* ಉಕ್ರೇನಿನ ಮೇಲೆ ನಡೆಸುತ್ತಿರುವ ಆಕ್ರಮಣವನ್ನು ತಕ್ಷಣ ನಿಲ್ಲಿಸಬೇಕು* ಯುದ್ಧ ನಿಲ್ಲಿಸಿ: ರಷ್ಯಾಗೆ ಐಸಿಜೆ ಆದೇಶ* ಆದರೆ ರಷ್ಯಾ ಈ ಆದೇಶ ಪಾಲಿಸುತ್ತಾ ಎಂಬುದು ಅನುಮಾನ
ಹೇಗ್(ಮಾ.17): ಉಕ್ರೇನಿನ ಮೇಲೆ ನಡೆಸುತ್ತಿರುವ ಆಕ್ರಮಣವನ್ನು ತಕ್ಷಣ ನಿಲ್ಲಿಸಬೇಕು ಎಂದು ರಷ್ಯಾಕ್ಕೆ ಅಂತಾರಾಷ್ಟ್ರೀಯ ನ್ಯಾಯಾಲಯ (ಐಸಿಜೆ) ಆದೇಶಿಸಿದೆ. ಇದು ಸಮರಕ್ಕೆ ಹೊಸ ತಿರುವು ನೀಡಿದೆ. ಆದರೆ ಐಸಿಜೆ ಕಲಾಪ ಬಹಿಷ್ಕರಿಸಿದ್ದ ರಷ್ಯಾ ಈ ಆದೇಶ ಪಾಲಿಸುತ್ತಾ ಎಂಬುದು ಅನುಮಾನವಾಗಿದೆ.
ಐಸಿಜೆ15 ಜನ ಸದಸ್ಯರನ್ನು ಒಳಗೊಂಡಿದ್ದು, ಸುಪ್ರೀಂ ಕೋರ್ಟಿನ ಮಾಜಿ ನ್ಯಾಯಾಧೀಶರಾದ ದಲವೀರ್ ಭಂಡಾರಿ ಭಾರತದ ಪರವಾಗಿ ಹಾಜರಿದ್ದರು.
ನ್ಯಾಯಪೀಠವು 13-2 ಮತದಿಂದ, ‘ರಷ್ಯಾದ ಸೇನಾ ಪಡೆಗಳು, ಹಾಗೂ ರಷ್ಯಾದಿಂದ ನಿರ್ದೇಶಿಸಲ್ಪಟ್ಟಅಥವಾ ರಷ್ಯಾ ಬೆಂಬಲಿತ ಸೇನಾ ಘಟಕಗಳು, ಸಂಘಟನೆಗಳು ಉಕ್ರೇನಿನಲ್ಲಿ ಇನ್ನು ಸೇನಾ ಕಾರ್ಯಾಚರಣೆಯನ್ನು ಮುಂದುವರೆಸುವಂತಿಲ್ಲ’ ಎಂದು ಅದೇಶಿಸಿದೆ.
‘ಉಕ್ರೇನಿನಲ್ಲಿ ಸಾಮೂಹಿಕ ನರಮೇಧ ನಡೆಸಲು ರಷ್ಯಾ ಯೋಜನೆ ನಡೆಸಿದೆ’ ಎಂದು ಉಕ್ರೇನ್ ಐಸಿಜೆಯಲ್ಲಿ ಅರ್ಜಿ ಸಲ್ಲಿಸಿತ್ತು ಹಾಗೂ ರಷ್ಯಾ ವಿರುದ್ಧ ತುರ್ತು ಕ್ರಮ ಕೈಗೊಳ್ಳಬೇಕೆಂದು ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಮಾಚ್‌ರ್ 7 ರಂದು ನ್ಯಾಯಾಲಯ ವಿಚಾರಣೆಯನ್ನು ಆರಂಭಿಸಿತ್ತು. ಉಕ್ರೇನ್ ಮಾತ್ರ ಮೌಖಿಕವಾಗಿ ತನ್ನ ಪಕ್ಷ ಮಂಡಿಸಿದ್ದು, ರಷ್ಯಾ ಮೌಖಿಕ ವಿಚಾರಣೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿತ್ತು.
ಅಂತಾರಾಷ್ಟ್ರೀಯ ನ್ಯಾಯಾಲಯವು ಸವೋಚ್ಛ ನ್ಯಾಯಾಲಯವಾಗಿದ್ದು, ಇದರ ಆದೇಶ ಅಂತಿಮವಾಗಿರುತ್ತದೆ. ಈ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಸುವ ಅವಕಾಶಗಳಿಲ್ಲ. ವಿಶ್ವಸಂಸ್ಥೆಯ ಚಾರ್ಟರ್ ಪ್ರಕಾರ ಎಲ್ಲ ಸದಸ್ಯ ರಾಷ್ಟ್ರಗಳು ನ್ಯಾಯಾಲಯದ ಆದೇಶವನ್ನು ಪಾಲಿಸಲು ಬದ್ಧರಾಗಿರುತ್ತವೆ. ಉಕ್ರೇನ್ ಹಾಗೂ ರಷ್ಯಾ ಎರಡೂ ರಾಷ್ಟ್ರಗಳು ಈ ಚಾರ್ಟರ್‌ಗೆ ಸಹಿ ಹಾಕಿವೆ. ಆದರೂ ರಷ್ಯಾ ವಿಚಾರಣೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸಿದಂತೆ ನ್ಯಾಯಾಲಯದ ಈ ಆದೇಶವನ್ನು ಪಾಲಿಸದೇ ಇರುವ ಸಾಧ್ಯತೆಗಳೂ ಇವೆ.
ಏಕೆಂದರೆ ನ್ಯಾಯಾಲಯ ತನ್ನ ಆದೇಶಗಳನ್ನು ಜಾರಿಗೆ ತರಲು ಯಾವುದೇ ನೇರ ಕ್ರಮಗಳನ್ನು ಕೈಗೊಳ್ಳುವುದಿಲ್ಲ. ಆದರೆ ಅರ್ಜಿ ಸಲ್ಲಿಸಿದ ಪಕ್ಷಗಳು ಭದ್ರತಾ ಸಮಿತಿಯಲ್ಲಿ ಕೋರ್ಟಿನ ಆದೇಶ ಪಾಲಿಸುವಂತೆ ಇನ್ನೊಂದು ಪಕ್ಷದ ಮೇಲೆ ಒತ್ತಡ ಹೇರುವ ಆಯ್ಕೆ ಹೊಂದಿವೆ.
