ಫ್ಲೋಟಿಂಗ್ ಸಿಟಿ ವೆನಿಸ್‌ನಲ್ಲಿ ಏನಾಗುತ್ತಿದೆ?

ಜಗತ್ತಿನ ಅತಿ ಪ್ರಾಚೀನ ವ್ಯಾಪಾರ ಕೇಂದ್ರ, ಪ್ರಸಿದ್ಧ ನಗರಿ ವೆನಿಸ್‌ನಲ್ಲಿ ಕಳೆದ 50 ವರ್ಷಗಳಲ್ಲೇ ಮೊದಲ ಬಾರಿಗೆ ಭಾರೀ ಸಮುದ್ರದ ಅಲೆಗಳಿಂದ ನೀರು ಆವರಿಸಿದೆ. ವೆನಿಸ್‌ನ ಬಹುತೇಕ ಭಾಗ ಸಮುದ್ರ ಮಟ್ಟದಿಂದ 1.1 ಮೀಟರ್‌ನಿಂದ 1.4 ಮೀಟರ್‌ನಷ್ಟುಎತ್ತರದಲ್ಲಿದೆ. ಆದರೆ, ಪ್ರವಾಹದ ನೀರು ಈಗಾಗಲೇ 1.87 ಮೀಟರ್‌ ಎತ್ತರ ತಲುಪಿದ್ದು, ನಗರದ ಶೇ.87ರಷ್ಟುಭಾಗ ಜಲಾವೃತಗೊಂಡಿದೆ. ಭಾರೀ ಮಳೆಯಿಂದಾಗಿ 1.60 ಮೀಟರ್‌ ಎತ್ತರದ ಸಮುದ್ರದ ಅಲೆಗಳು ಏಳುವ ಸಾಧ್ಯತೆ ಇದ್ದು, ವೆನಿಸ್‌ ಇನ್ನಷ್ಟು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ. ಹಾಗಾಗಿ ವೆನಿಸ್‌ ನಗರದಲ್ಲಿ ತರ್ತು ಪರಿಸ್ಥಿತಿ ಘೋಷಣೆಯಾಗಿದೆ.

1200 ವರ್ಷ ಪುರಾತನವಾದ ಸೇಂಟ್‌ ಮಾರ್ಕ್ಸ್‌ ಬೆಸಿಲಿಕಾ ಮುಳುಗಿದೆ. ತಗ್ಗು ಪ್ರದೇಶಲ್ಲಿರುವ ಈ ಚಚ್‌ರ್‍ ಕಳೆದ 20 ವರ್ಷಗಳಲ್ಲಿ ಮುಳುಗುತ್ತಿರುವುದು ನಾಲ್ಕನೇ ಬಾರಿ. ಅನೇಕ ಪುರಾತನ ವಸ್ತುಸಂಗ್ರಹಾಲಯಗಳನ್ನು ಮುಚ್ಚಲಾಗಿದೆ. ನಗರದ ಅತ್ಯಂತ ತಗ್ಗು ಪ್ರದೇಶವಾದ ಸೇಂಟ್‌ ಮಾರ್ಕ್ಸ್‌ ಸ್ಕೆ$್ವೕರ್‌ ಅತಿ ಹೆಚ್ಚು ಹಾನಿಗೊಳಗಾಗಿದೆ. ಪ್ರವಾಹದಿಂದ 100 ಮಿಲಿಯನ್‌ ಯುರೋ (ಸುಮಾರು 7920 ಕೋಟಿ ರು.) ಗಳಷ್ಟುಹಾನಿಯಾಗಿರಬಹುದೆಂದು ಅಂದಾಜಿಸಲಾಗಿದೆ.

50 ವರ್ಷದ ಹಿಂದೆ ಒಮ್ಮೆ ಹೀಗಾಗಿತ್ತು!

