ವಯನಾಡ್‌ನಲ್ಲಿ ಎರಡು ದಿನದಲ್ಲಿ ಏನೆಲ್ಲ ನೋಡಬಹುದು?

ಪ್ರಕೃತಿ ಸೌಂದರ್ಯದ ಪರಿಯಿಂದಲೂ ದೇವರ ನಾಡು ಎಂಬ ಕೀರ್ತಿಗೆ ಪಾತ್ರವಾಗಿರಬಹುದು ಕೇರಳ. ದೇವಸ್ಥಾನಗಳ ನಡುವೆ ಇಲ್ಲಿಯ ನಿಸರ್ಗದ ಸೊಬಗು ಎಂಥ ಅರಸಿಕನನ್ನೂ ರಸಿಕನ್ನಾಗಿಸುತ್ತದೆ. ಅಷ್ಟಕ್ಕೂ ಈ ರಾಜ್ಯದ ವಯನಾಡಿನಲ್ಲಿ ಏನೇನನ್ನುನೋಡಬಹುದು?

Best Places to Visit in Wayanad in 2 Days

ಬೆಳಗ್ಗೆ ಕಣ್ಣುಜ್ಜಿಕೊಂಡು ಎದ್ದರೆ ಮೂಗಿಗೆ ಅಡರುವ ಕಾಡಿನ ಘಮ, ಕಣ್ಣು ಹಾಯಿಸಿದಲ್ಲೆಲ್ಲ ಹಸಿರು ರಾಶಿ, ಅಲ್ಲಲ್ಲಿ ಭತ್ತದ ಗದ್ದೆ, ಕಾಫಿ ತೋಟ. ಕಣ್ಮುಚ್ಚಿದರೂ ಹಸಿರು, ಕಣ್ಣು ಬಿಟ್ಟರೂ ಹಸಿರು. ಇದು ವಯನಾಡು. ಹಸಿರು ಸಿರಿಯ ಸಮೃದ್ಧ ತಾಣ. ನಿಮ್ಮ ಟೆನ್ಶನ್‌, ಆಫೀಸ್‌ ತಲೆಬಿಸಿ ಎಲ್ಲ ಸೈಡಿಗಿಟ್ಟು ಹಾಯಾಗಿ ಕಳೆಯಬಹುದಾದ ತಾಣ. ಇಲ್ಲಿರೋ ಹಸಿರಲ್ಲಿ ಕಳೆದುಹೋದ್ರೆ ಕಳೆದು ಹೋದ ಉತ್ಸಾಹ ವಾಪಾಸ್‌ ಬರದೇ ಇದ್ರೆ ಕೇಳಿ. ಬೆಳಗ್ಗೆ ಸಂಜೆ ದಟ್ಟವಾದ ಮಂಜು.  ವಯನಾಡಿಗೆ ಹಿಂದೆ ವಾಯಲ್‌ ನಾಡು ಆಗಿತ್ತು. ವಾಯಲ್‌ ನಾಡು ಅಂದ್ರೆ ಭತ್ತದ ಗದ್ದೆ ಅನ್ನೋ ಅರ್ಥ.  ನೀವೊಮ್ಮೆ ವಯನಾಡ್‌ ಕಡೆ ಡ್ರೈವ್‌ ಮಾಡಿದರೆ ಈ ಜಾಗಕ್ಕಿರುವ ಹೆಸರಿಗೂ ರಿಯಲ್‌ ಆಗಿ ಅಲ್ಲಿರೋದಕ್ಕೂ ಎಷ್ಟು ಸಾಮ್ಯ ಇದೆ ಅನ್ನೋದು ಗೊತ್ತಾಗುತ್ತೆ. ಬೆಂಗಳೂರಿಂದ ಇಲ್ಲಿಗೆ ಬರಲು ಎರಡು ದಾರಿಯಿದೆ. ಒಂದು ಬಂಡಿಪುರದ ಮೂಲಕ ಬರುವ ದಾರಿ ಇದು ಸಮೀಪದ್ದು. ಇನ್ನೊಂದು ಮಾನಂತವಾಡಿಯ ಮೂಲಕ ಹೋಗುವ ದಾರಿ. ಇದು ಸ್ವಲ್ಪ ದೂರ. ಹೆಚ್ಚಿನವರು ಬಂಡೀಪುರ ಮಾರ್ಗವಾಗಿಯೇ ವಯನಾಡಿಗೆ ಬರುತ್ತಾರೆ. ಬಂಡೀಪುರ ಕಾಡೊಳಗಿನಿಂದ ಹೋಗುವ ದಾರಿಯೇ ಚಂದ. ನಡು ನಡುವೆ ಜಿಂಕೆ, ಕಾಡಾನೆಗಳು ಕಾಣ ಸಿಗುತ್ತವೆ. ಮಾಲಿನ್ಯದ ಲವವೇಶವೂ ಇಲ್ಲದ ಶುದ್ಧ ಹವೆ. ಆಗಾಗ ಸಣ್ಣಗೆ ಹನಿಯುವ ಮಂಜು. ಕಾಡು ದಾರಿಯಲ್ಲಿ ನಿಧಾನವಾಗಿ ಚಲಿಸಬೇಕಾದ್ದು ಕಡ್ಡಾಯ. ಒಟ್ಟು ಮೂರು ಪಟ್ಟಣಗಳು ವಯನಾಡು ಜಿಲ್ಲೆಯಲ್ಲಿವೆ. ಕಲ್ಪೆಟ್ಟ, ಮಾನಂತವಾಡಿ ಮತ್ತು ಸುಲ್ತಾನಬತ್ತೇರಿ. ಜೊತೆಗೆ ವೈತಿರಿ ಎಂಬ ಊರೂ ಸಖತ್‌ ಫೇಮಸ್‌.


