Asianet Suvarna News Asianet Suvarna News

ಇಂದು ಬ್ರಿಟನ್‌ ರಾಣಿ ಅಂತ್ಯಕ್ರಿಯೆ: ರಾಷ್ಟ್ರಪತಿ ಮುರ್ಮು ಸೇರಿ 500ಕ್ಕೂ ಹೆಚ್ಚು ಜಾಗತಿಕ ನಾಯಕರು ಭಾಗಿ

ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ (96) ಅಂತ್ಯಸಂಸ್ಕಾರ ಇಂದು ನಡೆಯಲಿದ್ದು, ಮಧ್ಯಾಹ್ನ 2ಗಂಟೆಗೆ ಪಾರ್ಥಿವ ಶರೀರದ ಮೆರವಣಿಗೆ ಆರಂಭವಾಗಿ ಸಂಜೆ 7ಕ್ಕೆ ವೆಸ್ಟ್‌ಮಿನಿಸ್ಟರ್‌ ಅಬೆಗೆ ತಲುಪಲಿದೆ. ನಂತರ ರಾತ್ರಿ 12 ಗಂಟೆಗೆ ಪತಿ ಫಿಲಿಪ್‌ ಪಕ್ಕದಲ್ಲೇ ಎಲಿಜಬೆತ್‌ ಸಮಾಧಿಯಾಗಲಿದ್ದಾರೆ.

Today British Queen Elizabeth funeral, More than 500 global leaders participated akb
Author
First Published Sep 19, 2022, 6:27 AM IST

ಲಂಡನ್‌: ಸೆ.8ರಂದು ನಿಧನರಾದ ಬ್ರಿಟನ್‌ ರಾಣಿ 2ನೇ ಎಲಿಜಬೆತ್‌ (96) ಅವರ ಅಂತ್ಯಸಂಸ್ಕಾರ ಇಂದು ನಡೆಯಲಿದ್ದು, ಬ್ರಿಟನ್‌ ರಾಜಧಾನಿ ಲಂಡನ್‌ನಲ್ಲಿ ಭಾರೀ ಸಿದ್ಧತೆ ನಡೆಸಲಾಗಿದೆ. ಭಾರತದ ರಾಷ್ಟ್ರಪತಿ (Indian President) ದ್ರೌಪದಿ ಮುರ್ಮು (Draupadi Murmu) ಸೇರಿದಂತೆ 500ಕ್ಕೂ ಹೆಚ್ಚು ಜಾಗತಿಕ ನಾಯಕರು ರಾಣಿಗೆ ಅಂತಿಮ ವಿದಾಯ ನೀಡಲು ಲಂಡನ್‌ಗೆ ಆಗಮಿಸಿದ್ದಾರೆ. ರಾಣಿಯ ಅಂತ್ಯಸಂಸ್ಕಾರದ ಹಿನ್ನೆಲೆಯಲ್ಲಿ ರಾಷ್ಟ್ರದಾದ್ಯಂತ 10 ದಿನಗಳ ಶೋಕಾಚರಣೆ ಆಚರಿಸಲಾಗುತ್ತಿದ್ದು, ಇಂದು ಸಾರ್ವಜನಿಕ ರಜೆ ಘೋಷಿಸಲಾಗಿದೆ. ಬ್ರಿಟನ್‌ ರಾಜ 3ನೇ ಚಾರ್ಲ್ಸ್ (British King Charles III) ಅವರ ಪತ್ನಿ ಕ್ಯಾಮಿಲಾ (Camilla) ಸೇರಿದಂತೆ ರಾಣಿಯ 5 ಮಕ್ಕಳು, ವಿಲಿಯಂ, ಹ್ಯಾರಿ ಸೇರಿದಂತೆ 8 ಮೊಮ್ಮಕ್ಕಳು ಅವರ ಪತ್ನಿಯರು ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲಿದ್ದಾರೆ.

