ಮನೆಯಲ್ಲೇ ಪ್ರೊಟೀನ್ ಬಾರ್ ಮಾಡಲು ಇಲ್ಲಿದೆ ಸಿಂಪಲ್ ರೆಸಿಪಿ!
ನಿಮಗೆ ಬೆಳಗ್ಗೆ ಬ್ರೇಕ್‌ಫಾಸ್ಟ್ ಮಾಡಲು ಟೈಮ್ ಇಲ್ವಾ, ಪರವಾಗಿಲ್ಲ. ಪ್ರೊಟೀನ್ ಬಾರ್ ತಿನ್ನಿ. ಮಧ್ಯಾಹ್ನ ಊಟ ಮಾಡೋಕೆ ಆಗದಷ್ಟು ಬ್ಯುಸಿ ಇದ್ದೀರಾ, ಚಿಂತೆ ಮಾಡ್ಬೇಡಿ ಪ್ರೊಟೀನ್ ಬಾರ್ ಇದೆಯಲ್ಲಾ..
ಎಷ್ಟೋ ಸಲ ಟೈಮ್‌ಗೆ ಸರಿಯಾಗಿ ಊಟ ಮಾಡಲಾಗುವುದಿಲ್ಲ. ತಿಂಡಿ ತಿನ್ನೋದು ಕಷ್ಟ.. ಆದರೆ ಹೀಗೆ ಇನ್ ಟೈಮ್‌ಗೆ ಊಟ ತಿಂಡಿ ಮಾಡದಿದ್ರೆ, ಹೊಟ್ಟೆ ಖಾಲಿ ಬಿಟ್ರೆ ಗ್ಯಾಸ್ಟ್ರಿಕ್ ಗ್ಯಾರೆಂಟಿ. ಊಟ ಮಾಡಕ್ಕೆ ಟೈಮ್ ಇಲ್ಲ ಅಂತ ಜಂಕ್‌ಫುಡ್, ರೆಡಿಫುಡ್ ತಿಂದ್ರೆ ಗ್ಯಾಸ್ಟ್ರಿಕ್ ಜೊತೆಗೆ ಬೇರೊಂದಿಷ್ಟು ಸಮಸ್ಯೆಗಳು ಕಾಡಬಹುದು. ಇದರ ಬದಲಾಗಿ ಒಂದು ಟ್ರಿಕ್ ಫಾಲೋ ಮಾಡ್ಬಹುದು, ಮತ್ತೇನಿಲ್ಲ.
ಬಾಯಲ್ಲಿ ನೀರು ತರಿಸೋ ಆಲೂ ಚಾಟ್ಸ್ ರೆಸಿಪಿ
ಮನೆಯಲ್ಲೇ ಸುಲಭವಾಗಿ ಮಾಡಬಹುದಾದ, ಆರೋಗ್ಯಕ್ಕೆ ಅತ್ಯುತ್ತಮವಾದ ಪ್ರೊಟೀನ್ ಬಾರ್‌ಗಳನ್ನು ತಯಾರಿಸೋದು. ಇದರಲ್ಲಿ ದೇಹಕ್ಕೆ ಅಗತ್ಯವಾದ ಪ್ರೊಟೀನ್, ಕಾರ್ಬೊಹೈಡ್ರೇಟ್, ದೇಹಕ್ಕೆ ಹಾನಿ ಮಾಡದ ಕೊಬ್ಬಿನಂಶ ಇರುತ್ತೆ. ಹಾಗಂತ ಎಲ್ಲಾ ಪ್ರೊಟೀನ್ ಬಾರ್‌ಗಳೂ ಇದೇ ರೀತಿ ಇರುತ್ತವೆ ಅಂತ ಅರ್ಥ ಅಲ್ಲ. ಕೆಲವೊಂದು ಬಾರ್‌ಗಳಲ್ಲಿ ಸಕ್ಕರೆ ಪ್ರಮಾಣ ಹೆಚ್ಚು ಇರಬಹುದು, ಪ್ರಿಸರ್ವೇಟಿವ್ ಹಾಕಿರಬಹುದು. ಇವನ್ನು ತಿಂದರೆ ಆರೋಗ್ಯ ಚೆನ್ನಾಗಿರೋ ಬದಲು ಇದ್ದದ್ದೂ ಹಾಳಾಗಿ ಹೋಗುವ ಸಾಧ್ಯತೆ ಇರುತ್ತೆ. ಹಾಗಾದ್ರೆ ಮತ್ತೇನು ಮಾಡಬಹುದು. ಮನೆಯಲ್ಲೇ ಪ್ರೊಟೀನ್ ಬಾರ್ ತಯಾರು ಮಾಡಬಹುದು.
ಈ ಪ್ರೊಟೀನ್ ಬಾರ್‌ಗಳನ್ನು ಮಾಡೋದು 5 ಸ್ಟೆಪ್‌ಗಳಲ್ಲಿ ಸುಲಭವಾಗಿ ಮಾಡಬಹುದು.
1. ಪೀನಟ್ ಬಟರ್ ಇರುವ ಪ್ರೊಟೀನ್ ಬಾರ್
ಇದನ್ನು ಮಾಡೋದಕ್ಕೆ ಬೇಕಾದ ಸಾಮಗ್ರಿಗಳು : 2 ಕಪ್ ರೋಲ್ಡ್ ಓಟ್ಸ್. ( ಇದು ನಾರ್ಮಲ್ ಓಟ್ಸ್‌ಗಿಂತ ಬೇರೆ ಥರ ಇರುತ್ತೆ. ನಾರ್ಮಲ್ ಓಟ್ಸ್‌ಗೆ ಹೋಲಿಸಿದ್ರೆ ಈ ಓಟ್ಸ್‌ಅನ್ನು ಕುಕ್ ಮಾಡೋದು ಸುಲಭ.)