1. ಎಡಕಲ್ಲು ಗುಡ್ಡ
ಪುಟ್ಟಣ್ಣ ಕಣಗಾಲರ ‘ಎಡಕಲು ಗುಡ್ಡದ ಮೇಲೆ’ ಸಿನಿಮಾ ತುಂಬ ಫೇಮಸ್‌. ಆ ಸಿನಿಮಾ ಶೂಟಿಂಗ್‌ ಆದ ಜಾಗ ಇದು. ನೀವು ಬಂಡೀಪುರ ದಾರಿಯಾಗಿ ಬಂದರೆ ಅಲ್ಲಿಂದ ಇಲ್ಲಿಗೆ ಕೇವಲ 33 ಕಿಮೀಗಳ ಹಾದಿ. ಆದರೆ ಕಾಡು ದಾರಿಯಾಗಿ ಬರಬೇಕು. ಕಾಡುಪ್ರಾಣಿಗಳ ಸಂಚಾರ ಹಗಲು ಹೊತ್ತೂ ಇರುವ ಕಾರಣ ನಿಧಾನಕ್ಕೆ ಚಲಿಸಬೇಕಾದ್ದು ಕಡ್ಡಾಯ. ಹಾಗಾಗಿ 33 ಕಿಮೀ ದೂರ ಕ್ರಮಿಸಲು ನಿಮಗೆ 1 ಗಂಟೆ ಬೇಕು. ಒಂದು ಚಿಕ್ಕ ಊರಲ್ಲಿ ಗಾಡಿ ನಿಲ್ಲಿಸಿದರೆ 4000 ಅಡಿಗಳ ಎತ್ತರದಲ್ಲಿ ದೊಡ್ಡ ಬಂಡೆ ಕಾಣುತ್ತದೆ. ಅಬ್ಬಾ, ಅಷ್ಟು ದೂರ ಏರಬೇಕಾ ಅನ್ನೋದನ್ನು ನೆನೆದು ಕೆಲವರಿಗೆ ಎದೆ ಧಸಕ್ಕೆನ್ನಬಹುದು. ಆದರೆ ಕಾಫಿ ತೋಟಗಳ ನಡುವಿನ ಏರು ಹಾದಿ ನಿಮ್ಮನ್ನು ಅಷ್ಟಾಗಿ ದಣಿಯಲು ಬಿಡುವುದಿಲ್ಲ. ತಂಪಾದ ಹವೆ ಮನಸ್ಸನ್ನು ಹಾಯಾಗಿಡುತ್ತದೆ.

6000 ವರ್ಷಗಳ ಹಿಂದೆ ನಿಯೋಲಿಥಿಕ್‌ ಮಾನವ ಪರಿವಾರ ಸಮೇತ ಇಲ್ಲಿ ವಾಸಿಸುತ್ತಿದ್ದ. ಅವರ ವಾಸ, ಬದುಕು ಕಣ್ಣಿಗೆ ಕಟ್ಟುವ ಹಾಗೆ ಕಾಣುತ್ತದೆ.  ಈ ಪ್ರಕೃತಿ ನಿರ್ಮಿತ ಗುಹೆಯೊಳಗೆ ಗಾಳಿ, ಬೆಳಕು ಇದೆ. ಮಳೆಯಿಂದ ರಕ್ಷಣೆ ಪಡೆಯುವ ವ್ಯವಸ್ಥೆಯಿದೆ. ಗುಹೆಯ ಬಂಡೆಗಳಲ್ಲಿ ಆದಿ ಮಾನವನ ಚಿತ್ರಗಳಿವೆ. ಒಂದೊಂದು ಚಿತ್ರವೂ ಆ ಕಾಲದ ಮನುಷ್ಯರ ನಂಬಿಕೆ, ಆರಾಧನೆ, ವೇಷ ಭೂಷಣ ಎಲ್ಲವನ್ನೂ ರಿವೀಲ್‌ ಮಾಡುತ್ತದೆ.