ಈ ಹಿನ್ನೆಲೆಯಲ್ಲಿ ಬ್ರಿಟನ್‌ನಲ್ಲಿ ಸಾವಿರಾರು ಪೊಲೀಸರು, ಸೇನಾ ಅಧಿಕಾರಿಗಳನ್ನು ನೇಮಿಸಿ ಬಿಗಿ ಭದ್ರತಾ ಕ್ರಮ ಕೈಗೊಳ್ಳಲಾಗಿದೆ. ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ (US President Joe Biden) ಹೊರತುಪಡಿಸಿ ಉಳಿದೆಲ್ಲ ರಾಷ್ಟ್ರದ ಮುಖ್ಯಸ್ಥರು ಬಸ್‌ಗಳಲ್ಲಿ ರಾಣಿಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಆಗಮಿಸಲಿದ್ದಾರೆ. ಬೈಡೆನ್‌ಗೆ ತಮ್ಮ ವಿಶೇಷ ಭದ್ರತಾ ವಾಹನ ‘ಬೀಸ್ಟ್‌’ನಲ್ಲಿ ಬರಲು ಅನುಮತಿ ನೀಡಲಾಗಿದೆ.

ಅಂತ್ಯಸಂಸ್ಕಾರ ಹೇಗೆ?

ಪ್ರಸ್ತುತ ಸಂಸತ್‌ನ ವೆಸ್ಟ್‌ಮಿನಿಸ್ಟರ್‌ ಹಾಲ್‌ನಲ್ಲಿ (Westminster Hall) ರಾಣಿಯ ಶವಪೆಟ್ಟಿಗೆ ಇರಿಸಲಾಗಿದ್ದು, ಅದನ್ನು ರಾಯಲ್‌ ಸ್ಟಾಂಡರ್ಡ್‌ನಲ್ಲಿ ಸುತ್ತಿ ಮೇಲೆ ಕೊಹಿನೂರ್‌ ವಜ್ರವಿರುವ (Kohinoor diamond) ಕಿರೀಟವನ್ನಿಡಲಾಗಿದೆ. ಇದನ್ನು ಇಂದು ಭಾರತೀಯ ಕಾಲಮಾನದಂತೆ ಮಧ್ಯಾಹ್ನ 2 ಗಂಟೆಗೆ ಕುದುರೆಗಳಿಂದ ಎಳೆಯಲ್ಪಡುವ ಗನ್‌ ಕ್ಯಾರೇಜ್‌ನಲ್ಲಿಟ್ಟು ಮೆರವಣಿಗೆ ಮೂಲಕ ವೆಸ್ಟ್‌ಮಿನಿಸ್ಟರ್‌ ಅಬೆಗೆ ಸಾಗಿಸಲಾಗುವುದು. 7 ಗಂಟೆಗೆ ವೆಸ್ಟ್‌ಮಿನಿಸ್ಟರ್‌ ಅಬೆಗೆ ರಾಣಿಯ ಶವಪೆಟ್ಟಿಗೆ ಆಗಮನವಾಗಲಿದೆ. 1 ಗಂಟೆಯ ನಂತರ ಶವಪೆಟ್ಟಿಗೆಯನ್ನು ಸೇನಾ ಮೆರವಣಿಗೆಯಲ್ಲಿ ವೆಲ್ಲಿಂಗ್ಟನ್‌ (Wellington) ಆರ್ಚ್‌ಗೆ ಸಾಗಿಸಲಾಗುವುದು. ಬಳಿಕ ಸಾಯಂಕಾಲ 5:30 ರ ಸುಮಾರು ಸ್ಟೇಟ್‌ ಹಾರ್ಸ್‌ನಿಂದ ವಿಂಡ್ಸರ್‌ಗೆ ಸಾಗಿಸಲಾಗುವುದು. ರಾತ್ರಿ 12 ಗಂಟೆ ಸುಮಾರಿಗೆ ಅವರ ದೇಹವನ್ನು ಸೇಂಟ್‌ ಜಾರ್ಜ್‌ ಚಾಪೆಲ್‌ನ ರಾಯಲ್‌ ವಾಲ್ಟ್‌ನಲ್ಲಿ, ಕಳೆದ ವರ್ಷ ಮೃತಪಟ್ಟ ಅವರ ಪತಿ ಪ್ರಿನ್ಸ್‌ ಫಿಲಿಪ್‌ (Prince Philip) ಪಕ್ಕದಲ್ಲೇ ಸಮಾಧಿ ಮಾಡಲಾಗುವುದು.

