ಒಂದು ದೇಶದ ಸರ್ವಾಧಿಕಾರಿ ಸಾಯುವ ಹಂತದಲ್ಲಿದ್ದಾನೆ ಅಥವಾ ಸತ್ತೇ ಹೋದ ಅನ್ನೋ ಸ್ಥಿತಿ ನಿರ್ಮಾಣವಾದಾಗಲೆಲ್ಲಾ ಜಗತ್ತು ಕುತೂಹಲದಿಂದ ನೋಡಿದೆ. ಯಾಕಂದ್ರೆ ಸರ್ವಾಧಿಕಾರಿಗಳ ಬದುಕಿನ ನಿಗೂಢತೆ, ಅವರ ಐಷಾರಾಮಿ ಜೀವನ, ವಿಚಿತ್ರ ಕಾನೂನುಗಳು, ಆತ ತನ್ನ ದೇಶದ ಮೇಲಿಟ್ಟಿದ್ದ ನಿಯಂತ್ರಣ ಇದೆಲ್ಲವೂ ಈ ಕುತೂಹಲಕ್ಕೆ ಕಾರಣ. ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಇನ್ನಿಲ್ಲ ಅನ್ನೋ ಸುದ್ದಿ ಇಡೀ ಜಗತ್ತಿನಾದ್ಯಂತ ಸಂಚಲನ ಸೃಷ್ಟಿಸಿತ್ತು. 21 ದಿನಗಳ ನಂತರ ಕಿಮ್ ಜಾಂಗ್ ಉನ್ ಸಾರ್ವಜನಿಕವಾಗಿ ಕಾಣಿಸಿಕೊಂಡಿರೋ ಪೋಟೋ ವಿಡಿಯೋಗಳನ್ನ ಉತ್ತರ ಕೊರಿಯಾ ಸರ್ಕಾರ ರಿಲೀಸ್ ಮಾಡಿದೆ. ಈ ಪೋಟೋಗಳು ಮತ್ತು ವಿಡಿಯೋಗಳು ಹಳೆಯದ್ದಾಗಿಒರಬಹುದು ಅನ್ನೋ ಅನುಮಾನವೂ ಇದೆ. ಈ ಮಧ್ಯೆ ಉತ್ತರ ಕೊರಿಯಾದ ನಿರ್ನಾಮಕ್ಕಾಗಿ ಅಮೆರಿಕ ಮತ್ತು ದಕ್ಷಿಣ ಕೊರಿಯಾ ಮಾಡಿರೋ ಅದೊಂದು ಪ್ಲಾನ್ ಬಗ್ಗೆ ಜಗತ್ತಿನಾದ್ಯಂತ ಚರ್ಚೆಯಾಗುತ್ತಿದೆ. ಈ ಪ್ಲಾನ್ ಹಳೆಯದ್ದೇ ಆದ್ರೂ ಉತ್ತರ ಕೊರಿಯಾದಲ್ಲಿ ಕಿಮ್ ಸಾವಿನ ಸುದ್ದಿ ಶುರುವಾದ ನಂತರ ಮತ್ತೆ ಜೀವ ಪಡೆದುಕೊಂಡಿದೆ. ಅದೇ ಒಪ್ಲಾನ್ 5029. ಅಂದ್ರೆ ಆಪರೇಷನ್ ಪ್ಲಾನ್ 5029.  ಉತ್ತರ ಕೊರಿಯಾದ ನಿರ್ನಾಮಕ್ಕೆ ಅಮೆರಿಕ ಮತ್ತು ದಕ್ಷಿಣ ಕೊರಿಯಾ ಹೆಣೆದಿರೋ ಸೂಪರ್ ಪ್ಲಾನ್ ಇದು. ನ್ಯೂಕ್ಲಿಯರ್ ಪವರ್ ದೇಶವಾಗಿರೋ ಉತ್ತರ ಕೊರಿಯಾದಲ್ಲಿ ಕಿಮ್ ಅಧಿಕಾರ ಹಸ್ತಾಂತರ ಮಾಡಿದರೆ ಅಥವಾ ರಾಜಕೀಯ ಅಸ್ಥಿರತೆ ಆರಂಭವಾದ್ರೆ ಈ ಒಪ್ಲಾನ್ 5029 ಜಾರಿ ಮಾಡೋದಕ್ಕೆ ಅಮೆರಿಕ ಮತ್ತು ದಕ್ಷಿಣ ಕೊರಿಯಾ ಮುಂದಾಗಲಿವೆ.