ನಾಗರಹೊಳೆಯಲ್ಲಿ ಒಂದು ಮುಂಜಾನೆ

2. ಬಾಣಾಸುರ ಸಾಗರ ಡ್ಯಾಮ್‌
ಆಧುನಿಕ ಡ್ಯಾಮ್‌ಗಳನ್ನು ಹಲವು ಕಡೆ ನೋಡಿರಬಹುದು. ಆದರೆ ಬಾಣಾಸುರ ಸಾಗರ ಹಳೆಯ ಕಾಲದ ಡ್ಯಾಮ್‌ ಕಟ್ಟುವ ಕೌಶಲ್ಯಕ್ಕೆ ಸಾಕ್ಷಿಯಂತಿದೆ. ಇಲ್ಲಿನ ಅಣೆಕಟ್ಟು ಕಟ್ಟಿರುವುದು ಮಣ್ಣು ಮತ್ತು ಕಲ್ಲುಗಳನ್ನು ಬಳಸಿ. ಈ ವಿಧಾನದಲ್ಲಿ ನಿರ್ಮಿಸಲಾದ ದೇಶದ ಏಕೈಕ ಅತೀ ದೊಡ್ಡ ಡ್ಯಾಮ್‌ ಇದು. ಎತ್ತರದಲ್ಲಿರುವ ಈ ಅಣೆಕಟ್ಟು ಏರಿ ಒಂದು ಸಂಜೆ ಕಳೆಯಬಹುದು. ನೀರಂಚಿನಿಂದ ತಂಪು ಗಾಳಿ ಮನಸ್ಸಿನ ಹುರುಪು ಹೆಚ್ಚಿಸುತ್ತದೆ. ಬೆಟ್ಟವೇರುತ್ತಾ ಹೋದರೆ ಚೆನ್ನ. ವಾಹನ ವ್ಯವಸ್ಥೆಯೂ ಇದೆ.

3. ಪೂ ಕೊಡೆ ಲೇಕ್‌
ಇದೊಂಥರಾ ಇಂಡಿಯಾ ಮ್ಯಾಪ್‌ ಥರ ಇರುವ ಸರೋವರ. ಬೋಟಿಂಗ್‌ ಮಾಡುತ್ತಾ ಚೇತೋಹಾರಿ ಅನುಭವ ಪಡೆಯಬಹುದು.

4. ವೈಲ್ಡ್‌ಲೈಫ್‌ ಸ್ಯಾಂಚುರಿ
ಎರಡು ಕಡೆ ಇಲ್ಲಿನ ದಟ್ಟ ಕಾಡಿನೊಳಗೆ ಸಂಚಾರ ಮಾಡಲು ಅವಕಾಶವಿದೆ. ಮಾತುಂಗ ಮತ್ತು ತೋಳ್ಪೆಟ್ಟಿಗಳಲ್ಲಿ. ಕಾಡಿನೊಳಗೆ ಸಫಾರಿ ಹೋಗಿ ಕಾಡಿನ ವಾತಾವರಣ ಸವಿಯುವ ಜೊತೆಗೆ ಕಾಡು ಪ್ರಾಣಿಗಳನ್ನೂ ನೋಡಬಹುದು.

ರಾಜಸ್ಥಾನದಲ್ಲಿ ಸೋಲೋ ಟ್ರಿಪ್ ಮಾಡಿದ ಸಿಂಧು

5. ಜಲಪಾತಗಳು
ಸೂಚಿಪರ ಫಾಲ್ಸ್‌ ಹಾಗೂ ಮೀನ್‌ಮುತ್ತಿ ಎಂಬೆರಡು ಸುಂದರ ಜಲಪಾತಗಳು ದಟ್ಟ ಕಾನನದ ನಡುವೆ ಇವೆ. ಸಮಯ ಇದ್ದರೆ ಇಲ್ಲಿಗೂ ವಿಸಿಟ್‌ ಮಾಡಬಹುದು.
ಇವಲ್ಲದೇ ಚೇಂಬರ ಪೀಕ್‌, ಕುರುವಾ ಐಲ್ಯಾಂಡ್‌ ಮೊದಲಾದ ಜಾಗಗಳಿವೆಯಾದರೂ ಅವುಗಳಿಗೆ ಪ್ರವೇಶ ನಿಷೇಧಿಸಲಾಗಿದೆ. ಮಾನಂತವಾಡಿಯ ಭತ್ತದ ಗದ್ದೆಗಳ ನಡುವಿನ ಹೋಂಸ್ಟೇಯಲ್ಲಿದ್ದುಕೊಂಡೇ ಒಂದು ದಿನ ಕಳೆಯಬಹುದು.

Latest Videos
Follow Us:
Download App:
  • android
  • ios