ವಾಷಿಂಗ್ಟನ್(ನ.04): ಅಮೆರಿಕ ಅಧ್ಯಕ್ಷ ಯಾರಾಗುತ್ತಾರೆ ಎಂಬ ಕುತೂಹಲ ಎಲ್ಲರಲ್ಲೂ ಇದೆ. ಬೈಡನ್ ಹಾಗೂ ಟ್ರಂಪ್ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದ್ದು, ಇವಬ್ಬರ ನಡುವಿನ ಮತಗಳ ಅಂತರ ಬಹಳ ಕಡಿಮೆ ಇದೆ. ಈವರೆಗೂ ಚುನಾವಣೆಯ ಅಂತಿಮ ಫಲಿತಾಂಶ ಘೋಷಣೆಯಾಗಿಲ್ಲ, ಯಾರು ಗೆದ್ದಿದ್ದಾರೆಂಬುವುದು ಸ್ಪಷ್ಟವಾಗಿಲ್ಲ. ಹೀಗಿರುವಾಗಲೇ ಟ್ರಂಪ್ ತನ್ನ ಪಕ್ಷ ಗೆದ್ದಿರುವುದಾಗಿ ಘೋಷಿಸಿದ್ದಾರೆ. ಅಲ್ಲದೇ ಸಂಭ್ರಮಾಚರಣೆಗೆ ಸಿದ್ಧತೆ ನಡೆಸಿರುವುದಾಗಿ ತಿಳಿಸಿದ್ದಾರೆ. ಸದ್ಯ ಇದು ಭಾರಿ ವಿವಾದ ಸೃಷ್ಟಿಸಿದೆ. ಈ ಬಗ್ಗೆ ಟ್ವಿಟರ್ ಕೂಡಾ ಎಚ್ಚರಿಕೆ ನೀಡಿದೆ.

ಹೌದು ಎಲೆಕ್ಟೊರಲ್ ಮತಗಳಲ್ಲಿ ಹಿನ್ನಡೆ ಅನುಭವಿಸಿರುವ ಟ್ರಂಪ್, ಮಾಧ್ಯಮವನ್ನುದ್ದೇಶಿವನ್ನುದ್ದೇಶಿಸಿ ಮಾತನಾಡಿದ್ದಾರೆ. ಈ ವೇಳೆ ತಾವೇ ಗೆಲ್ಲಬೇಕು. ಗೆಲ್ಲದಿದ್ದರೆ ಸುಪ್ರೀಂಕೋರ್ಟ್‌ಗೆ ಹೋಗಿ ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ. 

ಇದೇ ವೇಳೆ ದಕ್ಷಿಣ ಕಾರೊಲಿನಾ ಕ್ಷೇತ್ರದಲ್ಲಿ ತಮ್ಮ ಗೆಲುವಿನ ಬಗ್ಗೆ ಟ್ರಂಪ್ ಘೋಷಿಸಿದ ಬೆನ್ನಲ್ಲೇ ಟ್ವಿಟರ್ ಎಚ್ಚರಿಕೆ ರವಾನಿಸಿದೆ.  ಅಧಿಕೃತ ಮೂಲಗಳು ದೃಢಪಡಿಸುವ ಮೊದಲೇ ನೀವು ನಿಮ್ಮ ಗೆಲುವನ್ನು ಘೋಷಿಸಿಕೊಂಡಿದ್ದೀರಿ, ತಪ್ಪು ಕ್ರಮ ಎಂದು ಹೇಳಿದೆ.

ಇಲ್ಲಿದೆ ಟ್ರಂಪ್ ಭಾಷಣದ ಪ್ರಮುಖ ಅಂಶಗಳು

* ಲಕ್ಷ ಲಕ್ಷಗಟ್ಟಲೆ ಜನರು ನಮಗೆ ಮತ ಹಾಕಿದ್ದಾರೆ. ಎಲ್ಲರಿಗೂ ಧನ್ಯವಾದಗಳು. ಇವರನ್ನು ತಡೆಯಲು ಕೆಟ್ಟ ಜನರ ಗುಂಪೊಂದು ಪ್ರಯತ್ನಿಸುತ್ತಿದೆ. ಆದರೂ ನಾವು ಗೆಲುವಿನ ಸನಿಹದಲ್ಲಿದ್ದೇವೆ. ಹೆಚ್ಚು ಕಡಿಮೆ ನಾವು ಈಗಾಗಲೇ ಗೆದ್ದಿದ್ದೇವೆ ಎಂದಿದ್ದಾರೆ

