* ತಾಲಿಬಾನ್‌ಗೆ ಮಾನ್ಯತೆ ನೀಡ​ಬೇ​ಕೇ?: ವಿವಿಧ ರಾಷ್ಟ್ರ​ಗ​ಳಿ​ಗೆ ಕಗ್ಗಂಟು* ಭಾರತ, ಅಮೆರಿಕ, ಇತರ ದೇಶ​ಗಳಿಂದ ಕಾದು ನೋಡುವ ತಂತ್ರ* ಚೀನಾ, ಪಾಕ್‌​ನಿಂದ ಮಾತ್ರ ಮಾನ್ಯ​ತೆ

ನವದೆಹಲಿ(ಸೆ.10): ಅಷ್ಘಾನಿಸ್ತಾನದಲ್ಲಿ ರಚನೆ ಆಗಿರುವ ತಾಲಿಬಾನ್‌ ಸರ್ಕಾರಕ್ಕೆ ಮಾನ್ಯತೆ ನೀಡುವ ವಿಚಾರ ಈಗ ವಿಶ್ವದ ಪ್ರಮುಖ ರಾಷ್ಟ್ರಗಳಿಗೆ ಕಗ್ಗಟಾಂಗಿ ಪರಿಣಮಿಸಿದೆ.

ಉಗ್ರಗಾಮಿ ಚಟುವಟಿಕೆಗಳಿಂದಲೇ ಕುಖ್ಯಾತಿ ಪಡೆದಿರುವ ತಾಲಿಬಾನ್‌, ಹಿಂದಿನ ಬಾರಿ ಸರ್ಕಾರ ರಚಿಸಿದ್ದಾಗ ಪಾಕಿಸ್ತಾನ, ಸೌದಿ ಅರೇಬಿಯಾ, ಯುಎಇ ಮಾತ್ರವೇ ಬೆಂಬಲ ಘೋಷಿಸಿದ್ದವು. ಈ ಬಾರಿ ಚೀನಾ ಮತ್ತು ಪಾಕಿಸ್ತಾನವನ್ನು ಹೊರತುಪಡಿಸಿ ಉಳಿದ ರಾಷ್ಟ್ರಗಳು ತಾಲಿಬಾನ್‌ ಸರ್ಕಾರಕ್ಕೆ ಬೆಂಬಲ ನೀಡುವ ಬಗ್ಗೆ ಬಹಿರಂಗವಾಗಿ ಹೇಳಿಕೆ ನೀಡಿಲ್ಲ. ಒಂದು ವೇಳೆ ತಾಲಿಬಾನ್‌ ಸರ್ಕಾರವನ್ನು ಬೆಂಬಲಿಸಿದರೆ ಮುಂದೆ ಅದರ ಪರಿಣಾಮವನ್ನು ಎದುರಿಸಬೇಕಾದೀತು ಎಂಬ ಕಾರಣಕ್ಕೆ ಜಾಗತಿಕ ರಾಷ್ಟ್ರಗಳು ಎಚ್ಚರಿಕೆಯ ನಡೆ ಪ್ರದರ್ಶಿಸುತ್ತಿವೆ.

ತಾಲಿಬಾನ್‌ ಸರ್ಕಾರಕ್ಕೆ ಮಾನ್ಯತೆ ನೀಡುವ ನಿಟ್ಟಿನಲ್ಲಿ ಯಾವುದೇ ಆತುರದ ನಿರ್ಧಾರ ಕೈಗೊಳ್ಳುವುದಿಲ್ಲ. ತನ್ನ ನಾಗರಿಕರನ್ನು ಸುರಕ್ಷಿತವಾಗಿ ಕರೆತರುವ ನಿಟ್ಟಿನಲ್ಲಿ ಮಾತುಕತೆ ನಡೆಸಲಾಗುತ್ತಿದೆಯೇ ಹೊರತು ಸರ್ಕಾರದ ಜೊತೆ ಯಾವುದೇ ಮಾತುಕತೆಯಲ್ಲಿ ತೊಡಗಿಲ್ಲ ಎಂದು ಅಮೆರಿಕ ಹೇಳಿದೆ.

ಅದೇ ರೀತಿ ಭಾರತ ಕೂಡ ತಾಲಿಬಾನ್‌ ಸರ್ಕಾರಕ್ಕೆ ಮಾನ್ಯತೆ ನೀಡುವ ಕುರಿತಂತೆ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಕೆಲ ದಿನಗಳ ಹಿಂದೆ ದೋಹಾದಲ್ಲಿ ತಾಲಿಬಾನ್‌ ರಾಜಕೀಯ ಮುಖಂಡರ ಜೊತೆ ಕತಾರ್‌ನಲ್ಲಿರುವ ಭಾರತೀಯ ರಾಯಭಾರಿ ಮಾತುಕತೆ ನಡೆಸಿದ್ದನ್ನು ಬಿಟ್ಟರೆ ಬೇರೇ ಯಾವುದೇ ಬೆಳವಣಿಗೆ ನಡೆದಿಲ್ಲ. ತಾಲಿಬಾನ್‌ ಸರ್ಕಾರಕ್ಕೆ ಮಾನ್ಯತೆ ನೀಡುವ ವಿಚಾರದಲ್ಲಿ ಭಾರತ ಕಾದು ನೋಡುವ ತಂತ್ರಕ್ಕೆ ಮುಂದಾಗಿದೆ.

ಇನ್ನೊಂದೆಡೆ ರಷ್ಯಾದ ರಾಯಭಾರ ಕಚೇರಿ ಕೂಡ ತಾಲಿಬಾನ್‌ ಜೊತೆ ಮಾತುಕತೆಯಲ್ಲಿ ತೊಡಗಿಕೊಂಡಿದ್ದರೂ, ಸರ್ಕಾರಕ್ಕೆ ಮನ್ನಣೆ ನೀಡುವ ವಿಷಯದಲ್ಲಿ ಮೌನ ವಹಿಸಿದೆ.