ಮದುವೆಯಾದ್ರೆ ಹೆಣ್ಣಿಗೆ ಮಾತ್ರವಲ್ಲ, ಗಂಡಿಗೂ ತಪ್ಪೋಲ್ಲ ತಾಪತ್ರಯ
ಬ್ಯಾಚುಲರ್ ಹುಡುಗರು ಇದನ್ನು ಎಚ್ಚರಿಕೆ ಎಂದುಕೊಳ್ಳುತ್ತಾರೋ, ಬೆದರಿಕೆ ಎಂದುಕೊಳ್ಳುತ್ತಾರೋ ಗೊತ್ತಿಲ್ಲ, ಆದ್ರೆ ಮದುವೆಯಾದ ಯುವಕರು ಹಲವಾರು ಸಂಕಷ್ಟಗಳನ್ನೆದುರಿಸುತ್ತಾರೆ ಎಂಬುದೇ ರಿಯಾಲಿಟಿ
ಸಾಮಾನ್ಯವಾಗಿ ಮದುವೆಯೆಂಬುದು ಹೆಣ್ಣಿನ ಬಾಳನ್ನು ಹೇಗೆಲ್ಲ ಬದಲಾಯಿಸುತ್ತದೆ, ಅಪ್ಪ ಅಮ್ಮನ ಮನೆ ಬಿಟ್ಟು ಮತ್ತೊಬ್ಬರ ಮನೆಗೆ ಹೋಗಿ ತನ್ನದು, ತನ್ನವರೆಂದುಕೊಂಡು ಬದುಕುವ ಕಷ್ಟತುಮುಲಗಳ ಬಗ್ಗೆ ನಾವೆಲ್ಲ ಮಾತಾಡುತ್ತೇವೆ. ಮಾಡಿಕೊಳ್ಳಬೇಕಾದ ಹೊಂದಾಣಿಕೆಗಳನ್ನು ಹೇಳಿ ಹೆಣ್ಣಿನ ತ್ಯಾಗವನ್ನು ಮೆರೆಸುತ್ತೇವೆ. ಅವೆಲ್ಲವೂ ನಿಜವೇ. ಆದರೆ, ಹೆಣ್ಣಿನ ಒದ್ದಾಟಗಳನ್ನು ಹೇಳುವ ಭರದಲ್ಲಿ ಮದುವೆಯಿಂದ ಗಂಡಸರ ಬದುಕಿನಲ್ಲಿ ಆಗುವ ಬದಲಾವಣೆಗಳು, ಅವರು ಪಡಬೇಕಾದ ಪಡಿಪಾಟಲುಗಳನ್ನು ಮರೆತೇ ಬಿಡುತ್ತೇವೆ. ಈ ಬಗ್ಗೆ ನವವಿವಾಹಿತ ಗಂಡಸರು ತಮ್ಮ ಹೆಣಗಾಟಗಳನ್ನಿಲ್ಲಿ ಹಂಚಿಕೊಂಡಿದ್ದಾರೆ. ಅವೇನೆಂದು ಓದೋಣ ಬನ್ನಿ.
ಎತ್ತು ಏರಿಗೆ, ಕೋಣ ನೀರಿಗೆ
'ನನ್ನದು ಲವ್ ಮ್ಯಾರೇಜ್. ಮದುವೆಯಾದ ಮೊದಲ ದಿನದಿಂದಲೇ ಅಮ್ಮ ಹಾಗೂ ಪತ್ನಿಗೆ ಸರಿ ಬೀಳಲಿಲ್ಲ. ಅಮ್ಮನಿಗೆ ತಾನು ನೋಡಿದ ಹುಡುಗಿಯನ್ನು ನಾನು ಮದುವೆಯಾಗಲಿಲ್ಲ ಎಂಬುದೇ ಸಮಸ್ಯೆಯಾದರೆ, ಪತ್ನಿಗೆ, ನಾನು ತಾಯಿಯ ಆಯ್ಕೆಯನ್ನು ಧಿಕ್ಕರಿಸಿ ಆಕೆಯನ್ನೇ ಆಯ್ಕೆ ಮಾಡಿದೆ ಎಂಬ ಹೆಮ್ಮೆ ಹೆಚ್ಚಾಯಿತು. ಇದರಿಂದ ಇಬ್ಬರ ಮಧ್ಯೆ ಸದಾ ಇಗೋ ಕ್ಲ್ಯಾಶ್. ನನ್ನ ಜೀವನದ ಇಬ್ಬರು ಪ್ರಮುಖ ಮಹಿಳೆಯರ ನಡುವೆ ಕೋಲ್ಡ್ ವಾರ್ ಆಗುತ್ತಿದ್ದರೆ ಅಥವಾ ಜೋರಾಗಿಯೇ ಜಗಳವಾಡುತ್ತಿದ್ದರೂ, ಯಾರ ಪರವೂ ವಹಿಸಲಾಗದೆ, ಯಾರೊಬ್ಬರನ್ನೂ ಖುಷಿಯಾಗಿಡಲಾಗದೆ ನಾನು ವಿಲವಿಲ ಒದ್ದಾಡುತ್ತಿದ್ದೆ. ಇದರಿಂದ ಖಿನ್ನತೆ ಆವರಿಸಿತು.'