ತೇಲುವ ನಗರಿಯಾಗಿರುವ ವೆನಿಸ್‌ನಲ್ಲಿ ಸಣ್ಣ ಸಣ್ಣ ಪ್ರವಾಹಗಳು ಆಗಾಗ ಸಂಭವಿಸುತ್ತಿದ್ದರೂ ಸಮುದ್ರ ಮಟ್ಟಏರಿಕೆ ಪರಿಣಾಮ ಕಳೆದ 50 ವರ್ಷಗಳಲ್ಲಿ ಮೊದಲ ಬಾರಿಗೆ ಭಾರೀ ಉಬ್ಬರ ಇಳಿತಗಳಿಂದಾಗಿ ನೀರು ಆವರಿಸಿದೆ. ನೀರಿನ ಅಲೆಗಳು 1.87 ಮೀ. ಅಡಿ ಎತ್ತರಕ್ಕೆ ಬಂದಿದ್ದು ಇದಕ್ಕೆ ಕಾರಣ. ಇದರಿಂದಾಗಿ ತಗ್ಗುಪ್ರದೇಶಗಳು ಮುಳುಗಿದ್ದರೆ, ಕೆಲವು ಪ್ರದೇಶಗಳಲ್ಲಿ ಮನುಷ್ಯನ ಅರ್ಧಭಾಗ ಮುಳುಗುವಷ್ಟುನೀರು ನಿಂತಿದೆ. 1923ರಿಂದ ಇಲ್ಲಿನ ಸಮುದ್ರದ ಮಟ್ಟದ ಬಗ್ಗೆ ದಾಖಲೆಗಳನ್ನು ಇಡಲಾಗುತ್ತಿದ್ದು, 1966ರಲ್ಲಿಯೂ ಹೀಗೇ ಆಗಿತ್ತು. ಆಗ 1.94 ಮೀ.ನಷ್ಟುಎತ್ತರದ ಅಲೆ ಬಂದಿತ್ತು.

ವೆನಿಸ್‌ಗೆ ಪ್ರವಾಹ ಹೊಸತಲ್ಲ, ಆದರೆ ಈ ಸಲದ್ದು ಭಯಾನಕ

ಪ್ರತಿ ನಾಲ್ಕು ವರ್ಷಕ್ಕೊಮ್ಮೆ ವೆನಿಸ್‌ನಲ್ಲಿ ಇದೇ ರೀತಿ ಅಲೆಗಳ ಉಬ್ಬರ ಇಳಿತ ಉಂಟಾಗಿ ಪ್ರವಾಹ ಪರಿಸ್ಥಿತಿಯುಂಟಾಗುತ್ತದೆ. ಹಾಗೆಯೇ ಸಣ್ಣ ಪ್ರಮಾಣದ ಪ್ರವಾಹಗಳು ವರ್ಷಕ್ಕೆ ನಾಲ್ಕು ಬಾರಿ, ಅದರಲ್ಲೂ ಚಳಿಗಾಲದಲ್ಲಿ ಮಾಮೂಲು. ಹೀಗೆ ಉಂಟಾದ ಪ್ರವಾಹವು ಕೆಲವೇ ಗಂಟೆಗಳಲ್ಲಿ ತಗ್ಗುತ್ತದೆ. ಆದರೆ ಯಾವ ದ್ವೀಪದಲ್ಲಿ ಪ್ರವಾಹ ಉಂಟಾಗಿ ನೀರು ನುಗ್ಗಿದೆ ಎನ್ನುವುದರ ಮೇಲೆ ಅದು ನಿರ್ಧಾರವಾಗುತ್ತದೆ. ವೆನಿಸ್‌ ಆಡ್ರಿಯಾಟಿಕ್‌ ಸಮುದ್ರ ಭಾಗದಲ್ಲಿ ಬರುವುದರಿಂದ ಸಾಮಾನ್ಯವಾಗಿ ಪ್ರತಿ ವರ್ಷ ಡಿಸೆಂಬರ್‌ ಮತ್ತು ಜನವರಿಗಳಲ್ಲಿ ಅಲೆಗಳ ಉಬ್ಬರ ಇಳಿತದಿಂದ ಪ್ರವಾಹ ಪರಿಸ್ಥಿತಿ ಉಂಟಾಗುತ್ತದೆ. ಹಾಗೆಯೇ ಜಾಗತಿಕ ತಾಪಮಾನ ಏರಿಕೆಯಿಂದ ಸಮುದ್ರ ಮಟ್ಟಏರಿಕೆಯಾಗುತ್ತಿರುವುದೂ ಇದಕ್ಕೆ ಮತ್ತೊಂದು ಕಾರಣ. ವೆನಿಸ್‌ ನಿವಾಸಿಗಳು ಪ್ರವಾಹ ಬರುವ ಮುಂಚೆಯೇ ಎಚ್ಚರಗೊಳ್ಳಲು ಸೈರನ್‌ ಸಿಸ್ಟಮ್‌ ಅಳವಡಿಸಿಕೊಂಡಿದ್ದಾರೆ.

