* ಅಮೆರಿಕ ಸಂಸತ್ತಲ್ಲಿ ಉಕ್ರೇನ್‌ ಅಧ್ಯಕ್ಷ ಭಾಷಣ* ಸಹಾಯ ಮಾಡಿ: ಅಮೆರಿಕಕ್ಕೆ ಜೆಲೆನ್‌ಸ್ಕಿ ಮೊರೆ*  9/11 ದಾಳಿ ಉಲ್ಲೇಖಸಿ ನೆರವು ಕೋರಿಕೆ

ವಾಷಿಂಗ್ಟನ್‌(ಮಾ.17): ಉಕ್ರೇನಿನ ಅಧ್ಯಕ್ಷ ವೊಲೊದಿಮಿರ್‌ ಜೆಲೆನ್‌ಸ್ಕಿ ರಷ್ಯಾದ ಆಕ್ರಮಣದ ವಿರುದ್ಧ ಹೋರಾಡಲು ಉಕ್ರೇನಿಗೆ ಮತ್ತಷ್ಟುಸಹಾಯ ನೀಡುವಂತೆ ಅಮೆರಿಕದ ಸಂಸತ್ತು ಕಾಂಗ್ರೆಸ್ಸಿಗೆ ಬುಧವಾರ ಆನ್‌ಲೈನ್‌ನಲ್ಲಿ ನಡೆಸಿದ ಭಾಷಣದಲ್ಲಿ ಮನವಿ ಮಾಡಿದ್ದಾರೆ.

ಸಂಸತ್ತಿನಲ್ಲಿ ರಷ್ಯಾದ ದಾಳಿಯಿಂದಾಗಿ ಉಕ್ರೇನ್‌ನಲ್ಲಾದ ಭಾರೀ ಹಾನಿ ಹಾಗೂ ಉಕ್ರೇನಿನ ಜನತೆಯು ಅನುಭವಿಸುತ್ತಿರುವ ಸಂಕಷ್ಟಗಳ ವಿಡಿಯೋವನ್ನು ಪ್ರದರ್ಶಿಸಿದ ಜೆಲೆನ್‌ಸ್ಕಿ ನೋ ಫ್ಲೈಜೋನ್‌ ಘೋಷಿಸಬೇಕಾಗಿ ವಿನಂತಿಸಿಕೊಂಡರು. ಈ ವೇಳೆ ಪಲ್‌ರ್‍ ಹಾರ್ಬರ್‌ ಮೇಲೆ ದಾಳಿ ಹಾಗೂ ಅಮೆರಿಕದ ವಲ್ಡ್‌ರ್‍ ಟ್ರೇಡ್‌ ಸೆಂಟರಿನ ಮೇಲೆ ಅಲಖೈದಾ ಉಗ್ರರು ನಡೆಸಿದ ಸೆ. 11, 2001ರ ದಾಳಿಯನ್ನು ಅವರು ಉಲ್ಲೇಖಿಸಿ, ಉಕ್ರೇನ್‌ ಪರಿಸ್ಥಿತಿ ಕೂಡ ಇದೇ ರೀತಿಯಾಗಿದೆ ಎಂದರು.

‘ರಷ್ಯಾದ ಮೇಲೆ ಇನ್ನಷ್ಟುಕಠಿಣ ನಿರ್ಬಂಧ ಹೇರಿ, ಆಮದನ್ನು ನಿಲ್ಲಿಸಿ, ಆದಾಯಕ್ಕಿಂತ ಶಾಂತಿ ಪಾಲನೆ ಮುಖ್ಯವಾಗಿದೆ. ನಮಗೀಗ ನಿಮ್ಮ ಸಹಾಯದ ಅಗತ್ಯವಿದೆ. ನಮಗೆ ಇನ್ನಷ್ಟುಸಹಾಯ ಒದಗಿಸಿ’ ಎಂದು ಜೆಲೆನ್‌ಸ್ಕಿ ಮನವಿ ಮಾಡಿದರು.