ಖಂಡಿತವಾಗಿಯೂ ನಾವು ಸುಪ್ರೀಂಕೋರ್ಟ್‌ಗೆ ಹೋಗುತ್ತೇವೆ. ಬೆಳಗಿನ ಜಾವ 4 ಗಂಟೆಗೆ ಪವಾಡವೆಂಬಂತೆ ಮತಪತ್ರಗಳು ಇದ್ದಕ್ಕಿದ್ದಂತೆ ಲಭಿಸುತ್ತವೆ, ಅದು ಕೂಡಾ ಅವರ ಲೆಕ್ಕಕ್ಕೆ ಹೋಗುತ್ತದೆ. ಇದು ಅಮೆರಿಕ ಹಾಗೂ ಅಮೆರಿಕದ ಲಕ್ಷಾಂತರ ಜನರಲ್ಲಿ ಅನುಮಾನ ಹುಟ್ಟಿಸಿದೆ.

ನಾವು ಇನ್ನೂ ಅನೇಕ ರಾಜ್ಯಗಳಲ್ಲಿ ಗೆಲುವು ಸಾಧಿಸುತ್ತಿದ್ದೇವೆ. ಈ ಬಗ್ಗೆ ಘೋಷಣೆಯಾಗಬೇಕಷ್ಟೇ. ಆದರೀಗ ಇದ್ದಕ್ಕಿದ್ದಂತೆ ಈ ವಂಚನೆ ನಡೆದಿದ್ದು, ಇದಕ್ಕೆ ನಾವು ಅವಕಾಶ ನೀಡುವುದಿಲ್ಲ.

ಫ್ಲೋರಿಡಾದಲ್ಲಿಯೂ ನಾವು 3 ಲಕ್ಷಕ್ಕೂ ಅಧಿಕ ಮತಗಳಿಂದ ಗೆದ್ದಿದ್ದೇವೆ. ಪೆನ್ಸಿಲ್ವೇನಿಯಾದಲ್ಲಿ 6 ಲಕ್ಷದ 90 ಸಾವಿರಕ್ಕೂ ಅಧಿಕ ಮತಗಳಿಂದ ಮುನ್ನಡೆಯಲ್ಲಿದ್ದೇವೆ. ಇದು ಭಾರಿ ಅಂತರ ಎಂದಿದ್ದಾರೆ.

ಸದ್ಯ ನಾವು ಅವರಿಗಿಂತ ಭಾರೀ ಮುನ್ನಡೆ ಹೊಂದಿದ್ದೇವೆ. ನಾವು ಖಂಡಿತಾ ಗೆಲ್ಲುತ್ತೇವೆ. ಇನ್ನೂ ಫಲಿತಾಂಶ ಬರುತ್ತಿರುವ ರಾಜ್ಯಗಳಲ್ಲಿ ಬಹಳ ಮುನ್ನಡೆ ಸಾಧಿಸಿದ್ದೇವೆ. ನಮ್ಮೊಂದಿಗೆ ಸರಿಸಮನಾಗಿ ಬರಲು ಅವರಿಗೆ ಸಾಧ್ಯವೇ ಇಲ್ಲ. ನಾವು ಸಂಪೂರ್ಣ ಗೆಲುವು ಪಡೆಯಲು ಮತ್ತು ಅದರ ಸಂಭ್ರಮಾಚರಣೆಗೆ ಸಿದ್ಧರಾಗಿದ್ದೆವು. ಆದರೆ ಇದ್ದಕ್ಕಿದ್ದಂತೆ ಏನೋ ನಡೆಯಿತು. ಇದರ ಮೂಲಕ ಗೆಲ್ಲಲು ಅವರಿಗೆ ನಾವು ಬಿಡುವುದಿಲ್ಲ ಎಂದಿದ್ದಾರೆ.