ಎಲಿಜಬೆತ್ ಸಾವು : ಡಯಾನಗಾಗಿ ಮಿಡಿಯುತ್ತಿರುವ ಬ್ರಿಟನ್ ಜನ

ಅಂತ್ಯ ಸಂಸ್ಕಾರಕ್ಕೆ 10 ಲಕ್ಷ ಜನ ಆಗಮನ

ಎಲಿಜಬೆತ್‌ ಅಂತ್ಯಸಂಸ್ಕಾರಕ್ಕೆ ವಿಶ್ವದ ವಿವಿಧ ಮೂಲೆಗಳಿಂದ ಲಂಡನ್‌ಗೆ ಕನಿಷ್ಠ 10 ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ಬ್ರಿಟನ್‌ ರಾಜಧಾನಿಯಲ್ಲಿ ಭಾರೀ ವ್ಯವಸ್ಥೆ ಮಾಡಲಾಗುತ್ತಿದೆ. ಜನರ ಆಗಮನಕ್ಕೆ ಅನುಕೂಲ ಮಾಡಿಕೊಡಲು 250 ವಿಶೇಷ ರೈಲುಗಳನ್ನು ಓಡಿಸಲಾಗುತ್ತಿದೆ. ಜೊತೆಗೆ ಅಂತ್ಯಸಂಸ್ಕಾರದ ಇಡೀ ಪ್ರಕ್ರಿಯೆಗೆ ವಿಮಾನಗಳ ಸಂಚಾರದ ಭಾರೀ ಸದ್ದು ತಡೆಗಟ್ಟಲು, ಹೀಥ್ರೂ ವಿಮಾನ ನಿಲ್ದಾಣದಲ್ಲಿ ಸಂಜೆ ಬಳಿಕದ ನೂರಾರು ವಿಮಾನಗಳ ಸಂಚಾರ ರದ್ದುಪಡಿಸಲಾಗಿದೆ.

ಸಿನೆಮಾ ಥಿಯೇಟರ್‌ಗಳಲ್ಲಿ  ನೇರ ಪ್ರಸಾರ

ರಾಣಿಯ‌ ಅಂತ್ಯ ಸಂಸ್ಕಾರ ವೀಕ್ಷಣೆಗೆ ಬ್ರಿಟನ್‌ನಾದ್ಯಂತ ವ್ಯವಸ್ಥೆ ಮಾಡಲಾಗಿದೆ. ಪ್ರಮುಖ ನಗರಗಳ ಆಯಕಟ್ಟಿನ ಸ್ಥಳಗಳಲ್ಲಿ ಬೃಹತ್‌ ಪರದೆಗಳನ್ನು ಅಳವಡಿಸಿ ಅಲ್ಲಿ ವೆಸ್ಟ್‌ಮಿನಿಸ್ಟರ್‌ ಅಬೆಯಲ್ಲಿ ನಡೆಯುವ ಅಂತ್ಯಸಂಸ್ಕಾರ ಪ್ರಕ್ರಿಯೆಯನ್ನು ನೇರ ಪ್ರಸಾರ ಮಾಡಲಾಗುವುದು. ಜೊತೆಗೆ ಬಹುತೇಕ ಎಲ್ಲಾ ಸಿನೆಮಾ ಥಿಯೇಟರ್‌ಗಳಲ್ಲೂ ಬೆಳಗ್ಗೆಯಿಂದ ರಾತ್ರಿಯವರೆಗೂ ಅಂತ್ಯಸಂಸ್ಕಾರ ಪ್ರಕ್ರಿಯೆಯ ನೇರ ಪ್ರಸಾರಕ್ಕೆ ವ್ಯವಸ್ಥೆ ಮಾಡಲಾಗಿದೆ.

