ವಾಷಿಂಗ್ಟನ್‌(ಮೇ.17): ಕೊರೋನಾ ವೈರಸ್‌ ಕಾರಣ ಚೀನಾ ವಿರುದ್ಧ ತೊಡೆ ತಟ್ಟಿ ನಿಂತಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ‘ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಜತೆ ಮಾತನಾಡಲು ಬಯಸುವುದಿಲ್ಲ’ ಎಂದು ಖಡಕ್ಕಾಗಿ ಹೇಳಿದ್ದಾರೆ. ಈ ಮೂಲಕ ಕೊರೋನಾ ನಿಯಂತ್ರಣಕ್ಕೆ ಈ ಸೋಂಕಿನ ಮೂಲವಾದ ಚೀನಾ ಪರಿಣಾಮಕಾರಿ ಕ್ರಮ ಕೈಗೊಳ್ಳಲಿಲ್ಲ ಎಂಬ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗುರುವಾರ ಚೀನಾ ವಿರುದ್ಧ ಗುಡುಗಿದ್ದ ಟ್ರಂಪ್‌, ದ್ವಿಪಕ್ಷೀಯ ಸಂಬಂಧ ಕಡಿತಗೊಳಿಸುವ ಎಚ್ಚರಿಕೆ ನೀಡಿದ್ದರು. ಶುಕ್ರವಾರವೂ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ಮುಂದುವರಿಸಿದ ಅವರು, ‘ಕ್ಸಿ ಜತೆ ನಾನು ಮಾತನಾಡಲು ಬಯಸುವುದಿಲ್ಲ. ಮುಂದೇನಾಗುತ್ತೋ ನೋಡೋಣ’ ಎಂದರು.

‘ಕೊರೋನಾ ಕುರಿತು ಸಮಗ್ರ ಮಾಹಿತಿಯನ್ನು ಚೀನಾ ಹಂಚಿಕೊಳ್ಳಬೇಕು. ವೈರಾಣು ಉಗಮಕ್ಕೆ ಕಾರಣವೇನು ಎಂಬ ಬಗ್ಗೆ ಅದು ತನಿಖೆ ನಡೆಸಬೇಕು’ ಎಂಬುದು ಟ್ರಂಪ್‌ ಅವರ ಒತ್ತಾಯವಾಗಿದೆ. ಆದರೆ ಈ ಬಗ್ಗೆ ಚೀನಾ ಮೌನ ವಹಿಸಿದ್ದು, ಟ್ರಂಪ್‌ ಸಿಟ್ಟು ಹೆಚ್ಚಾಗಲು ಕಾರಣವಾಗಿದೆ.