ಪುಟಿನ್‌ ವಿರುದ್ಧ ಅರೆಬೆತ್ತಲಾಗಿ ಮಹಿಳೆಯರ ಪ್ರತಿಭಟನೆ ಯುದ್ಧ ನಿಲ್ಲಿಸುವಂತೆ ಮಹಿಳೆಯರ ಆಗ್ರಹ ಯಾವ ಬಹಿಷ್ಕಾರಕ್ಕೂ ಬಗ್ಗದ ಪುಟಿನ್‌ ಮೇಲೆ ಹೊಸ ಪ್ರಯೋಗ

ರಷ್ಯಾ ಉಕ್ರೇನ್ ಯುದ್ಧ ಯಾರ ನಿಯಂತ್ರಣಕ್ಕೂ ಸಿಗದೇ ವಿಪರೀತದಿಂದ ವಿಕೋಪಕ್ಕೆ ತಿರುಗಿದ್ದು, ಕೋಟ್ಯಾಂತರ ಜನ ಜೀವ ಉಳಿಸಿಕೊಳ್ಳಲು ದೇಶ ಬಿಡುತ್ತಿದ್ದಾರೆ. ಈ ಮಧ್ಯೆ ಪ್ಯಾರಿಸ್‌ನಲ್ಲಿ ಮಹಿಳೆಯರು ಯುದ್ಧ ನಿಲ್ಲಿಸುವಂತೆ ಆಗ್ರಹಿಸಿ ವ್ಲಾಡಿಮಿರ್ ಪುಟಿನ್ ವಿರುದ್ಧ ಟಾಪ್‌ಲೆಸ್‌ ಆಗಿ ಪ್ರತಿಭಟನೆ ನಡೆಸುತ್ತಿದ್ದಾರೆ. ಜಗತ್ತಿನ ವಿವಿಧ ರಾಷ್ಟ್ರಗಳಿಂದ ವಿವಿಧ ಬಗೆಯ ನಿರ್ಬಂಧ ಎದುರಿಸಿದರು ತಲೆಕೆಡಿಸಿಕೊಳ್ಳದ ರಷ್ಯಾಗೆ ಈಗ ಪ್ಯಾರಿಸ್‌ ಮಹಿಳೆಯರು ಅರೆಬೆತ್ತಲಾಗಿ ಪ್ರತಿಭಟನೆ ನಡೆಸುವ ಮೂಲಕ ಪುಟಿನ್‌ ಗಮನ ಸೆಳೆಯಲು ಬೇರೆಯದೇ ಮಾರ್ಗ ಹಿಡಿದಿದ್ದಾರೆ. 

Visegrad24 ಎಂಬ ಸುದ್ದಿ ಸಂಸ್ಥೆಯೊಂದು ತನ್ನ ಅಧಿಕೃತ ಟ್ವಿಟ್ಟರ್ (Twitter) ಖಾತೆಯಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದೆ. ಇದರಲ್ಲಿ ಪ್ಯಾರಿಸ್‌ನ (Paris) ಐಫೆಲ್ ಟವರ್‌ನ (Eifel Tower) ಮುಂದೆ ಅನೇಕ ಮಹಿಳೆಯರು ಟಾಪ್‌ಲೆಸ್‌ ಆಗಿ ಪ್ರತಿಭಟನೆ ನಡೆಸುತ್ತಿರುವುದನ್ನು ಕಾಣಬಹುದು. ಅವರು ತಮ್ಮ ದೇಹದ ಮೇಲ್ಭಾಗದಲ್ಲಿ ಉಕ್ರೇನಿಯನ್ ಧ್ವಜವನ್ನು ಚಿತ್ರಿಸಿದ್ದಾರೆ ಮತ್ತು ಯುದ್ಧವನ್ನು ವಿರೋಧಿಸಿ ಘೋಷಣೆಗಳನ್ನು ಚಿತ್ರಿಸಿದ್ದಾರೆ. 'ಸ್ಟಾಪ್ ವಾರ್ ಪುಟಿನ್', 'ಯುದ್ಧದ ವಿರುದ್ಧ ಸ್ತ್ರೀವಾದಿಗಳು', 'ಸ್ಲಾವಾ ಉಕ್ರೇನಿ' ಎಂಬಿತ್ಯಾದಿ ಘೋಷಣೆಗಳನ್ನು ತಮ್ಮ ದೇಹದ ಮೇಲೆ ಬರೆದುಕೊಂಡಿದ್ದಾರೆ.

