ಅಫ್ಘನ್ನರಿಗೆ ಮತ್ತೊಂದು ಆಘಾತ: ನಿರಾಶ್ರಿತರ ತಡೆಯಲು ಟರ್ಕಿಯಿಂದ 'ಮಹಾಗೋಡೆ'!
* ತಾಲಿಬಾನ್ ಅಟ್ಟಹಾಸ, ದೇಶ ಬಿಡುತ್ತಿದ್ದಾರೆ ಅಪ್ಘಾನ್ನರು
* ಅಪ್ಘಾನಿಸ್ತಾನದ ನಾಗರಿಕರನ್ನು ತಡೆಯಲು ಗೋಡೆ ನಿರ್ಮಿಸುತ್ತಿದೆ ಟರ್ಕಿ
* ನಿರಾಶ್ರಿತರ ತಡೆಯಲು 295 ಕಿಮೀ ಉದ್ದದ ಗೋಡೆ
ಕಾಬೂಲ್(ಆ.17) ಅಫ್ಘಾನಿಸ್ತಾನವನ್ನು ತಾಲಿಬಾನ್ ಆಕ್ರಮಿಸಿದ ಬೆನ್ನಲ್ಲೇ ಸಾವಿರಾರು ಮಂದಿ ತಮ್ಮ ದೇಶ ತೊರೆಯಲು ಮುಂದಾಗಿದ್ದಾರೆ. ಈ ಪರಿಸ್ಥಿತಿಯಲ್ಲಿ, ಅಫ್ಘಾನ್ ನಿರಾಶ್ರಿತರು ತಮ್ಮ ದೇಶಕ್ಕೆ ಆಗಮಿಸುತ್ತಾರೆಂಬ ಭಯ ಟರ್ಕಿಯನ್ನು ಕಾಡುತ್ತಿದೆ. ಹೀಗಾಗಿ ಅಫ್ಘಾನಿಸ್ತಾನದಿಂದ ಬರುವ ನಿರಾಶ್ರಿತರನ್ನು ತಡೆಯಲು ಇರಾನ್ ಗಡಿಯಲ್ಲಿ ಟರ್ಕಿ ಗೋಡೆಯನ್ನು ನಿರ್ಮಿಸುತ್ತಿದೆ. ಟರ್ಕಿ ತನ್ನ ಇರಾನ್ ಗಡಿಯಲ್ಲಿ 295 ಕಿಮೀ ಉದ್ದದ ಗೋಡೆಯನ್ನು ನಿರ್ಮಿಸುವ ಕಾರ್ಯ ಆರಂಭಿಸಿದ್ದು, ಇದು ಪೂರ್ಣಗೊಳ್ಳಲು ಕೇವಲ 5 ಕಿಮೀ ಕೆಲಸ ಉಳಿದಿದೆ. ಟರ್ಕಿಯಲ್ಲಿ ಈಗಾಗಲೇ ಲಕ್ಷಾಂತರ ಮಂದಿ ಸಿರಿಯನ್ ನಿರಾಶ್ರಿತರು ಆಶ್ರಯ ಪಡೆದುಕೊಂಡಿದ್ದಾರೆ ಎಂಬುವುದು ಉಲ್ಲೇಖನೀಯ.
ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಹಿಂಸಾಚಾರ ಹೆಚ್ಚಾಗುತ್ತಿದ್ದರೂ ಕಾಬೂಲ್ ವಿಮಾನ ನಿಲ್ದಾಣ ನಿರ್ವಹಿಸಲು ಟರ್ಕಿ ಸಿದ್ಧವಾಗಿದೆ. ಅಫ್ಘಾನಿಸ್ತಾನದಿಂದ ವಿದೇಶಿ ಪಡೆಗಳು ಹೊರಬಂದ ನಂತರ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ವಹಿಸಲು ತಾನು ಸಿದ್ಧ ಎಂದು ಟರ್ಕಿ ಹೇಳಿದೆ. ಇನ್ನು ಈ ಹಿಂದೆಯೇ ತಾನು ತಾಲಿಬಾನ್ ದಿನೇ ದಿನೇ ತನ್ನ ಅಧಿಕಾರ ವಿಸ್ತರಿಸಿ ಹೆಚ್ಚಿನ ಪ್ರದೇಶಗಳನ್ನು ವಶಪಡಿಸಿಕೊಳ್ಳುತ್ತಿರುವುದನ್ನು ಗಮನಿಸುತ್ತಿರುವುದಾಗಿ ಅದು ಹೇಳಿತ್ತು.
ವಾಸ್ತವವಾಗಿ, ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಚಟುವಟಿಕೆಗಳು ಹೆಚ್ಚಾದ ಕಾರಣ, ಹೆಚ್ಚಿನ ಸಂಖ್ಯೆಯ ಆಫ್ಘನ್ನರು ಬೇರೆ ಬೇರೆ ದೇಶಗಳಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಕೆಲವು ಆಫ್ಘನ್ನರು ಟರ್ಕಿಗೆ ಪಲಾಯನ ಮಾಡಿದ್ದಾರೆ. ಅಫ್ಘಾನಿಸ್ತಾನದಲ್ಲಿನ ಈ ಬಿಕ್ಕಟ್ಟಿನ ಬಗ್ಗೆ ವಿಶ್ವಸಂಸ್ಥೆಯೂ ಬಹಳ ಆತಂಕ ವ್ಯಕ್ತಪಡಿಸಿದೆ. ಯುಎನ್ ಸೆಕ್ರೆಟರಿ ಜನರಲ್ ಆಂಟೋನಿಯೊ ಗುಟೆರೆಸ್ ತಾಲಿಬಾನ್ ಮತ್ತು ಎಲ್ಲಾ ಇತರ ಪಕ್ಷಗಳಿಗೆ ಜೀವ ಉಳಿಸುವಲ್ಲಿ ಮತ್ತು ಅಫ್ಘಾನ್ ನಾಗರಿಕರಿಗೆ ಮಾನವೀಯ ನೆರವು ನೀಡುವಲ್ಲಿ ಸಂಯಮದಿಂದಿರಬೇಕು ಎಂದು ಕರೆ ನೀಡಿದ್ದಾರೆ.
ಹೀಗಿರುವಾಗಲೇ ಅತ್ತ ವಿಶ್ವಸಂಸ್ಥೆಯ ವಕ್ತಾರ ಸ್ಟೀಫನ್ ಡುಜಾರಿಕ್ ವಿಶ್ವಸಂಸ್ಥೆಯು ಶಾಂತಿಯುತ ಪರಿಹಾರಕ್ಕೆ ಕೊಡುಗೆ ನೀಡಲು, ಎಲ್ಲಾ ಆಫ್ಘನ್ನರ, ವಿಶೇಷವಾಗಿ ಮಹಿಳೆಯರು ಮತ್ತು ಹೆಣಮಕ್ಕಳ ಮಾನವ ಹಕ್ಕುಗಳನ್ನು ರಕ್ಷಿಸಲು ಮತ್ತು ಅಗತ್ಯ ಬಂದರೆ ನಾಗರಿಕರ ಜೀವ ಉಳಿಸುವ ಮಾನವೀಯ ನೆರವು ನೀಡಲು ತೀರ್ಮಾನಿಸಿದೆ ಎಂದು ಹೇಳಿದ್ದಾರೆ,