ಜೆಲೆನ್‌ಸ್ಕಿ ವಿಡಿಯೋ ಪರದೆಯಲ್ಲಿ ಕಂಡುಬಂದಂತೇ ಅಮೆರಿಕದ ಶಾಸಕರು ಅವರಿಗೆ ನಿಂತು ಗೌರವ ಸಲ್ಲಿಸಿದ್ದು ವಿಶೇಷವಾಗಿತ್ತು

ಉಕ್ರೇನ್‌ ಸೇನೆ ಬಗ್ಗುಬಡಿಯಲು ರಷ್ಯಾ ಯತ್ನ

ಸತತ ಮೂರು ವಾರಗಳ ಪ್ರಯತ್ನದ ಹೊರತಾಗಿಯೂ ಉಕ್ರೇನ್‌ ಸೇನೆ ಮತ್ತು ರಾಜಧಾನಿ ಕೀವ್‌ ಇನ್ನೂ ಕೈವಶವಾಗದ ಕಾರಣ ಇರಸುಮುರಿಸಿಗೆ ಒಳಾಗಿರುವ ರಷ್ಯಾ ಸೇನೆ, ಉಕ್ರೇನ್‌ ಸೇನೆಯನ್ನು ಹೆಡೆಮುರಿ ಕಟ್ಟುವ ಆಶಯದೊಂದಿಗೆ ಬುಧವಾರ ಭಾರೀ ದಾಳಿ ನಡೆಸಿದೆ.

ರಾಜಧಾನಿ ಕೀವ್‌, ಕೀವ್‌ನ ಹೊರ ವಲಯದ ಪ್ರದೇಶಗಳು, ಖಾರ್ಕೀವ್‌, ಸೇರಿದಂತೆ ಹಲವು ನಗರಗಳ ಮೇಲೆ ಬುಧವಾರ ಭಾರಿ ಪ್ರಮಾಣದ ಶೆಲ್‌, ಬಾಂಬ್‌ ದಾಳಿ ನಡೆಸಲಾಗಿದೆ. ದಾಳಿಯಲ್ಲಿ ಹಲವು ಜನವಸತಿ ಪ್ರದೇಶಗಳು ಹಾನಿಗೊಳಗಾಗಿದ್ದು, ಹಲವು ಅಪಾರ್ಟ್‌ಮೆಂಟ್‌ಗಳು ಬೆಂಕಿಗೆ ಆಹುತಿಯಾಗಿದೆ. ಕೀವ್‌ನ ಸುತ್ತಮುತ್ತಲ 12 ನಗರಗಳಿಗೆ ನೀರಿನ ಪೂರೈಕೆ ಬಂದ್‌ ಆಗಿದ್ದರೆ, 6 ನಗರಗಳಿಗೆ ವಿದ್ಯುತ್‌ ಮತ್ತು ಉಷ್ಣಾಂಶ ಪೂರೈಕೆ ಸ್ಥಗಿತಗೊಂಡಿದೆ.

ಜೊತೆಗೆ ರಾಜಧಾನೀ ಕೀವ್‌ಗೆ ಎಲ್ಲಾ ರೀತಿಯ ಸಂಪರ್ಕ ಕಡಿತಗೊಳಿಸಲು ರಷ್ಯಾ ಯೋಜಿತ ರೀತಿಯಲ್ಲಿ ದಾಳಿ ನಡೆಸುತ್ತಿದೆ. ಜೊತೆಗೆ ಇದು ಅಗತ್ಯ ವಸ್ತುಗಳ ಪೂರೈಕೆಯನ್ನೂ ಸ್ಥಗಿತಗೊಳಿಸಲಿದೆ. ಈ ನಡುವೆ ಬೆಲಾರಸ್‌ನೊಂದಿಗೆ ಗಡಿ ಹಂಚಿಕೊಂಡಿರುವ, ಕೀವ್‌ನಿಂದ 80 ಕಿ.ಮೀ ದೂರದಲ್ಲಿರುವ ಇವಾನ್‌ಕೀವ್‌ ನಗರವನ್ನು ರಷ್ಯಾ ಬುಧವಾರ ತನ್ನ ವಶಕ್ಕೆ ಪಡೆದಿದೆ. ವಾಯುದಾಳಿ ಜೊತೆಜೊತೆಗೆ, ರಷ್ಯಾ ನೌಕಾಪಡೆಯು ಮಂಗಳವಾರ ರಾತ್ರಿಯಿಂದ ಮರಿಯುಪೋಲ್‌, ಒಡೆಸ್ಸಾ ನಗರದ ಮೇಲೆ ದಾಳಿ ನಡೆಸಿವೆ. ಆದರೆ ಖಾರ್ಕೀವ್‌ ನಗರ ಪ್ರವೇಶಿಸುವ ರಷ್ಯಾ ಯತ್ನವನ್ನು ವಿಫಲಗೊಳಿಸಿದ್ದಾಗಿ ಉಕ್ರೇನ್‌ ಅಧ್ಯಕ್ಷ ಜೆಲೆನ್‌ಸ್ಕಿ ಹೇಳಿದ್ದಾರೆ.

