ಗ್ರೀನ್‌ಲ್ಯಾಂಡ್‌ ದ್ವೀಪವನ್ನು ಖರೀದಿಸಲು ಸಿದ್ಧ ಎಂದು ಮೊದಲ ಅವಧಿಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್‌ ಸೌಮ್ಯವಾಗಿ ಹೇಳುತ್ತಿದ್ದರು. ಜ.3ರಂದು ವೆನಿಜುವೆಲಾದಲ್ಲಿ ಅಲ್ಲಿನ ಅಧ್ಯಕ್ಷರ ಬೆಡ್‌ರೂಂಗೇ ನುಗ್ಗಿ, ಪತ್ನಿ ಸಮೇತ ಅವರನ್ನು ಅಮೆರಿಕ ಕಮಾಂಡೋಗಳು ಹೊತ್ತೊಯ್ದ ಬಳಿಕ ಟ್ರಂಪ್‌ ಖದರ್ರೇ ಬದಲಾಗಿದೆ.

ಗ್ರೀನ್‌ಲ್ಯಾಂಡ್‌ ದ್ವೀಪವನ್ನು ಖರೀದಿಸಲು ಸಿದ್ಧ ಎಂದು ಮೊದಲ ಅವಧಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಸೌಮ್ಯವಾಗಿ ಹೇಳುತ್ತಿದ್ದರು. ಜ.3ರಂದು ವೆನಿಜುವೆಲಾದಲ್ಲಿ ಏಳೇ ಏಳು ಬಾಂಬ್‌ ಉಡಾಯಿಸಿ, ಅಲ್ಲಿನ ಅಧ್ಯಕ್ಷರ ಬೆಡ್‌ರೂಂಗೇ ನುಗ್ಗಿ, ಪತ್ನಿ ಸಮೇತ ಅವರನ್ನು ಅಮೆರಿಕ ಕಮಾಂಡೋಗಳು ಹೊತ್ತೊಯ್ದ ಬಳಿಕ ಟ್ರಂಪ್‌ ಖದರ್ರೇ ಬದಲಾಗಿದೆ. ಗ್ರೀನ್‌ಲ್ಯಾಂಡ್‌ ಅನ್ನು ವಶಕ್ಕೆ ಪಡೆಯಲು ಯಾವ ಹಂತಕ್ಕೆ ಬೇಕಾದರೂ ಹೋಗಲು ಸಿದ್ಧ ಎಂದು ಅಬ್ಬರಿಸುತ್ತಿದ್ದಾರೆ. ಥಾಯ್‌ಲ್ಯಾಂಡ್‌, ಫಿನ್‌ಲ್ಯಾಂಡ್‌, ಐಸ್‌ಲ್ಯಾಂಡ್ ಸೇರಿದಂತೆ ‘ಲ್ಯಾಂಡ್‌’ ಪದದಿಂದ ಅಂತ್ಯವಾಗುವ ಹತ್ತಕ್ಕೂ ಹೆಚ್ಚು ದೇಶಗಳು ಜಗತ್ತಿನಲ್ಲಿವೆ. ಅವನ್ನೆಲ್ಲಾ ಬಿಟ್ಟು, ಗ್ರೀನ್‌‘ಲ್ಯಾಂಡ್‌’ ಮೇಲೆಯೇ ಟ್ರಂಪ್‌ ಕಣ್ಣು ಲ್ಯಾಂಡ್‌ ಆಗಿರುವುದೇಕೆ? ಆ ದ್ವೀಪದ ಮೇಲೆ ಅಂತಹ ವ್ಯಾಮೋಹ ಏಕೆ? ಅಲ್ಲಿ ಅಂಥದ್ದೇನಿದೆ?

ಗ್ರೀನ್‌ಲ್ಯಾಂಡ್‌ ಅಲ್ಲ,

ಅದು ‘ಐಸ್‌’ಲ್ಯಾಂಡ್‌!

