ವಾಷಿಂಗ್ಟನ್(ಜ.10): ಅಪರೂಪದ ಬೆಳವಣಿಗೆಯೊಂದರಲ್ಲಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಟ್ವೀಟರ್‌ ಖಾತೆಯನ್ನು ಅಮೆರಿಕದ ಜಗತ್ಪ್ರಸಿದ್ಧ ಸಾಮಾಜಿಕ ಜಾಲತಾಣ ಕಂಪನಿ ಟ್ವೀಟರ್‌ ಶಾಶ್ವತವಾಗಿ ರದ್ದುಪಡಿಸಿದೆ. ಇತ್ತೀಚೆಗೆ ಟ್ರಂಪ್‌ ಅವರ ಪ್ರಚೋದನಕಾರಿ ಕರೆಗೆ ಓಗೊಟ್ಟು ಅವರ ಬೆಂಬಲಿಗರು ಸಂಸತ್ತಿನ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಹಾಗೂ ಟ್ರಂಪ್‌ ಅವರ ಪ್ರಚೋದನಕಾರಿ ಟ್ವೀಟ್‌ಗಳಿಂದ ಮುಂದೆ ಆಗಬಹುದಾದ ಅನಾಹುತಗಳನ್ನು ಮನಗಂಡು ಈ ಕ್ರಮ ಕೈಗೊಂಡಿರುವುದಾಗಿ ಟ್ವೀಟರ್‌ ಹೇಳಿದೆ.

ಐವರನ್ನು ಬಲಿ ತೆಗೆದುಕೊಂಡ ಬುಧವಾರ ಮಧ್ಯರಾತ್ರಿಯ ಹಿಂಸಾಚಾರದ ನಂತರ ಫೇಸ್‌ಬುಕ್‌ ಹಾಗೂ ಇನ್‌ಸ್ಟಾಗ್ರಾಂ ಕಂಪನಿಗಳು ಟ್ರಂಪ್‌ ಅವರ ಖಾತೆಗಳನ್ನು ರದ್ದುಪಡಿಸಿದ್ದವು. ಅದಕ್ಕೂ ಮೊದಲೇ ಯೂಟ್ಯೂಬ್‌ ಕಂಪನಿ ಟ್ರಂಪ್‌ರ ವಿಡಿಯೋಗಳನ್ನು ಡಿಲೀಟ್‌ ಮಾಡಿತ್ತು. ಈಗ @realDonaldTrump ಟ್ವೀಟರ್‌ ಖಾತೆಯೂ ರದ್ದುಗೊಂಡಂತಾಗಿದ್ದು, ಟ್ರಂಪ್‌ ಅವರ ಪ್ರಮುಖ ಸಾಮಾಜಿಕ ಅಭಿವ್ಯಕ್ತಿ ಮಾಧ್ಯಮಗಳೆಲ್ಲ ಬಂದ್‌ ಆದಂತಾಗಿದೆ.

ಶುಕ್ರವಾರ ಟ್ರಂಪ್‌ ತಮ್ಮ ಬೆಂಬಲಿಗರನ್ನುದ್ದೇಶಿಸಿ ಎರಡು ಪ್ರಚೋದನಕಾರಿ ಟ್ವೀಟ್‌ ಮಾಡಿದ್ದರು. ಜ.20ರಂದು ನಡೆಯಲಿರುವ ಅಧಿಕಾರ ಹಸ್ತಾಂತರ ಕಾರ್ಯಕ್ರಮಕ್ಕೆ ತಾವು ಹೋಗುವುದಿಲ್ಲ ಎಂಬುದು ಅವರ ಕೊನೆಯ ಟ್ವೀಟ್‌ ಆಗಿತ್ತು. ಈ ಟ್ವೀಟ್‌ ಮಾಡುತ್ತಿದ್ದಂತೆ ಟ್ವೀಟರ್‌ ಕಂಪನಿ ಟ್ರಂಪ್‌ ಖಾತೆಯನ್ನು ಶಾಶ್ವತವಾಗಿ ರದ್ದುಪಡಿಸಿದೆ.

ಅಮೆರಿಕದಂತಹ ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯವಿರುವ ದೇಶದಲ್ಲಿ ಅಧ್ಯಕ್ಷರಂತಹ ವ್ಯಕ್ತಿಯ ಖಾತೆಯನ್ನೇ ಹೀಗೆ ರದ್ದುಪಡಿಸಿರುವುದಕ್ಕೆ ಟ್ರಂಪ್‌ ಅವರ ರಿಪಬ್ಲಿಕನ್‌ ಪಕ್ಷ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಸ್ವತಃ ಟ್ರಂಪ್‌ ಕೂಡ ಆಕ್ರೋಶ ವ್ಯಕ್ತಪಡಿಸಿ, ‘ಹೀಗೇ ಆಗುತ್ತದೆ ಎಂದು ನಾನು ಊಹಿಸಿದ್ದೆ. ಈಗ ಬೇರೆ ಬೇರೆ ಸಾಮಾಜಿಕ ಜಾಲತಾಣಗಳ ಜೊತೆ ಮಾತಾಡುತ್ತಿದ್ದೇವೆ. ನಮ್ಮದೇ ವೇದಿಕೆಯೊಂದನ್ನು ಆರಂಭಿಸುವ ಚಿಂತನೆಯಿದೆ. ಶೀಘ್ರದಲ್ಲೇ ದೊಡ್ಡ ಘೋಷಣೆ ಮಾಡುತ್ತೇನೆ. ನನ್ನ ಬಾಯಿ ಮುಚ್ಚಿಸಲಾಗದು’ ಎಂದು ಹೇಳಿದ್ದಾರೆ.

ಟ್ವೀಟರ್‌ ಖಾತೆ ರದ್ದಾದಾಗ ಟ್ರಂಪ್‌ ಅವರಿಗೆ 8.87 ಕೋಟಿ ಬೆಂಬಲಿಗರಿದ್ದರು. ಟ್ವೀಟರ್‌ನಲ್ಲಿ ಅತಿಹೆಚ್ಚು ಬೆಂಬಲಿಗರಿರುವ ಟಾಪ್‌ 10 ವ್ಯಕ್ತಿಗಳಲ್ಲಿ ಟ್ರಂಪ್‌ ಒಬ್ಬರಾಗಿದ್ದರು.