ವಾಷಿಂಗ್ಟನ್‌(ಮೇ.20): ‘ಕೊರೋನಾ ವೈರಸ್‌ ನನಗೆ ಬರಬಾರದು ಎಂದು ಮುಂಜಾಗ್ರತಾ ಕ್ರಮ ಕೈಗೊಳ್ಳುತ್ತಿದ್ದು, ಮಲೇರಿಯಾ ಮಾತ್ರೆಯಾದ ಹೈಡ್ರೋಕ್ಸಿಕ್ಲೋರೋಕ್ವಿನ್‌ ಸೇವಿಸುತ್ತಿದ್ದೇನೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ.

ಶ್ವೇತಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಟ್ರಂಪ್‌ ಅವರು, ‘ಒಂದೂವರೆ ವಾರದಿಂದ ನಾನು ಹೈಡ್ರೋಕ್ಸಿಕ್ಲೋರೋಕ್ವಿನ್‌ ಮಾತ್ರೆ ಸೇವಿಸುತ್ತಿದ್ದೇನೆ. ನನಗೆ ಕೊರೋನಾದ ಯಾವುದೇ ಲಕ್ಷಣಗಳಿಲ್ಲ’ ಎಂದರು. ಭಾರತದಿಂದ ಇತ್ತೀಚೆಗೆ ಅಮೆರಿಕ ಈ ಮಾತ್ರೆ ತರಿಸಿಕೊಂಡಿತ್ತು.

ಅಮೆರಿಕದಿಂದ 3 ವಾರದಲ್ಲಿ ಭಾರತಕ್ಕೆ 200 ವೆಂಟಿಲೇಟರ್‌?

‘ಮಾತ್ರೆ ಸೇವನೆ ಆರಂಭಿಸುವ ಮುನ್ನ ಶ್ವೇತಭವನದ ವೈದ್ಯರನ್ನು ಕೇಳಿದೆ. ಸೇವಿಸಿ ಎಂದು ವೈದ್ಯರೇನೂ ಹೇಳಲಿಲ್ಲ. ಆದರೂ ನಾನು ದಿನಕ್ಕೆ ಒಂದು ಮಾತ್ರೆ ಸೇವಿಸುತ್ತಿದ್ದೇನೆ. ಒಂದು ಹಂತದಲ್ಲಿ ಸೇವನೆ ನಿಲ್ಲಿಸುವೆ’ ಎಂದು ಹೇಳಿದರು.

ಇದರ ಬೆನ್ನಲ್ಲೇ ಸ್ಪಷ್ಟನೆ ನೀಡಿರುವ ಶ್ವೇತಭವನ ವೈದ್ಯ ಡಾ| ಶಾನ್‌ ಪಿ. ಕೋನ್ಲಿ, ‘ಟ್ರಂಪ್‌ ಆರೋಗ್ಯದಿಂದ ಇದ್ದಾರೆ. ಕೊರೋನಾ ಸೋಂಕು ಅವರಿಗಿಲ್ಲ’ ಎಂದು ಹೇಳಿದ್ದಾರೆ.