ತರಕಾರಿ ವ್ಯಾಪಾರಿ ಮಗ ಹಿಜ್ಬುಲ್ಲಾ ಉಗ್ರ ಸಂಘಟನೆ ಲೀಡರ್ ಆಗಿದ್ದೇಗೆ? ನಸ್ರಲ್ಲಾನ ರೋಚಕ ಕತೆ, ಮುಂದಿನ ಉತ್ತರಾಧಿಕಾರಿ ಯಾರು?
ತರಕಾರಿ ವ್ಯಾಪಾರಿಯ ಮಗನಾದ ಈತ ಹಿಜ್ಬುಲ್ಲಾ ಮುಖ್ಯಸ್ಥನಾಗಿ 30 ವರ್ಷ ಉಗ್ರ ಸಂಘಟನೆಯನ್ನು ನಡೆಸಿದ್ದನು. ಉಗ್ರ ಸಂಘಟನೆಯ ಹಿಜ್ಬುಲ್ಲಾನ ಕುರಿತ ರೋಚಕ ವಿಷಯಗಳ ಮಾಹಿತಿ ಇಲ್ಲಿದೆ.
ಬೈರೂತ್: ಇರಾನ್ ಬೆಂಬಲದೊಂದಿಗೆ 3 ದಶಕಗಳಿಗೂ ಹೆಚ್ಚು ಕಾಲ ಲೆಬನಾನ್‌ನ ಹಿಜ್ಬುಲ್ಲಾ ಉಗ್ರ ಸಂಘಟನೆಯನ್ನು ಮುನ್ನಡೆಸಿದ ನಸ್ರಲ್ಲಾ ಈಗ ಇಸ್ರೇಲಿ ದಾಳಿಗೆ ಬಲಿಯಾಗಿದ್ದಾನೆ. ತರಕಾರಿ ವ್ಯಾಪಾರಿಯ ಮಗನಾದ ಈತ ಹಿಜ್ಬುಲ್ಲಾ ಉಗ್ರ ಸಂಘಟನೆಯನ್ನು ಮುನ್ನಡೆಸಿದ್ದ ಬಗ್ಗೆ ರೋಚಕ ಕತೆಗಳಿವೆ.
ಇಸ್ರೇಲ್ ಅನೇಕ ಇಸ್ಲಾಮಿಕ್ ದೇಶಗಳನ್ನು ಆಕ್ರಮಿಸಿಕೊಂಡಿದೆ ಎಂಬ ಸಿಟ್ಟು ಪ್ಯಾಲೆಸ್ತೀನ್, ಯೆಮೆನ್ ಹಾಗೂ ಲೆಬನಾನ್‌ನಲ್ಲಿದೆ. ಇದೇ ಸಿಟ್ಟಿನ ಕಾರಣ 1960ರ ದಶಕದಲ್ಲಿ ಕೆಲವು ಉಗ್ರ ಸಂಘಟನೆಗಳು ಲೆಬನಾನ್‌ನಲ್ಲಿ ಹುಟ್ಟಿದವು. 1975ರಲ್ಲಿ ಮೊದಲ ಬಾರಿ ಅಮಲ್ ಚಳವಳಿ ಎಂಬ ಉಗ್ರ ಸಂಘಟನೆಯನ್ನು ನಸ್ರಲ್ಲಾ ಸೇರಿಕೊಂಡ. ಆದರೆ ನಂತರ ಅರಿಂದ ಬೇರ್ಪಟ್ಟು 1985ರಲ್ಲಿ ಸ್ಥಾಪನೆಯಾದ ಹಿಜ್ಬುಲ್ಲಾ ಉಗ್ರ ಸಂಘಟನೆ ಸೇರಿಕೊಂಡ. 1992ರಲ್ಲಿ ಇದರ ಇಸ್ರೇಲಿ ಹೆಲಿಕಾಪ್ಟರ್ ದಾಳಿಯಲ್ಲಿ ಹಿಜ್ಬುಲ್ಲಾ ಮುಖ್ಯಸ್ಥ ಅಬ್ಬಾಸ್ ಅಲ್-ಮುಸಾವಿ ಹತನಾದ ನಂತರ ನಸ್ರಲ್ಲಾನೇ ಈ ಸಂಘಟನೆಯ ನಾಯಕನಾದ.
