ಮಂಕಿಪಾಕ್ಸ್ ಸೋಂಕು 100ಕ್ಕೆ ಏರಿಕೆ, ವ್ಯಾಧಿ ಉಲ್ಬಣ ಸಾಧ್ಯತೆ: ಡಬ್ಲ್ಯುಎಚ್‌ಒ
* ಇಸ್ರೇಲ್‌ನಲ್ಲೂ ಕಾಣಿಸಿಕೊಂಡ ಮಂಕಿಪಾಕ್ಸ್
* ವ್ಯಾಧಿ ಕಾಣಿಸಿದ ದೇಶಗಳ ಸಂಖ್ಯೆ 13ಕ್ಕೇರಿಕೆ
* ವ್ಯಾಧಿ ಉಲ್ಬಣ ಸಾಧ್ಯತೆ: ಡಬ್ಲ್ಯುಎಚ್‌ಒ
ಜಿನೇವಾ(ಮೇ.24): ವಿಶ್ವಾದ್ಯಂತ ವೇಗವಾಗಿ ಹಬ್ಬುತ್ತಿರುವ ಮಂಕಿಪಾಕ್ಸ್ ಸೋಂಕು ಇಸ್ರೇಲ್‌ಗೂ ಕಾಲಿಟ್ಟಿದೆ. ಈ ಮೂಲಕ ಪ್ರಕರಣಗಳ ಸಂಖ್ಯೆ 100ರ ಗಡಿ ದಾಡಿದೆ. ಇದರಿಂದ 13 ದೇಶಗಳಿಗೆ ಮಂಕಿಪಾಕ್ಸ್ ವ್ಯಾಪಿಸಿದಂತಾಗಿದೆ. ಇದು ಜಗತ್ತಿಗೆ ಎಚ್ಚರಿಕೆಯ ಗಂಟೆ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಹೇಳಿದೆ.
ವಿದೇಶದಿಂದ ಇಸ್ರೇಲ್‌ಗೆ ಮರಳಿ ಬಂದ ವ್ಯಕ್ತಿಯೊಬ್ಬರಲ್ಲಿ ಸೋಮವಾರ ಸೋಂಕು ದೃಢಪಟ್ಟಿದೆ. ಈ ವ್ಯಕ್ತಿಯನ್ನು ಟೆಲ್ ಅವೀವ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಆತನ ಸ್ಥಿತಿ ಕೆಟ್ಟದಾಗಿದೆ ಎಂದು ಇಸ್ರೇಲ್ ಹೇಳಿದೆ.
ಮತ್ತಷ್ಟು ಪ್ರಕರಣ ಭೀತಿ:
‘ಮಂಕಿಪಾಕ್ಸ್ ಪ್ರಕರಣ ಮತ್ತಷ್ಟು ಹೆಚ್ಚಾಗಬಹುದು. ಹೀಗಾಗಿ ನಿಗಾ ವಹಿಸಿ, ಇದರ ನಿಯಂತ್ರಣಕ್ಕೆ ಹೆಚ್ಚಿನ ನಿರ್ದೇಶನ ನೀಡಲಾಗುವುದು’ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.
ಡಬ್ಲ್ಯುಎಚ್‌ಒ ಪ್ರಕಾರ ಮಂಕಿಪಾಕ್ಸ್ ಸೋಂಕು ಸ್ಥಳೀಯವಾಗಿದ್ದು, ಕೆಲವು ದೇಶಗಳಲ್ಲಿ ರೋಗಗ್ರಸ್ಥ ಪ್ರಾಣಿಗಳಿಂದಾಗಿ ಜನರಿಗೆ ತಗುಲಿ ಮೈಮೇಲೆ ಬೊಬ್ಬೆ ಏಳುತ್ತವೆ. ಆದರೆ ಸಲಿಂಗಿಗಳಿಂದಲೂ ರೋಗ ಹರಡುತ್ತಿದೆ ಎಂಬ ವಾದವಿದೆ.
