* ಪಾಕ್‌ನಿಂದಲೇ ಆಫ್ಘನ್‌ ಮೇಲೆ ಅಮೆರಿಕ ಕಣ್ಗಾವಲು* ಆಫ್ಘನ್‌ನಿಂದ ತೆರಳಿ ಪಾಕ್‌ನಲ್ಲಿ ಬೀಡುಬಿಟ್ಟ ಅಮೆರಿಕ ಯೋಧರು* ಅನುಮಾನಕ್ಕೆ ಕಾರಣವಾದ ಅಮೆರಿಕ-ಪಾಕಿಸ್ತಾನದ ನಿಗೂಢ ನಡೆ

ಪೇಶಾವರ(ಸೆ.07): ಆ.31ರಂದು ಅಫ್ಘಾನಿಸ್ತಾನದಿಂದ ಪೂರ್ಣ ಹೊರನಡೆದಿದ್ದ ಅಮೆರಿಕ ಪಡೆಗಳು ಹಾಲಿ, ಪಾಕಿಸ್ತಾನದಿಂದಲೇ ಆಫ್ಘನ್‌ ಮೇಲೆ ಕಣ್ಣಿಟ್ಟಿದೆಯೇ? ಕಾಬೂಲ್‌ನಿಂದ ಹೊರನಡೆದ ಸಾವಿರಾರು ಅಮೆರಿಕದ ಯೋಧರ ಪೈಕಿ 155 ಮಂದಿ, ಅಲ್ಲಿಂದ ನೇರವಾಗಿ ತವರಿಗೆ ತೆರಳದೆ ಕಳೆದ 10 ದಿನಗಳಿಂದ ಇಸ್ಲಾಮಾಬಾದ್‌, ಕರಾಚಿ ಮತ್ತು ಪೇಶಾವರದ ಹೋಟೆಲ್‌ಗಳಲ್ಲಿ ಬೀಡುಬಿಟ್ಟಿರುವುದು ಇಂಥದ್ದೊಂದು ಅನುಮಾನಕ್ಕೆ ಕಾರಣವಾಗಿದೆ.

ಅಮೆರಿಕ ಪಡೆಗಳು ಕಾಬೂಲ್‌ನಿಂದ, ಪಾಕಿಸ್ತಾನಕ್ಕೆ ಬಂದಿಳಿಯುತ್ತಲೇ ಇಂಥ ಪ್ರಶ್ನೆ ಹುಟ್ಟುಕೊಂಡಿತ್ತಾದರೂ, ಸ್ವತಃ ಪಾಕ್‌ ಪ್ರಧಾನಿ ಇಮ್ರಾನ್‌ ಖಾನ್‌ ಇಂಥ ವಾದಗಳನ್ನು ತಳ್ಳಿಹಾಕಿದ್ದರು. ‘ಅವರೆಲ್ಲಾ ಗರಿಷ್ಠ 1 ತಿಂಗಳು ಇಲ್ಲೇ ಇರಲಿದ್ದಾರೆ. ಬಳಿಕ ತೆರಳಲಿದ್ದಾರೆ. ಯಾವುದೇ ಕಾರಣಕ್ಕೂ ಪಾಕ್‌ ನೆಲೆ ಬಳಸಲು ಯಾರಿಗೂ ಅವಕಾಶ ನೀಡುವುದಿಲ್ಲ’ ಎಂದು ಹೇಳಿದ್ದರು. ಆದರೆ ಪಕ್ಕದ ಕತಾರ್‌ ಮತ್ತು ಬಹ್ರೈನ್‌ನಲ್ಲಿ ತನ್ನ ಸೇನಾ ನೆಲೆ ಇದ್ದರೂ, ಅಲ್ಲಿಗೆ ತೆರಳದ 155 ಅಮೆರಿಕ ಯೋಧರು ಹಲವು ದಿನಗಳಿಂದಲೂ ಪಾಕ್‌ನಲ್ಲೇ ಉಳಿದಿರುವುದೇ ಇದೀಗ ಸಾಕಷ್ಟುಕುತೂಹಲ ಮತ್ತು ಅನುಮಾನಕ್ಕೆ ಕಾರಣವಾಗಿದೆ.

ಕಾಬೂಲ್‌ನಲ್ಲಿ ಅಮೆರಿಕ ಪಡೆಗಳು ತೆರವಾಗುವ ಹಂತದಲ್ಲಿ ಐಸಿಸ್‌-ಕೆ ಸಂಘಟನೆ ದಾಳಿ ನಡೆಸಿತ್ತು. ಈ ಸಂಘಟನೆಗೆ ಪಾಕ್‌ ಮೂಲದ ತೆಹ್ರೀಕ್‌ ಎ ತಾಲಿಬಾನ್‌ ನಂಟಿದೆ. ಹೀಗಾಗಿ ಈ ಉಗ್ರರು, ಅಮೆರಿಕ, ಪಾಕ್‌, ಚೀನಾ, ಇರಾನ್‌, ರಷ್ಯಾಕ್ಕೂ ಅಪಾಯ ಕರೆಗಂಟೆ. ಹೀಗಾಗಿ ಈ ಉಗ್ರರನ್ನು ನಿಗ್ರಹಿಸಲೆಂದೇ ಪಾಕ್‌ ಜೊತೆ ಅಮೆರಿಕ ರಹಸ್ಯ ಒಪ್ಪಂದ ಮಾಡಿಕೊಂಡಿದ್ದು, ಅಗತ್ಯ ಬಿದ್ದರೆ ಪಾಕ್‌ ನೆಲೆಗಳಿಂದಲೇ ಆಫ್ಘನ್‌ನಲ್ಲಿರುವ ಐಸಿಸ್‌-ಕೆ ಉಗ್ರರ ಮೇಲೆ ದಾಳಿಗೆ ಯೋಜನೆ ರೂಪಿಸಿದೆ ಎಂದು ಮೂಲಗಳು ತಿಳಿಸಿವೆ