ಸಾವಿನ ವದಂತಿಗೆ ಬ್ರೇಕ್: ಕೋಟೆಯಿಂದ ಹೊರ ಬಂದ ಕಿಮ್

ಉತ್ತರ ಕೊರಿಯಾ ನಿರ್ನಾಮಕ್ಕೆ ಒಪ್ಲಾನ್ 5029..!|
ಅಖಂಡ ಕೊರಿಯಾವನ್ನ 1910ರಿಂದ 1945 ರವರೆಗೆ ಜಪಾನ್ ಆಳುತ್ತಿತ್ತು. 2 ನೇ ವಿಶ್ವಯುದ್ಧದಲ್ಲಿ ಜಪಾನ್ ಸೋತ ನಂತರ ಕೊರಿಯಾದ ಉತ್ತರ ಭಾಗವನ್ನ ರಷ್ಯಾ ಆಕ್ರಮಿಸಿಕೊಂಡ್ರೆ, ದಕ್ಷಿಣ ಭಾಗ ಅಮೆರಿಕದ ಪಾಲಾಯ್ತು. ಅಮೆರಿಕಾ ಮತ್ತು ರಷ್ಯಾ ಮಧ್ಯದ ಶೀತಲ ಸಮರ ಉತ್ತರ ಮತ್ತು ದಕ್ಷಿಣ ಕೊರಿಯಾ ಒಂದಾಗುವ ಪ್ರಯತ್ನಗಳಿಗೆ ಅಡ್ಡಿಯಾಯ್ತು. 1948-49 ರಲ್ಲಿ ಅಮೆರಿಕದ ಬೆಂಬಲದೊಂದಿಗೆ ದಕ್ಷಿಣ ಕೊರಿಯಾ ಪ್ರಜಾಪ್ರಭುತ್ವ ಅಳವಡಿಸಿಕೊಂಡ್ರೆ, ರಷ್ಯಾ ಮತ್ತು ಚೀನಾದ ಬೆಂಬಲದೊಂದಿಗೆ ಉತ್ತರ ಕೊರಿಯಾ ಕಮ್ಯುನಿಸ್ಟ್ ದೇಶವಾಯ್ತು. 1953 ರಲ್ಲಿ ಉತ್ತರ ಕೊರಿಯಾ ದಕ್ಷಿಣ ಕೊರಿಯಾದ ಮೇಲೆ ದಾಳಿ ಮಾಡಿದಾಗ ಆರಂಭವಾದ ದುರ್ಬರ ಯುದ್ಧ ಮೂರು ವರ್ಷಗಳ ವರೆಗೆ ಎರಡೂ ದೇಶಗಳನ್ನ ಹಿಂಡಿ ಹಿಪ್ಪೆ ಮಾಡಿತು. ಯುದ್ಧದಲ್ಲಿ ಅಮೆರಿಕ ಬೆಂಬಲದೊಂದಿಗೆ ದಕ್ಷಿಣ ಕೊರಿಯಾ ಮೇಲುಗೈ ಸಾಧಿಸ್ತು. ಆಗಿನಿಂದಲೂ ಎರಡೂ ದೇಶಗಳನ್ನ ಒಟ್ಟುಗೂಡಿಸುವ ಪ್ರಯತ್ನಗಳು ನಡೆಯುತ್ತಲೇ ಇವೆ. ಕಿಮ್ ಜಾಂಗ್ ಉನ್ ನ ತಂದೆ ಕಿಮ್ ಜಾಂಗ್ ಇಲ್ ಚೀನಾದ ಬೆಂಬಲದೊಂದಿಗೆ 2006 ರಲ್ಲಿ ಅಣ್ವಸ್ತ್ರ ಪರೀಕ್ಷೆ ನಡೆಸಿಯೇ ಬಿಟ್ಟ. ಪಕ್ಕದಲ್ಲಿದ್ದ ದಕ್ಷಿಣ ಕೊರಿಯಾಗೆ ನಡುಕ ಶುರುವಾಯ್ತು. ಆಗಲೇ ಹುಟ್ಟಿಕೊಂಡಿದ್ದು ಈ ಒಪ್ಲಾನ್ 5029.