ಬ್ರಿಟನ್ನಲ್ಲಿ ಐಸೋಲೇಶನ್:
ದೇಶದಲ್ಲಿ ಮಂಕಿಪಾಕ್ಸ್ ಪ್ರಕರಣ ಕಾಣಿಸಿಕೊಂಡರೆ 21 ದಿನಗಳ ಪ್ರತ್ಯೇಕವಾಸದಲ್ಲಿರುವಂತೆ ಬ್ರಿಟನ್ ಸರ್ಕಾರ ಜನರಿಗೆ ಸೂಚನೆ ನೀಡಿದೆ. ಸೋಂಕಿಗೆ ತುತ್ತಾದವರು ಅಥವಾ ಸೋಂಕಿತರ ಕುಟುಂಬದ ಸಂಪರ್ಕಕ್ಕೆ ಬಂದವರು ಪ್ರತ್ಯೇಕವಾಸದಲ್ಲಿರುವುದು ಕಡ್ಡಾಯವಾಗಿದೆ.
ಮಂಕಿಪಾಕ್ಸ್ ಭೀತಿ: ಸೋಂಕಿನ ಮೇಲೆ ನಿಗಾಗೆ ಕೇಂದ್ರ ಸೂಚನೆ
ಈಗಾಗಲೇ 12 ದೇಶಗಳಲ್ಲಿ ಮಂಕಿಪಾಕ್ಸ್‌ನ ಸುಮಾರು 92 ಪ್ರಕರಣಗಳನ್ನು ಖಚಿತವಾಗಿದೆ. ಹೀಗಾಗಿ ಭಾರತದಲ್ಲೂ ಈ ಬಗ್ಗೆ ನಿಗಾ ಇರಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ.
ರಾಷ್ಟ್ರೀಯ ರೋಗ ನಿಯಂತ್ರಣ ಸಂಸ್ಥೆ (ಎನ್‌ಸಿಡಿಸಿ) ಹಾಗೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಈ ಬಗ್ಗೆ ಸೂಚನೆ ನೀಡಿರುವ ಸಚಿವಾಲಯ, ಮಂಕಿಪಾಕ್ಸ್ ಹರಡುವಿಕೆಯ ಬಗ್ಗೆ ತೀವ್ರ ನಿಗಾ ವಹಿಸುವಂತೆ ಸೂಚಿಸಬೇಕು. ಸೋಂಕು ಹೆಚ್ಚಳವಾದರೆ ಸೋಂಕು ಪೀಡಿತ ದೇಶಗಳಿಂದ ಬಂದ ಜನರನ್ನು ದೇಶ ಪ್ರವೇಶಕ್ಕೂ ಮುನ್ನ ಪರೀಕ್ಷೆಗೆ ಒಳಪಡಿಸಬೇಕೆಂದು ಸೂಚಿಸಿದೆ.
ಡಬ್ಲ್ಯುಎಚ್‌ಒ ಪ್ರಕಾರ ಮಂಕಿಪಾಕ್ಸ್ ಸೋಂಕು ಸ್ಥಳೀಯವಾಗಿದ್ದು, ಕೆಲವು ದೇಶಗಳಲ್ಲಿ ರೋಗಗ್ರಸ್ಥ ಪ್ರಾಣಿಗಳಿಂದಾಗಿ ಜನರಿಗೆ ತಗುಲಿ ಮೈಮೇಲೆ ಬೊಬ್ಬೆ ಏಳುತ್ತವೆ. ಈ ದೇಶಗಳಿಂದ ಮರಳುತ್ತಿರುವ ಜನರಲ್ಲೂ ಸೋಂಕಿನ ಲಕ್ಷಣಗಳು ಕಂಡುಬರುತ್ತಿದೆ. ಹೀಗಾಗಿ ರೋಗದ ಹರಡುವಿಕೆಯನ್ನು ತಪ್ಪಿಸಲು ವಿದೇಶಗಳಲ್ಲಿನ ಮಂಕಿಪಾಕ್ಸ್ ಸೋಂಕಿನ ಸ್ಥಿತಿಯ ಬಗ್ಗೆ ಸತತ ನಿಗಾ ಇರಿಸಬೇಕು. ವಿದೇಶಗಳಿಂದ ಮರಳಿದ ಜನರಲ್ಲಿ ರೋಗದ ಲಕ್ಷಣಗಳು ಕಂಡುಬಂದಲ್ಲಿ ಮಾದರಿಯನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಕಳುಹಿಸಬೇಕು ಎಂದು ಸಚಿವಾಲಯ ಸೂಚಿಸಿದೆ.