ವಾಷಿಂಗ್ಟನ್‌(ಡಿ.06): ವಿಶ್ವದಲ್ಲೇ ಅತಿ ಕೊರೋನಾ ಸೋಂಕಿತರನ್ನು ಹೊಂದಿರುವ ಅಮೆರಿಕದಲ್ಲಿ ಶುಕ್ರವಾರ ದಾಖಲೆಯ 2.35 ಲಕ್ಷ ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ಜೊತೆಗೆ 2718 ಜನರು ಸಾವನ್ನಪ್ಪಿದ್ದಾರೆ. ಇದು ವಿಶ್ವದ ಯಾವುದೇ ದೇಶವೊಂದರಲ್ಲಿ ಒಂದೇ ದಿನ ಕಂಡುಬಂದ ಗರಿಷ್ಠ ಸೋಂಕಿನ ಪ್ರಮಾಣವಾಗಿದೆ. ಶುಕ್ರವಾರ ಇಡೀ ವಿಶ್ವದಲ್ಲಿ ಒಟ್ಟಾರೆ 6.84 ಲಕ್ಷ ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಪೈಕಿ ಅಮೆರಿಕದ ಪಾಲೇ ಶೇ.34ರಷ್ಟುಎಂಬುದು ಆತಂಕಕಾರಿ ಸಂಗತಿ.

ಶುಕ್ರವಾರದ ಅಂಕಿ ಸೇರ್ಪಡೆಯೊಂದಿಗೆ ಅಮೆರಿಕದಲ್ಲ ಒಟ್ಟು ಸೋಂಕಿತರ ಸಂಖ್ಯೆ 1.47 ಕೋಟಿ ತಲುಪಿದೆ. ಜೊತೆಗೆ ಈವರೆಗೆ ಸಾವಿಗೀಡಾದವರ ಸಂಖ್ಯೆ 2.85 ಲಕ್ಷ ದಾಟಿದೆ. ಅಮೆರಿಕ ಅವಧ್ಯಕ್ಷೀಯ ಚುನಾವಣೆ ಮುಕ್ತಾಯದ ಬೆನ್ನಲ್ಲೇ, ದೇಶದಲ್ಲಿ ಸೋಂಕಿತರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುತ್ತಿದೆ. ಹೀಗಾಗಿ ಮುಂದಿನ ವರ್ಷದ ಜನವರಿಯಲ್ಲಿ ಅಮೆರಿಕ ಅಧ್ಯಕ್ಷ ಹುದ್ದೆ ವಹಿಸಿಕೊಳ್ಳಲಿರುವ ಜೋ ಬೈಡನ್‌ ಅವರಿಗೆ ಕೊರೋನಾ ನಿಯಂತ್ರಣ ದೊಡ್ಡ ಸವಾಲಾಗಿ ಪರಿಣಮಿಸುವ ಸಾಧ್ಯತೆ ದಟ್ಟವಾಗಿದೆ.

ಅಮೆರಿಕದ ಫೈಝರ್‌ ಮತ್ತು ಮಾಡೆರ್ನಾ ಕಂಪನಿಗಳು ಈಗಾಗಲೇ ಕೊರೋನಾ ಲಸಿಕೆ ಬಿಡುಗಡೆ ಮಾಡಿ, ಅದರ ತುರ್ತು ಬಳಕೆಗೆ ಅನುಮತಿ ಕೋರಿವೆಯಾದರೂ, ಸರ್ಕಾರದ ಕಡೆಯಿಂದ ಇನ್ನೂ ಅನುಮೋದನೆ ಸಿಕ್ಕಿಲ್ಲ.