ಈ ಮಧ್ಯೆ ಮೂರನೇ ಬಾರಿ ರಷ್ಯಾ ತಾತ್ಕಾಲಿಕ ಕದನ ವಿರಾಮ ಘೋಷಿಸಿದೆ. ಕೀವ್, ಸುಮಿ, ಮರಿಯೋಪೋಲ್ ಮತ್ತು ಖಾರ್ಕೀವ್‌ನಲ್ಲಿ ಕದನ ವಿರಾಮ ಘೋಷಿಸಿದೆ. ಜನರನ್ನು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆ ಕೊಟ್ಟಿದೆ. ಕದನ ವಿರಾಮದ ಬಳಿಕ ಯುದ್ಧಾರ್ಭಟ ಜೋರಾಗಲಿದೆ.

Scroll to load tweet…

ಯುದ್ಧ ಆರಂಭವಾದಂದಿನಿಂದಲೂ ದಿನವೂ ಒಂದಲ್ಲ ಒಂದು ಪಶ್ಚಿಮದ ದೇಶಗಳು, ವಿವಿಧ ಸರ್ಕಾರಗಳು ಮತ್ತು ಸಂಸ್ಥೆಗಳು ಒಂದರ ನಂತರ ಒಂದರಂತೆ ರಷ್ಯಾಗೆ ವಿವಿಧ ರೀತಿಯಲ್ಲಿ ನಿರ್ಬಂಧ ಹೇರುವ ಮೂಲಕ ಬಹಿಷ್ಕರಿಸಲು ಆರಂಭಿಸಿವೆ. ಈ ಬಹಿಷ್ಕಾರ ಬಾಹ್ಯಾಕಾಶ ಸಂಶೋಧನಾ ಕ್ಷೇತ್ರವನ್ನೂ ಬಿಟ್ಟಿಲ್ಲ. ಅದಾಗ್ಯೂ ಯಾವ ಬಹಿಷ್ಕಾರವೂ ರಷ್ಯಾವನ್ನು ಅಲುಗಾಡಿಸಲು ಸಾಧ್ಯವಾಗುತ್ತಿಲ್ಲ. ಇಂತಹ ಸಮಯದಲ್ಲಿ ರಷ್ಯಾ ವಿರುದ್ಧ ಪ್ಯಾರಿಸ್‌ನಲ್ಲಿನ ಮಹಿಳೆಯರ ಈ ಟಾಪ್‌ಲೆಸ್ ಪ್ರತಿಭಟನೆಗಳು ಟ್ವಿಟರ್‌ನಲ್ಲಿ ಕಾಣಿಸಿಕೊಂಡಿವೆ. ಈ ಮಹಿಳೆಯರು ಯುದ್ಧಕ್ಕೆ ಮತ್ತು ನಿರ್ದಿಷ್ಟವಾಗಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್‌ಗೆ ತಮ್ಮ ವಿರೋಧವನ್ನು ವ್ಯಕ್ತಪಡಿಸಿದ್ದಾರೆ. 

Scroll to load tweet…

2013ರಲ್ಲಿಯೂ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್ ಸ್ತ್ರೀವಾದಿ ಮಹಿಳೆಯರಿಂದ ಇದೇ ರೀತಿಯ ಟಾಪ್‌ಲೆಸ್ ಪ್ರತಿಭಟನೆಗಳನ್ನು ಎದುರಿಸಿದ್ದರು ಎಂದು ಸುದ್ದಿಸಂಸ್ಥೆ ವಿಸೆಗ್ರಾಡ್ 24 (Visegrad24) ಹೇಳಿದೆ. ಆ ಸಮಯದಲ್ಲಿ ಪುಟಿನ್‌ ಅವರು ಈ ಪ್ರತಿಭಟನೆ ಬಗ್ಗೆ 'ಇದು ನನಗೆ ಇಷ್ಟವಾಯಿತು' ಎಂದು ಹೇಳಿದ್ದರು ಎಂದು ವರದಿಯಾಗಿತ್ತು. ಅಲ್ಲದೇ ಅವರು (ಮಹಿಳೆಯರು) ಏನು ಕೂಗುತ್ತಿದ್ದಾರೆಂದು ನನಗೆ ಅರ್ಥವಾಗಲಿಲ್ಲ, ಅಲ್ಲದೇ ಅವರು ಸುಂದರಿಯರೋ, ಶ್ಯಾಮಲೆಯರೋ ಅಥವಾ ಕಂದು ಕೂದಲಿನವರೋ ಎಂದು ನಾನು ಗಮನಿಸಲಿಲ್ಲ ಎಂದು ಪುಟಿನ್‌ ಹೇಳಿದ್ದರಂತೆ.