- 90 ನಿರಾಶ್ರಿತರು ಉಳಿದುಕೊಂಡಿದ್ದ ಶಾಲೆ ಮೇಲೆ ಬಾಂಬ್‌ ದಾಳಿ- ಕಟ್ಟಡದ ಕುಸಿತ, ಬೆಂಕಿಯ ಜ್ವಾಲೆಗೆ 60 ಜನರ ದಾರುಣ ಸಾವು- ಉಕ್ರೇನ್‌ ಡ್ರೋನ್‌ ದಾಳಿಗೆ ರಷ್ಯಾ ನೌಕೆ, ಕ್ಷಿಪಣಿ ದಾಳಿ ತಡೆ ವ್ಯವಸ್ಥೆ ಧ್ವಂಸ

ಕೀವ್‌(ಮೇ.09): ಉಕ್ರೇನ್‌ ಮೇಲಿನ ದಾಳಿ ಮುಂದುವರೆಸಿರುವ ರಷ್ಯಾ, ನಿರಾಶ್ರಿತರು ಉಳಿದುಕೊಂಡಿದ್ದ ಶಾಲೆಯೊಂದರ ಮೇಲೆ ಶನಿವಾರ ಭೀಕರ ಬಾಂಬ್‌ ದಾಳಿ ನಡೆಸಿದ್ದು, ಅದರಲ್ಲಿ 60 ಜನರು ಸಾವನ್ನಪ್ಪಿದ್ದಾರೆ.

ಪೂರ್ವ ಉಕ್ರೇನ್‌ನ ಲುಹಾನ್ಸ್‌$್ಕನಲ್ಲಿರುವ ಶಾಲೆಯೊಂದರಲ್ಲಿ 90 ಜನ ನಿರಾಶ್ರಿತರು ಉಳಿದುಕೊಂಡಿದ್ದರು. ಈ ಕಟ್ಟಡದ ಮೇಲೆ ರಷ್ಯಾ ಭಾರೀ ಪ್ರಮಾಣದ ಬಾಂಬ್‌ ದಾಳಿ ನಡೆಸಿದ್ದು, ದಾಳಿಯ ತೀವ್ರಗೆ ಇಡೀ ಕಟ್ಟಡಕ್ಕೆ ಬೆಂಕಿ ಬಿದ್ದಿದ್ದು ಮಾತ್ರವಲ್ಲದೇ, ಇಡೀ ಕಟ್ಟಡವೇ ಧರಾಶಾಹಿಯಾಗಿದೆ. ಘಟನೆಯಲ್ಲಿ ಹಲವರು ಬೆಂಕಿಗೆ ಸುಟ್ಟು ಸಾವನ್ನಪ್ಪಿದ್ದರೆ, ಇನ್ನು ಕೆಲವರು ಕಟ್ಟಡದ ಅವಶೇಷಗಳ ಅಡಿಯಲ್ಲಿ ಸಿಕ್ಕಿ ಸಾವನ್ನಪ್ಪಿದ್ದಾರೆ ಎಂದು ಲುಹಾನ್ಸ್‌$್ಕನ ಗವರ್ನರ್‌ ಸೆರ್ಹಿ ಗೈಡೈ ಹೇಳಿದ್ದಾರೆ.

ನೌಕೆ ನಾಶ:

ಈ ನಡುವೆ ಕಪ್ಪು ಸಮುದ್ರದಲ್ಲಿರುವ ಸ್ನೇಕ್‌ ಐಲ್ಯಾಂಡ್‌ನಲ್ಲಿ ಬೀಡುಬಿಟ್ಟಿದ್ದ ರಷ್ಯಾದ ಒಂದು ನೌಕೆ ಮತ್ತು ಕ್ಷಿಪಣಿ ದಾಳಿ ತಡೆ ವ್ಯವಸ್ಥೆಯನ್ನು ಡ್ರೋನ್‌ ದಾಳಿ ಮೂಲಕ ಧ್ವಂಸ ಮಾಡಿದ್ದಾಗಿ ಉಕ್ರೇನ್‌ ಸೇನೆ ಹೇಳಿಕೊಂಡಿದೆ. ಈ ಕುರಿತ ವಿಡಿಯೋವನ್ನು ಅದು ಭಾನುವಾರ ಬಿಡುಗಡೆ ಮಾಡಿದೆ.

ಇದೇ ವೇಳೆ ರಷ್ಯಾದ ತೆಕ್ಕೆಗೆ ಹೋಗಿರುವ ಕರಾವಳಿ ಬಂದರು ನಗರಿ ಮರಿಯುಪೋಲ್‌ನ ಉಕ್ಕು ಉತ್ಪಾದನಾ ಕಾರ್ಖಾನೆ ಕಾಂಪ್ಲೆಕ್ಸ್‌ನಲ್ಲಿ ಸಿಕ್ಕಿಬಿದ್ದಿದ್ದ ಕಡೆಯ ಮಹಿಳೆ ಮತ್ತು ಮಕ್ಕಳನ್ನು ರಕ್ಷಿಸಲಾಗಿದೆ ಎಂದು ಉಕ್ರೇನ್‌ ಸರ್ಕಾರ ಹೇಳಿದೆ.