ಲಂಡನ್‌(ಅ.27): ಕೊರೋನಾ ವೈರಸ್‌ ವಿರುದ್ಧ ‘ಗೇಮ್‌ ಚೇಂಜರ್‌’ ಎಂದೇ ಪರಿಗಣಿಸಲಾಗಿರುವ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಲಸಿಕೆಯನ್ನು ಬ್ರಿಟನ್‌ನ ಪ್ರಮುಖ ಆಸ್ಪತ್ರೆಯೊಂದರ ವೈದ್ಯ ಸಿಬ್ಬಂದಿಗಳಿಗೆ ನವೆಂಬರ್‌ ಮೊದಲ ವಾರದಲ್ಲಿ ನೀಡಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ನ.2ರಿಂದ ಲಸಿಕೆಯನ್ನು ಪಡೆಯಲು ಅಗತ್ಯ ಸಿದ್ಧತೆ ಮಾಡಿಕೊಳ್ಳುವಂತೆ ಆಸ್ಪತ್ರೆಗೆ ಸೂಚನೆ ನೀಡಲಾಗಿದೆ ಎಂದು ‘ದ ಸನ್‌’ ಪತ್ರಿಕೆ ವರದಿ ಮಾಡಿದೆ.

‘ಛಡೊಕ್ಸ್‌1 ಎನ್‌ಕೋವ್‌-19’ ಹೆಸರಿನ ಲಸಿಕೆಯನ್ನು ಆಸ್ಟ್ರಾಜೆನೆಕಾ ಔಷಧ ತಯಾರಿಕಾ ಕಂಪನಿ ಹಾಗೂ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಸಂಶೋಧಕರು ಜಂಟಿಯಾಗಿ ಅಭಿವೃದ್ಧಿಪಡಿಸಿದ್ದು, ಶೀಘ್ರದಲ್ಲೇ ಅನುಮತಿ ದೊರೆಯುವ ನಿರೀಕ್ಷೆ ಇದೆ. ಸದ್ಯ ಈ ಲಸಿಕೆಯ ಅಂತಿಮ ಹಂತದ ಪರೀಕ್ಷೆಯನ್ನು ನಡೆಸಲಾಗುತ್ತಿದೆ.

ಇದೇ ವೇಳೆ ಆಕ್ಸ್‌ಫರ್ಡ್‌ ಲಸಿಕೆ ಕೋವಿಡ್‌ ವಿರುದ್ಧ ಯುವಕರಲ್ಲಿ ಮಾತ್ರವಲ್ಲ, ವಯಸ್ಕರಲ್ಲಿಯೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿರುವಲ್ಲಿ ಯಶಸ್ವಿಯಾಗಿದೆ. ವಯಸ್ಸಾದ ವ್ಯಕ್ತಿಗಳಲ್ಲಿಯೂ ಪ್ರತಿಕಾಯ ಹಾಗೂ ಟಿ- ಸೆಲ್‌ಗಳನ್ನು ಲಸಿಕೆ ಉತ್ಪತ್ತಿ ಮಾಡಿದೆ ಎಂದು ವರದಿಗಳು ತಿಳಿಸಿವೆ.