ವಾಷಿಂಗ್ಟನ್(ಸೆ.05); ಕೊರೋನಾ ವೈರಸ್‌ಗೆ ಇನ್ನೇನು ಲಸಿಕೆ ಬಂದೇ ಬಿಟ್ಟಿತು ಎಂದು ಅಂದುಕೊಳ್ಳುತ್ತಿರುವಾಗಲೇ, 2021ರ ಮಧ್ಯದವರೆಗೂ ಸಾರ್ವತ್ರಿಕವಾಗಿ ಬಳಕೆ ಆಗಬಲ್ಲ ಕೊರೋನಾ ಲಸಿಕೆಯನ್ನು ನಿರೀಕ್ಷಿಸುವಂತಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯುಎಚ್‌ಒ)ಯೇ ತಿಳಿಸಿದೆ.

ಈವರೆಗೆ ಯಾವುದೇ ಲಸಿಕೆಗಳು ಅಂತಿಮ ಹಂತದ ಪರೀಕ್ಷೆಗೆ ಒಳಪಟ್ಟಿಲ್ಲ. ಅಲ್ಲದೆ ವಿಶ್ವ ಆರೋಗ್ಯ ಸಂಸ್ಥೆ ನಿಗದಿಪಡಿಸಿರುವ ಸುರಕ್ಷತಾ ಮಾನದಂಡದ ಶೇ.50ರಷ್ಟನ್ನೂ ತಲುಪಿಲ್ಲ. ಹೀಗಾಗಿ ಪ್ರಗತಿಯ ಹಂತದಲ್ಲಿರುವ ಲಸಿಕೆಗಳು ಇನ್ನಷ್ಟುಪರೀಕ್ಷೆ ಹಾಗೂ ಸುರಕ್ಷತೆಯನ್ನು ಸಾಬೀತುಪಡಿಸಬೇಕಿದೆ ಎಂದು ಡಬ್ಲ್ಯು ಎಚ್‌ಒ ವಕ್ತಾರೆ ಮಾರ್ಗರೆಟ್‌ ಹ್ಯಾರಿಸ್‌ ತಿಳಿಸಿದ್ದಾರೆ.

ಕೊರೋನಾಕ್ಕೆ ರಷ್ಯಾ ಈಗಾಗಲೇ ಒಂದು ಲಸಿಕೆಯನ್ನು ಬಿಡುಗಡೆ ಮಾಡಿದೆ. ಆದರೆ, ಅದರ ಸುರಕ್ಷತೆಯ ಬಗ್ಗೆ ಹಲವು ದೇಶಗಳು ಆಕ್ಷೇಪ ವ್ಯಕ್ತಪಡಿಸಿವೆ. ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ಅಮೆರಿಕ ತರಾತುರಿಯಲ್ಲಿ ಲಸಿಕೆಯನ್ನು ಬಿಡುಗಡೆ ಮಾಡಲು ಹೊರಟಿದ್ದು, ನ.1ರ ವೇಳೆಗೆ ಕೊರೋನಾ ಲಸಿಕೆ ಲಭ್ಯವಾಗುವ ನಿರೀಕ್ಷೆ ಹೊಂದಲಾಗಿದೆ. ಆದರೆ, ಅದು ಎಷ್ಟರ ಮಟ್ಟಿಗೆ ಪರಿಣಾಮಕಾರಿ ಎಂಬುದು ಸಾಬೀತಾಗಿಲ್ಲ ಎಂದು ವರದಿಗಳು ತಿಳಿಸಿವೆ.