ವಾಷಿಂಗ್ಟನ್(ಜ.03)‌: ಅಮೆರಿಕದ ಅಧ್ಯಕ್ಷ ಹುದ್ದೆಯನ್ನು ತ್ಯಜಿಸಲು ಇನ್ನು ಕೆಲವೇ ದಿನಗಳು ಬಾಕಿ ಇರುವಾಗ ಡೊನಾಲ್ಡ್‌ ಟ್ರಂಪ್‌ ಅಮೆರಿಕ ಸಂಸತ್ತಿನಲ್ಲಿ ಮುಖಭಂಗ ಅನುಭವಿಸಿದ್ದಾರೆ. ಟ್ರಂಪ್‌ ತಮ್ಮ ವಿಟೋ (ಪರಮಾಧಿಕಾರ) ಅಧಿಕಾರ ಬಳಸಿ ತಿರಸ್ಕರಿಸಿದ್ದ 54 ಲಕ್ಷ ಕೋಟಿ ರು. ಮೊತ್ತದ ರಕ್ಷಣಾ ಬಜೆಟ್‌ ಅನ್ನು ಅಮೆರಿಕ ಸಂಸತ್ತು ಸರ್ವಾನುಮತದಿಂದ ಅಂಗೀಕರಿಸಿದೆ.

ಅಮೆರಿಕದಲ್ಲಿ ಒಂದು ವರ್ಷಗಳ ರಕ್ಷಣಾ ನೀತಿ ಹೇಗಿರಬೇಕು ಎಂಬುದನ್ನು ರಕ್ಷಣಾ ಬಜೆಟ್‌ ನಿರ್ಧರಿಸುತ್ತದೆ. ರಕ್ಷಣಾ ಮಸೂದೆ ಸಂಸತ್ತಿನಲ್ಲಿ ಅಂಗೀಕಾರವಾದ ಬಳಿಕ ಅದು ಕಾಯ್ದೆ ಆಗಬೇಕಾದರೆ ಅಧ್ಯಕ್ಷರ ಸಹಿ ಅತ್ಯಗತ್ಯ. ಅಪರೂಪದ ಸಂದರ್ಭದಲ್ಲಿ ಸಂಸತ್ತಿನಲ್ಲಿ ಅಂಗೀಕಾರಗೊಂಡ ರಕ್ಷಣಾ ಬಜೆಟ್‌ ಅನ್ನು ಅಧ್ಯಕ್ಷರು ವಿಟೋ ಅಧಿಕಾರ ಬಳಸಿ ತಿರಸ್ಕರಿಸುವ ಅಧಿಕಾರ ಹೊಂದಿರುತ್ತಾರೆ. ಆದರೆ, ಸಂಸತ್ತಿನ ಸದಸ್ಯರು ಮೂರನೇ ಎರಡರಷ್ಟುಬಹುಮತದೊಂದಿಗೆ ಅಧ್ಯಕ್ಷರ ಪರಮಾಧಿಕಾರವನ್ನು ತಿರಸ್ಕರಿಸುವ ಅಧಿಕಾರ ಹೊಂದಿರುತ್ತಾರೆ.

ಟ್ರಂಪ್‌ ತಮ್ಮ ವಿಟೋ ಅಧಿಕಾರ ಬಳಸಿ ರಕ್ಷಣಾ ಬಜೆಟ್‌ ಬಗ್ಗೆ ಎತ್ತಿದ್ದ ಆಕ್ಷೇಪಣೆಗಳನ್ನು ಸಂಸತ್ತಿನ ಕೆಳಮನೆಯಾದ ಪ್ರತಿನಿಧಿಗಳ ಸಭೆ ತಿರಸ್ಕರಿಸಿತ್ತು. ಅದಾದ ಬಳಿಕ ಶುಕ್ರವಾರ ಸೆನೆಟ್‌ನಲ್ಲೂ ಟ್ರಂಪ್‌ ಅವರ ವಿಟೋ ಚಲಾವಣೆಗೆ ಸೋಲಾಗಿದ್ದು, ರಕ್ಷಣಾ ಬಜೆಟ್‌ ಅಂಗೀಕಾರಗೊಂಡಿದೆ. ವಿಶೇಷವೆಂದರೆ ಟ್ರಂಪ್‌ ಅವರ ರಿಪಬ್ಲಿಕನ್‌ ಪಕ್ಷದ ಪ್ರಾಬಲ್ಯ ಇರುವ ಸೆನೆಟ್‌ ರಕ್ಷಣಾ ಬಜೆಟ್‌ ಅನ್ನು 81​-13 ಮತಗಳಿಂದ ಅಂಗೀಕರಿಸಿದೆ.