ತೈವಾನ್‌ಅನ್ನು ವಶಪಡಿಸಿಕೊಳ್ಳಲು ಚೀನಾ ಸಂಚು ರೂಪಿಸುತ್ತಿದ್ದು, ಸೇನಾ ಬಿಕ್ಕಟ್ಟು ಸನ್ನಿಹಿತ ಎಂದು ಅಮೆರಿಕ ಎಚ್ಚರಿಸಿದೆ.  ಇದಕ್ಕೆ ಪ್ರತಿಕ್ರಿಯಿಸಿರುವ ಚೀನಾ, ಅಮೆರಿಕದ ಆರೋಪಗಳನ್ನು ಆಧಾರರಹಿತ ಎಂದು ತಳ್ಳಿಹಾಕಿದೆ.

ತೈವಾನ್‌ ವಶಕ್ಕೆ ಚೀನಾ ಸಂಚು: ಅಮೆರಿಕ ಎಚ್ಚರಿಕೆ

ವಾಷಿಂಗ್ಟನ್‌: ‘ತೈವಾನ್‌ಅನ್ನು ವಶಪಡಿಸಿಕೊಳ್ಳಲು ಚೀನಾ ತಯಾರಿ ನಡೆಸುತ್ತಿದ್ದು, ಸೇನಾ ಬಿಕ್ಕಟ್ಟು ಸೃಷ್ಟಿಯಾಗುವ ಸಂದರ್ಭ ದೂರವಿಲ್ಲ’ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್‌ ಹೆಗ್ಸೆಟ್‌, ಇಂಡೋ-ಪೆಸಿಫಿಕ್‌ ವಲಯದ ತಮ್ಮ ಮಿತ್ರರಾಷ್ಟ್ರಗಳಿಗೆ ಎಚ್ಚರಿಸಿದ್ದಾರೆ.

ಸಿಂಗಾಪುರ್‌ನಲ್ಲಿ ನಡೆದ ಶಾಂಗ್ರಿ-ಲಾ ಸಂವಾದ ಭದ್ರತಾ ಸಮ್ಮೇಳನದಲ್ಲಿ ಮಾತನಾಡಿದ ಹೆಗ್ಸೆಟ್‌, ‘ಚೀನಾದಿಂದ ಬೆದರಿಕೆ ಇರುವುದು ನಿಜ. ನಾವು ಇದನ್ನು ಮುಚ್ಚಿಡುವುದಿಲ್ಲ. ಈ ಅಪಾಯ ಸನ್ನಿಹಿತವಾಗುತ್ತಿದೆ. ಅದು ತೈವಾನ್‌ ಬಳಿ ಆಕ್ರಮಣಕ್ಕೆ ಸಿದ್ಧತೆ ನಡೆಸುವಂತೆ ಅಭ್ಯಾಸ ಮಾಡುತ್ತಿದ್ದಾರೆ. 2027ರ ವೇಳೆಗೆ ತೈವಾನ್‌ ವಶಪಡಿಸಿಕೊಳ್ಳಲು ತಯಾರಾಗುತ್ತಿದೆ’ ಎಂದರು. ಜತೆಗೆ, ಆ ಪ್ರದೇಶದಲ್ಲಿ ಅಮೆರಿಕ ಸೇನೆ ನಿಯೋಜಿಸಲಿದೆ ಎಂದ ಅವರು, ಅಂತೆ ಮಾಡುವಂತೆ ಮಿತ್ರರಾಷ್ಟ್ರಗಳಿಗೂ ಸೂಚಿಸಿದ್ದಾರೆ.

‘ಎಲ್ಲಾ ದೇಶಗಳು ತಮ್ಮ ರಕ್ಷಣಾ ವೆಚ್ಚವನ್ನು ಜಿಡಿಪಿಯ ಶೇ.5ಕ್ಕೆ ಏರಿಸಿಕೊಳ್ಳಿ. ಮಿತ್ರರಾಷ್ಟ್ರಗಳ ಮತ್ತು ಪಾಲುದಾರ ದೇಶಗಳ ಬಲವಾದ ಮತ್ತು ಸಮರ್ಥವಾದ ಜಾಲವು ನಮ್ಮ ಪ್ರಮುಖ ಕಾರ್ಯತಂತ್ರ ಲಾಭವಾಗಿದೆ. ಇದರಿಂದ ಚೀನಾ ಅಸೂಯೆಪಡುತ್ತಿದೆ’ ಎಂದು ಹೆಗ್ಸೆಟ್‌ ಹೇಳಿರುವುದಾಗಿ ವರದಿಯಾಗಿದೆ. ಜೊತೆಗೆ, ಚೀನಾ ಮೇಲೆ ಆರ್ಥಿಕವಾಗಿ ಅವಲಂಬಿತರಾಗದಿರಿ ಎಂದು ಎಚ್ಚರಿಸಿದ್ದಾರೆ ಎನ್ನಲಾಗಿದೆ.

ಚೀನಾ ಪ್ರತಿಕ್ರಿಯೆ:

ಅಮೆರಿಕದ ಹೇಳಿಕೆಯನ್ನು ಚೀನಾ ಆಧಾರರಹಿತ ಆಪಾದನೆಗಳೆಂದು ತಳ್ಳಿಹಾಕಿದೆ. ಹೆಗ್ಸೆಟ್‌ ಆರೋಪಕ್ಕೆ ಚೀನಾ ನಿಯೋಗದ ಮುಖ್ಯಸ್ಥರಾದ ರಾಷ್ಟ್ರೀಯ ರಕ್ಷಣಾ ವಿ.ವಿ.ಯ ರಿಯರ್ ಅಡ್ಮಿರಲ್ ಹು ಗ್ಯಾಂಗ್‌ಫೆಂಗ್, ‘ಇದು ಸಂಪೂರ್ಣ ಕಟ್ಟುಕಥೆ. ಕಳ್ಳನನ್ನು ತಡೆಯಿರಿ ಎಂದು ಕಳ್ಳನೇ ಅಳುವಂತಿದೆ. ಈ ಪ್ರದೇಶದಲ್ಲಿ ಅಸ್ಥಿರತೆ ಸೃಷ್ಟಿಸುತ್ತಿರುವುದು ಅಮೆರಿಕ’ ಎಂದು ಹೇಳಿದ್ದಾರೆ.