* ಆಫ್ಘನ್‌ನ 75 ಲಕ್ಷ ಕೋಟಿ ಖನಿಜದ ಮೇಲೆ ಚೀನಾ ಕಣ್ಣು?* ಉಗ್ರರಿಗೆ ತರಾತುರಿಯಲ್ಲಿ ಚೀನಾ ಬೆಂಬಲ ಘೋಷಿಸಿದ್ದಕ್ಕೆ ಇದುವೇ ಕಾರಣ?* ಖನಿಜ ಹೊರತೆಗೆದರೆ ಹತ್ತೇ ವರ್ಷದಲ್ಲಿ ಆಫ್ಘನ್‌ ಶ್ರೀಮಂತ ದೇಶ: ಅಮೆರಿಕ

ನ್ಯೂಯಾರ್ಕ್(ಆ.22): ನಾಗರಿಕ ಸರ್ಕಾರವನ್ನು ಪದಚ್ಯುತಗೊಳಿಸಿ ಅಫ್ಘಾನಿಸ್ತಾನವನ್ನು ತಾಲಿಬಾನ್‌ ಉಗ್ರರು ಕೈವಶ ಮಾಡಿಕೊಂಡ ಬೆಳವಣಿಗೆಯನ್ನು ವಿಶ್ವದ ಹಲವು ದೇಶಗಳು ಅರಗಿಸಿಕೊಳ್ಳುವ ಮೊದಲೇ ತಾಲಿಬಾನ್‌ ಸರ್ಕಾರಕ್ಕೆ ಚೀನಾ ತರಾತುರಿಯಲ್ಲಿ ಬೆಂಬಲ ಘೋಷಿಸಿದ್ದು ಏಕೆ ಎಂಬುದಕ್ಕೆ ಕುತೂಹಲಕಾರಿ ಉತ್ತರವೊಂದು ಲಭ್ಯವಾಗಿದೆ. ಅಫ್ಘಾನಿಸ್ತಾನದಲ್ಲಿ ಹೇರಳ ಖನಿಜ ಸಂಪನ್ಮೂಲವಿದ್ದು ಅಮೆರಿಕ ತಜ್ಞರ ಅಂದಾಜಿನ ಪ್ರಕಾರ, ಆ ದೇಶದಲ್ಲಿರುವ ಒಟ್ಟಾರೆ ಖನಿಜ ಸಂಪನ್ಮೂಲದ ಮೌಲ್ಯ 75 ಲಕ್ಷ ಕೋಟಿ ರು.ಗೂ ಅಧಿಕ! ಸದ್ಯ ದೇಶ ತಾಲಿಬಾನಿಗಳ ವಶದಲ್ಲಿರುವ ಕಾರಣ, ಅವರನ್ನು ಓಲೈಸಿಕೊಂಡು ಖನಿಜ ಹೊರತೆಗೆಯಲು ಚೀನಾ ಮುಂದಾಗಿರಬಹುದು ಎಂದು ಅನುಮಾನ ದಟ್ಟವಾಗಿದೆ.

ಅಫ್ಘಾನಿಸ್ತಾನ ಜನ ಕಂಗಾಲು: ಆಶ್ರಯ ನೀಡಿ ಮಾನವೀಯತೆ ಮೆರೆದ ಭಾರತ, ಇತರ ದೇಶಗಳು!

ಅಫ್ಘಾನಿಸ್ತಾನ ಈಗ ಬಡ ದೇಶವಾಗಿರಬಹುದು. ಆದರೆ ಅಲ್ಲಿ ಅಪಾರ ಖನಿಜಗಳು ಇವೆ. ಕಬ್ಬಿಣ, ತಾಮ್ರ, ಚಿನ್ನ, ಲೀಥಿಯಂ, ಕೋಬಲ್ಟ್‌, ಯುರೇನಿಯಂ, ಬಾಕ್ಸೈಟ್‌, ಸಲ್ಪರ್‌, ಅಪರೂಪದ ಲೋಹ, ಹವಳಗಳು ಇವೆ. ಅಫ್ಘಾನಿಸ್ತಾನ 10 ವರ್ಷ ಶಾಂತವಾಗಿದ್ದು, ಖನಿಜ ಸಂಪನ್ಮೂಲ ಹೊರತೆಗೆಯಲು ಅವಕಾಶ ಲಭಿಸಿದರೆ ಹತ್ತೇ ವರ್ಷದಲ್ಲಿ ಆಫ್ಘನ್‌ ಆ ಭಾಗದ ಅತ್ಯಂತ ಶ್ರೀಮಂತ ದೇಶಗಳಲ್ಲಿ ಒಂದಾಗುತ್ತದೆ ಎಂದು ಸ್ವತಃ ಅಮೆರಿಕದ ಭೂಗರ್ಭಶಾಸ್ತ್ರ ಸಮೀಕ್ಷೆ 2010ರಲ್ಲಿ ಹೇಳಿತ್ತು. ಇದೆಲ್ಲದರ ಅರಿವು ಚೀನಾಗಿದೆ. ಏಕೆಂದರೆ, ಗಣಿಗಾರಿಕೆಯಲ್ಲಿ ಸದ್ಯ ಚೀನಾದ ಮುಂಚೂಣಿ ದೇಶವಾಗಿದೆ.

