ಜನತಾ ಸ್ಪಂದನೆ ಹಿನ್ನೆಲೆ, ಜಿಲ್ಲೆಯ ವಿವಿಧೆಡೆಗಳಲ್ಲಿ ಸಚಿವ ಪ್ರಭು ಚವ್ಹಾಣ್ ಭೇಟಿ | ದೂರು ಪೆಟ್ಟಿಗೆಯಲ್ಲಿನ ಸಾರ್ವಜನಿಕ ದೂರುಗಳಿಗೆ ಶೀಘ್ರ ಸ್ಪಂದನೆ | ರಸ್ತೆ ದುರಸ್ತಿ ಕಾರ್ಯ ಆರಂಭಿಸಿಯೇ ಹಿಂದಿರುಗಿದ ಸಚಿವರು | ದೂರುಗಳನ್ನು ದೂರು ಪೆಟ್ಟಿಗೆಗೆ ಹಾಕಿ ಪರಿಹಾರ ಪಡೆಯಿರಿ: ಚವ್ಹಾಣ|

ಬೀದರ್(ನ.14): ಜನತಾ ಸ್ಪಂದನೆ ಹಿನ್ನೆಲೆಯಲ್ಲಿ ಜಿಲ್ಲೆಯ ವಿವಿಧೆಡೆಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವ್ಹಾಣ್ ಸ್ಥಾಪಿಸಿರುವ ದೂರುಗಳ ಪೆಟ್ಟಿಗೆಯಲ್ಲಿ ದಾಖಲಾಗುವ ಸಾರ್ವಜನಿಕ ದೂರುಗಳಿಗೆ ಶೀಘ್ರ ಸ್ಪಂದನೆ ಸಿಗುತ್ತಿದೆ. 

Add Asianetnews Kannada as a Preferred SourcegooglePreferred

ಇಲ್ಲಿನ ವಾರ್ಡ್ ನಂಬರ್ 30 ರಲ್ಲಿ ರಸ್ತೆ ದುರಸ್ತಿಗಾಗಿ ತಕ್ಷಣ ಕ್ರಮ ಜರುಗಿಸಬೇಕು ಎಂದು ಚೆನ್ನಬಸವ ನಗರದ ನಿವಾಸಿಗರಾದ ರಾಜಕುಮಾರ ಲಕ್ಷ್ಮಣ, ಅರ್ಜುನ ಸಿಂಗ್ ಪಾಟೀಲ್, ಚಕ್ರಪಾಣಿ ಧನವಾಡಕರ, ಸತೀಶ ರಾಜಕುಮಾರ ಹಾಗೂ ಇನ್ನಿತರರು ರಸ್ತೆಯ ಭಾವಚಿತ್ರಗಳ ಸಮೇತ ದೂರುಪೆಟ್ಟಿಗೆಯಲ್ಲಿ ದೂರು ದಾಖಲಿಸಿದ್ದರು. 

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ದೂರಿನ ಹಿನ್ನೆಲೆಯಲ್ಲಿ ಸಚಿವ ಪ್ರಭು ಚವ್ಹಾಣ್ ಬೀದರ್‌ನ ಕುಂಬಾರವಾಡ ರಸ್ತೆಯಲ್ಲಿನ ಚನ್ನಬಸವ ನಗರಕ್ಕೆ ನ. 12 ರಂದು ತಾವೇ ಖುದ್ದು ಭೇಟಿ ನೀಡಿ ದೂರು ದಾಖಲಾದ 24 ಗಂಟೆಯೊಳಗಡೆ ಅಲ್ಲಿನ ನಿವಾಸಿಗಳಿಗೆ ಪರಿಹಾರ ಕಲ್ಪಿಸಿದರು. ಬೆಳಿಗ್ಗೆ ಪಶು ವೈದ್ಯಕೀಯ ಮಹಾವಿದ್ಯಾಲಯಕ್ಕೆ ಅನಿರೀಕ್ಷಿತ ಭೇಟಿ ನೀಡಿದ ಬಳಿಕ ನೇರವಾಗಿ ಬೀದರ್‌ನ ಚನ್ನಬಸವ ನಗರಕ್ಕೆ ಆಗಮಿಸಿದ ಸಚಿವರು, ದೂರು ನೀಡಿದ ವ್ಯಕ್ತಿಗಳನ್ನು ಸಂಪರ್ಕಿಸಿದರು. ಅಲ್ಲಿನ ರಸ್ತೆಯ ದುಸ್ಥಿತಿಯನ್ನು ಖುದ್ದು ವೀಕ್ಷಿಸಿದರು. ರಸ್ತೆ ಬದಿಯಲ್ಲಿ ನೀರು ನಿಂತಿರುವುದನ್ನು ಗಮನಿಸಿ, ನಗರಸಭೆಯ ಅಧಿಕಾರಿಗಳನ್ನು ಸ್ಥಳಕ್ಕೆ ಕರೆಯಿಸಿಕೊಂಡರು. 