ಗ್ರೀನ್‌ಲ್ಯಾಂಡ್‌ ಎಂಬುದು ವಿಶ್ವದ ಅತಿದೊಡ್ಡ ದ್ವೀಪ. ಆದರೆ ದೇಶ ಅಲ್ಲ. ಡೆನ್ಮಾರ್ಕ್‌ಗೆ ಸೇರಿದ ಸ್ವಾಯತ್ತ ಪ್ರದೇಶ. ಭೌಗೋಳಿಕವಾಗಿ ಉತ್ತರ ಅಮೆರಿಕ ಖಂಡದಲ್ಲಿದೆ ಇದೆ. ಸಾಂಸ್ಕೃತಿಕವಾಗಿ ಯುರೋಪ್‌ ಜತೆ ಗುರುತಿಸಿಕೊಂಡಿದೆ. ಹೆಸರು ಸೂಚಿಸುವಂತೆ ಗ್ರೀನ್‌ಲ್ಯಾಂಡ್‌ ಅರಣ್ಯ, ಹಸಿರಿನಿಂದ ಕೂಡಿದ ಪ್ರದೇಶವಲ್ಲ. ಶೇ.80ರಷ್ಟು ಭಾಗ ಮಂಜುಗಡ್ಡೆ, ಹಿಮ ಹಾಗೂ ನೀರ್ಗಲ್ಲುಗಳಿಂದ ಆವೃತ್ತವಾಗಿರುವ ಭೂಭಾಗ. ಒಟ್ಟು ಜನಸಂಖ್ಯೆಯೇ 57 ಸಾವಿರ. ಅವರೆಲ್ಲಾ ಮಂಜುಗಡ್ಡೆ, ನೀರ್ಗಲ್ಲುಗಳಿಂದ ಮುಕ್ತವಾಗಿರುವ ಕಡಲ ತೀರದಲ್ಲಿ ವಾಸಿಸುತ್ತಿದ್ದಾರೆ.

ಗಡೀಪಾರಾದ ವ್ಯಕ್ತಿ ಇಟ್ಟ

ಹೆಸರು ‘ಗ್ರೀನ್‌ಲ್ಯಾಂಡ್‌’

ಹತ್ಯೆ ಆರೋಪದಲ್ಲಿ ಎರಿಕ್‌ ದ ರೆಡ್‌ ಎಂಬಾತನನ್ನು ಐಸ್‌ಲ್ಯಾಂಡ್‌ ಗಡೀಪಾರು ಮಾಡಿತ್ತು. ಬೇರೆ ಪ್ರದೇಶ ಹುಡುಕುತ್ತಾ ಆತ ಗ್ರೀನ್‌ಲ್ಯಾಂಡ್‌ ತಲುಪಿದ್ದ. ಮಂಜುಗಡ್ಡೆಯ ಪ್ರದೇಶಕ್ಕೆ ಯಾರೂ ಬರುವುದಿಲ್ಲ ಎಂದು ತಿಳಿದಿದ್ದ ಆತ, ಜನರನ್ನು ಸೆಳೆಯುವ ಮಾರ್ಕೆಟಿಂಗ್‌ ತಂತ್ರವಾಗಿ ‘ಗ್ರೀನ್‌ಲ್ಯಾಂಡ್‌’ ಎಂದು ಕರೆದ. ಆ ಹೆಸರೇ ಉಳಿದುಕೊಂಡು ಬಂದಿದೆ. ಕ್ರಿಸ್ತಪೂರ್ವ 2500ರಿಂದಲೇ ಗ್ರೀನ್‌ಲ್ಯಾಂಡ್‌ನಲ್ಲಿ ಜನವಸತಿ ನೆಲೆಸಿದೆ.

11 ಕರ್ನಾಟಕ= 1 ಗ್ರೀನ್‌ಲ್ಯಾಂಡ್‌

ಗ್ರೀನ್‌ಲ್ಯಾಂಡ್‌ ದ್ವೀಪವೇ ಆಗಿರಬಹುದು. ಗಾತ್ರದಲ್ಲಿ ಸಣ್ಣದಲ್ಲ. 2.2 ಕೋಟಿ ಜನಸಂಖ್ಯೆ ಇರುವ ಶ್ರೀಲಂಕಾ ಕೂಡ ದ್ವೀಪವೇ. ಆದರೆ ಲಂಕಾಗೆ ಹೋಲಿಸಿದರೆ ಗ್ರೀನ್‌ಲ್ಯಾಂಡ್‌ 33 ಪಟ್ಟು ದೊಡ್ಡದು! ಭಾರತಕ್ಕಿಂತ ಒಂದೂವರೆ ಪಟ್ಟು ಚಿಕ್ಕದು ಅಷ್ಟೆ. 11 ಕರ್ನಾಟಕಗಳನ್ನು ಜೋಡಿಸಿದರೆ ಎಷ್ಟು ಪ್ರದೇಶ ಸಿಗುತ್ತದೋ, ಅದು ಒಂದು ಗ್ರೀನ್‌ಲ್ಯಾಂಡ್‌ಗೆ ಸಮ!