1 ಕಪ್ ಪೀನಟ್ ಬಟರ್ , ಒಂದೂಕಾಲು ಕಪ್ ಚಾಕೊಲೇಟ್ ವ್ಹೇ ಪ್ರೊಟೀನ್ ಪೌಡರ್ (ಇದೇ ಹೆಸರಲ್ಲಿ ಮಾರ್ಕೆಟ್‌ನಲ್ಲಿ ಸಿಗುತ್ತೆ) ಅರ್ಧ ಕಪ್ ಹಾಲು, 3 ಸ್ಪೂನ್ ಜೇನು ತುಪ್ಪ.
ಮಾಡೋದು ಹೇಗೆ?
ಒಂದು ಬೋಗುಣಿಯಲ್ಲಿ ಹಾಲು ಹಾಕಿ ಬಿಸಿ ಮಾಡಿ. ಇದಕ್ಕೆ ಪೀನಟ್ ಬಟರ್ ಮತ್ತು ಜೇನುತುಪ್ಪ ಬೆರೆಸಿ. ಇದು ಚೆನ್ನಾಗಿ ಕಾದ ಬಳಿಕ ಪ್ರೊಟೀನ್ ಪೌಡರ್ ಮತ್ತು ರೋಲ್ಡ್ ಓಟ್ಸ್ ಅನ್ನು ಹಾಕಿ.
ಚೆನ್ನಾಗಿ ತಿರುವಿ. ಗಂಟುಗಳಾಗದ ಹಾಗೆ ನೋಡಿಕೊಳ್ಳಿ. ಒಂದು ಪ್ಲೇಟ್‌ಗೆ ತುಪ್ಪ ಸವರಿ.
ಚೆನ್ನಾಗಿ ಮಿಕ್ಸ್ ಆಗಿರುವ ಪ್ರೊಟೀನ್ ಬಾರ್‌ನ ಮಿಶ್ರಣವನ್ನು ಪ್ಲೇಟ್‌ಗೆ ಸುರುವಿ. ಇದನ್ನು ಪ್ಲೇಟ್‌ಗೆ ಸ್ಪೂನ್ ಮೂಲಕ ಒತ್ತಿ. ಹೀಗೆ ಪ್ರೆಸ್ ಮಾಡೋದ್ರಿಂದ ಈ ಮಿಶ್ರಣ ಬೇಗ ಗಟ್ಟಿಯಾಗುತ್ತೆ.
ಚೆನ್ನಾಗಿ ಕೂಲ್ ಆದ್ಮೇಲೆ ಕಟ್ ಮಾಡಿ. (ಮೊದಲೇ ಟೇಸ್ಟ್ ಮಾಡ್ಬೇಕು ಅನ್ನೋ ಕ್ರೇಜ್ ಇರೋರು ಸೈಡ್‌ನಿಂದ ಒಂದು ಪೀಸ್ ಕತ್ತರಿಸಿ ಬಾಯಲ್ಲಿಟ್ಟುಕೊಳ್ಳಲು ಅಡ್ಡಿಯಿಲ್ಲ.)
ಇದೇ ರೀತಿ ಬಾದಾಮಿ, ಸಿರಿಧಾನ್ಯಗಳನ್ನು ಸೇರಿಸಿ ಪ್ರೊಟೀನ್ ಬಾರ್ ಮಾಡಬಹುದು. ಹುರಿದ ಜೋಳ, ಅಲ್ಮಂಡ್ ಬಟರ್, ಎಳ್ಳು , ಜೇನುತುಪ್ಪ, ಖರ್ಜೂರ ಇತ್ಯಾದಿಗಳನ್ನು ಬಳಸಿ ಇದೇ ವಿಧಾನದಲ್ಲಿ ಪ್ರೊಟೀನ್ ಬಾರ್ ತಯಾರಿಸಬಹುದು.
ಎಷ್ಟೋ ಸಲ ನಾವು ಸೋವಿಸೋ ಆಹಾರದಲ್ಲಿ ದೇಹಕ್ಕೆ ಬೇಕಾದ ಪ್ರೊಟೀನ್, ಕಾರ್ಬೊಹೈಡ್ರೇಟ್ ಸರಿಯಾದ ಪ್ರಮಾಣದಲ್ಲಿ ಇರಲ್ಲ. ಆದರೆ ಮನೆಯಲ್ಲೇ ತಯಾರಿಸುವ ಈ ಪ್ರೊಟೀನ್ ಬಾರ್‌ಗಳಲ್ಲಿ ದೇಹಕ್ಕೆ ಬೇಕಾದ ಸಮತೋಲನ ಆಹಾರ ಸಿಗುತ್ತೆ ಅಂತಾರೆ ತಜ್ಞರು. ಇದನ್ನು ಕೆಲವರು ಊಟಕ್ಕಿಂತ ಮೊದಲೇ ತಿನ್ನುತ್ತಾರೆ. ಆಗ ಊಟ ಕಡಿಮೆ ಸಾಕಾಗುತ್ತೆ. ಈ ಮೂಲಕ ಬೊಜ್ಜು ಇಳಿಸಬಹುದು. ಹಾಗೇ ವರ್ಕೌಟ್ ಮಾಡಿ ಬಂದ ಮೇಲೂ ಇದನ್ನು ಸೇವಿಸುವವರಿದ್ದಾರೆ. ಹಾಗಂತ ಈ ಬಾರ್‌ಗಳ ಮೇಲೇ ಎಡಿಕ್ಟ್ ಆಗೋದೂ ಸರಿಯಲ್ಲ. ಅನಿವಾರ್ಯವಿದ್ದಾಗ ಖಂಡಿತಾ ತಿನ್ನಬಹುದು.