ಪ್ರೀತಿಯ ತೀವ್ರತೆಯಷ್ಟೇ ವಿರಹವೂ ಸುಖವೇ!...
ಸ್ವಾತಂತ್ರ್ಯಹರಣ
'ಮದುವೆಗೂ ಮುನ್ನ ಗೆಳೆಯರನ್ನು ಭೇಟಿಯಾಗಲು, ಲೇಟ್ ನೈಟ್ ಪಾರ್ಟಿಗಳಿಗೆ ಹೋಗಲು, ಟ್ರಿಪ್ ಹೋಗಲು ನಾನು ಯಾರ ಅುಮತಿ ಪಡೆಯಬೇಕಿರಲಿಲ್ಲ. ಎಱಡೆರಡು ಬಾರಿ ಯೋಚಿಸಬೇಕಾಗಿರಲಿಲ್ಲ. ಆದರೆ, ಮದುವೆಯು ಬದುಕನ್ನು ತಿರುವಿ ಮುರುವಿ ಹಾಕಿತು. ನನ್ನ ಪತ್ನಿಗೆ ಆಕೆಯನ್ನು ಹೊರ ಕರೆದುಕೊಂಡು ಹೋದಾಗ ನನ್ನ ಗೆಳೆಯರೊಂದಿಗೆ ಮಾತನಾಡಲು ಕಂಫರ್ಟ್ ಎನಿಸುವುದಿಲ್ಲ, ನಾನೊಬ್ಬನೇ ಹೋಗುತ್ತೇನೆಂದರೆ ಸಿಟ್ಟು ಬರುತ್ತದೆ. ಯಾವುದೇ ಪ್ಲ್ಯಾನ್ ಮಾಡಬೇಕೆಂದರೂ ಆಕೆಯ ಬಳಿ ಕ್ರಾಸ್ ಚೆಕ್ ಮಾಡಬೇಕು, ರೂಟಿನ್ ಬದಲಿಸಬೇಕು, ಅವಳ ಇಷ್ಟಕಷ್ಟ ಆಲಿಸಬೇಕು. ಇದೆಲ್ಲ ದೂರು ಅಂತ ತಿಳಿಯಬೇಕಿಲ್ಲ. ಆದರೆ, ನಾನು ಮದುವೆಗೂ ಮುನ್ನ ಇದ್ದ ಕೇರ್‌ಫ್ರೀ ದಿನಗಳನ್ನು, ಸ್ವಾತಂತ್ರ್ಯವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ.'
ಜವಾಬ್ದಾರಿ ಎಂಬ ಹೆಗಲೇರಿದ ಬೇತಾಳಗಳು
'ಮದುವೆಯು ಹುಡುಗನಾಗಿರುವವನನ್ನು ಪುರುಷನಾಗಿಸುತ್ತದೆ. ಅಲ್ಲಿಯವರೆಗೂ ಹೇಗಿದ್ದರೂ ಸರಿ, ಈಗ ಸಡನ್ ಆಗಿ ಇಡೀ ಕುಟುಂಬದ ಜವಾಬ್ದಾರಿ, ಅವರ ಸಂತೋಷದ ಕೀಲಿಕೈ ನಮ್ಮ ಕೈಗೆ ಬಂದು ಕುಳಿತುಕೊಳ್ಳುತ್ತದೆ. ಸದಾ ಅವರ ಆರೋಗ್ಯ ನೋಡಿಕೊಳ್ಳುವುದು, ಆಶೆಗಳನ್ನು ಪೂರೈಸುವುದು, ಅವರ ಕೆಲಸಗಳಲ್ಲಿ ಭಾಗಿಯಾಗುವುದು ಹೆಚ್ಚುವರಿ ಜವಾಬ್ದಾರಿಯಾಗಿ ಹೆಗಲೇರುತ್ತದೆ. ಮುಂಚೆ ಕೆಲಸ ಬಿಡಬೇಕೆನಿಸಿದರೆ ಚಿಂತಿಸಬೇಕಾಗಿರಲಿಲ್ಲ. ಈಗ ಆ ಯೋಚನೆಯೇ ಹೆದರಿಸುತ್ತದೆ. ಅದರಲ್ಲೂ ಈಗ ಪತ್ನಿ ಗರ್ಭಿಣಿಯಾಗಿದ್ದು, ಮಗು ಎಂದ ಮೇಲೆ ಈ ಜವಾಬ್ದಾರಿಗಳು ಹತ್ತು ಪಟ್ಟು ಹೆಚ್ಚಾಗುತ್ತವೆ ಎಂಬುದು ನನ್ನಲ್ಲಿರುವ ಪುಟ್ಟ ಬಾಲಕನನ್ನು ಸಂಪೂರ್ಣ ಮರೆಯಾಗಿಸುತ್ತಿದೆ.'