ಒಂದೂರಿಂದ ಮತ್ತೊಂದು

ಊರಿಗೆ ರಸ್ತೆಗಳೇ ಇಲ್ಲ

ವಿಶ್ವದ ಅತಿದೊಡ್ಡ ದ್ವೀಪವಾಗಿದ್ದರೂ, ಶೇ.80ರಷ್ಟು ಮಂಜುಗಡ್ಡೆ, ನೀರ್ಗಲ್ಲುಗಳಿಂದಲೇ ತುಂಬಿರುವ ಕಾರಣ ಗ್ರೀನ್‌ಲ್ಯಾಂಡ್‌ನ ಉದ್ದಗಲಕ್ಕೂ ರಸ್ತೆ ಸಂಪರ್ಕವಿಲ್ಲ. ಕಡಲ ತೀರದಲ್ಲಿ ಜನವಸತಿಯುಳ್ಳ 16 ನಗರ, ಪಟ್ಟಣಗಳು ಹಾಗೂ 54 ಹಳ್ಳಿಗಳು ಇವೆ. ನಗರಗಳಲ್ಲಿರುವ ರಸ್ತೆಗಳು ಆ ಊರು ಮುಗಿಯುತ್ತಿದ್ದಂತೆ ಕೊನೆಗೊಳ್ಳುತ್ತವೆ. ಹೀಗಾಗಿ ಹಾವೇರಿಯಿಂದ ಶಿರಸಿಗೆ ಹೋಗುವವರು, ತುಮಕೂರಿನಿಂದ ಶಿವಮೊಗ್ಗಕ್ಕೆ, ಹಾಸನದಿಂದ ಮಂಗಳೂರಿಗೆ ತೆರಳುವವರ ರೀತಿ ರಸ್ತೆಯೇ ಸರಿ ಇಲ್ಲ ಎಂದು ಅಲ್ಲಿನ ಜನರು ಯಾರಿಗೂ ಬೈಯ್ಯುವುದಿಲ್ಲ! ಒಂದು ಊರಿನಿಂದ ಮತ್ತೊಂದು ಊರಿಗೆ ವಿಮಾನ, ಹೆಲಿಕಾಪ್ಟರ್‌, ಬೋಟ್‌, ಮಂಜುಗಡ್ಡೆ ಮೇಲೆ ಜಾರುವ ಸ್ನೋ ಮೊಬೈಲ್‌ಗಳೇ ಆಧಾರ.

ಮೀನು ಬಿಟ್ಟರೆ ಇಲ್ಲಿ ಬೇರೆ

ಏನೂ ಆಹಾರ ಸಿಗದು

ಸಮುದ್ರ ಇರುವ ಕಾರಣಕ್ಕೆ ಗ್ರೀನ್‌ಲ್ಯಾಂಡ್‌ ಜನರು ಹೇರಳವಾಗಿ ಮೀನು ಹಿಡಿಯುತ್ತಾರೆ. ಅದೇ ಅವರ ಕಸುಬು. ಇನ್ನುಳಿದಂತೆ ಡೆನ್ಮಾರ್ಕ್‌ ಸರ್ಕಾರ ನೀಡುವ ಅನುದಾನವೇ ಆಧಾರ. ಮೀನು ಸೇರಿದಂತೆ ಸಮುದ್ರಜೀವಿಗಳು, ಬೇಟೆಯಾಡಿ ಕೊಲ್ಲುವ ಕೆಲವು ಪ್ರಾಣಿಗಳನ್ನು ಬಿಟ್ಟು ಉಳಿದ ಎಲ್ಲ ವಸ್ತುಗಳನ್ನೂ ಗ್ರೀನ್‌ಲ್ಯಾಂಡ್‌ ಹೊರದೇಶಗಳಿಂದ ತರಿಸಿಕೊಳ್ಳುತ್ತದೆ.

