ಸೋಂಕಿನಿಂದ ಚೇತರಿಸಿಕೊಂಡ ಬಳಿಕವೂ ಅನೇಕ ದೀರ್ಘಕಾಲಿಕ ಅನಾರೋಗ್ಯ ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ ಈ ರೀತಿಯ ಸನ್ನಿವೇಶವನ್ನು ‘ದೀರ್ಘಾವಧಿ ಕೋವಿಡ್‌’ ಎಂದು ವಿಶ್ವಸಂಸ್ಥೆ ಗುರುತಿಸಿದೆ

ಜಿನೇವಾ (ಆ.06): ಕೊರೋನಾ ವೈರಸ್‌ನಿಂದ ಅತಿಯಾಗಿ ಬಳಲಿದ್ದ ವ್ಯಕ್ತಿಗಳಲ್ಲಿ ಸೋಂಕಿನಿಂದ ಚೇತರಿಸಿಕೊಂಡ ಬಳಿಕವೂ ಅನೇಕ ದೀರ್ಘಕಾಲಿಕ ಅನಾರೋಗ್ಯ ಸಮಸ್ಯೆಗಳು ಕಾಣಿಸಿಕೊಂಡಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಈ ರೀತಿಯ ಸನ್ನಿವೇಶವನ್ನು ‘ದೀರ್ಘಾವಧಿ ಕೋವಿಡ್‌’ ಎಂದು ವಿಶ್ವಸಂಸ್ಥೆ ಗುರುತಿಸಿದೆ.

ಸದ್ಯ ವಿಶ್ವದಲ್ಲೀಗ 20 ಕೋಟಿಗೂ ಅಧಿಕ ಮಂದಿಗೆ ಕೋವಿಡ್‌ ಬಂದಿರುವುದು ದೃಢಪಟ್ಟಿದೆ. ಆದರೆ, ಅವರಲ್ಲಿ ಎಷ್ಟುಮಂದಿ ದೀರ್ಘ ಕೋವಿಡ್‌ನಿಂದ ಬಳಲುತ್ತಿದ್ದಾರೆ ಎಂಬುದು ತಿಳಿದುಬಂದಿಲ್ಲ. ದೀರ್ಘಾವಧಿ ಕೋವಿಡ್‌ ಎನ್ನುವುದು ಕೊರೋನಾ ಸಾಂಕ್ರಾಮಿಕದ ನಿಗೂಢ ಸಂಗತಿ ಆಗಿದೆ. ಹೀಗಾಗಿ ಕೊರೋನಾ ತೀವ್ರ ಹಂತಕ್ಕೆ ತಲುಪಿ ಗುಣಮುಖರಾದವರು ನಂತರದ ದಿನಗಳಲ್ಲಿ ಯಾವುದೇ ಆರೋಗ್ಯ ಸಮಸ್ಯೆ ಕಾಣಿಸಿಕೊಂಡರೆ ಕೂಡಲೇ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಡಬ್ಲ್ಯು ಎಚ್‌ಒದ ಕೋವಿಡ್‌-19 ತಾಂತ್ರಿಕ ವಿಭಾಗದ ಮುಖ್ಯಸ್ಥೆ ಮರೀನ್‌ ವಾನ್‌ ಕೆರ್ಖೋವ್‌ ಹೇಳಿದ್ದಾರೆ.

ಕೋವಿಡ್‌ನಿಂದ ಮೃತಪಟ್ಟ ಬಿಪಿಎಲ್ ಕುಟುಂಬಕ್ಕೆ 1 ಲಕ್ಷ ಪರಿಹಾರ

ಸುದ್ದಿಗೋಷ್ಠಿಯ ವೇಳೆ ಮಾತನಾಡಿದ ಮರೀನ್‌, ‘ವಿಶ್ವದಲ್ಲಿ ಅನೇಕ ಮಂದಿ ಕೋವಿಡ್‌ ಬಳಿಕದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ದೀರ್ಘಾವಧಿ ಕೋವಿಡ್‌ ಯಾವಾಗ ಕೊನೆಗೊಳ್ಳುತ್ತದೆ ಎಂದು ಹೇಳುವುದು ಕಷ್ಟ. ಈ ಬಗ್ಗೆ ಅರ್ಥಮಾಡಿಕೊಳ್ಳುವ ನಿಟ್ಟಿನಿಂದ ನಾವು ಕಾರ್ಯನಿರ್ವಹಿಸುತ್ತಿದ್ದೇವೆ. ಕೋವಿಡ್‌ನಿಂದ ಚೇತರಿಸಿಕೊಂಡ ಬಳಿಕವೂ ಅನೇಕ ಮಂದಿ ಉಸಿರಾಟ ಸಮಸ್ಯೆ, ತೀವ್ರ ಆಯಾಸ, ಹೃದಯ ಸಂಬಂಧಿ ಕಾಯಿಲೆಗಳಂತಹ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಎದೆನೋವು, ಅಲರ್ಜಿಯಂತಹ 200ಕ್ಕೂ ಹೆಚ್ಚು ರೋಗ ಲಕ್ಷಣಗಳನ್ನು ಗುರುತಿಸಲಾಗಿದೆ. ಕೆಲವರಲ್ಲಿ 3ರಿಂದ 6 ತಿಂಗಳ ವರೆಗೆ ಕೋವಿಡ್‌ ಬಳಿಕದ ರೋಗ ಲಕ್ಷಣಗಳು ಕಂಡುಬಂದಿವೆ. ಇನ್ನೂ ಕೆಲವರಲ್ಲಿ 9 ತಿಂಗಳಿಗಿಂತಲೂ ಹೆಚ್ಚು ಅವಧಿಗೆ ಇಂತಹ ಆರೋಗ್ಯ ಸಮಸ್ಯೆಗಳು ಉಂಟಾಗಿರುವುದು ನಮ್ಮ ಗಮನಕ್ಕೆ ಬಂದಿದೆ. ಕೊರೋನಾ ಬಳಿಕದ ರೋಗ ಲಕ್ಷಣಗಳಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಹೀಗಾಗಿ ಯಾರಾದರೂ ದೀರ್ಘಕಾಲಿಕ ಸಮಸ್ಯೆಯಿಂದ ಬಳಲುತ್ತಿದ್ದರೆ ತಜ್ಞ ವೈದ್ಯರ ನೆರವು ಪಡೆಯಬೇಕು ಎಂದು ಹೇಳಿದ್ದಾರೆ.

ಏನಿದು ದೀರ್ಘಾವಧಿ ಕೋವಿಡ್‌? : ಕೋವಿಡ್‌ ಸೋಂಕಿತರಾದ ಹೆಚ್ಚಿನ ಜನರು ರೋಗದ ಗಂಭೀರತೆಯನ್ನು ಆಧರಿಸಿ 2ರಿಂದ 3 ವಾರಗಳಲ್ಲಿ ಚೇತರಿಸಿಕೊಳ್ಳುತ್ತಾರೆ. ಆದರೆ, ಕೊರೋನಾದಿಂದ ಚೇತರಿಸಿಕೊಂಡ ಬಳಿಕವೂ ಅನೇಕರಲ್ಲಿ ದೀರ್ಘಾವಧಿ ರೋಗ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಇದನ್ನು ದೀರ್ಘಾವಧಿ ಕೋವಿಡ್‌ ಎಂದು ಗುರುತಿಸಲಾಗಿದೆ.