ಆಫ್ಘಾನಿಸ್ತಾನದಲ್ಲಿರುವ ಖನಿಜ ಸಂಪತ್ತಿನ ಅರಿವಿದ್ದೇ 2008ರಲ್ಲಿ ಆ ದೇಶದಲ್ಲಿ ತಾಮ್ರ ಗಣಿಗಾರಿಕೆ ಮಾಡಲು ಚೀನಾ ಬಿಡ್‌ ಗೆದ್ದಿತ್ತು. ಆದರೆ ಅದು ಕಾರ್ಯರೂಪಕ್ಕೆ ಬಂದಿರಲಿಲ್ಲ. ಈಗ ತಾಲಿಬಾನಿಗಳ ಜತೆ ಸ್ನೇಹ ಬೆಳೆಸಿಕೊಂಡರೆ, ತಾಮ್ರದ ಜತೆಗೆ ಉಳಿದ ಗಣಿಗಾರಿಕೆಯನ್ನೂ ನಡೆಸಬಹುದು ಎಂಬ ದೂರಾಲೋಚನೆಯನ್ನು ಹೊಂದಿರುವಂತಿದೆ ಎಂದು ವರದಿಗಳು ತಿಳಿಸಿವೆ.

ಯಾವ ಖನಿಜ ಎಷ್ಟಿದೆ?:

2010ರ ಅಫ್ಘಾನಿಸ್ತಾನದ ಗಣಿ ಸಚಿವಾಲಯದ ವರದಿ ಪ್ರಕಾರ, ದೇಶದಲ್ಲಿ 6 ಕೋಟಿ ಟನ್‌ ತಾಮ್ರ ಖನಿಜವಿದೆ. ಈಗಿನ ಮಾರುಕಟ್ಟೆದರದ ಪ್ರಕಾರ ಅಫ್ಘಾನಿಸ್ತಾನ ಹೊಂದಿರುವ ತಾಮ್ರದ ಮೌಲ್ಯ 500 ಬಿಲಿಯನ್‌ ಡಾಲರ್‌ (37 ಲಕ್ಷ ಕೋಟಿ ರು.)ಗೂ ಅಧಿಕ.

ಅಫ್ಘಾನ್‌ ಸಹಾಯವಾಣಿ ಕೇಂದ್ರಕ್ಕೆ 5 ದಿನದಲ್ಲೇ 9,200 ಪ್ರಶ್ನೆಗಳು!

ಅಫ್ಘಾನಿಸ್ತಾನದಲ್ಲಿ 220 ಕೋಟಿ ಟನ್‌ ಕಬ್ಬಿಣದ ಅದಿರು ಇದೆ. ಇದರ ಈಗಿನ ಮಾರುಕಟ್ಟೆಮೌಲ್ಯ 350 ಬಿಲಿಯನ್‌ ಡಾಲರ್‌ (26 ಲಕ್ಷ ಕೋಟಿ ರು.). ಅಫ್ಘಾನಿಸ್ತಾನದಲ್ಲಿ 2700 ಕೆ.ಜಿ. ಚಿನ್ನವಿದೆ. ಇದರ ಮೌಲ್ಯ 1200 ಕೋಟಿ ರು.

ಇಡೀ ವಿಶ್ವವೇ ಈಗ ಬ್ಯಾಟರಿ ಚಾಲಿತ ವಾಹನಗಳಿಗೆ ಒತ್ತು ನೀಡುತ್ತಿದೆ. ಅದಕ್ಕೆ ಲೀಥಿಯಂ ಬೇಕು. ತೈಲೋತ್ಪನ್ನಗಳಿಗೆ ಸೌದಿ ಅರೇಬಿಯಾ ಹೇಗೆ ವಿಶ್ವಕ್ಕೇ ರಾಜಧಾನಿಯಾಗಿದೆಯೋ ಅದೇ ರೀತಿ ಲೀಥಿಯಂ ವಿಷಯದಲ್ಲಿ ಅಫ್ಘಾನಿಸ್ತಾನಕ್ಕೆ ಅವಕಾಶವಿದೆ ಎಂದು ಅಮೆರಿಕದ ವರದಿ ಹೇಳಿತ್ತು. ಆದರೆ ಎಷ್ಟುಲೀಥಿಯಂ ಇದೆ ಎಂಬುದನ್ನು ಬಹಿರಂಗಪಡಿಸಿರಲಿಲ್ಲ.

ಗುಂಡಿನ ದಾಳಿಗೆ ಬೆಚ್ಚಿ ರನ್‌ವೇಗೆ ಓಡಿದ್ರು: ಆಫ್ಘನ್‌ನಲ್ಲಿ ಕನ್ನಡಿಗನ ಕರಾಳ ಅನುಭವ

ಬಡ, ಅಭಿವೃದ್ಧಿ ಹೊಂದುತ್ತಿರುವ ದೇಶಗಳಿಗೆ ‘ಒನ್‌ ಬೆಲ್ಟ್‌ ರೋಡ್‌’ ಹೆಸರಿನಲ್ಲಿ ಅಪಾರ ಸಾಲ ನೀಡಿ ಅಭಿವೃದ್ಧಿ ಕಾಮಗಾರಿ ನಡೆಸಿ ತನ್ನ ವಶಕ್ಕೆ ತೆಗೆದುಕೊಳ್ಳುವ ಚಾಳಿಯನ್ನು ಚೀನಾ ಹೊಂದಿದೆ. ಈಗಾಗಲೇ ಪಾಕಿಸ್ತಾನದಂತಹ ದೇಶಗಳು ಅದರ ಬಲೆಗೆ ಬಿದ್ದಿವೆ. ಅಫ್ಘಾನಿಸ್ತಾನವನ್ನೂ ಆ ಯೋಜನೆಗೆ ಸೇರ್ಪಡೆ ಮಾಡಿಕೊಳ್ಳಲು ತಾಲಿಬಾನ್‌ ಉಗ್ರರ ಜತೆ ಈಗಾಗಲೇ ಚೀನಾ ಮಾತುಕತೆ ಆರಂಭಿಸಿದೆ ಎನ್ನಲಾಗಿದೆ.