500 ವಿವಿಐಪಿಗಳ ಆಗಮನ ಭಾರೀ ಭದ್ರತಾ ಸವಾಲು

ರಾಣಿ ಎಲಿಜಬೆತ್‌ ಅಂತ್ಯಸಂಸ್ಕಾರಕ್ಕೆ ವಿಶ್ವದ ವಿವಿಧ ದೇಶಗಳ ಅಧ್ಯಕ್ಷರು, ಪ್ರಧಾನಿಗಳು, ರಾಜರು, ರಾಣಿಯರು, ಸಚಿವರು ಸೇರಿದಂತೆ 500ಕ್ಕೂ ಹೆಚ್ಚು ಗಣ್ಯರು ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಲಂಡನ್‌ನಲ್ಲಿ ಹಿಂದೆಂದೂ ಕಾಣದ ಭದ್ರತೆ ಒದಗಿಸಲಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಒಂದೇ ಸ್ಥಳದಲ್ಲಿ ಇಷ್ಟು ಪ್ರಮಾಣದ ಗಣ್ಯರು ಸೇರುತ್ತಿರುವ ಕಾರಣ, ಜಾಗತಿಕ ನಾಯಕರಿಗೆ ಭದ್ರತೆ ಒದಗಿಸುವುದು ದೊಡ್ಡ ಸವಾಲು ಎಂದು ಲಂಡನ್‌ ಮೇಯರ್‌ ಸಾದಿಕ್‌ ಖಾನ್‌ (London Mayor)ತಿಳಿಸಿದ್ದಾರೆ.

ಕೃಷ್ಣ ತೀರದಿಂದ ಲಂಡನ್ ತಲುಪಿದ್ದು ಹೇಗೆ ಕೋಹಿನೂರು ವಜ್ರ? ರಾಣಿ ಎಲಿಜಬೆತ್ ತೆರೆದಿಟ್ಟ ಸತ್ಯವೇನು?

ಲಂಡನ್‌ ಭದ್ರತೆಗೆ 43 ಪೋಲಿಸ್‌ ಪಡೆಗಳು ಭಾಗಿಯಾಗಲಿದ್ದು 10000 ಕ್ಕೂ ಹೆಚ್ಚು ಪೋಲಿಸರು ನಿಯೋಜನೆಗೊಂಡಿದ್ದಾರೆ. ಅಂತಿಮ ಮೆರವಣಿಗೆಯಲ್ಲಿ ನೂರಾರು ಮಾರ್ಷಲ್‌ಗಳು ಮತ್ತು ಸಶಸ್ತ್ರ ಪಡೆಗಳ ಸದಸ್ಯರು ಸಹಕರಿಸಲಿದ್ದಾರೆ. ಕಟ್ಟಡಗಳ ಮೇಲ್ಭಾಗಗಳಲ್ಲಿ ಪೋಲಿಸರು, ರಸ್ತೆಗಳಲ್ಲಿ ಶ್ವಾನದಳ, ಥೇಮ್ಸ್‌ ನದಿ (River Thames) ಸಮೀಪದಲ್ಲಿ ಜಲಸೇನೆಯ ಅಧಿಕಾರಿಗಳು ಮತ್ತು ಅಶ್ವದಳದ ಪೋಲಿಸರನ್ನೊಳಗೊಂಡ ರಕ್ಷಣಾ ವ್ಯವಸ್ಥೆ ಇರಲಿದೆ. ಲಂಡನ್‌ ಕೇಂದ್ರಭಾಗದಲ್ಲಿ ಡ್ರೋನ್‌ ಹಾರಾಟವನ್ನು ತಾತ್ಕಲಿಕವಾಗಿ ಸ್ಥಗಿತಗೊಳಿಸಲಾಗಿದ್ದು , ವಿಮಾನಗಳ ಶಬ್ದದಿಂದ ಮೆರವಣಿಗೆಗೆ ತೊಂದರೆಯಾಗದಂತೆ ವ್ಯವಸ್ಥೆ ಮಾಡಲಾಗಿದೆ. ಸುಮಾರು 32 ಕಿ.ಮೀ ವರೆಗೆ ಬ್ಯಾರಿಕೇಡ್‌ಗಳನ್ನು ಅಳವಡಿಸಲಾಗಿದೆ.

24 ಗಂಟೆ ಸರದಿ

ಭಾನುವಾರ ರಾತ್ರಿಯವರೆಗೂ ಸಾರ್ವಜನಿಕರಿಗೆ ಅಂತಿಮ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ ಸಾವಿರಾರು ಜನರು 24 ಗಂಟೆಗಳ ಕಾಲ ಸರದಿಯಲ್ಲಿ ನಿಂತುಕೊಂಡಿದ್ದರೂ ಸಮಯದ ಅಭಾವದ ಕಾರಣ ಬಹಳಷ್ಟು ಜನರಿಗೆ ಅಂತಿಮ ದರ್ಶನದ ಅವಕಾಶ ನಿರಾಕರಿಸಲಾಯಿತು.

Follow Us:
Download App:
  • android
  • ios