ಪರ್ಫೆಕ್ಟ್ ಸಂಬಂಧ ಎಂಬುದು ಇಲ್ಲ, ಅದು ಬೇಕಾಗಿಯೂ ಇಲ್ಲ
ಸಾಮಾನ್ಯವಾಗಿ ಅಸ್ತಿತ್ವದಲ್ಲಿಲ್ಲದ ಪರ್ಫೆಕ್ಟ್ ಸಂಬಂಧದ ಕುರಿತ ನಮ್ಮ ಅತಿಯಾದ ನಿರೀಕ್ಷೆಗಳೇ ನಮ್ಮನ್ನು ಹೀಗೆ ನೋಯಿಸುವುದು. ನಮ್ಮ ಇಂಥ ವಿಪರೀತದ ನಿರೀಕ್ಷೆಗಳಿಂದಾಗಿ ಸಂಬಂಧಕ್ಕೆ ದೊಡ್ಡ ಮಟ್ಟದ ಹಾನಿಯೇ ಆಗುತ್ತದೆ. ಅದನ್ನು ಸರಿಪಡಿಸಬೇಕೆಂದರೆ ವಾಸ್ತವಕ್ಕೆ ಬರಬೇಕು. ಪರ್ಫೆಕ್ಟ್ ಸಂಬಂಧವೆಂಬುದಿಲ್ಲ ಎಂಬ ಜ್ಞಾನೋದಯವಾಗಬೇಕು. ಹಾಗೆ ನೋಡಿದರೆ, ನಮಗೆ ಪರ್ಫೆಕ್ಟ್ ಸಂಬಂಧದ ಅಗತ್ಯವೇ ಇಲ್ಲ. ಏಕೆ ಗೊತ್ತಾ?
ಚಾಲೆಂಜ್ ಇಲ್ಲದೆ ಬೆಳವಣಿಗೆಯಿಲ್ಲ
ಸಂಬಂಧವೇ ಆಗಲಿ, ವ್ಯಕ್ತಿಗಳೇ ಆಗಲಿ- ತಮ್ಮ ಬದುಕಿನ ಹಾದಿಯಲ್ಲಿ ಸವಾಲುಗಳೇ ಇಲ್ಲವೆಂದರೆ ಬೆಳೆಯಲು ಸಾಧ್ಯವಿಲ್ಲ. ಅದರಲ್ಲೂ ಸಂಬಂಧದಲ್ಲಿ ಜೋಡಿ ಎತ್ತಾಗಿರುವ ನಿಮ್ಮಲ್ಲಿ ಒಬ್ಬರು ಈ ಬೆಳವಣಿಗೆಯಲ್ಲಿ ಹಿಂದೆ ಬಿದ್ದರೂ ಸಂಬಂಧವೇ ಹಿಂದೆ ಬೀಳುತ್ತದೆ ಇಲ್ಲವೇ, ಅದರಲ್ಲಿ ಬಿರುಕು ಮೂಡುತ್ತದೆ. ಕಾಲ ಕಳೆದಂತೆಲ್ಲ ನಾವು ಪ್ರಬುದ್ಧರಾಗಬೇಕು ಹಾಗೂ ನಮ್ಮ ನಡುವಿನ ಬಾಂಡಿಂಗ್ ಗಟ್ಟಿಯಾಗಬೇಕು. ಏರಿಳಿತಗಳಿಲ್ಲದೆ ಇದು ಸಾಧ್ಯವಿಲ್ಲ.
ಸಂಗಾತಿಯೊಂದಿಗೆ ಹೀಗ್ ನಡಕೊಂಡ್ರೆ ಸಂಬಂಧ ಸುಲಭ, ಸುಂದರ
ಪ್ರೀತಿಯ ಮೌಲ್ಯಎಲ್ಲವೂ ಪರ್ಫೆಕ್ಟ್ ಆಗಿದೆ ಎಂದುಕೊಂಡ ಸಂಬಂಧದಲ್ಲಿ ಇರುವ ಜೋಡಿಗೆ ಒಬ್ಬರದೊಬ್ಬರ ಬೆಲೆ ಅರಿವಿರುವುದಿಲ್ಲ. ಅವರ ನಿಜವಾದ ವ್ಯಕ್ತಿತ್ವದ ಅನಾವರಣವೂ ಆಗದೆ ಕೇವಲ ತೋರಿಸಿಕೊಳ್ಳಲಿಚ್ಚಿಸಿದ ಮುಖವಷ್ಟೇ ಕಾಣುತ್ತಿರುತ್ತದೆ. ಆದರೆ, ಸಂಬಂಧದಲ್ಲಿ, ಜೀವನದಲ್ಲಿ ಏರಿಳಿತಗಳು ಬಂದಾಗ ಅದಕ್ಕೆ ಇಬ್ಬರೂ ಹೇಗೆ ಪ್ರತಿಕ್ರಿಯಿಸುತ್ತೀರಿ, ಹೇಗೆ ಕಷ್ಟಕಾಲವನ್ನು ಎದುರಿಸುತ್ತೀರಿ, ಒಬ್ಬರಿಗೊಬ್ಬರು ಹೇಗೆ ನೆರವಾಗುತ್ತೀರಿ ಎಂಬ ಆಧಾರದಲ್ಲಿ ಬಾಂಡಿಂಗ್ ಚೆನ್ನಾಗಿ ಬೆಳೆವ ಜೊತೆಗೆ, ಇಬ್ಬರೂ ಒಬ್ಬರ ಮೌಲ್ಯವನ್ನು ಮತ್ತೊಬ್ಬರು ಅರಿತುಕೊಳ್ಳುವಿರಿ.