31 ಸದಸ್ಯರ ಸಂಸತ್ತು,

ಅವರಿಗೊಬ್ಬರು ಪಿಎಂ

1721ರಿಂದ ಗ್ರೀನ್‌ಲ್ಯಾಂಡ್‌ ದ್ವೀಪ ಡೆನ್ಮಾರ್ಕ್‌ನ ವಸಾಹತು ಆಗಿತ್ತು. 1953ರಲ್ಲಿ ಡೆನ್ಮಾರ್ಕ್‌ನ ಭಾಗವಾಯಿತು. 1979ರಲ್ಲಿ ಅದಕ್ಕೆ ಸ್ವಾಯತ್ತೆ ನೀಡಲಾಯಿತು. ಸದ್ಯ ಗ್ರೀನ್‌ಲ್ಯಾಂಡ್‌ಗೆ ಪ್ರಧಾನಮಂತ್ರಿ ಇದ್ದಾರೆ. 31 ಸಂಸದರನ್ನು ಒಳಗೊಂಡ ಸಂಸತ್ತು ಕೂಡ ಇದೆ. ನಾಲ್ಕು ವರ್ಷಗಳಿಗೊಮ್ಮೆ ಸಂಸದರ ಆಯ್ಕೆಯಾಗುತ್ತದೆ.

19ನೇ ಶತಮಾನದಿಂದ

ಕೂಡ ಅಮೆರಿಕದ ಕಣ್ಣು

ಗ್ರೀನ್‌ಲ್ಯಾಂಡ್‌ ಬೇಕೇಬೇಕು ಎಂದು ಟ್ರಂಪ್‌ ಈಗ ಹಟ ಹಿಡಿದು ಕೂತಿರಬಹುದು. ಆದರೆ ಆ ದ್ವೀಪದ ಮೇಲೆ ಅಮೆರಿಕದ ಆಸೆ 19ನೇ ಶತಮಾನದಿಂದಲೂ ಇದೆ.

1. 1867ರಲ್ಲಿ ರಷ್ಯಾದಿಂದ ಅಲಾಸ್ಕಾವನ್ನು ಖರೀದಿಸಿದಾಗ ಡೆನ್ಮಾರ್ಕ್‌ನಿಂದ ಗ್ರೀನ್‌ಲ್ಯಾಂಡ್‌ ಹಾಗೂ ಐಸ್‌ಲ್ಯಾಂಡ್‌ ಅನ್ನೂ ಹಣ ಕೊಟ್ಟು ಖರೀದಿಸುವ ಪ್ರಸ್ತಾವ ಅಮೆರಿಕದಲ್ಲಿ ಬಂದಿತ್ತು. ಆದರೆ ಅದು ಕೈಗೂಡಲಿಲ್ಲ.

2. ಫಿಲಿಪ್ಪೀನ್ಸ್‌ನಲ್ಲಿರುವ ಮಿಂಡಾನಾವೋ ಎಂಬ ತನಗೆ ಸೇರಿದ ದ್ವೀಪವನ್ನು ಡೆನ್ಮಾರ್ಕ್‌ಗೆ ಬಿಟ್ಟುಕೊಟ್ಟು, ಅದಕ್ಕೆ ಪ್ರತಿಯಾಗಿ ಗ್ರೀನ್‌ಲ್ಯಾಂಡ್‌ ಅನ್ನು ಪಡೆಯುವ ಪ್ರಸ್ತಾಪವನ್ನು ಡೆನ್ಮಾರ್ಕ್‌ನಲ್ಲಿನ ಅಮೆರಿಕ ರಾಯಭಾರಿ 1910ರಲ್ಲಿ ಇಟ್ಟಿದ್ದರು. ಅದೂ ಕಾರ್ಯರೂಪಕ್ಕೆ ಬರಲಿಲ್ಲ.

3. ಎರಡನೇ ಮಹಾಯುದ್ಧದ ವೇಳೆ ಡೆನ್ಮಾರ್ಕ್‌ ಅನ್ನು ಜರ್ಮನಿ ಅತಿಕ್ರಮಿಸಿಕೊಂಡಿತು. ಆ ಸಂದರ್ಭದಲ್ಲಿ ಗ್ರೀನ್‌ಲ್ಯಾಂಡ್‌ನ ರಕ್ಷಣೆಯ ಹೊಣೆಗಾರಿಕೆ ಯನ್ನು ಅಮೆರಿಕ ಹೊತ್ತುಕೊಂಡಿತು. ಅಲ್ಲಿ ಸೇನಾ ನೆಲೆಯನ್ನೂ ಸ್ಥಾಪಿಸಿತು. 1946ರಲ್ಲಿ ಹಣ ಕೊಟ್ಟು ಗ್ರೀನ್‌ಲ್ಯಾಂಡ್‌ ಖರೀದಿಸುವ ಪ್ರಸ್ತಾಪವನ್ನು ಅಂದಿನ ಅಮೆರಿಕ ಅಧ್ಯಕ್ಷ ಹ್ಯಾರಿ ಟ್ರೂಮ್ಯಾನ್‌ ಇಟ್ಟಿದ್ದರು. ಆ ಕಾಲಕ್ಕೆ 100 ಮಿಲಿಯನ್‌ ಅಮೆರಿಕನ್‌ ಡಾಲರ್‌ ಮೌಲ್ಯದ ಚಿನ್ನವನ್ನು ನೀಡುವುದಾಗಿ ಡೆನ್ಮಾರ್ಕ್‌ಗೆ ಆಮಿಷವೊಡ್ಡಲಾಗಿತ್ತು. ಫಲಿಸಲಿಲ್ಲ.