2011ರಲ್ಲಿ ಕಿಮ್ ಜಾಂಗ್ ಇಲ್ ಅನಾರೋಗ್ಯದಿಂದ ಸತ್ತಾಗ ಆಪರೇಷನ್ ಪ್ಲಾನ್ 5029 ಜಾರಿಗೆ ತರುವ ಪ್ರಯತ್ನಗಳಾದ್ರೂ, ಕಿಮ್ ಜಾಂಗ್ ಉನ್ ದೇಶದ ಮೇಲೆ ಹಿಡಿದ ಸಾಧಿಸಿದ್ರಿಂದಾಗಿ ಅದು ಸಾಧ್ಯವಾಗಲಿಲ್ಲ. ಕಿಮ್ ಅಧಿಕಾರಕ್ಕೆ ಬಂದ ಮೇಲೆ ಒಂದಾದ ಮೇಲೊಂದರಂತೆ ಐದು ನ್ಯೂಕ್ಲಿಯರ್ ಬಾಂಬ್ ಗಳ ಪರೀಕ್ಷೆಗಳು ನಡೆದವು. ಹೈಡ್ರೋಜನ್ ಬಾಂಬ್ ಪರೀಕ್ಷೆಯನ್ನೂ ಮಾಡಿ ಅಮೆರಿಕದ ಮೇಲೆ ಪ್ರಯೋಗಿಸಿಬಿಡ್ತೀನಿ ಅಂದಿದ್ದ ಕಿಮ್ ಜಾಂಗ್ ಉನ್. ಹುಚ್ಚು ದೊರೆಯೊಬ್ಬ ಆಳುತ್ತಿರೋ ದೇಶ ಸಮೂಹ ನಾಶಕ ಶಸ್ತ್ರಗಳನ್ನ ಹೊಂದಿಬಿಟ್ರೆ ಜಗತ್ತು ನಮ್ಮದಿಯಿಂದ ನಿದ್ರೆ ಮಾಡೋದಕ್ಕಾಗುತ್ತಾ..? ಅದಕ್ಕಾಗಿಯೇ ಅಮೆರಿಕ ಮತ್ತು ಉತ್ತರ ಕೊರಿಯಾ ಒಪ್ಲಾನ್ 5029 ಅನ್ನ ಜಂಟಿಯಾಗಿ ಸಿದ್ಧಪಡಿಸಿವೆ. ಈ ಯೋಜನೆಯ ಪ್ರಕಾರ ಉತ್ತರ ಕೊರಿಯಾದಲ್ಲಿ ರಾಜಕೀಯ ಅನಿಶ್ಚಿತತೆಯ ಸ್ಥಿತಿ ಶುರುವಾದ್ರೆ ಈ ಆ್ಯಕ್ಷನ್ ಪ್ಲಾನ್ ಜಾರಿಯಾಗಲಿದೆ. ಹಾಗಾದ್ರೆ ಒಪ್ಲಾನ್ 5029 ಅಂದ್ರೆ ಏನು..? ಈ ಪ್ಲಾನ್ ಜಾರಿಯಾದ್ರೆ ಅಮೆರಿಕ ಮತ್ತು ಚೀನಾ ಮಧ್ಯೆ ಯುದ್ಧಕ್ಕೆ ಕಾರಣವಾಗುತ್ತಾ..? ಹಾಗೇನಾದ್ರೂ ಆದ್ರೆ ಅದು ಮೂರನೇ ಮಹಾಯುದ್ಧಕ್ಕೆ ಮುನ್ನುಡಿಯಾಗುತ್ತಾ..? ಇಂಥಾ ಹಲವು ಪ್ರಶ್ನೆಗಳಿಗೆ ಉತ್ತರಿಸೋ ಪ್ರಯತ್ನ ಇಲ್ಲಿದೆ.

ಕಿಮ್ ವಿರುದ್ಧ ಧ್ವನಿ ಎತ್ತಿದ ಈ ತರುಣಿ ಯಾರು?

