ವಾಷಿಂಗ್ಟನ್‌(ಮಾ.03): ಅಮೆರಿಕದ 25ಕ್ಕೂ ಹೆಚ್ಚು ರಾಜ್ಯಗಳಲ್ಲಿ ಕೊರೋನಾ ಸೋಂಕಿನ 4ನೇ ಅಲೆ ಕಂಡುಬರುವ ಸೂಚನೆಗಳು ವ್ಯಕ್ತವಾಗಿವೆ. ದೇಶದಲ್ಲಿ ಕಳೆದೊಂದು ವಾರದಲ್ಲಿ ನಿತ್ಯ ಸರಾಸರಿ 63,000 ಹೊಸ ಪ್ರಕರಣಗಳು ವರದಿಯಾಗುತ್ತಿವೆ. ಇದು ಅದರ ಹಿಂದಿನ ವಾರಕ್ಕಿಂತ ಶೇ.17ರಷ್ಟುಹೆಚ್ಚಿದ್ದು, 4ನೇ ಅಲೆಯ ಸ್ಪಷ್ಟಸೂಚನೆ ಎಂದು ಹೇಳಲಾಗಿದೆ.

ದೇಶದಲ್ಲಿರುವ ಒಟ್ಟು 50 ರಾಜ್ಯಗಳ ಪೈಕಿ ಕೇವಲ 5 ರಾಜ್ಯಗಳಲ್ಲಿ ಹೊಸ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದೆ. ಇನ್ನುಳಿದ ರಾಜ್ಯಗಳಲ್ಲಿ ಕೊರೋನಾದ ಮೂರನೇ ಅಲೆ ಜನವರಿಯಲ್ಲಿ ಗರಿಷ್ಠಕ್ಕೆ ಹೋಗಿ, ನಿತ್ಯ ಸುಮಾರು 2,50,000 ಪ್ರಕರಣಗಳು ಪತ್ತೆಯಾಗಿದ್ದವು. ನಂತರ ಇಳಿಕೆಯಾಗಿ, ಈಗ ಮತ್ತೆ ಏರಿಕೆಯಾಗುತ್ತಿದೆ. ರಾಜ್ಯಗಳು ಕೊರೋನಾ ನಿರ್ಬಂಧಗಳನ್ನು ಸಡಿಲಿಕೆ ಮಾಡುತ್ತಿರುವುದರಿಂದ ಪುನಃ ಸೋಂಕು ಏರುತ್ತಿದೆ. ಆದರೆ, 4ನೇ ಅಲೆಯು ಈ ಹಿಂದಿನ ಅಲೆಗಳಿಗಿಂತ ಕಡಿಮೆ ಅಪಾಯಕಾರಿಯಾಗಿರಲಿದೆ ಎಂದು ಆರೋಗ್ಯ ತಜ್ಞರು ಹೇಳಿದ್ದಾರೆ.

ಎಲ್ಲಾ ರಾಜ್ಯಗಳ ಗವರ್ನರ್‌ಗಳು, ಸ್ಥಳೀಯ ಸಂಸ್ಥೆಗಳ ಮೇಯರ್‌ಗಳು ಮತ್ತು ಸ್ಥಳೀಯ ಮುಖಂಡರಿಗೆ ಮುನ್ನೆಚ್ಚರಿಕೆ ಕ್ರಮಗಳು ಪಾಲನೆಯಾಗುವಂತೆ ನೋಡಿಕೊಳ್ಳಿ. ದಯವಿಟ್ಟು ಇದರಲ್ಲಿ ರಾಜಕೀಯ ಬೇಡ. ಕೊರೋನಾ ನಿಯಮಗಳನ್ನು ಪಾಲಿಸಲು ಜನರಿಗೆ ಹೇಳಿ.

- ಜೋ ಬೈಡೆನ್‌, ಅಮೆರಿಕ ಅಧ್ಯಕ್ಷ