ಎಲ್ಲಿದೆ ತೇಲುವ ನಗರಿ ವೆನಿಸ್‌?

ವೆನಿಸ್‌ ಈಶಾನ್ಯ ಇಟಲಿಯ ಒಂದು ನಗರ. 80% ವೆನಿಸ್‌ ನಗರವು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳ ಪಟ್ಟಿಗೆ ಸೇರಿದೆ. ಇದು ಜಗತ್ತಿನ ಅತ್ಯಂತ ವಿಶಿಷ್ಟಮತ್ತು ಪ್ರಸಿದ್ಧ ನಗರಗಳಲ್ಲಿ ಒಂದು. ಲಾ ಡೊಮಿನೆಂಟ್‌, ಸೆರ್ನಿಸಿಮಾ, ಕ್ವೀನ್‌ ಆಫ್‌ ದ ಏಡ್ರಿಯಾಟಿಕ್‌, ತೇಲುವ ನಗರಿ, ಸೇತುವೆಗಳ ನಗರಿ ಎಂದೆಲ್ಲಾ ಕರೆಸಿಕೊಳ್ಳುವ ಜಗತ್ತಿನ ಈ ಅದ್ಭುತ ನಗರದ ಉಗಮದ ಕುರಿತು ಯಾವುದೇ ಖಚಿತ ದಾಖಲೆಗಳಿಲ್ಲ. ಆದರೆ ಕ್ರಿ.ಶ.7ನೇ ಶತಮಾನದಲ್ಲಿ ವೆನಿಟಿ ಜನರ ನೆಲೆ ನಿಲ್ಲುವಿಕೆಯಿಂದ ನಿರ್ಮಾಣವಾಯಿತು ಎನ್ನಲಾಗುತ್ತದೆ.

ವೆನಿಸ್‌ ನಗರವು 118 ದ್ವೀಪಗಳಿಂದ ನಿರ್ಮಾಣವಾಗಿದೆ. ಪ್ರಾಚೀನ ಕಾಲದಲ್ಲಿ ರೋಮನ್‌ ಸಾಮ್ರಾಜ್ಯದ ಆಳ್ವಿಕೆ ವೇಳೆ ವೆನೆಟ್ಸ್‌ ಬುಡಕಟ್ಟು ಜನಾಂಗದವರು ಇಲ್ಲಿ ವಾಸಿಸುತ್ತಿದ್ದರು, ಹೀಗಾಗಿ ಈ ಹೆಸರು ಬಂತು ಎನ್ನುವ ಪ್ರತೀತಿ ಇದೆ. ವೆನೆಟ್ಸ್‌ ಜನರು ನೀರಿನಲ್ಲಿ ಮರದ ಕಂಬಗಳನ್ನು ನೆಟ್ಟು ಮನೆ ನಿರ್ಮಿಸಿದರು. ಬರಬರುತ್ತಾ ವ್ಯಾಪಾರಿ ಕೇಂದ್ರವಾಗಿ, ಧಾರ್ಮಿಕ ಸ್ಥಾನವಾಗಿ ರೂಪುಗೊಂಡು ಅತ್ಯಾಕರ್ಷಕ ಕಟ್ಟಡಗಳು ನಿರ್ಮಾಣಗೊಂಡವು. 1797ರಲ್ಲಿ ನೆಪೋಲಿಯನ್‌ ಈ ನಗರವನ್ನು ವಶಪಡಿಸಿಕೊಂಡು ಆಸ್ಟ್ರಿಯಾ ಆಳ್ವಿಕೆಗೆ ಒಪ್ಪಿಸಿದ್ದ. 1866ರಲ್ಲಿ ವೆನಿಸ್‌ ಇಟಲಿಯ ಭಾಗವಾಯಿತು.