ಏನಿದು ಒಪ್ಲಾನ್ 5029..?
ಅಪಾರ ಪ್ರಮಾಣದ ಕ್ಷಿಪಣಿ ಮತ್ತು ಅಣ್ವಸ್ತ್ರಗಳನ್ನ ಹೊಂದಿರುವ ಉತ್ತರ ಕೊರಿಯಾದಲ್ಲಿ ಅರಾಜಕತೆ ಸೃಷ್ಟಿಯಾದ್ರೆ, ಇವುಗಳನ್ನು ರಕ್ಷಿಸುವ ಯೋಜನೆಯೇ ಒಪ್ಲಾನ್ 5029. ಅಮೆರಿಕ ಮತ್ತು ದಕ್ಷಿಣ ಕೊರಿಯಾ ಜಂಟಿಯಾಗಿ ನಡೆಸುವ ಮಿಲಿಟರಿ ಕಾರ್ಯಾಚರಣೆ.  ಕಿಮ್ ಆಳುತ್ತಿರೋ ಉತ್ತರ ಕೊರಿಯಾ ತನ್ನದೇ ಭಾಗ ಅನ್ನುತ್ತೆ ದಕ್ಷಿಣ ಕೊರಿಯಾದ ಸಂವಿಧಾನ. ಹಾಗಾಗಿ ಅಖಂಡ ಕೊರಿಯಾ ನಿರ್ಮಾಣಕ್ಕಾಗಿ ಮತ್ತು ಉತ್ತರ ಕೊರಿಯಾದ ನಿರ್ನಾಮಕ್ಕಾಗಿ ಹೆಣೆಯಲಾಗಿರೋ ಪ್ಲಾನ್. ಈ ಪ್ಲಾನ್ ಗೆ ಅಮೆರಿಕವಷ್ಟೇ ಅಲ್ಲ ಮತ್ತೊಂದು ಶಕ್ತಿಶಾಲಿ ದೇಶ ಜಪಾನ್ ನ ಬೆಂಬಲವೂ ಇದೆ.

ಒಪ್ಲಾನ್ 5029 ಮತ್ತು ಚೀನಾ..!
ಉತ್ತರ ಕೊರಿಯಾದ ಸರ್ವಾಧಿಕಾರಿಗಳಿಗೆ, ಅವರ ಹುಚ್ಚಾಟಗಳಿಗೆ ಕಳೆದ 70 ವರ್ಷಗಳಿಂದ ಬೆನ್ನು ತಟ್ಟುತ್ತಿರೋದು ಚೀನಾ. ಒಂದು ವೇಳೆ ಉತ್ತರ ಕೊರಿಯಾದಲ್ಲಿ ದಿಢೀರ್ ಅರಾಜಕತೆ ಶುರುವಾದ್ರೆ ಪಕ್ಕದಲ್ಲೇ ಇರೋ ಚೀನಾ ಪರಿಸ್ಥಿತಿಯ ಲಾಭ ಪಡೆದುಕೊಳ್ಳಲು ಮುಂದಾಗೋದು ಶತಃಸಿದ್ಧ. ಇಂಥಾ ಸಂದರ್ಭದಲ್ಲಿ ಅಮೆರಿಕ ಮತ್ತು ದಕ್ಷಿಣ ಕೊರಿಯಾ ಚೀನಾದ ವಿರುದ್ಧವೇ ಯುದ್ಧ ಮಾಡಬೇಕಾದ ಪರಿಸ್ಥಿತಿ ಸೃಷ್ಟಿಯಾಗಬಹುದು. ಹೀಗಾಗಿ ಒಪ್ಲಾನ್ ಜಾರಿಯಾಗಬೇಕಾದ್ರೆ ಅಮೆರಿಕ ತನ್ನೆಲ್ಲಾ ಮಿಲಿಟರಿ ಶಕ್ತಿಯನ್ನೂ ಬಳಸಬೇಕು. ಮಿಲಿಟರಿ ತಜ್ಞರ ಪ್ರಕಾರ ಅಮೆರಿಕ ಈ ಆ್ಯಕ್ಷನ್ ಪ್ಲಾನ್ ಜಾರಿ ಮಾಡಬೇಕಾದ್ರೆ ತನ್ನ ಎಂಟೂವರೆ ಲಕ್ಷ ಸೈನಿಕರನ್ನ ಯುದ್ಧರಂಗಕ್ಕಿಳಿಸಬೇಕು. ವಾಯುಸೇನೆ, ನೌಕಾಸೇನೆ ಮತ್ತು ಭೂಸೇನೆ ಮೂರೂ ವಿಭಾಗಗಳೂ ಕಾರ್ಯಾಚರಣೆಗೆ ಇಳಿಯಬೇಕು. ಹಾಗಾದಲ್ಲಿ ಮಾತ್ರ ಈ ಯೋಜನೆ ಜಾರಿ ಮಾಡಬಹುದು. ದಕ್ಷಿಣ ಚೀನಾ ಸಮುದ್ರದ ಅಷ್ಟೂ ಭಾಗ ತನ್ನದೇ ಎಂದು ವಾದಕ್ಕಿಳಿದಿರೋ ಚೀನಾ, ತನ್ನ ಪಕ್ಕದ ದೇಶದ ನಿಯಂತ್ರಣಕ್ಕೆ ಅಮೆರಿಕ ಮುಂದಾದ್ರೆ ಸುಮ್ಮನಿರುತ್ತಾ..? ಆಗ ಚೀನಾ ಮತ್ತು ಅಮೆರಿಕದ ಮಧ್ಯೆ ತಿಕ್ಕಾಟ ಶುರುವಾಗಬಹುದು. ಆ ತಿಕ್ಕಾಟ ಯುದ್ಧಕ್ಕೆ ಕಾರಣವಾದ್ರೆ ಅದು ಮೂರನೇ ಮಹಾಯುದ್ಧಕ್ಕೆ ಮುನ್ನುಡಿಯಾದರೂ ಆಗಬಹುದು.

