ವಾಷಿಂಗ್ಟನ್(ನ.04): ರೋಚಕ ಹಣಾಹಣಿಯ ಅಮೆರಿಕ ಅಧ್ಯಕ್ಷೀಯ ಚುನಾವಣೆ ಮುಗಿದ ಬಳಿಕ ವ್ಯಾಪಕ ಹಿಂಸಾಚಾರ ಭುಗಿಲೇಳಬಹುದು ಎಂಬ ಭೀತಿ ಆವರಿಸಿದೆ. ಈ ಹಿನ್ನೆಲೆಯಲ್ಲಿ ಅಮೆರಿಕದ ಶ್ವೇತಭವನಕ್ಕೆ ಭಾರಿ ಪ್ರಮಾಣದಲ್ಲಿ ಭದ್ರತೆ ಒದಗಿಸಲಾಗಿದ್ದು, ಏರಲು ಆಗದಂತಹ ಕೃತಕ ಗೋಡೆಯನ್ನು ತಾತ್ಕಾಲಿಕವಾಗಿ ನಿರ್ಮಿಸಲಾಗಿದೆ. ಇಷ್ಟೇ ಅಲ್ಲದೇ ಇಕಲ್ಲಿನ ಪ್ರಮುಖ ಸರ್ಕಾರಿ ಸಂಸ್ಥೆಗಳಲ್ಲೂ ಮುಂಜಾಗ್ರತಾ ಕ್ರಮ ವಹಿಸಲಾಗಿದೆ. 

ಮತ್ತೊಂದೆಡೆ ನ್ಯೂಯಾರ್ಕ್, ಬೋಸ್ಟನ್‌, ಹೂಸ್ಟನ್‌, ವಾಷಿಂಗ್ಟನ್‌ ಡಿಸಿ, ಷಿಕಾಗೋ, ಸ್ಯಾನ್‌ ಫ್ರಾನ್ಸಿಸ್ಕೋ ಸೇರಿದಂತೆ ದೇಶದ ಬಹುತೇಕ ಎಲ್ಲ ಕಡೆ ಹಿಂಸಾಚಾರ ಭುಗಿಲೆದ್ದು ಲೂಟಿ ನಡೆಯಬಹುದು ಎಂಬ ಕಾರಣಕ್ಕೆ ಅಂಗಡಿಗಳನ್ನು ಬಂದ್‌ ಮಾಡಲಾಗಿದೆ. ಬಾಗಿಲು ಕಿತ್ತೊಗೆಯಬಹುದು ಎಂಬ ಕಾರಣಕ್ಕೆ ಅಂಗಡಿ ಬಾಗಿಲುಗಳಿಗೆ ಪ್ಲೈವುಡ್‌ ಶೀಟ್‌ ಹೊಡೆಸಲಾಗಿದೆ. ಅಮೆರಿಕದಲ್ಲಿ ನಡೆಯುತ್ತಿರುವ 2020ರ ಚುನಾವಣೆಯನ್ನು ಇಲ್ಲಿನ ಇತಿಹಾಸದ ಅತ್ಯಂತ ವಿಭಜನಕಾರಿ ಚುನಾವಣೆ ಎಂದು ಹೇಳಲಾಗಿದೆ.

ಟ್ರಂಪ್, ಬೈಡೆನ್ ನಡುವೆ ತೀವ್ರ ಪೈಪೋಟಿ

ಈ ಬಾರಿಯ ಚುನಾವಣೆ ತೀವ್ರ ಸಂಚಲನ ಸೃಷ್ಟಿಸಿದ್ದು, ಅಧ್ಯಕ್ಷೀಯ ಅಭ್ಯರ್ಥಿಗಳಾದ ಟ್ರಂಪ್ ಹಾಗೂ ಬೈಡೆನ್ ನಡುವೆ ತೀವ್ರ ಪೈಪೋಟಿ ಏರ್ಪಡಿಸಿದದೆ. ಅನೇಕ ಸಮೀಕ್ಷೆಗಳಲ್ಲಿ ಬೈಡನ್ ಮುನ್ನಡೆ ಸಾಧಿಸಿದ್ದಾರೆ.

ಟ್ರಂಪ್‌, ಬೈಡೆನ್‌ ಭವಿಷ್ಯ ರಾತ್ರಿ ವೇಳೆಗೆ ನಿಚ್ಚಳ?

ಅಮೆರಿಕದ ವಿವಿಧೆಡೆ ಸಮಯವಲಯ ಬದಲಾಗುತ್ತದೆ. ಹೀಗಾಗಿ ಆಯಾ ಭಾಗದ ಸಮಯಕ್ಕೆ ಅನುಗುಣವಾಗಿ ಬೆಳಗ್ಗೆ 6ರಿಂದಲೇ ಮತದಾನ ಆರಂಭವಾಗಿದೆ. ಬೆಳಗ್ಗೆಯಿಂದಲೇ ಭಾರೀ ಪ್ರಮಾಣದಲ್ಲಿ ಮತದಾರರು ಸರದಿಯಲ್ಲಿ ನಿಂತು ಮತ ಚಲಾವಣೆ ಮಾಡಿದ್ದಾರೆ. ರಾತ್ರಿ (ಭಾರತೀಯ ಕಾಲಮಾನ ಬೆಳಗಿನ ಜಾವ) ಮುಕ್ತಾಯವಾಗಲಿದೆ. ಕೂಡಲೇ ಮತ ಎಣಿಕೆ ಆರಂಭವಾಗಲಿದ್ದು, ಬುಧವಾರ ಮಧ್ಯಾಹ್ನದ ವೇಳೆ ಅಮೆರಿಕದ ಮುಂದಿನ ಅಧ್ಯಕ್ಷರು ಯಾರು ಎಂಬ ಚಿತ್ರಣ ಲಭಿಸುವ ನಿರೀಕ್ಷೆ ಇದೆ.