ನಿನ್ನ ನೆನಪೇ ಇನ್ನೂ ಹಸಿರಾಗಿದೆ. ಈಗ ನಾವಿಬ್ಬರು ಜೊತೆಗಿಲ್ಲ. ದೂರಾದದ್ದೂ ಸಣ್ಣ ವಿಷಯಕ್ಕೆ. ಅಂದು ನೀನಾದರೂ ತಾಳ್ಮೆ ವಹಿಸಲಿಲ್ಲ. ನಾನಾದರೂ ನನ್ನ ಹಠವನ್ನ ಬಿಡಲಿಲ್ಲ. ಅದರಿಂದ ನಮ್ಮಿಬ್ಬರ ಸಂಬಂಧದಲ್ಲಿ ಮಹಾ ಬಿರುಕಾಯಿತು. ಜಗಳ ನಡೆದಾಗಲೆಲ್ಲ ಮತ್ತೆ ಮತ್ತೆ ಸೇರಿಕೊಳ್ಳುತ್ತಿದ್ದೆವು. ಆದರೀಗ ಹಾಗಾಗುವುದಿಲ್ಲ.

ನಿನ್ನ ಮನಸ್ಸು ಹೇಳಿದ್ದು ಕೇಳುವ ನಿನಗೆ ನಾನೊಬ್ಬ ತಪ್ಪಿತಸ್ಥನಂತೆ, ವಂಚಕನಂತೆ, ನಂಬಿಕೆ ದ್ರೋಹಿಯಂತೆ ಕಾಣಿಸಬಹುದು. ನನಗೆ ನೀನು ನಿಷ್ಠಾವಂತ ಪ್ರೇಮಿಯಂತೆ ಕಂಡರೂ ಮತ್ತೊಂದು ದೃಷ್ಠಿಯಲ್ಲಿ ‘ಕೇರ್ಲೆಸ್‌’ ಹುಡುಗಿ. ಪ್ರೀತಿ ಬಿಟ್ಟುಕೊಡಲು ಮನಸ್ಸಿಲ್ಲ. ಆದರೆ ಭಲವಂತವಾಗಿ ಪ್ರೀತಿಸಿಕೊಳ್ಳುತ್ತ, ‘ನಿನ್ನನ್ನ ಚಿನ್ನು, ಮುದ್ದು’ ಎಂದುಕೊಳ್ಳಲು ಸಾಧ್ಯವೂ ಆಗುತ್ತಿಲ್ಲ.

ಪ್ರೀತಿಯ ತೀವ್ರತೆಯಷ್ಟೇ ವಿರಹವೂ ಸುಖವೇ!

ಒಮ್ಮೊಮ್ಮೆ ‘ಹೋದರೆ ಹೋಗಲಿ’ ಅನಿಸಿದರೂ, ‘ಮತ್ತೆ ಬರಬಾರದೇ’ ಎಂದು ನಾನೇ ಅಂದುಕೊಳ್ಳುತ್ತೇನೆ. ಎಲ್ಲವನ್ನು ಮರೆತು ನೀನು ವಾಪಸ್‌ ಬಂದೇ ಬರುತ್ತೀಯ ಎಂಬ ನಂಬಿಕೆ ನನಗಿಲ್ಲ. ಅದು ನಡೆಯಬಹುದೆಂಬ ಸಣ್ಣ ಆಸೆಯನ್ನು ಇಟ್ಟುಕೊಂಡಿಲ್ಲ. ನೀನೇನು ಎಂಬುದು ನನಗೆ ಇಂಚಿಂಚು ತಿಳಿದಿದೆ. ಗೊತ್ತಿದ್ದರು ನಿರೀಕ್ಷೆ ಇಟ್ಟುಕೊಳ್ಳುವುದು ನೋವಿಗೆ ಆಹ್ವಾನ ಕೊಟ್ಟಂತೆ. ನೀನಾಗಲೀ, ನಾನಾಗಲೀ ಒಬ್ಬರನ್ನೊಬ್ಬರು ಟೀಕಿಸಿಬಾರದು. ಆದದ್ದು ಆಯಿತಷ್ಟೇ. ಮರೆತು ಬಿಡೋಣ.

ಹೊಸಜೀವನ ಇಬ್ಬರಿಗೂ ಸಿಗಲಿದೆ. ಕಠೋರ ವಾಸ್ತವದ ಸತ್ಯಗಳನ್ನು ಅರಿತು ಬದುಕಲು ಕಷ್ಟವಾಗಬಹದು. ಆದರೇನು ಮಾಡಲು ಸಾಧ್ಯ. ಅಂದುಕೊಂಡಂತೆ ಜೀವನದಲ್ಲಿ ನಡೆಯುವುದಿಲ್ಲ. ನಾವೇ ಹೊಂದಿಕೊಳ್ಳಬೇಕು. ಏನೇ ಆದರೂ ನಮ್ಮಿಬ್ಬರೆದೆಯಲ್ಲು ಗಾಢವಾದ ವೇದನೆ ಉಳಿದು ಬಿಡುವುದರಲ್ಲಿ ಅನುಮಾನವೇ ಇಲ್ಲ.