ಯುವತಿಯರೊಂದಿಗೆ ಮೋಜು, ಮಸ್ತಿ ಮಾಡೋ ಕಿಮ್ ರೈಲಿದು

ಇಡೀ ಜಗತ್ತನ್ನ ತನ್ನ ನಿಯಂತ್ರಣದಲ್ಲೇ ಇಟ್ಟುಕೊಳ್ಳಬೇಕು ಅನ್ನೋ ಮಹತ್ವಾಕಾಂಕ್ಷೆ ಅಮೆರಿಕದ್ದು. ಇದೇ ಮಹತ್ವಾಕಾಂಕ್ಷೆ ಇಟ್ಟುಕೊಂಡಿದ್ದ ರಷ್ಯಾ, ಅಮೆರಿಕದ ವಿರುದ್ಧ ದಶಕಗಳ ಕಾಲ ಶೀತಲ ಸಮರ ನಡೆಸಿತ್ತು. ಆದ್ರೆ ಅಮೆರಿಕದ ಶಕ್ತಿಯ ಮುಂದೆ ರಷ್ಯಾದ ಆಟ ಹೆಚ್ಚು ದಿನ ನಡೆಯಲಿಲ್ಲ. ಈಗ ಚೀನಾ ಇಡೀ ಜಗತ್ತನ್ನ ತನ್ನ ಹಿಡಿತಕ್ಕೆ ತೆಗೆದುಕೊಳ್ಳುವ ಉಮೇದಿಗೆ ಬಿದ್ದಿದೆ. ಜಗತ್ತಿನ ಬಹುತೇಕ ಬಡದೇಶಗಳನ್ನ ತನ್ನ ಸಾಲದ ಸುಳಿಯಲ್ಲಿ ಕಟ್ಟಿಹಾಕಿದೆ. ಅಷ್ಟು ಸುಲಭವಾಗಿ ಅಮೆರಿಕ ಜಗತ್ತಿನ ಮೇಲಿನ ತನ್ನ ಹಿಡಿತವನ್ನ ಸಡಿಲಿಸುವುದಿಲ್ಲ. ಸದ್ಯಕ್ಕೆ ಎರಡೂ ದೇಶಗಳ ಮಧ್ಯೆ ನಡೆಯುತ್ತಿರೋ ಆರ್ಥಿಕ ಯುದ್ಧ ಉತ್ತರ ಕೊರಿಯಾದ ಕಾರಣದಿಂದ ಅಸಲೀ ಯುದ್ಧಕ್ಕೆ ತಿರುಗಿದರೂ ಅಚ್ಚರಿಯಿಲ್ಲ.

- ಶಶಿವರ್ಣಂ, ಸುವರ್ಣ ನ್ಯೂಸ್