ಇಲ್ಲಿ ಬೈಕ್‌, ಕಾರು, ಬಸ್ಸು, ರೈಲು ಇಲ್ಲ; ಬರೀ ದೋಣಿ!

ಇಟಲಿಯನ್ನರಿಂದ ‘ವೆನಿಸಿಯಾ’ ಎಂದು ಕರೆಸಿಕೊಳ್ಳುವ ವೆನಿಸ್‌ ನಗರದ 118 ದ್ವೀಪಗಳಲ್ಲಿ ರಸ್ತೆಗಳೇ ಇಲ್ಲ, ಬದಲಿಗೆ ನೀರಿನ ಕಾಲುವೆಗಳೇ ದಾರಿಗಳು. ವೆಸ್ಪಾ ಸ್ಕೂಟರ್‌ ಮತ್ತು ಫಿಯೆಟ್‌ ಕಾರನ್ನು ವಿಶ್ವಕ್ಕೆ ಪರಿಚಯಿಸಿದ ಇಟಲಿಯ ಈ ನಗರದಲ್ಲಿ ಈಗ ವಾಹನಗಳಿಗೆ ಪ್ರವೇಶವಿಲ್ಲ. ಕಾಲ್ನಡಿಗೆಯಿಂದಲೇ ಊರಲ್ಲಿ ಸಂಚರಿಸಬೇಕು. ನಗರದ ಪ್ರತಿಯೊಂದು ಸಂದಿಗೊಂದಿಗಳ ಸಂಚಾರಕ್ಕೂ ಕಾಲುವೆಗಳಿವೆ. ಸಂಚಾರಕ್ಕೆ ದೋಣಿ ಬಳಸುತ್ತಾರೆ. ನಗರವನ್ನು ಇಬ್ಭಾಗವಾಗಿಸುವ ಮುಖ್ಯ ಕಾಲುವೆ ಕೆನಾಲ್‌ ಗ್ರಾಂಡಿಯಲ್ಲಿ ಲಾಂಚ್‌ ಸೌಲಭ್ಯವಿದೆ. ಯಾವುದೇ ಮೋಟಾರ್‌ ವಾಹನಗಳಿರದ ವೆನಿಸ್‌ ಇನ್ನೂ ಪ್ರಾಚೀನ ನಗರವಾಗಿಯೇ ಇದೆ. ಲಾಂಚ್‌ಗಳು ಮತ್ತು ಚಿಕ್ಕ ಚಿಕ್ಕ ಮೋಟಾರ್‌ ದೋಣಿಗಳೇ ವೆನಿಸ್‌ ನಗರ ಸಂಚಾರದ ಮುಖ್ಯ ವಾಹನಗಳು. ಹಡಗುಗಳು ಮಾಲಿನ್ಯ ಉಂಟುಮಾಡುವುದರಿಂದ ಇಲ್ಲಿನ ನಿವಾಸಿಗಳು ಹಡಗನ್ನು ಬಳಸುವುದಿಲ್ಲ.

