* ಕೀವ್‌, ಖಾರ್ಕೀವ್‌, ಮರಿಯುಪೋಲ್‌ ಮೇಲೆ ದಾಳಿ ತೀವ್ರ* ಉಕ್ರೇನ್‌ನ ಬೃಹತ್‌ ಸಿಟಿಗಳ ಮೇಲೆ ರಷ್ಯಾ ಭೀಕರ ದಾಳಿ* ಬಂದರು ನಗರಿ ಮರಿಯುಪೋಲ್‌ ತತ್ತರ 

ಕೀವ್‌(ಏ.18): ಉಕ್ರೇನ್‌ನ ಬೃಹತ್‌ ನಗರಗಳ ಮೇಲೆ ರಷ್ಯಾ ತನ್ನ ಕ್ಷಿಪಣಿ ಹಾಗೂ ಶೆಲ್‌ ದಾಳಿಯನ್ನು ಇನ್ನಷ್ಟುತೀವ್ರಗೊಳಿಸಿದೆ. ರಾಜಧಾನಿ ಕೀವ್‌, ಎರಡನೇ ದೊಡ್ಡ ನಗರ ಖಾರ್ಕೀವ್‌ ಹಾಗೂ ಬಂದರು ನಗರಿ ಮರಿಯುಪೋಲ್‌ ಮೇಲೆ ರಷ್ಯಾದ ದಾಳಿ ತೀವ್ರಗೊಂಡಿದ್ದು, ಅಪಾರ ಆಸ್ತಿಪಾಸ್ತಿ ಹಾನಿಯಾಗಿದೆ ಎಂದು ಹೇಳಲಾಗಿದೆ.

ಕಪ್ಪು ಸಮುದ್ರದಲ್ಲಿ ತನ್ನ ಯುದ್ಧನೌಕೆಯನ್ನು ಉಕ್ರೇನ್‌ ಮುಳುಗಿಸಿದ್ದರಿಂದ ರಷ್ಯಾ ಸಿಟ್ಟಿಗೆದ್ದು ಮೂರು ದಿನಗಳಿಂದ ದಾಳಿ ತೀವ್ರಗೊಳಿಸಿದೆ. ಮರಿಯುಪೋಲ್‌ ನಗರವನ್ನು ಸಂಪೂರ್ಣ ತನ್ನ ವಶಕ್ಕೆ ತೆಗೆದುಕೊಂಡಿದ್ದು, ಕೀವ್‌ ಹಾಗೂ ಖಾರ್ಕೀವ್‌ ಮೇಲೆ ಹೆಚ್ಚಿನ ದಾಳಿ ನಡೆಸುತ್ತಿದೆ. ಇದರಿಂದ ಕಂಗಾಲಾಗಿರುವ ಉಕ್ರೇನ್‌ ಅಧ್ಯಕ್ಷ ವೋಲೋದಿಮಿರ್‌ ಝೆಲೆನ್‌ಸ್ಕಿ, ಮರಿಯುಪೋಲ್‌ ಹಾಗೂ ಇತರ ನಗರಗಳನ್ನು ರಕ್ಷಿಸಿಕೊಳ್ಳಲು ಪಾಶ್ಚಾತ್ಯ ದೇಶಗಳು ತಕ್ಷಣ ಇನ್ನಷ್ಟುಶಸ್ತ್ರಾಸ್ತ್ರ ನೀಡಬೇಕು ಎಂದು ಮೊರೆಯಿಟ್ಟಿದ್ದಾರೆ.

ಕೀವ್‌ ನಗರದ ಹೊರವಲಯದಲ್ಲಿ ರಷ್ಯಾದ ದಾಳಿಗೆ ಬಲಿಯಾದ 900ಕ್ಕೂ ಹೆಚ್ಚು ಉಕ್ರೇನಿಯನ್ನರ ಶವ ಶನಿವಾರವಷ್ಟೇ ಪತ್ತೆಯಾಗಿತ್ತು. ಆ ಆಘಾತದಿಂದ ಚೇತರಿಸಿಕೊಳ್ಳುವುದಕ್ಕೂ ಅವಕಾಶ ನೀಡದೆ ರಷ್ಯಾ ಇನ್ನಷ್ಟುದಾಳಿ ನಡೆಸುತ್ತಿದೆ. ಕೀವ್‌ ಬಿಟ್ಟು ಸುರಕ್ಷಿತ ಸ್ಥಳಗಳಿಗೆ ಓಡಿಹೋದವರು ಸದ್ಯಕ್ಕೆ ವಾಪಸ್‌ ಬರಬೇಡಿ, ರಷ್ಯಾ ಇನ್ನಷ್ಟುದಾಳಿ ನಡೆಸುವ ಸಾಧ್ಯತೆಯಿದೆ ಎಂದು ನಗರದ ಮೇಯರ್‌ ಹೇಳಿದ್ದಾರೆ.

ಶನಿವಾರ ಉಕ್ರೇನ್‌ನ ಸಶಸ್ತ್ರ ಸೇನಾ ವಾಹನಗಳ ತಯಾರಿಕಾ ಕಾರ್ಖಾನೆ ಹಾಗೂ ಶುಕ್ರವಾರ ಕ್ಷಿಪಣಿ ತಯಾರಿಕಾ ಘಟಕದ ಮೇಲೆ ರಷ್ಯಾ ದಾಳಿ ನಡೆಸಿತ್ತು.