ಅಮೆರಿಕಕ್ಕೆ ಏಕೆ ಈ ದ್ವೀಪ ಬೇಕು?

ವಿಶ್ಲೇಷಕರು ಎರಡು ಕಾರಣಗಳನ್ನು ಪ್ರಮುಖವಾಗಿ ನೀಡುತ್ತಾರೆ.

1. ಅಮೆರಿಕಕ್ಕೆ ಸದ್ಯ ರಷ್ಯಾ ಪ್ರಮುಖ ಶತ್ರು ದೇಶ. ಅದು ಬಿಟ್ಟರೆ ಚೀನಾ. ಒಂದೊಮ್ಮೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ಗೆ ಅಮೆರಿಕ ಮೇಲೆ ದಾಳಿ ಮಾಡಬೇಕು ಎಂದು ಅನಿಸಿದರೆ, ಉತ್ತರ ಧ್ರುವದ ಮೂಲಕ ಗ್ರೀನ್‌ಲ್ಯಾಂಡ್‌ ಮಾರ್ಗದಲ್ಲಿ ಕ್ಷಿಪಣಿ ಉಡಾಯಿಸುವುದು ಹತ್ತಿರದ ಮಾರ್ಗ. ಚೀನಾಗೂ ಅದೇ ಸೂಕ್ತ ರಹದಾರಿ. ಭವಿಷ್ಯದ ಅಂತಹ ಅಪಾಯ ತಡೆಯಲು ಗ್ರೀನ್‌ಲ್ಯಾಂಡ್‌ ಅಮೆರಿಕಕ್ಕೆ ಬೇಕು. ಅಂತಹ ಅಪಾಯ ಎದುರಾದಾಗ ಮಾರ್ಗಮಧ್ಯೆಯೇ ಕ್ಷಿಪಣಿಗಳನ್ನು ಅಮೆರಿಕ ಹೊಡೆದುರುಳಿಸಿ, ದೇಶ ರಕ್ಷಿಸಿಕೊಳ್ಳಬಹುದು.

2. ಗ್ರೀನ್‌ಲ್ಯಾಂಡ್‌ನ ಮಂಜುಗಡ್ಡೆ, ನೀರ್ಗಲ್ಲುಗಳ ಕೆಳಭಾಗದಲ್ಲಿ ಅತಿ ಅಪರೂಪದ ಖನಿಜಗಳು, ತೈಲ, ಅನಿಲಗಳ ಮಹಾ ನಿಕ್ಷೇಪವೇ ಇದೆ. ಗಾಳಿ ಯಂತ್ರ, ವಿದ್ಯುತ್‌ ಚಾಲಿತ ವಾಹನ, ಇಂಧನ ಸಂಗ್ರಹ ತಂತ್ರಜ್ಞಾನ, ರಾಷ್ಟ್ರೀಯ ಭದ್ರತಾ ಸೇವೆಗಳಿಗೆ ಈ ಖನಿಜಗಳು ಅಮೂಲ್ಯ. ಇಂತಹ ಖನಿಜವನ್ನು ಹೊಂದಿರುವ ಚೀನಾ ಏಕಸ್ವಾಮ್ಯ ಪ್ರದರ್ಶಿಸಲು ಯತ್ನಿಸುತ್ತಿದೆ. ಅದಕ್ಕೆ ಸಡ್ಡು ಹೊಡೆಯಲು ಗ್ರೀನ್‌ಲ್ಯಾಂಡ್‌ ಬೇಕು. ಜಾಗತಿಕ ತಾಪಮಾನ ಏರಿಕೆಯಿಂದ ಗ್ರೀನ್‌ಲ್ಯಾಂಡ್‌ನ ನೀರ್ಗಲ್ಲುಗಳು ಕರಗುತ್ತಿವೆ. ಹೀಗಾಗಿ ಅಮೆರಿಕಕ್ಕೆ ಅಲ್ಲಿ ಗಣಿಗಾರಿಕೆ ಸುಲಭ ಎಂಬ ವಾದವಿದೆ.