ಈತನ ಉಗ್ರ ಸಂಘಟನೆ ಯಾವ ಮಟ್ಟಿಗೆ ಬೆಳೆಯಿತು ಎಂದರೆ ಲೆಬನಾನ್ ಸೇನೆಗಿಂತ ಬಲಶಾಲಿಯಾಗಿದೆ. ಅಲ್ಲದೆ, ಲೆಬನಾನ್‌ನಲ್ಲಿ ನಸ್ರಲ್ಲಾ ಮಾತನ್ನು ಸರ್ಕಾರವೂ ಮೀರುತ್ತಿರಲಿಲ್ಲ. ಏಕೆಂದರೆ ಹಿಜ್ಬುಲ್ಲಾಗೆ ಮಧ್ಯಪ್ರಾಚ್ಯದ ಪ್ರಬಲ ದೇಶವಾದ ಇರಾನ್ ಬೆಂಬಲವಿದೆ.
ಇಸ್ರೇಲ್ ಅನ್ನು ಸಂಪೂರ್ಣ ನಿರ್ಮೂಲನೆ ಮಾಡಬೇಕು ಎಂಬ ಧ್ಯೇಯ ಹೊಂದಿದ್ದ ನಸ್ರಲ್ಲಾ, ತನ್ನ ಹಿಜ್ಬುಲ್ಲಾ ಸಂಘಟನೆಯ ಮೂಲಕ ಇಸ್ರೇಲ್ ಮೇಲೆ ಅನೇಕ ಬಾರಿ ದಾಳಿ ನಡೆಸಿದ್ದ. ಇಸ್ರೇಲ್ ವಿರುದ್ಧ ತೊಡೆ ತಟ್ಟಿದ್ದ ಹಮಾಸ್ ಉಗ್ರರಿಗೆ ಬೆಂಬಲ ನೀಡುತ್ತಿದ್ದ. ಅಲ್ಲದೆ, ಟರ್ಕಿ, ಅರ್ಜೆಂಟೀನಾ ಮತ್ತು ಅನೇಕ ವಿದೇಶಗಳಲ್ಲಿನ ಇಸ್ರೇಲಿ ರಾಯಭಾರ ಕಚೇರಿ ಮೇಲೂ ಹಿಜ್ಬುಲ್ಲಾ ದಾಳಿ ನಡೆಸಿತ್ತು. ಅರ್ಜೆಂಟೀನಾದಲ್ಲಿ ದಾಳಿಗೆ 29 ಜನ ಸಾವನ್ನಪ್ಪಿದ್ದರು.
ಹೀಗಾಗಿ ಇಸ್ರೇಲ್‌ನಿಂದ ಹತ್ಯೆಯಾಗುವ ಭೀತಿ ಯಾವಾಗಲೂ ನಸ್ರಲ್ಲಾಗೆ ಇತ್ತು. ಹೀಗಾಗಿ ಅನೇಕ ವರ್ಷಗಳಿಂದ ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲ. ಶುಕ್ರವಾರ ನಡೆದ ಇಸ್ರೇಲ್ ವೈಮಾನಿಕ ದಾಳಿಗಳು ನಸ್ರಲ್ಲಾನನ್ನು ಟಾರ್ಗೆಟ್ ಮಾಡಿದ್ದು ಮೊದಲಲ್ಲ. 2006ರಲ್ಲೂ ಒಮ್ಮೆ ಈತನ ಹತ್ಯೆಗೆ ಯತ್ನ ನಡೆದಿತ್ತು. ಆದರೆ ಪಾರಾಗಿದ್ದ.