ಕಾರ್ಯವೈಖರಿಗೆ ಅಸಮಾಧಾನ: 

ನಗರಸಭೆ ಪೌರಾಯುಕ್ತರು ಮತ್ತು ಅಭಿಯಂತರರು ಸ್ಥಳಕ್ಕೆ ಆಗಮಿಸುತ್ತಿದ್ದಂತೆ, ನಿಮಗೆ ಎಷ್ಟು ಬಾರಿ ಹೇಳಬೇಕು. ನಗರದಲ್ಲಿ ಈ ರೀತಿ ಅವ್ಯವಸ್ಥೆಯಾದರೆ ಜನರ ಗತಿಯೇನು? ನೀವು ಕಾಲಕಾಲಕ್ಕೆ ನಗರದ ಆಯಾ ಕಡೆಗಳಲ್ಲಿ ಭೇಟಿ ನೀಡಿ ಪರಿಶೀಲಿಸುತ್ತಿದ್ದರೆ ಎಲ್ಲಿ ಏನಾಗುತ್ತಿದೆ ಎಂಬುವುದು ಗಮನಕ್ಕೆ ಬರುತ್ತದೆ. ಕಚೇರಿಯಲ್ಲಿಯೇ ಕುಳಿತರೆ ಕೆಲಸ ಆಗುತ್ತದೆಯೇ ಎಂದು ಪ್ರಶ್ನಿಸಿ ಅವರನ್ನು ತರಾಟೆ ತೆಗೆದುಕೊಂಡರು. 

ಸ್ಥಳಕ್ಕೆ ಜೆಸಿಬಿ ತರಿಸಿದರು: 

ತಾವು ಈ ಕೂಡಲೇ ಈ ಸ್ಥಳಕ್ಕೆ ಜೆಸಿಬಿ ತರಿಸಿಕೊಂಡು ರಸ್ತೆ ದುರಸ್ತಿ ಕಾರ್ಯ ಆರಂಭಿಸಬೇಕು ಎಂದು ಸಚಿವರು ನಗರಸಭೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಜೆಸಿಬಿ ಬರುವವರೆಗೆ ಸ್ಥಳದಲ್ಲೇ ಇರುವುದಾಗಿ ಸಚಿವರು ತಿಳಿಸಿ ಅಲ್ಲಿಯೇ ಕುಳಿತರು. ಬಳಿಕ ಕೆಲವೇ ನಿಮಿಷಗಳಲ್ಲಿ ಚನ್ನಬಸವ ನಗರಕ್ಕೆ ಎರಡು ಜೆಸಿಬಿಗಳು ಆಗಮಿಸಿದವು. ಸಚಿವರ ಎದುರಿಗೆ ರಸ್ತೆ ದುರಸ್ತಿ ಮತ್ತು ಚರಂಡಿ ದುರಸ್ತಿ ಕಾರ್ಯ ಆರಂಭಗೊಂಡಿತು. 

ನಿವಾಸಿಗರಿಂದ ಮೆಚ್ಚುಗೆ: 

ಈ ರಸ್ತೆಯಲ್ಲಿ ಪ್ರತಿ ದಿನ ಸಂಚರಿಸಲು ನವೀನ್ ಪಬ್ಲಿಕ್ ಶಾಲೆ ಮತ್ತು ರವೀಂದ್ರ ಶಾಲೆಯ ಮಕ್ಕಳಿಗೆ ಸಾಕಷ್ಟು ತೊಂದರೆಯಾಗುತಿತ್ತು. ಜನರು ಇಲ್ಲಿ ಓಡಾಡಲು ದಿನವಿಡೀ ಆಗುತ್ತಿರಲಿಲ್ಲ. ತಾವು ನಮ್ಮ ದೂರಿಗೆ ಸ್ಪಂದಿಸಿ, ಸ್ಥಳಕ್ಕೆ ಬಂದು ರಸ್ತೆ ಸರಿಪಡಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದು ಅಲ್ಲಿನ ನಿವಾಸಿಗರು ಸಚಿವರಿಗೆ ತಿಳಿಸಿದರು. ಈ ವೇಳೆ ನಗರಸಭೆ ಪೌರಾಯುಕ್ತರಾದ ಬಿ.ಬಸಪ್ಪ, ಅಭಿಯಂತರರಾದ ರಾಜಶೇಖರ ಮಠಪತಿ ಇದ್ದರು.