3. ಉತ್ತರ ಧ್ರುವದಲ್ಲಿ ನೀರ್ಗಲ್ಲು ಕರಗುತ್ತಿರುವುದರಿಂದ ಗ್ರೀನ್‌ಲ್ಯಾಂಡ್‌ ಸಮುದ್ರ ಮಾರ್ಗ ಬಳಸಿದರೆ ಏಷ್ಯಾದಿಂದ ಯುರೋಪ್‌ಗೆ ಬಹಳ ಕಡಿಮೆ ಸಮಯ, ಇಂಧನ ಬಳಸಿ ತಲುಪಬಹುದು. ಸೂಯೆಜ್, ಪನಾಮಾ ಕಾಲುವೆಗಳಲ್ಲಿ ಕಾಯಬೇಕಿಲ್ಲ. ಈ ಮಾರ್ಗದ ಪ್ರಾಬಲ್ಯ ಸಾಧಿಸಲು ಅಮೆರಿಕ ಯತ್ನ.

ಅಮೆರಿಕ ಹೇಗೆ ವಶಕ್ಕೆ ಪಡೆಯಬಹುದು?

ಗ್ರೀನ್‌ಲ್ಯಾಂಡ್‌ ಬಳಿ ಸೇನೆ ಇಲ್ಲ. ಏನಾದರೂ ಆದರೆ 3000 ಕಿ.ಮೀ. ದೂರದಲ್ಲಿರುವ ಡೆನ್ಮಾರ್ಕ್‌ ಮೊರೆ ಹೋಗಬೇಕು. ಗ್ರೀನ್‌ಲ್ಯಾಂಡ್‌ನಲ್ಲಿನ ಮೂರನೇ ಒಂದರಷ್ಟು ಜನರು ರಾಜಧಾನಿ ನೂಕ್‌ ಸುತ್ತ ಇದ್ದಾರೆ. ಉಳಿದವರು ಪಶ್ಚಿಮ ಕರಾವಳಿಯಲ್ಲಿದ್ದಾರೆ. ಈಗಾಗಲೇ ಅಮೆರಿಕದ ಸೇನಾ ನೆಲೆ ಅಲ್ಲಿದ್ದು, 100 ಯೋಧರು ಕಾರ್ಯನಿರ್ವಹಿಸುತ್ತಿದ್ದಾರೆ. ಬಲಾಢ್ಯ ಅಮೆರಿಕಕ್ಕೆ ಪೈಪೋಟಿ ನೀಡುವಷ್ಟು ಸಾಮರ್ಥ್ಯ ಗ್ರೀನ್‌ಲ್ಯಾಂಡ್‌ ಬಿಡಿ, ಡೆನ್ಮಾರ್ಕ್‌ಗೂ ಇಲ್ಲ.

ಇನ್ನು ಗ್ರೀನ್‌ಲ್ಯಾಂಡ್‌ನ 56 ಸಾವಿರ ಜನರಿಗೆ 1 ಕೋಟಿ ರು.ನಂತೆ ಹಣ ಕೊಟ್ಟರೂ 56 ಸಾವಿರ ಕೋಟಿ ರು. ಬೇಕು. ಅದರಲ್ಲಿ ಅರ್ಧದಷ್ಟು ಜನರ ಹಣ ಖರೀದಿಗೆ 28 ಸಾವಿರ ಕೋಟಿ ರು. ಸಾಕು. ಅಮೆರಿಕದಂತಹ ದೈತ್ಯ ದೇಶಕ್ಕೆ ಇದು ದೊಡ್ಡ ಹಣವಲ್ಲ.

ಸೇನಾ ಬಲಾಬಲ

ಅಮೆರಿಕ ಡೆನ್ಮಾರ್ಕ್‌

ಸೈನಿಕರು 21.27 ಲಕ್ಷ 83ಸಾವಿರ

ಯುದ್ಧ ವಿಮಾನ 1790 31

ಹೆಲಿಕಾಪ್ಟರ್‌ 5843 34

- ಎಂ.ಎಲ್‌. ಲಕ್ಷ್ಮೀಕಾಂತ್‌