ಮರದ ದಿಮ್ಮಿಗಳ ಮೇಲೆ ಮನೆ

ಜಗತ್ತಿನ ಇತರ ನಗರಗಳಲ್ಲಿ ಮನೆ ಅಥವಾ ಕಟ್ಟಡ ನಿರ್ಮಾಣ ವೇಳೆ ಸಿಮೆಂಟ್‌ ಅಥವಾ ಕಲ್ಲಿನಿಂದ ಅಡಿಪಾಯ ಕಟ್ಟುತ್ತಾರೆ. ಆದರೆ ವೆನಿಸ್‌ ನಗರದಲ್ಲಿ ಮನೆಯ ಅಡಿಪಾಯಕ್ಕೆ ಮರದ ದಿಮ್ಮಿಗಳನ್ನು ಬಳಸುತ್ತಾರೆ. ಇಡೀ ವೆನಿಸ್‌ ನಗರವೇ ಮರದ ದಿಮ್ಮಿಗಳ ಮೇಲೆ ನಿಂತಿದೆ. ಅದಕ್ಕಾಗಿ ಲಕ್ಷಾಂತರ ಮರದ ದಿಮ್ಮಿಗಳನ್ನು ಬಳಸಲಾಗಿದೆ. ಮರದ ದಿಮ್ಮಿಗಳನ್ನು ಒಂದರ ಪಕ್ಕ ಒಂದು ಜೋಡಿಸಿ ಅದರ ಮೇಲೆ ಈಸ್ಟ್ರಯನ್‌ ಸುಣ್ಣದ ಕಲ್ಲುಗಳಿಂದ ಮುಚ್ಚಲಾಗುತ್ತದೆ. ಅನಂತರ ಇಟ್ಟಿಗೆಯಲ್ಲಿ ಮನೆಗಳನ್ನು ನಿರ್ಮಿಸಲಾಗುತ್ತದೆ. ಅಡಿಪಾಯಕ್ಕೆ ದಿಮ್ಮಿ ತಯಾರಿಸಲು ಆಲ್ಡರ್‌ ಮರಗಳನ್ನು ಹೆಚ್ಚಾಗಿ ಬಳಸುತ್ತಾರೆ. ಸ್ಲೋವೆನಿಯಾಗಳಿಂದ ಇದನ್ನು ಆಮದು ಮಾಡಿಕೊಳ್ಳಲಾಗುತ್ತದೆ. ನಿಯಮಿತವಾಗಿ ಖನಿಜಯುಕ್ತ ನೀರು ಹರಿಯುತ್ತಿರುವುದರಿಂದ ಮರದ ದಿಮ್ಮಿಗಳು ಕಲ್ಲಿನಂತಹ ಆಯಕಟ್ಟನ್ನು ಒದಗಿಸುತ್ತವೆ. ಹಾಗಾಗಿ ಇವು ಎಂದಿಗೂ ಹಾಳಾಗುವುದಿಲ್ಲ.

ಪ್ರತಿ ವರ್ಷ 1-2 ಮಿ.ಮೀ. ವೆನಿಸ್‌ ನೀರಿನ ಪಾಲಾಗುತ್ತಿದೆ!