ಸಂವಹನ
ಪರ್ಫೆಕ್ಟ್ ರಿಲೇಶನ್‌ಶಿಪ್‌ನಂತೆ ಕಾಣುವ ಸಂಬಂಧದಲ್ಲಿ ಸಾಮಾನ್ಯವಾಗಿ ಸಂವಹನ ಕೊರತೆ ಇರುತ್ತದೆ. ಜಗಳ, ವಾದಗಳನ್ನು ದೂರವಿಡುವ ಸಲುವಾಗಿ ಅವರು ಯಾವುದೇ ವಿಷಯವನ್ನೂ ಮಾತನಾಡಿಕೊಳ್ಳಲಾರರು. ಆದರೆ, ಜೋಡಿಗಳು ಮಾತನಾಡಿಕೊಂಡಾಗ ಜಗಳವಾಗಬಹುದು, ವಾದವಾಗಬಹುದು- ಆದರೆ, ಸಮಸ್ಯೆಗಳು ಕಾಲಾಂತರದಲ್ಲಿ ದೊಡ್ಡದಾಗಿ ಬೆಳೆಯುವುದಿಲ್ಲ. ಅವನ್ನು ಮಾತಿನ ಮೂಲಕ ಹೊರ ಹಾಕಿದ್ದರಿಂದ ಮನಸ್ಸಿನಲ್ಲಿ ಮುನಿಸುಗಳು ಉಳಿಯುವುದಿಲ್ಲ. ಸಮಸ್ಯೆಗಳನ್ನು ಮಾತನಾಡಿಕೊಂಡಾಗ ಮಾತ್ರ ಅವುಗಳಿಗೆ ಪರಿಹಾರವನ್ನೂ ಕಂಡುಕೊಳ್ಳಲು ಸಾಧ್ಯ. ಮಾತುಕತೆ ಚೆನ್ನಾಗಿರುವ ಸಂಬಂಧ ಮಾತ್ರ ನೈಜವಾಗಿರುತ್ತದೆ.
ಹ್ಯಾಪಿ ಎಂಡಿಂಗ್
ಪರ್ಫೆಕ್ಟ್ ಸಂಬಂಧಗಳಂತೆ ಕಂಡವು ಕೆಲ ಸಮಯದಲ್ಲೇ ಕೆಟ್ಟದಾಗಿ ಎಂಡ್ ಆಗುತ್ತವೆ. ಏಕೆಂದರೆ, ಹೆಚ್ಚು ಕಾಲ ಕೇವಲ ಒಳ್ಳೆ ಮಾತುಗಳನ್ನೇ ಆಡುತ್ತಾ, ರೊಮ್ಯಾನ್ಸ್ ಮಾಡುತ್ತಾ ಇರಲಾಗುವುದಿಲ್ಲ. ಬದುಕಿನಲ್ಲಿ ಉಪ್ಪು, ಹುಳಿ, ಖಾರ, ಸಿಹಿ, ಕಹಿ ಎಲ್ಲವೂ ಇದ್ದಾಗಲೇ ಅದು ರುಚಿಕರವಾಗಿರಲು ಸಾಧ್ಯ. ದಿನಾ ಸಿಹಿಯನ್ನೇ ತಿಂದರೆ ಕಾಯಿಲೆ ಬರುವುದು ಖಂಡಿತಾ. ಅಲ್ಲದೆ, ಮಾತನಾಡದೇ ಮನಸ್ಸಿನಲ್ಲೇ ಉಳಿದುಕೊಂಡ ಸಮಸ್ಯೆಗಳೆಲ್ಲವೂ ಒಳಗೇ ದೊಡ್ಡದಾಗಿ ಕಡೆಗೊಂದು ದಿನ ಸ್ಪೋಟಗೊಳ್ಳುತ್ತವೆ. ಆದರೆ, ಸಾಮಾನ್ಯ ಸಂಬಂಧವು ಎಲ್ಲ ಏಳು ಬೀಳುಗಳೊಂದಿಗೆ ಧೀರ್ಘಕಾಲದ ಹಾದಿ ಸವೆಸುತ್ತದೆ.
ಈ ಬೇಸಿಗೆಯಲ್ಲಿ ಮೂವಿಗಳ ಮೂಲಕ ಮಾಡಿ ವರ್ಚುಯಲ್ ಟ್ರಾವೆಲ್
ಬಲವಿಲ್ಲದ ಪರ್ಫೆಕ್ಷನ್ಪರ್ಫೆಕ್ಟ್ ಸಂಬಂಧಗಳಂತೆ ಕಾಣುವ ಸಂಬಂಧಗಳಲ್ಲಿ ಜೋಡಿಗಳ ಮಧ್ಯೆ ನಿಜವಾದ ಕನೆಕ್ಷನ್ ಹಾಗೂ ಬಾಂಡಿಂಗ್ ಇರುವುದಿಲ್ಲ. ಅವರದೇನಿದ್ದರೂ ಸೂಪರ್‌ಫಿಶಿಯಲ್ ಕನೆಕ್ಷನ್. ಎಲ್ಲ ಸರಿಯಾಗಿಯೇ ಇರಬೇಕೆಂದು ನಟಿಸುತ್ತಾರೆ. ಹಾಗಾಗಿಯೇ ಸಂಬಂಧದಲ್ಲಿ ಪರ್ಫೆಕ್ಷನ್ ಹುಡುಕಬೇಡಿ. ಇಂಪರ್ಫೆಕ್ಷನ್ನನ್ನು ಒಪ್ಪಿಕೊಳ್ಳುವ ಗುಣವೇ ಸಂಬಂಧಕ್ಕೆ ಬಲ ತರುವುದು ಎಂಬುದನ್ನು ನೆನಪಿಡಿ.