ಇಸ್ರೇಲ್‌ನಿಂದ ಹಿಜ್ಬುಲ್ಲಾ ಕೇಂದ್ರ ಕಚೇರಿ ಮೇಲೆ ಭಾರಿ ವಾಯುದಾಳಿ
ಇರಾನ್ ಸರ್ವೋಚ್ಚ ನಾಯಕ ಸುರಕ್ಷಿತ ಸ್ಥಳಕ್ಕೆ ಶಿಫ್ಟ್
ದುಬೈ: ಇಸ್ರೇಲ್ ದೇಶವು ಹಿಜ್ಬುಲ್ಲಾ ಉಗ್ರ ನೇತಾರ ನಸ್ರಲ್ಲಾನನ್ನು ಹತ್ಯೆ ಮಾಡಿದ ಕಾರಣ, ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ದೇಶದೊಳಗಿನ ಸುರಕ್ಷಿತ ಸ್ಥಳಕ್ಕೆ ವರ್ಗಾಯಿಸಲಾಗಿದೆ ಹಾಗೂ ಹೆಚ್ಚಿನ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.
ಇರಾನ್ ಕೃಪಾಪೋಷಿತ ಉಗ್ರ ಸಂಘಟನೆಯಾದ ಹಿಜ್ಬುಲ್ಲಾ ಮುಖ್ಯಸ್ಥ ಹಸನ್ ನಸ್ರಲ್ಲಾನನ್ನು ಕೊಂದಿರುವುದಾಗಿ ಇಸ್ರೇಲ್ ಶನಿವಾರ ಘೋಷಿಸಿದೆ. ಹೀಗಾಗಿ ಮುಂದಿನ ನಡೆ ಬಗ್ಗೆ ಇರಾನ್, ಹಿಜ್ಬುಲ್ಲಾ ಹಾಗೂ ವಿವಿಧ ಉಗ್ರ ಸಂಘಟನೆಗಳ ಜತೆ ಮಾತುಕತೆ ನಡೆಸುತ್ತಿದೆ
ಲೆಬನಾನ್ ಉತ್ತರಾಧಿಕಾರಿ ಯಾರು?
ಲೆಬನಾನ್ ಉಗ್ರ ಸಂಘಟನೆ ಹಿಜ್ಬುಲ್ಲಾ ಮುಖ್ಯಸ್ಥ ನಸ್ರಲ್ಲಾ ಹತ್ಯೆ ಆಗಿರುವ ಕಾರಣ, ಅವರ ಉತ್ತರಾಧಿಕಾರಿ ಯರು ಎಂಬ ಪ್ರಶ್ನೆ ಹುಟ್ಟುಹಾಕಿದೆ. ಪ್ರಸ್ತುತ ಹಶೇಂ ಸಫಿದ್ದೀನ್ ಎಂಬಾತನನ್ನು ನಸ್ರಲ್ಲಾ ಅವರ ಉತ್ತರಾಧಿಕಾರಿ ಎಂದು ಪರಿಗಣಿಸಲಾಗಿದೆ. ಹಿಜ್ಬುಲ್ಲಾ ನಾಯಕನಾಗಲು ಇರಾನ್ ಬೆಂಬಲ ಬೇಕಾಗುತ್ತದೆ. ಹಶೇಂಗೆ ಬೆಂಬಲ ಇದೆ ಎನ್ನಲಾಗಿದೆ. ಸದ್ಯ ಈತ ಹಿಜ್ಬುಲ್ಲಾ ರಾಜಕೀಯ ವ್ಯವಹಾರಗಳನ್ನು ನೋಡಿಕೊಳ್ಳುವ ಮತ್ತು ಗುಂಪಿನ ಜಿಹಾದ್ ಕೌನ್ಸಿಲ್‌ನ ಸದಸ್ಯನಾಗಿದ್ದಾನೆ. ನಸ್ರಲ್ಲಾನ ಸೋದರ ಸಂಬಂಧಿಯೂ ಹೌದು ಹಾಗೂ ಮೌಲ್ವಿಯ ಹಿನ್ನೆಲೆ ಹೊಂದಿದವನು, ಈತನನ್ನು ಅಮೆರಿಕ 2017 ರಲ್ಲಿ ಭಯೋತ್ಪಾದಕ ಎಂದು ಘೋಷಿಸಿತ್ತು.