ಪುಟಿನ್ ಟಿವಿ ಸಂವಾದದ ಮೇಲೆ ‘ಸೈಬರ್ ದಾಳಿ’: ರಷ್ಯಾ ಅಧ್ಯಕ್ಷರಿಗೆ ಆಘಾತ!
* ರಷ್ಯಾ ಅಧ್ಯಕ್ಷ ಪುಟಿನ್ ಫೋನ್-ಇನ್ ಮೇಲೆ ‘ಸೈಬರ್ ದಾಳಿ’
* ಈ ಬಗ್ಗೆ ಖುದ್ದು ಪುಟಿನ್‌ಗೆ ‘ಆಘಾತ’
* ‘ರೋಷ್ಯಾ-24’ ಎಂಬ ಚಾನೆಲ್‌ನಲ್ಲಿ ರಷ್ಯಾ ನಾಗರಿಕರ ಜತೆಗಿನ ಫೋನ್-ಇನ್ ಸಂವಾದದಲ್ಲಿ ಪುಟಿನ್ ಭಾಗಿ
ಮಾಸ್ಕೋ(ಜು.01): ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಬುಧವಾರ ಟೀವಿ ಫೋನ್-ಇನ್ ಸಂವಾದದ ನೇರಪ್ರಸಾರ ಕಾರ್ಯಕ್ರಮದಲ್ಲಿ ಪಾಲ್ಗೊಂಡಾಗ ಸೈಬರ್ ದಾಳಿಕೋರರು ಈ ಕಾರ‍್ಯಕ್ರಮದ ದೂರವಾಣಿ ಸಂಪರ್ಕಗಳನ್ನು ಹ್ಯಾಕ್ ಮಾಡಲು ಯತ್ನಿಸಿದ ಘಟನೆ ನಡೆದಿದೆ. ಇದನ್ನು ಕಂಡು ಸ್ವತಃ ಪುಟಿನ್ ದಂಗಾಗಿದ್ದಾರೆ.
‘ರೋಷ್ಯಾ-24’ ಎಂಬ ಚಾನೆಲ್‌ನಲ್ಲಿ ರಷ್ಯಾ ನಾಗರಿಕರ ಜತೆಗಿನ ಫೋನ್-ಇನ್ ಸಂವಾದದಲ್ಲಿ ಪುಟಿನ್ ಪಾಲ್ಗೊಂಡಿದ್ದರು. ಈ ಕಾರ‍್ಯಕ್ರಮ ಸುಮಾರು 4 ತಾಸು ನಡೆಯಿತು. ಕಾರ‍್ಯಕ್ರಮದ ವೇಳೆ ಪುಟಿನ್ ಅವರಿಗೆ ರಷ್ಯಾದ ಮೂಲೆ ಮೂಲೆಗಳಿಂದ ದೂರವಾಣಿ ಕರೆಗಳು ಬಂದವು.
ಆದರೆ ಫೋನ್-ಇನ್ ವೇಳೆ ನಿರಂತರವಾಗಿ ಸಮಸ್ಯೆ ಆಗುತ್ತಿತ್ತು. ದೂರದ ಕುಗ್ರಾಮಗಳಿಂದ ಬಂದ ಕರೆಗಳು ಪದೇ ಪದೇ ಕಡಿತವಾಗುತ್ತಿದ್ದವು ಹಾಗೂ ಕರರೆಗಳಲ್ಲಿ ಅಡ್ಡಿ ಉಂಟಾಗುತ್ತಿತ್ತು. ಕುಜ್‌ಬಾಸ್ ಎಂಬಲ್ಲಿನ ಕರೆ ಬಂದಾಗ ಅಡ್ಡಿ ಆಗಿದನ್ನು ಗಮನಿಸಿದ ಟೀವಿ ನಿರೂಪಕಿ, ‘ನಮ್ಮ ಡಿಜಿಟಲ್ ವ್ಯವಸ್ಥೆಯ ಮೇಲೆ ಪದೇ ಪದೇ ದಾಳಿ ನಡೆಯುತ್ತಿದೆ’ ಎಂದು ಹೇಳಿದರು.
ಆಗ ದಂಗಾದ ಪುಟಿನ್, ‘ತಮಾಷೆ ಮಾಡುತ್ತಿದ್ದೀರಾ? ನಿಜವಾಗಿಯೂ ಹೀಗೆ ನಡೆಯುತ್ತಿದೆಯೇ. ಹ್ಯಾಕರ್‌ಗಳು ಕುಜ್‌ಬಾಸ್‌ನಲ್ಲಿ ಇರಬಹುದು’ ಎಂದು ಪ್ರತಿಕ್ರಿಯಿಸಿದರು. ಆದರೆ ರಷ್ಯಾ ಸರ್ಕಾರದ ವಕ್ತಾರರು ಎಲ್ಲಿಂದ ಕಾರ‍್ಯಕ್ರಮ ಹ್ಯಾಕ್ ಆಗಿದೆ ಎಂಬುದನ್ನು ಖಚಿತಪಡಿಸಿಲ್ಲ.
ಸೈಬರ್ ದಾಳಿ ಕುರಿತು ಈ ಹಿಂದೆಯೂ ರಷ್ಯಾ ಸುದ್ದಿಯಲ್ಲಿತ್ತು. ಅಮೆರಿಕ ಚುನಾವಣೆ ವೇಳೆ ರಷ್ಯಾ ಮೇಲೆ ಅಮೆರಿಕನ್ನರು ಈ ಬಗ್ಗೆ ಆರೋಪ ಮಾಡಿದ್ದರು.