟ್ಟಿನಿಂದ ಆಚೆ ಬಂದಾಗ ಪ್ರಪಂಚ ವಿಶಾಲವಾಗಿದೆ ಅನ್ನಿಸುತ್ತದೆ. ನಮ್ಮವರು ನಮ್ಮ ಮೇಲೆ ದೊಡ್ಡ ಕನಸು ಇಟ್ಟುಕೊಂಡಿರುತ್ತಾರೆ. ಅದನ್ನು ಸಾಧಿಸಲು ನಾವು ಬದುಕಬೇಕು. ಆತ್ಮಹತ್ಯೆಗೆ ಯತ್ನಿಸುವ ಪ್ರತಿಯೊಬ್ಬರಿಗೂ ನಾನು ಹೇಳುವುದಿಷ್ಟೇ, ಇದೊಂದು ಸಣ್ಣ ತಿರುವು. ಆ ತಿರುವು ದಾಟಿದರೆ ಗೆಲುವು ಸಿಗುತ್ತದೆ. ಸ್ವಲ್ಪ ಕಾಯಿರಿ. ಒಳ್ಳೇದಾಗತ್ತೆ.
ಕೋಟ್‌ಗಳು
- ಯಾರೂ ನಮ್ಮನ್ನು ನಾವು ವೀಕ್ ಎಂದುಕೊಳ್ಳಬಾರದು. ಇಲ್ಲಿ ಯಾರೂ ವೀಕ್ ಅಲ್ಲ, ಯಾರೂ ಸ್ಟ್ರಾಂಗ್ ಅಲ್ಲ. ಎದುರಾಗುವ ಪರಿಸ್ಥಿತಿಗಳನ್ನು ನಿಭಾಯಿಸಲು ಕಲಿಯಬೇಕು.
- ಯಾವ ಕೆಲಸವೇ ಆಗಲಿ ಅದನ್ನು ಶ್ರದ್ಧೆಯಿಂದ ಮಾಡಬೇಕು. ಯಾವುದೂ ಕೀಳಲ್ಲ. ಯಾವುದೂ ಮೇಲೂ ಅಲ್ಲ. ಎಲ್ಲವನ್ನೂ ಒಂದೇ ಥರ ನೋಡುವುದು ತಿಳಿದಾಗ ಸಂತೋಷ ಇರುತ್ತದೆ.
- ಎತ್ತರಕ್ಕೆ ಏರಿದವರೆಲ್ಲರೂ ಕಷ್ಟಪಟ್ಟೇ ಮೇಲೆ ಬಂದಿರುತ್ತಾರೆ. ಯಾವುದೂ ಸುಲಭಕ್ಕೆ ಸಿಗುವುದಿಲ್ಲ. ಅವರ ಯಶಸ್ಸಿನ ಹಿಂದೆ ಸಂಕಷ್ಟವಿದೆ, ತ್ಯಾಗವಿದೆ. ಅದು ನಮಗೆ ಗೊತ್ತಿರಬೇಕು.
- ಮೊದಲು ಸ್ವಲ್ಪ ವೇಗವಾಗಿ ಹೋಗುತ್ತಿದ್ದೆ. ಈಗ ಯೋಚನೆ ಮಾಡಿ ಹೆಜ್ಜೆ ಇಡುವುದನ್ನು ಕಲಿತಿದ್ದೇನೆ.
- ಸಿನಿಮಾ ರಂಗ ಹೆಣ್ಣು ಮಕ್ಕಳಿಗೆ ಕಷ್ಟಅಲ್ವಾ ಎಂದು ನನ್ನನ್ನು ಕೇಳುತ್ತಾರೆ. ಅದಕ್ಕೆ ನಾನು ಹೇಳುತ್ತೇನೆ, ನಾವು ಎಲ್ಲಿ ಹೇಗಿರುತ್ತೇವೆ ಅನ್ನುವುದು ಮುಖ್ಯ. ಪರಿಸ್ಥಿತಿಯನ್ನು ಮಾತಿನ ಮೂಲಕ, ವರ್ತನೆ ಮೂಲಕ ನಿಭಾಯಿಸುವುದು ಕಲಿತರೆ ಎಲ್ಲವೂ ನಮ್ಮ ಸಾಧನೆಗೆ ಮೆಟ್ಟಿಲಾಗುತ್ತದೆ.