ಬಿಟ್ಟು ಹೋಗಿದ್ದು ಸಣ್ಣ ವಿಷಯಕ್ಕೆ; ವೇದನೆ ಮಾತ್ರ ಕೊನೆತನಕ!...
ಆಕೆಯ ಭೂತ ಕಾಡುತ್ತಿದೆ
'ನನ್ನ ಪತ್ನಿ ಆಕೆಯ ಭೂತಕಾಲದ ಬದುಕಿನ ಬಗ್ಗೆ ಮದುವೆಯಾದ ಬಳಿಕ ಹೇಳಿಕೊಂಡಳು. ಇದು ನನ್ನನ್ನು ಆಶ್ಚರ್ಯಕ್ಕೆ ಈಡು ಮಾಡಿದಷ್ಟೇ ಆಘಾತ ತಂದಿತು. ಆಕೆ ಇದನ್ನು ವಿವಾಹಕ್ಕೂ ಮುನ್ನವೇ ಏಕೆ ಹೇಳಲಿಲ್ಲ ಎಂಬ ಪ್ರಶ್ನೆಯಿಂದಾಗಿ ನಾನು ಶಾಂತಿ ಕಳೆದುಕೊಂಡೆ. ಹೀಗಾಗಿ, ವಿವಾಹದ ಆರಂಭದ ದಿನಗಳು ರೊಮ್ಯಾಂಟಿಕ್ ಆಗಿರುವ ಬದಲಿಗೆ ಜಗಳ, ವಾದಗಳಿಂದ ಕೂಡಿತ್ತು. ಸಧ್ಯ ವಿವಾಹವಾಗಿ 3 ವರ್ಷವಾಗಿದ್ದು, ಬದುಕು ಸರಿಯಾದ ಪಥದಲ್ಲಿ ಚಲಿಸುತ್ತಿದೆ.'
ಪತ್ನಿಯ ಪೋಷಕರೇ ತಲೆನೋವು
'ಎಲ್ಲ ವಿವಾಹಿತ ಜೋಡಿಗಳಂತೆ ನಾನು ಹಾಗೂ ಪತ್ನಿ ನಡುವೆ ಆಗಾಗ ಅಭಿಪ್ರಾಯ ಬೇಧಗಳು ಬರುತ್ತವೆ. ಅವು ತಾವಾಗಿಯೇ ಸರಿಯಾಗುತ್ತವೆ. ಆದರೆ, ನನಗೆ ಟೆನ್ಷನ್ ಆಗುವುದೇನೆಂದರೆ, ನಮ್ಮ ಸಂಬಂಧದಲ್ಲಿ ಆಗುವ ಇಂಚಿಂಚನ್ನೂ ಆಕೆ ತನ್ನ ಅಮ್ಮನಿಗೆ ಕರೆ ಮಾಡಿ ಹೇಳುವುದು. ಒಮ್ಮೆ ಆಕೆ ತನ್ನ ತಾಯಿಗೆ ಕರೆ ಮಾಡಿ ನಮ್ಮಿಬ್ಬರ ಆಹಾರ ಆಯ್ಕೆಗಳೆಷ್ಟು ಭಿನ್ನ ಎಂಬುದನ್ನು ಹೇಳುವುದು ಕೇಳಿಸಿಕೊಂಡೆ. ಮರುದಿನವೇ ಅತ್ತೆ ಕರೆ ಮಾಡಿ, ನಾನು ಎಂಥ ಆಹಾರ ತಿನ್ನಬೇಕೆಂದು ಗಂಟೆಗಟ್ಟಲೆ ಪಾಠ ಮಾಡಿದರು. ಸಂಬಂಧಗಳ ನಡುವಿನ ಕೆಲ ವಿಷಯಗಳು ಇಬ್ಬರ ನಡುವೆ ಮಾತ್ರ ಇರಬೇಕು ಎಂಬುದನ್ನು ಆಕೆಗೆ ಅರ್ಥ ಮಾಡಿಸುವುದು ಕಷ್ಟ.'
ಫೈನಾನ್ಸ್
'ನಾನು ಉಳಿಸುವುದರಲ್ಲಿ ನಂಬಿಕೆ ಇರಿಸಿದವನು. ಆಕೆ ಗಳಿಸಿದ್ದನ್ನು ಕೊಂಡುಕಳೆವ ಅಭ್ಯಾಸದವಳು. ಇದು ನಮ್ಮಿಬ್ಬರ ನಡುವೆ ಸದಾ ವಾಗ್ವಾದಕ್ಕೆ ಕಾರಣವಾಗುತ್ತದೆ. ಭವಿಷ್ಯದ ಯೋಚನೆಯೇ ಇಲ್ಲ ಅವಳಿಗೆ ಎಂಬುದು ನನ್ನ ಟೆನ್ಷನ್. ನಾನು ಜುಗ್ಗತನ ಮಾಡುತ್ತೀನೆಂದು ಅವಳ ಟೆನ್ಷನ್.'