ಈ ನಡುವೆ ಉಕ್ರೇನ್‌ ನಡೆಸಿದ ಪ್ರತಿದಾಳಿಯ ವೇಳೆ ರಷ್ಯಾದ ವಶದಲ್ಲಿರುವ ಖೇರ್ಸನ್‌ ವಿಮಾನ ನಿಲ್ದಾಣದಲ್ಲಿದ್ದ ಹಲವು ಕಾಪ್ಟರ್‌ಗಳಿಗೆ ಬೆಂಕಿ ಬಿದ್ದು ಸುಟ್ಟುಹೋದ ದೃಶ್ಯಗಳು ಉಪಗ್ರಹ ಚಿತ್ರದಲ್ಲಿ ಕಂಡುಬಂದಿದೆ.

ಕಳೆದ 21 ದಿನಗಳಲ್ಲಿ ನಾವು ನಡೆಸಿದ ದಾಳಿಯಲ್ಲಿ ಉಕ್ರೇನ್‌ನ 111 ವಿಮಾನ, 160 ಡ್ರೋನ್‌, 1000ಕ್ಕೂ ಹೆಚ್ಚು ಟ್ಯಾಂಕ್‌ಗಳು ಧ್ವಂಸವಾಗಿವೆ ಎಂದು ರಷ್ಯಾ ಹೇಳಿದೆ. 

ರಷ್ಯಾ ಸೇನೆಯಿಂದ 400 ಜನರ ಒತ್ತೆ

ಕೀವ್‌: ರಷ್ಯಾ ಸೇನೆಯು ಮರಿಯುಪೋಲ್‌ನಲ್ಲಿ 400ಕ್ಕೂ ಹೆಚ್ಚು ವೈದ್ಯಕೀಯ ಸಿಬ್ಬಂದಿ ಮತ್ತು ನಾಗರಿಕರನ್ನು ಮಾನವ ತಡೆಗೋಡೆಯ ರೀತಿಯಲ್ಲಿ ಬಳಸಿಕೊಳ್ಳುತ್ತಿದೆ ಎಂದು ಉಕ್ರೇನ್‌ ಉಪ ಪ್ರಧಾನಿ ಇರಾರ‍ಯನಾ ವೆರೇಶ್ಚುಕ್‌ ಆರೋಪಿಸಿದ್ದಾರೆ. ಅಲ್ಲದೆ ರಷ್ಯಾ ಸೇನೆ ಆಸ್ಪತ್ರೆಗಳನ್ನೇ ಗುರಿಯಾಗಿಸಿ ಸತತವಾಗಿ ದಾಳಿ ನಡೆಸುತ್ತಿದೆ. ಜೊತೆಗೆ ಸಂಕಷ್ಟಕ್ಕೆ ಸಿಕ್ಕಿಬಿದ್ದವರ ತೆರವಿನಲ್ಲಿ ತೊಡಗಿಸಿಕೊಂಡವರು, ತೆರವು ಕಾರ್ಯಾಚರಣೆ ಸ್ಥಳದ ಮೇಲೂ ದಾಳಿ ಮೂಲಕ, ಮಾನವೀಯ ಕಾರ್ಯಗಳಿಗೆ ಭಾರೀ ಅಡ್ಡಿ ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.