* ಉಕ್ರೇನ್‌ನಲ್ಲಿ ಮುಂದುವರೆದ ಭಾರತೀಯ ವಿದ್ಯಾರ್ಥಿಗಳ ಗೋಳು* ಅನ್ನ, ನೀರು ಇಲ್ಲ, ಗಡಿಗೆ ಬರೋದು ಅಪಾಯಕಾರಿ
ಮುಂಬೈ(ಮಾ.02): ಉಕ್ರೇನಿನ ಪೂರ್ವ ಭಾಗದಲ್ಲಿ ರಷ್ಯಾದ ದಾಳಿ ದಿನೇ ದಿನೇ ತೀವ್ರವಾಗುತ್ತಿದ್ದು ಅಲ್ಲಿ ಸಿಲುಕಿರುವ ಭಾರತೀಯರು ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಯುದ್ಧ ಘೋಷಣೆಯಾಗುತ್ತಿದ್ದಂತೆ ಭಾರತೀಯರು ಬಂಕರ್, ಮೆಟ್ರೋ ನಿಲ್ದಾಣಗಳಲ್ಲಿ ಅಡಗಿಕೊಂಡಿದ್ದಾರೆ. ಅಲ್ಲಿ 2 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ತಾಪಮಾನವಿದೆ. ಸರಿಯಾಗಿ ಆಹಾರ, ಸಾಕಷ್ಟುಪ್ರಮಾಣದಲ್ಲಿ ನೀರೂ ಕೂಡಾ ಸಿಗುತ್ತಿಲ್ಲ. ರಷ್ಯಾ ಪಡೆಗಳು ನಿರಂತರವಾಗಿ ಬಾಂಬ್ ಶೆಲ್ ದಾಳಿ ನಡೆಸುತ್ತಿದ್ದು ಪೂರ್ವ ಉಕ್ರೇನಿನಿಂದ ಪಶ್ಚಿಮ ಭಾಗಕ್ಕೆ ರಸ್ತೆಯ ಮಾರ್ಗವಾಗಿ ಪ್ರಯಾಣಿಸುವುದು ಅಸಾಧ್ಯವೆಂಬಂತಾಗಿದೆ. ಜನರು ಅತ್ಯಂತ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದು ಉಕ್ರೇನಿನಿಂದ ಮರಳಿದ ಭಾರತೀಯ ವಿದ್ಯಾರ್ಥಿಗಳು ಅಲ್ಲಿರುವ ಭಾರತೀಯರ ಸಂಕಷ್ಟಗಳನ್ನು ವಿವರಿಸಿದ್ದಾರೆ.
ರೋಮಾನಿಯಾದ ಬುಚಾರೆಸ್ಟ್‌ನಿಂದ ಏರ್ ಇಂಡಿಯಾ ವಿಮಾನದ ಮೂಲಕ ಮುಂಬೈ ತಲುಪಿದ ನಿಶಿ ಮಿಲ್ಕಾನಿ ಈ ಕುರಿತು ಮಾತನಾಡಿದ್ದು, ‘ನಾವು ಉಕ್ರೇನಿನ ಪಶ್ಚಿಮ ಗಡಿಯ ಸಮೀಪದಲ್ಲೇ ಇದ್ದೆವು. ಬಹಳಷ್ಟುದಿನಗಳ ಕಾಲ ವಸತಿ ನಿಲಯದಲ್ಲೇ ಅಡಗಿದ್ದೆ. ವಿಶ್ವವಿದ್ಯಾಯಲಕ್ಕೂ ಸೇನಾಪಡೆಗಳು ಬಂದಿದ್ದರು. ಆದರೆ ವಿದ್ಯಾರ್ಥಿಗಳಿಗೆ ಯಾವುದೇ ಹಾನಿ ಮಾಡಿಲ್ಲ.
ಅವಕಾಶ ಸಿಕ್ಕಿದ್ದೇ ಗಡಿಯತ್ತ ನಡೆಯಲು ಆರಂಭಿಸಿದೆವು . ಸುಮಾರು 10 ಕಿಮೀ ಬಸ್ ಮೂಲಕ ಶೀಘ್ರವಾಗಿ ಗಡಿ ದಾಟಿ ರೋಮಾನಿಯಾಕ್ಕೆ ಪ್ರವೇಶಿಸಿದೆವು. ನಡೆದೂ ನಡೆದೂ ನಮ್ಮ ಕಾಲುಗಳು ಊದಿಕೊಂಡಿವೆ. ಅದರೆ ಪೂರ್ವ ಉಕ್ರೇನಿನಲ್ಲಿರುವ ಭಾರತೀಯರಿಗೆ ಇದು ಕೂಡಾ ಸಾಧ್ಯವಾಗುತ್ತಿಲ್ಲ. ಅಲ್ಲಿ ರಷ್ಯಾಪಡೆಗಳ ದಾಳಿ ತೀವ್ರವಾಗಿದ್ದು, ರಸ್ತೆಗಿಳಿದರೆ ಪ್ರಾಣಾಪಾಯದ ಭೀತಿಯಿದೆ. ಹೀಗಾಗಿ ಅಲ್ಲಿರುವ ವಿದ್ಯಾರ್ಥಿಗಳನ್ನು ಸಂಪರ್ಕಿಸಿ ಸುರಕ್ಷಿತವಾಗಿ ಕರೆತರಲು ಸರ್ಕಾರ ಪ್ರಯತ್ನಿಸಬೇಕು ಎಂದು ಹೇಳಿದ್ದಾಳೆ.
ಕೀವ್‌ನಿಂದ ಎಲ್ಲಾ ಭಾರತೀಯರ ತೆರವು
ಉಕ್ರೇನ್‌ನ ರಾಜಧಾನಿ ಕೀವ್‌ನಲ್ಲಿ ಸಿಲುಕಿಕೊಂಡಿರುವ ಎಲ್ಲಾ ಭಾರತೀಯರನ್ನು ಅಲ್ಲಿಂದ ತೆರವು ಮಾಡಲಾಗಿದೆ. ಖಾರ್ಕೀವ್ ಸೇರಿದಂತೆ ಇತರ ನಗರಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಆದಷ್ಟುಬೇಗ ಸ್ಥಳಾಂತರಿಸಲಾಗುತ್ತದೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಘ್ಲಾ ಹೇಳಿದ್ದಾರೆ. ಉಕ್ರೇನ್‌ನಲ್ಲಿನ ಪರಿಸ್ಥಿತಿ ಕುರಿತಾಗಿ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ನಡೆದ ತುರ್ತು ಸಭೆಯಲ್ಲಿ ಮಾತನಾಡಿದ ಅವರು, ‘ನಮಗೆ ಖಾರ್ಕೀವ್, ಸುಮಿ ಮತ್ತು ಇತರ ಸಂಘರ್ಷ ಪ್ರದೇಶಗಳಲ್ಲಿನ ಪರಿಸ್ಥಿತಿಯ ಕುರಿತು ಕಳವಳವಾಗುತ್ತಿದೆ ಎಂದು ಅವರು ಹೇಳಿದ್ದಾರೆ.