ಜಗತ್ತಿನ ರಮಣೀಯ ಪ್ರವಾಸಿ ತಾಣವಾಗಿರುವ ವೆನಿಸ್‌ನಲ್ಲಿ 150 ಕಾಲುವೆಗಳು ಹಾಗೂ 400ಕ್ಕೂ ಹೆಚ್ಚು ಸೇತುವೆಗಳಿವೆ. ಈ ಸುಂದರ ನಗರ ಪ್ರತಿ ವರ್ಷ 1-2 ಮಿ.ಮೀ.ನಷ್ಟುನೀರಿನಲ್ಲಿ ಮುಳುಗುತ್ತಿದೆ. ಮಾನವ ನಿರ್ಮಿತ ಕಾರಣಗಳು, ಜಾಗತಿಕ ತಾಪಮಾನದ ಏರಿಕೆ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಇದನ್ನು ತಡೆಯಲು 2003ರಲ್ಲಿ ‘ಮೋಸ್‌ ಅಣೆಕಟ್ಟು’ ಯೋಜನೆಯನ್ನು ಘೋಷಿಸಲಾಯ್ತು. ವೆನಿಸ್‌ನ ಕಾಲುವೆಯೊಳಗೆ ಹೆಚ್ಚಿನ ಪ್ರವಾಹದ ನೀರು ನುಗ್ಗದಂತೆ ತಡೆಯುವುದು ಈ ಅಣೆಕಟ್ಟೆನಿರ್ಮಾಣದ ಹಿಂದಿನ ಉದ್ದೇಶ. ಆದರೆ ಕೋಟ್ಯಂತರ ರು. ವೆಚ್ಚದ ಈ ಯೋಜನೆ ಕಾಮಗಾರಿ ಭ್ರಷ್ಟಾಚಾರ ಕಾರಣದಿಂದ ಇನ್ನೂ ಕುಂಟುತ್ತಲೇ ಸಾಗಿದೆ.

2030ರ ಹೊತ್ತಿಗೆ ಇಲ್ಲಿ ಯಾರೂ ಇರೋದಿಲ್ಲವಂತೆ!

ವೆನಿಸ್‌ಗೆ ಪ್ರತಿ ವರ್ಷ 2 ಕೋಟಿ ಜನರು ಭೇಟಿ ನೀಡುತ್ತಾರೆ. ಆದರೆ ನಿತ್ಯ ಅಲ್ಲೇ ವಾಸಿಸುವ ನಿವಾಸಿಗಳಿಗೆ ಈ ನಗರ ತೊರೆದರೆ ಸಾಕಪ್ಪಾ ಎನ್ನುವ ಸ್ಥಿತಿ. ಹಾಗಾಗಿಯೇ 1951ರಲ್ಲಿ ಈ ಐತಿಹಾಸಿಕ ನಗರದಲ್ಲಿ 1.2 ಲಕ್ಷದಷ್ಟಿದ್ದ ಸ್ಥಳೀಯ ನಿವಾಸಿಗಳ ಸಂಖ್ಯೆ 2014ರ ಹೊತ್ತಿಗೆ ಕೇವಲ 55 ಸಾವಿರಕ್ಕೆ ಇಳಿದಿದೆ. ಆಸ್ತಿ ಬೆಲೆ ಏರಿಕೆ, ಕೆಲಸದ ಕೊರತೆ, ತೀರಾ ಕಡಿಮೆ ಆಧುನಿಕ ಸೌಲಭ್ಯಗಳಿರುವುದೇ ಇದಕ್ಕೆ ಪ್ರಮುಖ ಕಾರಣ. ಹಾಗೆಯೇ ಅಲ್ಲಿ ಮನೆ ಕಟ್ಟಿವಾಸಿಸುವುದು ತೀರಾ ದುಬಾರಿ. ಅಲ್ಲದೆ ನಗರದ ಐತಿಹಾಸಿಕ ಸ್ಥಳಗಳು ಆಗಿಂದಾಗ್ಗೆ ನೀರಿನ ಉಬ್ಬರ ಇಳಿತದಿಂದ ಮುಳುಗುತ್ತವೆ. ಹಾಗಾಗಿಯೇ 2030ರ ವೇಳೆಗೆ ಇಲ್ಲಿ ಪ್ರವಾಸಿಗರನ್ನು ಬಿಟ್ಟು ಶಾಶ್ವತ ನಿವಾಸಿಗಳೇ ಇರುವುದಿಲ್ಲ ಎಂದು ಕೆಲ ತಜ್ಞರು ಅಭಿಪ್ರಾಯಪಡುತ್ತಾರೆ.