ರೋಮ್‌[ಮಾ.14]: ಭಾರೀ ಪ್ರಮಾಣದ ಸೋಂಕು ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಇಡೀ ದೇಶವನ್ನೇ ಬಂದ್‌ ಸ್ಥಿತಿಗೆ ತಂದು ನಿಲ್ಲಿಸಿದ ಹೊರತಾಗಿಯೂ, ಇಟಲಿಯಲ್ಲಿ ಕೊರೋನಾ ಸೋಂಕಿಗೆ ತುತ್ತಾಗುತ್ತಿರುವವರ ಮತ್ತು ಅದಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲಿದೆ. ಶುಕ್ರವಾರ ಒಂದೇ ದಿನ ದೇಶಧಲ್ಲಿ 2547 ಜನರಿಗೆ ಸೋಂಕು ತಗುಲಿದ್ದು, ಒಂದೇ ದಿನ 250 ಜನ ಸಾವನ್ನಪ್ಪಿದ್ದಾರೆ. ಇದರೊಂದಿಗೆ ಇಟಲಿಯಲ್ಲಿ ಸೋಂಕು ಪೀಡಿತರ ಸಂಖ್ಯೆ 17660ಕ್ಕೆ ಏರಿದ್ದು, ಸಾವಿನ ಸಂಖ್ಯೆ 1266ಕ್ಕೆ ಏರಿದೆ.

ಕರ್ನಾಟಕದಷ್ಟು ಜನಸಂಖ್ಯೆಯ ಇಟಲಿಯಲ್ಲೇಕೆ ಇಷ್ಟು ಸಾವು?

ಮಿಲಾನ್‌: ಜನಸಂಖ್ಯೆಯಲ್ಲಿ ಕರ್ನಾಟಕಕ್ಕಿಂತಲೂ (6.50 ಕೋಟಿ) ಸಣ್ಣದಾದ ಇಟಲಿಯಲ್ಲಿ ರೋಗಪೀಡಿತರ ಸಂಖ್ಯೆ ಮತ್ತು ಸಾವಿನ ಸಂಖ್ಯೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಇದಕ್ಕೆ ತಜ್ಞರು ಕೆಲ ಕಾರಣಗಳನ್ನೂ ಕೊಟ್ಟಿದ್ದಾರೆ.

1. ಇಟಲಿಯಲ್ಲಿ ಮೊದಲ ಕೊರೋನಾ ಸೋಂಕು ಪತ್ತೆಗೂ ತಿಂಗಳ ಮೊದಲೇ ಸಾವಿರಾರು ಜನರಲ್ಲಿ ನ್ಯುಮೋನಿಯಾ ರೀತಿಯ ತೊಂದರೆ ಕಾಣಿಸಿಕೊಂಡಿದೆ. ಆದರೆ ಸರ್ಕಾರ ಈ ಬಗ್ಗೆ ಎಚ್ಚೆತ್ತುಕೊಂಡಿರಲಿಲ್ಲ.

2. ಇಟಲಿಯಲ್ಲಿ 50 ವರ್ಷದ ದಾಟಿದವರ ಸಂಖ್ಯೆ ಹೆಚ್ಚಿದೆ. ಸೋಂಕು ಪೀಡಿತರಲ್ಲಿ ಇವರ ಸಂಖ್ಯೆಯೇ ಹೆಚ್ಚು. ಹೀಗಾಗಿಯೇ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ.

3. ಇಟಲಿಯಲ್ಲಿ ಧೂಮಪಾನಿಗಳ ಇತರೆ ದೇಶಗಳಿಗೆ ಹೋಲಿಸಿದರೆ ಭಾರೀ ಪ್ರಮಾಣದಲ್ಲಿದೆ. ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿರುವವರಲ್ಲಿ ಸೋಂಕು ಹಬ್ಬುವ ಸಾಧ್ಯತೆ ಹೆಚ್ಚು.

4. ಇಟಲಿಯಲ್ಲಿ ಆತ್ಮಿಯರನ್ನು ಕೆನ್ನೆಗೆ ಮುತ್ತಿಕ್ಕಿ ಸ್ವಾಗತಿಸುವ ಇಲ್ಲವೇ ಬೀಳ್ಕೊಡುವ ಸಂಪ್ರದಾಯ ಹೆಚ್ಚು. ಇದು ಕೂಡಾ ಸೋಂಕು ಹರಡಲು ಕಾರಣವಾಗಿದೆ.